*ಶ್ರೀನಿವಾಸ ಮೂರ್ತಿ ಎನ್ ಎಸ್
ದೇವಾಲಯಗಳ ಪರಂಪರೆಯಲ್ಲಿ ಮಲೆನಾಡಿನಲ್ಲಿ ಒಂದು ಹೊಸ ಪರಂಪರೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೊಯ್ಸಳರಿಂದ ಹಿಡಿದು ಕೆಳದಿ ಅರಸರವರೆಗೆ ಹಲವು ಅರಸರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬಯಲುಸೀಮೆ ಹಾಗು ಅರೆ ಮಲೆನಾಡು ಭಾಗದಲ್ಲಿ ಚಾಲುಕ್ಯ ಮತ್ತು ಹೊಯ್ಸಳ ದೇವಾಲಯಗಳಿದ್ದರೆ ಮಲೆನಾಡಿನ ಸೆರಗಿನಲ್ಲಿ ಸಾಂತರಸರು, ಹೊಸಗುಂದ ವಿಜಯನಗರ ಹಾಗು ಕೆಳದಿ ಅರಸರ ಪ್ರಭಾವ ನೋಡಬಹುದು. ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾಗಿ ವಿಭಿನ್ನ ಜಾತ್ರೆಯಿಂದ ಪ್ರಸಿದ್ದಿ ಪಡೆದ ದೇವಾಲಯವೊಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿದೆ.
ಪೌರಾಣಿಕ ಐತಿಹ್ಯ
ಇಲ್ಲಿನ ಸ್ಥಳೀಯ ಪುರಾಣದಂತೆ ಪರಶುರಾಮ ತನ್ನ ತಂದೆಯ ಅಣತಿಯಂತೆ ತಾಯಿಯನ್ನು ಕೊಡಲಿಯಲ್ಲಿ ಕೊಂದ ನಂತರ ಇಲ್ಲಿನ ತುಂಗಾ ನದಿಯಲ್ಲಿ ತೊಳೆದ ಕಾರಣ ಇದು ಪವಿತ್ರ ತೀರ್ಥ ಎಂದು ಕರೆಯಲ್ಪಟ್ಟಿತು. ಕಾಲಾಂತರದಲ್ಲಿ ಇದೇ ತೀರ್ಥಹಳ್ಳಿಯಾಯಿತು ಎಂಬ ನಂಬಿಕೆ ಇದೆ. ಇಲ್ಲಿನ ನದಿಯ ಬಂಡೆಯಲ್ಲ್ಲಿ ರಾಮ ಮಂಟಪ ಇದೆ. ಇನ್ನು ಶಾಸನಗಳಲ್ಲಿ ಇದನ್ನ ತೀರ್ಥರಾಜಪುರ ಎಂದು ಕರೆಯಲಾಗಿದೆ. ಇನ್ನು ಕವಲೇದುರ್ಗ ತಾಲ್ಲೂಕಿನ ಮುಖ್ಯ ಕೇಂದ್ರವಾಗಿದ್ದ ಇದು ನಂತರ ಕಾಲದಲ್ಲಿ ತಾಲ್ಲೂಕು ಕೇಂದ್ರವಾಗಿಯೆ ಬೆಳೆಯಿತು.
ಇಲ್ಲಿನ ಐತಿಹಾಸಿಕ ಪ್ರಸಿದ್ದ ರಾಮೇಶ್ವರ ದೇವಾಲಯ ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಹಿಂದಿನ ದೇವಾಲಯದ ಬಗ್ಗೆ ಮಾಹಿತಿ ಇಲ್ಲದ್ದಿದರೂ ಅವರ ಕಾಲದಲ್ಲಿ ಪುನಹ ನಿರ್ಮಾಣವಾಗಿರಬಹುದು. ಕೆಳದಿ ಅರಸರ ಇಂಡೋ – ಇಸ್ಲಾಮಿಕ್ ಶೈಲಿಯಲ್ಲಿರುವ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ರಾಮೇಶ್ವರ ಎಂದು ಕರೆಯುವ ಶಿವಲಿಂಗವಿದೆ. ದೇವಾಲಯಕ್ಕೆ ಚಿಕ್ಕದಾದ ಶಿಖರವಿದ್ದು ಹೊರ ಭಿತ್ತಿಯಲ್ಲಿ ಕೆತ್ತನೆ ಕಾಣ ಬರುವದಿಲ್ಲ. ಇನ್ನು ದೇವಾಲಯಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು ಕಲ್ಲಿನ ಗೋಡೆಯ ಮೇಲಿನ ಕಾಷ್ಟ ಮುಚ್ಚಿಕೆಗಳು ಮಳೆ ಇಳಿಜಾರಿಗೆ ನಿರ್ಮಿಸಿದ ಚಾವಣಿ ಮಾದರಿಗಳು ಕರಾವಳಿಯ ದೇಗುಲಗಳ ನೆನಪಿಸುವ ಸ್ಪರ್ಶ ಪಡೆದಿದೆ. ಮೂಲ ಕೆಳದಿಯ ದೇವಾಲಯ ಎಲ್ಲೋ ಕಳೆದು ಹೋದಂತೆ ಅನಿಸುತ್ತದೆ. ದೇವಾಲಯದ ಮುಂದಿನ ಧ್ವಜ ಸ್ಥಂಭ ದೊಡ್ಡದಾಗಿದೆ.
ಇನ್ನು ಇಲ್ಲಿ ಸಂಕ್ರಾತಿಯ ಎಳ್ಳಮಾವಾಸ್ಯೆಯಂದು ನಡೆಯುವ ಜಾತ್ರೆ ರಾಜ್ಯದಲ್ಲಿಯೇ ಪ್ರಸಿದ್ದಿಯಾದದ್ದು. ಆ ಸಮಯದಲ್ಲಿ ಇಲ್ಲಿನ ತುಂಗಾ ನದಿಯಲ್ಲಿ ಸಾವಿರಾರು ಜನ ಸ್ನಾನ ಮಾಡಿ ಸಂಭ್ರಮದಿಂದ ಜಾತ್ರೆ ಅಚರಣೆ ಮಾಡಲಿದ್ದು ರಾತ್ರಿ ನಡೆಯುವ ತೆಪ್ಪೋತ್ಸವ ಹಾಗು ಇಲ್ಲಿನ ದೀಪದ ಅಲಂಕಾರಗಳು ಹೊಸ ಲೋಕಕ್ಕೆ ಕರೆದೊಯ್ಯುತ್ತವೆ.
ತಲುಪವ ಬಗ್ಗೆ: ಶಿವಮೊಗ್ಗದಿಂದ ಸುಮಾರು 63 ಕಿ ಮೀ ದೂರದಲ್ಲಿರುವ ತೀರ್ಥಹಳ್ಳಿ ಶಿವಮೊಗ್ಗ – ಊಡುಪಿ ರಸ್ತೆಯಲ್ಲಿದೆ.