ಮಿಡಿಗೇಶಿಯ ವೆಂಕಟರಮಣ ದೇವಾಲಯ

*ಶ್ರೀನಿವಾಸ ಮೂರ್ತಿ ಎನ್ ಎಸ್

ತುಮಕೂರು ಜಿಲ್ಲೆಯ ಹಲವು ಭಾಗಗಳಲ್ಲಿ ಪಾಳೇಗಾರರು ತಮ್ಮದೇ ಆದ ಶೈಲಿಯಲ್ಲಿ ದೇವಾಲಯಗಳನ್ನ ನಿರ್ಮಿಸಿದ್ದಾರೆ. ಹಲವು ರಾಜ ಮನೆತನಗಳ ದೇವಾಲಯಗಳ ನಿರ್ಮಾಣದ ನಡುವೆ ಮಧುಗಿರಿ ಹಾಗು ಪಾವಗಡ ಭಾಗದಲ್ಲಿ ಪಾಳೇಗಾರರು ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಇವುಗಳಲ್ಲಿ ನೇಪಥ್ಯಕ್ಕೆ ಸರಿದು ಆಷ್ಟಾಗಿ ಗಮನ ಸೆಳೆಯದ ಪಾಳೇಗಾರರಲ್ಲಿ ಮಿಡಿಗೇಶಿಯ ಪಾಳೇಗಾರರು ಒಬ್ಬರು. ವಿಜಯನಗರ ಶೈಲಿ ಹಾಗು ಪಾಳೇಗಾರರ ಸಮ್ಮಿಶ್ರಣದಲ್ಲಿ
ನಿರ್ಮಾಣವಾದ ದೇವಾಲಯ ಇಲ್ಲಿ ನೋಡಬಹುದು.

ಗಂಗರ ಕಾಲದಿಂದಲೂ ಈ ಗ್ರಾಮದ ಬಗ್ಗೆ ಉಲ್ಲೇಖ ನೋಡಬಹುದು. ಆದರೆ ವಿಜಯನಗರ ಕಾಲದಲ್ಲಿ
ಹಾಗು ನಂತರ ಇಲ್ಲಿನ ಪಾಳೇಗಾರರು ತಮ್ಮದೇ ಆದ ಅಡಳಿತ ನಡೆಸಿದ್ದಾರೆ. ಇವರಲ್ಲಿ ನಾಗರೆಡ್ಡಿ
ಎಂಬ ಪಾಳೇಗಾರ ಪ್ರಮುಖನಾದವನು. ಮೂಲತಹ ಆಂಧ್ರಪ್ರದೇಶದ ತಿರುಪತಿಯ ಮೂಲದವನ
ಇವನು ಇಲ್ಲಿಗೆ ಬಂದು ಈ ಪ್ರದೇಶದಲ್ಲಿ ನೆಲೆಸಿದನು. ತನಗೆ ಸಿಕ್ಕ ನಿಧಿಯಿಂದ ಇಲ್ಲಿ ತನ್ನ ಕುಲ
ದೈವವಾದ ವೆಂಕಟರಮಣ ದೇವರಿಗೆ ದೇವಾಲಯವನ್ನು ನಿರ್ಮಿಸಿ ರಾಜ್ಯ ನಡೆಸಿದ. ಆದರೆ ಇವನ
ಸುಲಿಗೆಯನ್ನ ತಡೆಯಲಾರದ ಜನರು ಮಧುಗಿರಿಯ ಪಾಳೇಗಾರರ ನೆರವಿನಿಂದ ಸೋಲಿಸಿದರು
ಎನ್ನಲಾಗಿದೆ.

ಇನ್ನು ಪಾಳೇಗಾರ ನಾಗರೆಡ್ಡಿ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಸುಮಾರು 17 ನೇ
ಶತಮಾನಕ್ಕೆ ಸೇರಿದ್ದು. ಗರ್ಭಗುಡಿಯಲ್ಲಿ ಶ್ರೀ ವೆಂಕಟರಮಣನ ಮೂರ್ತಿ ಇದೆ. ಶಿಲ್ಪ ಚಕ್ರ, ಶಂಖ
ಧಾರಿಯಾಗಿದ್ದು ಇನ್ನೊಂದು ಕೈ ಅಭಯಧಾರಿಯಾಗಿದೆ. ಪ್ರಭಾವಳಿಯಲ್ಲಿ ಮೂಡಿರುವ ಕೆತ್ತನೆಗಳು
ಸುಂದರವಾಗಿದೆ. ಇನ್ನು ದೇವಾಲಯದ ತೆರೆದ ಮಂಟಪದಲ್ಲಿ ಸುಮಾರು 12 ಕಂಭಗಳಿದ್ದು ವಿಜಯನಗರ ಶೈಲಿಯನ್ನು ಹೋಲುತ್ತದೆ. ಇಲ್ಲಿನ ಕಂಭಗಳಲ್ಲಿನ ಸಿಂಹ ಕೆತ್ತನೆಯ ಸ್ಥಂಭಗಳು ಹಾಗು
ಉಬ್ಬು ಶಿಲ್ಪಗಳು ಗಮನ ಸೆಳೆಯುತ್ತದೆ. ಇನ್ನು ಮಂಟಪಕ್ಕೆ ಗಾರೆಯಿಂದ ನಿರ್ಮಿಸಿದ ಕೋಷ್ಟಕಗಳಿದ್ದು
ಇಲ್ಲಿ ಯಾವುದೇ ಶಿಲ್ಪಗಳು ಕಾಣ ಸಿಗುವುದಿಲ್ಲ. ದೇವಾಲಯಕ್ಕೆ ಗಾರೆಯಿಂದ ನಿರ್ಮಿಸಿದ ರಾಜ
ಗೋಪುರವಿದ್ದು ಪ್ರವೇಶ ಮಂಟಪದಲ್ಲಿ ವಿಜಯನಗರ ಶೈಲಿಯ ನಾಲ್ಕು ಕಂಭಗಳಿವೆ. ದೇವಾಲಯ
ಕೋಟೆಯ ಕೆಳ ಭಾಗದಲ್ಲಿದೆ.

ತಲುಪವ ಬಗ್ಗೆ : ಮಿಡಿಗೇಶಿ ಮಧುಗಿರಿಯಿಂದ ಸುಮಾರು 21 ಕಿ ಮೀ ದೂರದಲ್ಲಿದ್ದು ಪಾವಗಡದಿಂದ
ಸುಮಾರು 34 ಕಿ ಮೀ ದೂರದಲ್ಲಿ ಪಾವಗಡ – ಮಧುಗಿರಿ ರಸ್ತೆಯಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles