ಶ್ರೀ ವಾದೀಂದ್ರ ತೀರ್ಥರ ಮೇಲೆ ರಾಯರ ಅನುಗ್ರಹ ಎಷ್ಟಿತ್ತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ

ಇಂದು ಶ್ರೀ ವಾದೀಂದ್ರ ತೀರ್ಥರ ಮಧ್ಯಾರಾಧನೆ. ಈ ಪ್ರಯುಕ್ತ ವಿಶೇಷ ಲೇಖನ

ಲೇಖಕರು : ಪ್ರಭಂಜನರಾವ್

ಗುರುಗಳೆಂದರೆ ಮಂಚಾಲೆ ರಾಘಪ್ಪ ಎನ್ನುವ ನಾಣ್ಣುಡಿ ಹೇಳುವಂತೆ, ನಮ್ಮ ಪರಂಪರೆಯಲ್ಲಿ ಬಂದಿರುವ ಎಲ್ಲಾ ಜ್ಞಾನಿಗಳಿಗೆ ಅವರವರದ್ದೇ ಆದ ಉಚಿತ ಸ್ಥಾನ ಇದ್ದರೆ, ನಮ್ಮ ಮಂತ್ರಾಲಯ ನಿವಾಸರಿಗೆ ಇರುವ ಸ್ಥಾನ ಬಹಳ ವಿಶೇಷ. ಯಾಕೆ ಅಂದರೆ ಆ ಜೀವಿಯ ಸ್ವರೂಪವೇ ಅಂಥದ್ದು.

ವಾಯುನಾಚ ಸಮಾವಿಷ್ಟರು, ಶೇಷಾವೇಶರು, ಮತ್ತು ನರಸಿಂಹ ದೇವರ ನಿತ್ಯ ಸನ್ನಿಧಾನ ಉಳ್ಳವರು ಜೊತೆಗೆ ವಿಭೂತಿ ರೂಪವೂ ಕೂಡ. ಇವರ ದರ್ಶನ, ಸೇವೆ, ಹಸ್ತೋದಕ, ಪಾದೋದಕ, ಅವುಗಳ ಮಹಿಮೆ, ಅವರ ಗ್ರಂಥಗಳ ಅಧ್ಯಯನ ಎಲ್ಲರಿಗೂ ಸಿಗುವುದಿಲ್ಲ. ‘ಮಂದ ಭಾಗ್ಯರಿಗೆ ದೊರೆಯದಿವರ ಸೇವಾ’ ಈ ಗುರುಗಳನ್ನು ಬಿಟ್ಟರೆ ಆ ಜೀವಿಗೆ ಸದ್ಗತಿ ಅನ್ನುವುದು ಇಲ್ಲ.

‘ನಿನ್ನನ್ನೂ ಸ್ಮರಿಸಿ ನಿನ್ನ ಮುಖಾಂತರ ನನ್ನನ್ನು ಸ್ಮರಿಸಿದವರಿಗೆ ಕರ್ಮ ಬಂಧನದಿಂದ ಬಿಡುಗಡೆ ಇರುತ್ತದೆ’ ಎನ್ನುವುದು ಇದು ಶ್ರೀನರಸಿಂಹ ದೇವರ ಮಾತು. ಇಂತಹ ಶ್ರೀರಾಯರ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಅವರನ್ನು ನಾಮಸ್ಮರಣೆ ಮಾಡುವುದರ ಜೊತೆಗೆ ವಿಶೇಷವಾಗಿ ಹರಿವಾಯುಗಳನ್ನು ಸ್ಮರಣೆ ಮಾಡಿದರೆ ಮತ್ತು ಅವರ ಪರಮಾನುಗ್ರಹಕ್ಕೆ ಪಾತ್ರರಾದ ಅನೇಕ ಜ್ಞಾನಿಗಳನ್ನು ಸ್ತುತಿಸಿದರೆ ಸಂತೋಷ ಪಡುತ್ತಾರೆ.

ಶ್ರೀ ಮಂತ್ರಾಲಯ ಪ್ರಭುಗಳ ಕರುಣಾನುಗ್ರಹಕ್ಕೆ ಪಾತ್ರರಾದವರಲ್ಲಿ ಮುಖ್ಯರಾದವರು ಎಂದರೆ ಅವರೇ ಶ್ರೀ ವಾದೀಂದ್ರ ತೀರ್ಥರು. ಇದು ಅತಿಶಯೋಕ್ತಿ ಅಲ್ಲ, ಮಂತ್ರಾಲಯ ಪ್ರಭುಗಳಿಂದಲೇ ಮಾನ್ಯ ಪಡೆದು, ಅವರ ನಂತರ ಬರುವ ಶ್ರೀವಾದೀಂದ್ರ ತೀರ್ಥರಿಗೆ ಬೃಂದಾವನ ಮಾಡಿಸಿ ಇದೇ ಬೃಂದಾವನವನ್ನೇ ಉಪಗೋಗಿಸಬೇಕೆಂದು ಆಜ್ಞೆ ಮಾಡಿ, ಪಕ್ಕದಲ್ಲೇ ಶಾಶ್ವತವಾಗಿ ಕೂಡಿಸಿಕೊಂಡಿರಬೇಕಾದರೆ ಶ್ರೀ ವಾದೀಂದ್ರ ತೀರ್ಥರ ಮೇಲೆ ರಾಯರ ಅನುಗ್ರಹ ಎಷ್ಟಿರಬೇಡ! ಬಹುಮುಖ ವ್ಯಕ್ತಿತ್ವವುಳ್ಳವರು ಮತ್ತು ಮಹಿಮಾನ್ವಿತರೂ ಆದ ಶ್ರೀವಾದೀಂದ್ರ ತೀರ್ಥರು ವಿದ್ಯೆಯಲಿ, ವಿನಯದಲಿ, ಕವಿತ್ವದಲ್ಲಿ, ವಿರಕ್ತಿಯಲ್ಲಿ, ಹರಿಗುರುಭಕ್ತಿಯಲ್ಲಿ, ತಪಶ್ಶಕ್ತಿಯಲ್ಲಿ, ಯತಿಧರ್ಮ ಪರಿಪಾಲನೆಯಲ್ಲಿ ಅವರಿಗೆ ಅವರೇ ಸಾಟಿ.

ಜೊತೆಗೆ ವಾಕ್ಚಾತುರ್ಯ, ಗ್ರಂಥ ನಿರ್ಮಾಣಗಳು ಎಲ್ಲದರಲ್ಲಿಯೂ ಅವರ ಸೇವೆ ಅನುಪಮವಾದದ್ದು‌. ರಾಯರ ಪರಮ ಭಕ್ತರೂ, ಭೃಗು ಋಷಿಗಳ ಅಂಶಸಂಭೂತರಾದ ಶ್ರೀವಿಜಯದಾಸರೂ ಮತ್ತು ಅವರ ಅಚ್ಚುಮೆಚ್ಚಿನ ಶಿಷ್ಯರಲ್ಲಿ ಒಬ್ಬರಾದ ಭಕ್ತಿಯಲಿ ಭಾಗಣ್ಣ ಅಂತ ಪ್ರಸಿದ್ಧರಾದ ಶ್ರೀಗೋಪಾಲ ದಾಸರೂ ಕೂಡ ಶ್ರೀವಾದೀಂದ್ರ ತೀರ್ಥರಲ್ಲಿ ಅಪಾರ ಭಕ್ತಿ ಹೊಂದಿದ್ದರು. ಅವರಿಗೆ ಇಷ್ಟ ಗುರುಗಳೂ ಮತ್ತು ಕುಲಮಠದ ಗುರುಗಳೂ ಅದ ಶ್ರೀವಾದೀಂದ್ರ ತೀರ್ಥರೆಂದರೆ ಅಪಾರ ಗೌರವ.

ಶ್ರೀವಿಜಯದಾಸರ ಚರಿತ್ರೆಯಲ್ಲಿ, ಒಮ್ಮೆ ಅವರಿಗೆ ರಾಮಾಶಾಸ್ತ್ರಿ ಎಂಬ ಪರಮತದ ಪಂಡಿತರೊಡನೆ ವಾದ ಮಾಡುವ ಪ್ರಸಂಗ ಬಂದು, ವಾಕ್ಯಾರ್ಥದಲ್ಲಿ ಜಯಿಸಿ, ಕರಾರಿನಂತೆ ಮತ್ತು ಪ್ರತಿವಾದಿಯು ಆಪೇಕ್ಷಿಸಿದಂತೆ ಮಾಧ್ವ ದೀಕ್ಷೆ ಬಯಸಿದ್ದರಿಂದ ಶ್ರೀವಿಜಯದಾಸರು ತಮ್ಮ ಕುಲಗುರುಗಳಾದ ಶ್ರೀವಾದೀಂದ್ರ ತೀರ್ಥರಿಂದ ಮಂತ್ರೋಪದೇಶ, ಮುದ್ರಧಾರಣೆ ಕೊಡಿಸುತ್ತಾರೆ. ಈ ಪ್ರಸಂಗವನ್ನು ಕುರಿತಂತೆ ಶ್ರೀಮೋಹನ ದಾಸರು ‘ವಾದಿಗಿರಿಗೆ ಇಂದ್ರಸ್ಥಾನೀಯರಾದ ಗುರುಗಳಿಂದ ಮುದ್ರಾಧಾರಣೆ ಕೊಡಿಸಿ ಪರಮಾದರದಿಂದವನ ಕಾಯ್ದ’ ಅಂತ ತಮ್ಮ ಒಂದು ಕೃತಿಯಲ್ಲಿ ತಿಳಿಸಿದ್ದಾರೆ. ಶ್ರೀವಾದೀಂದ್ರ ತೀರ್ಥರ ದರ್ಶನಕ್ಕಾಗಿ ಶ್ರೀವಿಜಯದಾಸರು ಅನೇಕ ಸಲ ಮಂತ್ರಾಲಯಕ್ಕೆ ಬಂದಿದ್ದಾರೆ.

ಶ್ರೀವಾದೀಂದ್ರ ತೀರ್ಥರ ಮಹಿಮಾನ್ವಿತ ಮತ್ತು ಮಂಗಳಕರವಾದ ಸ್ವರೂಪವನ್ನು ಕುರಿತು ಕೃತಿ ರಚಿಸಿರುವ ಶ್ರೀವಿಜಯದಾಸರು ತಾವು ಸ್ವತಃ ಕಂಡಿದ್ದನ್ನು ಯಥಾವತ್ತಾಗಿ ತಿಳಿಸಿದ ಕೃತಿಯೇ *ಕಂಡೆ ಕಂಡೆನೊ ಕಂಗಳಲಿ ಭೂಮಂಡಲದೊಳು ಮೆರೆವ ಯತಿಗಳ|ಮಂಡಲಾಬ್ಧಿಗೆ ಸೋಮನೆನಿಪ ಅಖಂಡ ಮಹಿಮ ವಾದೀಂದ್ರ ಗುರುಗಳ* ಯತಿಗಳ ಸಮೂಹವೆಂಬ ಸಮುದ್ರಕ್ಕೆ ಚಂದ್ರನಂತಿರುವವರು ನಮ್ಮ ಗುರುಗಳು ಅಂತ ತಿಳಿಸಿ *ನಸುನಗಿಯ ಮೊಗ ಪಸರಿಸಿದಾ ದ್ವಾ-ದಶನಾಮಗಳು ಶ್ರೀ ಮುದ್ರೆ ಮುದದಿಂದ| ನೊಸಿಲಿಲೊಪ್ಪುವ ಗಂಧ ಅಕ್ಷತಿ|ಎಸೆವ ಸಣ್ಣಂಗಾರ ಕಿವಿಯಲಿ|ಹಸನಾದ ಎಳೆ ತುಲಸಿ ಶೋಭಿಸಿ|ಬೆಸಸುವ ಒಂದೊಂದು ಮಾತಾಲಿಸಿದರದು ವೇದಾರ್ಥತುಲ್ಯಾ ಲಸವ ಗೈಸದೆ ಬರುವ ಗುರುಗಳ* ಸದಾ ನಗುಮಖದ ಕಳೆಹೊಂದಿರುವ, ದ್ವಾದಶ ನಾಮಗಳು ಮತ್ತು ಮುದ್ರೆಗಳಿಂದ ಮತ್ತು ಹಣೆಯಲಿ ಒಪ್ಪುವಂತಹ ಗಂಧ ಅಕ್ಷತಿ ಸಣ್ಞದಾದ ಅಂಗಾರ ( ಅಕ್ಷತೆ ಅಂಗಾರಗಳು ನಮ್ಮ ದೇಹಕ್ಕೆ,ಮುಖಕ್ಕೆ ಅಂದವಾಗಿ ಮುದದಿಂದ ಕಾಣುವ ರೀತಿ ಚೊಕ್ಕವಾಗಿ ಧರಿಸಬೇಕೆನ್ನುವುದು ಶ್ರೀದಾಸರ ಅಭಿಪ್ರಾಯ). ಕಿವಿಗಳಲ್ಲಿ ಭಗವಂತನ ನಿರ್ಮಾಲ್ಯವಾದ ತುಳಸಿದಳಗಳು ಹೀಗೆ ಅದ್ಭುತವಾಗಿ ತಿಳಿಸಿ, ಈ ಕೃತಿಯನ್ನು ಹೇಳುವವರಿಗೂ, ಶ್ರವಣ ಮಾಡುವವರಿಗೂ ಶ್ರೀವಾದೀಂದ್ರ ತೀರ್ಥರ ಚಿಂತನೆ ಮನಸ್ಸಿನಲ್ಲಿ ಮೂಡುವಂತೆ ತಿಳಿಸಿದ ಶ್ರೀವಿಜಯದಾಸರು, ಮುಂದೆ ಅವರ ಒಂದೊಂದು ಮಾತು ಕೂಡ ವೇದವಾಣಿಯಂತೆ ಸತ್ಯವಾದದ್ದು, ಅವುಗಳನ್ನು ಶ್ರದ್ಧೆಯಿಂದ ಆಲಿಸಿದರೆ ಅವುಗಳಲ್ಲಿ ಅಡಗಿರುವ ವೇದಗಳ ಒಳ ಅರ್ಥದ ಅರಿವು ಆಗುತ್ತದೆ‌. ಮತ್ತು ಅವರ ಚೈತನ್ಯ ಮತ್ತು ಚಟುವಟಿಕೆಗಳ ಮೂರ್ತಿ ಇದ್ದಂತಹ ಸಡಗರವನ್ನು *ಆಲಸವ ಗೈಸದೆ ಬರುವ ಗುರುಗಳ* ಎಂದು ವರ್ಣಿಸಿದ್ದಾರೆ.

ಹೀಗೆ ಶ್ರೀವಾದೀಂದ್ರ ತೀರ್ಥರ ದಿಗ್ವಿಜಯಯಾತ್ರೆಯ ಸಂಭ್ರಮದ ವಿವರಣೆ ಈ ನುಡಿಯಲ್ಲಿ ತಿಳಿಸುತ್ತಾರೆ. ವಿಶೇಷವಾದ ಮಕರಮುಖದ ಪಲ್ಲಕ್ಕಿಯಲ್ಲಿ ವಿರಾಜಮಾನರಾದ ಶ್ರೀಗಳವರ ಸುತ್ತಾ ನಾನಾ ಮಂಗಳ ವಾದ್ಯಗಳು. ದಶ ದಿಕ್ಕುಗಳಲ್ಲಿ ಅವರ ಕೀರ್ತಿ ಹರಡಿದ್ದರೂ ಅವರು ಸರಳ ಸ್ವಭಾವದವರು, ನಿರ್ಮಲ ಮನಸ್ಸುಳ್ಳ ಭಕ್ತರಿಗೆ ಅತಿ ಸುಲಭರು,ಭಕ್ತರ ಕಷ್ಟ ನಿವಾರಿಸಿ ಬೇಡಿದಿಷ್ಟಾರ್ಥಗಳನ್ನು ಕರುಣಿಸುವವರೂ ಆದ ಶ್ರೀವಾದೀಂದ್ರ ತೀರ್ಥರು ಋಷಿಕುಲೋತ್ತಮರು ಎಂದು ತಿಳಿಸುತ್ತಾರೆ ಶ್ರೀವಿಜಯ ದಾಸರು. ಅವರಿಗೆ ಈ ದಿವ್ಯವಾದ ವ್ಯಕ್ತಿತ್ವ ಎಲ್ಲಿಂದ ಬಂತು ಅಂದರೆ, ಅದರ ರಹಸ್ಯವನ್ನು ಶ್ರೀವಿಜಯ ದಾಸರು ತಿಳಿಸುತ್ತಾ ಶ್ರೀವಾದೀಂದ್ರ ತೀರ್ಥರು ಪ್ರತಿನಿತ್ಯ ಕಾಂತಿಯುಕ್ತ ದಿವ್ಯಮಣಿ ಮಾಲೆಗಳಿಂದ ಅಲಂಕೃತವಾದ ಮಂಟಪದೊಳಗೆ (ಹೊರಗಡೆ ಕಾಣುವ ಮತ್ತು ಹೃದಯಮಂಟಪದೊಳಗೆ) ಉಪಾಸ್ಯ ಮೂರ್ತಿ ಶ್ರೀಮನ್ಮೂಲರಾಮಚಂದ್ರ ದೇವರ ಮತ್ತು ಸಂಸ್ಥಾನದ ಸಮಸ್ತ ಅರ್ಚಾಮೂರ್ತಿಗಳ‌ನ್ನು ಏಕಾಗ್ರಚಿತ್ತದಿಂದ , ಭಕ್ತ್ಯಾತಿಶಯದಿಂದ ತಂತ್ರಸಾರೋಕ್ತ ಕ್ರಮದಿಂದ ಪೂಜಿಸಿ,ಕಲಿಭಂಜನನಾದ ಸಿರಿ ವಿಜಯ ವಿಠಲನ ಅನಂತ ನಾಮಗಳನ್ನು ಮಹಾತ್ಮ್ಯಾ ಜ್ಞಾನಪೂರ್ವಕ ಜಪಿಸುತ್ತಾ,ಚಿಂತನೆಯಮೂಲಕ ಆನಂದಿಸುವುದರಿಂದ ಬಂದಿತು ಎಂದು ತಿಳಿಸುತ್ತಾರೆ.

ಇಂತಹ ಶ್ರೀವಾದೀಂದ್ರ ತೀರ್ಥರು ತಮ್ಮ ಗುರುಗುಣಸ್ತವನವನ್ನು ರಾಯರ ಮುಂದೆ ಕೂತು ಪಾರಾಯಣ ಮಾಡಿ ಸಮರ್ಪಿಸಿದಾಗ,ರಾಯರಿಗೆ ಅವರ ಮರಿಮೊಮ್ಮಗ ( ದೇಹದಿಂದಲೂ ಮತ್ತು ಪರಂಪರೆಯಿಂದಲೂ) ಮಾಡಿದ ಈ ಅಮೋಘ ಸೇವೆಯಿಂದ ಸಂತೋಷವಾಗಿ ತಲೆ ದೂಗಿದರು,ಇದರಿಂದ ಬೃಂದಾವನ ಕಂಪಿಸಿ,ತಲೆ ಆಡಿಸಿದಂತೆ ಅಲ್ಲಾಡಿತು. ಇದರಿಂದ ಶ್ರೀವಾದೀಂದ್ರ ತೀರ್ಥರ ಗುರುಗುಣಸ್ತವನ ಗ್ರಂಥಕ್ಕೆ ರಾಯರ ಅಧಿಕೃತವಾದ ಸಮ್ಮತಿಯೂ ಸಿಕ್ಕಿತು. ಶ್ರೀ ರಾಯರು ಸ್ವತಃ ಅವರನ್ನು ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡು, ತಮಗಾಗುವ ವೈಭೋಗ ಉತ್ಸವಾದಿಗಳೆಲ್ಲಾ ಶ್ರೀವಾದೀಂದ್ರ ತೀರ್ಥರಿಗೂ ಆಗಬೇಕೆಂದು ಆಜ್ಞಾಪಿಸಿದ್ದಾರೆ ಅಂದರೆ ಶ್ರೀವಾದೀಂದ್ರ ತೀರ್ಥರ ಮಹಿಮೆ ಎಷ್ಟಿದೆ ಅಂತ ತಿಳಿಯುತ್ತದೆ.

ಆಗಲೇ ತಿಳಿಸಿದಂತೆ ರಾಯರ ಅನುಗ್ರಹ ಆಗಬೇಕೆಂದರೆ ಶ್ರೀವಾದೀಂದ್ರ ತೀರ್ಥರ ಮುಖಾಂತರವೇ ಆಗಬೇಕು. ಶ್ರೀವಾದೀಂದ್ರ ತೀರ್ಥರ ಅನುಗ್ರಹ ಆಗಬೇಕಂದರೆ ಏನು ಮಾಡಬೇಕು‌ ಅಂದರೆ ಶ್ರೀರಾಯರನ್ನು ಸ್ತುತಿಸಬೇಕು. ಇದು ಅವರಿಬ್ಬರ ಅವಿನಾಭಾವ ಸಂಬಂಧ. ಈಗಲೂ ಮಂತ್ರಾಲಯದಲ್ಲಿ ಶ್ರೀವಾದೀಂದ್ರ ತೀರ್ಥರಿಗೆ ಅಂತ ಪ್ರತ್ಯೇಕವಾಗಿ ಪ್ರದಕ್ಷಿಣೆ ನಮಸ್ಕಾರ ಅಂತ ಇಲ್ಲ, ಶ್ರೀ ರಾಯರಿಗೆ ಹಾಕಿದ ನಮಸ್ಕಾರ ಪ್ರದಕ್ಷಿಣೆ ಅದು ಶ್ರೀ ವಾದೀಂದ್ರ ತೀರ್ಥರಿಗೂ ಸೇವೆ ಆಗಿ ಅವರಿಗೂ ಅದು ಸಲ್ಲುತ್ತದೆ.
ಇಂತಹ ಶ್ರೀ ವಾದೀಂದ್ರ ತೀರ್ಥರ ಮುಖಾಂತರ ಶ್ರೀಮಂತ್ರಾಲಯ ಪ್ರಭುಗಳ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸಿತ್ತಾ ಶ್ರೀವಾದೀಂದ್ರ ತೀರ್ಥರ ಅಂತರ್ಗತ ಶ್ರೀರಾಘವೇಂದ್ರ ತೀರ್ಥರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮೂಲರಾಮಚಂದ್ರಾಭಿನ್ನ ಶ್ರೀ ಲಕ್ಷ್ಮೀ ವೆಂಕಟೇಶಾರ್ಪಣಮಸ್ತು

Related Articles

ಪ್ರತಿಕ್ರಿಯೆ ನೀಡಿ

Latest Articles