ಪಂಚೇಂದ್ರಿಯಗಳ ಮೇಲೆ ಹಿಡಿತವಿರಲಿ: ಸದ್ಗುರು ಮುಕ್ತಾನಂದರು

ಸವದತ್ತಿ: “ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊ0ಡು ಸಂಯಮಿಯಾಗಿರಬೇಕು” ಎಂದು ಭಾಗವತ ಹೇಳುತ್ತದೆ. ಸುಖ ಸಾಧನಗಳಾದ ವಿಷಯಗಳು ಸಮಸ್ತ ಸೃಷ್ಟಿಯಲ್ಲಿ ಎಷ್ಟಿವೆಯೋ ಅವೆಲ್ಲವೂ ಒಟ್ಟಾದರೂ ಇಂದ್ರಿಯಗಳ ಸೆಳೆತಕ್ಕೆ ಒಳಗಾದ ವ್ಯಕ್ತಿಯನ್ನು ತೃಪ್ತಿ ಪಡಿಸಲಾರವು. ಕಾರಣ ಪಂಚೇಂದ್ರಿಯಗಳ ಮೇಲೆ ಹಿಡಿತವಿರಬೇಕು” ಎಂದು ಶ್ರೋ.ಬ್ರ.ನಿ.ಸದ್ಗುರು ಮಕ್ತಾನಂದ ಪೂಜ್ಯರು ತಿಳಿಸಿದರು.

ಸಿಂದೋಗಿ ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮದ ಗೂಗಲ್ ಮೀಟ್ ಮತ್ತು ಮುಖಾಮುಖಿ ಸತ್ಸಂಗದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ವಲ್ಲಭಾಚಾರ್ಯರು ತಪೋನಿಷ್ಟರು ಇಂದ್ರಿಯವನ್ನು ನಿಗ್ರಹಿಸಿದವರು. ಅವರು ಏಕಾದಶಿಯಂದು ಉಪವಾಸ ವ್ರತ ಪಾಲಿಸುತ್ತಿದ್ದರು. ಒಂದು ದಿನ ಏಕಾದಶಿ ದಿನ ಅವರು ದೇವಸ್ಥಾನವೊಂದರಲ್ಲಿ ಕುಳಿತಾಗ ರಾತ್ರಿ ಆ ದೇವಸ್ಥಾನದ ಭಕ್ತರೊಬ್ಬರು ಪ್ರಸಾದ ನೀಡಿದರು. ನಿರಾಹಾರ ಉಪವಾಸ ಮಾಡುತ್ತಿದ್ದ ವಲ್ಲಭಾಚಾರ್ಯರು ದೇವರ ಪ್ರಸಾದ ಬಿಡುವಂತೆಯೂ ಇಲ್ಲ. ಏಕಾದಶಿ ವ್ರತ ಮುರಿಯುವಂತೆಯೂ ಇಲ್ಲ. ಹೀಗಿರುವಾಗ ಆ ಪ್ರಸಾದವನ್ನು ರಾತ್ರಿ ಹನ್ನೆರಡು ಗಂಟೆಯಾಗುವವರೆಗೂ ಕಾಯ್ದು ನಂತರ ದ್ವಾದಶಿ ಆರಂಭವಾಗುವ ಗಳಿಗೆಯನ್ನು ಕಂಡು ಸೇವಿಸಿದರಂತೆ. ಇದು ಸಾಧನೆಯಲ್ಲಿ ಶ್ರದ್ಧೆಗೆ ಒಂದು ಉದಾಹರಣೆ. ಶರೀರದಲ್ಲಿ ಕಾಮಕ್ರೋಧಗಳ ಮಲಿನತೆ ತೊಡೆಯಬೇಕು. ಮನಸ್ಸು ಪರಿಶುದ್ಧವಾದಾಗ ಭಗವಂತನ ಧ್ಯಾನ ಸ್ಮರಣೆಗೆ ಅವಕಾಶ ದೊರೆಯುತ್ತದೆ ಎಂಬುದನ್ನು ಶ್ರೀ ಕೃಷ್ಣನ ರಾಸಲೀಲೆ ಪ್ರಸಂಗವನ್ನು ವಿವರಿಸುತ್ತ ಕೃಷ್ಣನ ಕೊಳಲಿನ ನಿನಾದದಲ್ಲೂ ಕೂಡ ಭಕ್ತಿಯ ಭಾವಪರವಶತೆ ಉಂಟಾಗುತ್ತಿತ್ತು. ಗೋಪಿಕೆಯರಿಗೆ ಇಂದ್ರಿಯ ನಿಗ್ರಹದ ಕುರಿತು ಕೃಷ್ಣ ಹಲವಾರು ರೀತಿಯ ಘಟನೆಗಳನ್ನು ತೋರಿಸುವ ಮೂಲಕ ಅವರಲ್ಲೂ ಕೂಡ ದೈವೀಭಕ್ತಿ ಉಂಟಾಗುವ0ತೆ ಮಾಡಿದ್ದನು.


ಬೆಳದಿಂಗಳ ಊಟ ಒಂದು ವಿಶಿಷ್ಟ ನಿದರ್ಶನವನ್ನು ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದರು ತಮ್ಮ ಬದುಕಿನಲ್ಲಾದ ಘಟನೆಯನ್ನು ವಿವರಿಸುತ್ತ, ದೇವರ ಹುಬ್ಬಳ್ಳಿಯ ಮಠದಲ್ಲಿ ಸದ್ಭಕ್ತರೆಲ್ಲ ಸೇರಿ ಬೆಳದಿಂಗಳ ಊಟವನ್ನು ಏರ್ಪಡಿಸಿದರು. ಮಠದ ಆವರಣದ ಒಂದೆಡೆ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು. ಊರಿನ ಎಲ್ಲ ಜನ ಜಾತಿ ಬೇಧ ಮರೆತು ತಮ್ಮ ತಮ್ಮ ಮನೆಯಲ್ಲಿ ಮಾಡಿದ ಅಡುಗೆಯನ್ನು ಮಠಕ್ಕೆ ತಂದರು. ಅಲ್ಲಿ ಹಲವು ಸೇವಕರು ಬೆಳದಿಂಗಳ ಊಟದ ಎಲ್ಲ ಅಡುಗೆಗಳನ್ನು ಶೇಖರಿಸಲು ಪರಿಕರಗಳನ್ನು ಇಟ್ಟಿದ್ದರು. ಜನ ತಮ್ಮ ತಮ್ಮ ಅಡುಗೆಯನ್ನು ಅದರಲ್ಲಿ ಶೇಖರಿಸಿದರು. ಕಾರ್ಯಕ್ರಮ ಪ್ರಾರಂಭದಲ್ಲಿ ದೇವರ ಹುಬ್ಬಳ್ಳಿಯ ಪೂಜ್ಯರು ಮಾತನಾಡಬೇಕು ಎಂದುಕೊ0ಡು ಪೂಜ್ಯರಿಗೆ ಮಾತನಾಡುವಂತೆ ತಿಳಿಸಿದರು. ಆಗ ಪೂಜ್ಯರು ಮಾತನ್ನು ಆರಂಭಿಸಿ “ಇದು ಬೆಳದಿಂಗಳ ಊಟದ ಕಾರ್ಯಕ್ರಮ. ಇಲ್ಲಿ ಬೆಳದಿಂಗಳು ಕಾಣುತ್ತಿಲ್ಲ ಎನ್ನುವಷ್ಟರಲ್ಲಿ ಸಂಘಟಕರು ವಿದ್ಯುತ್ ದೀಪಗಳ ಅಲಂಕಾರ ಅಲ್ಲಿ ಮಾಡಿದ್ದನ್ನು ಸೂಚ್ಯವಾಗಿ ಗಮನಿಸಿ ಎಲ್ಲ ವಿದ್ಯುತ್ ಬಲ್ಬಗಳನ್ನು ಆರಿಸಿದರು. ಅಂದು ಹುಣ್ಣಿಮೆಯಾದ ಕಾರಣ ಬೆಳದಿಂಗಳು ಆ ಸ್ಥಳದಲ್ಲಿ ಗೋಚರವಾಗತೊಡಗಿತು. ಆಗ ಬೆಳದಿಂಗಳ ಕಿರಣಗಳು ಸುತ್ತಲಿನ ಸಸ್ಯಶ್ಯಾಮಲೆಯಲ್ಲಿ ಆಮ್ಲಜನಕದ ಪ್ರಕರತೆ ಮತ್ತು ಅಲ್ಲಿ ಶೇಖರಿಸಿದ್ದ ಅಡುಗೆಯಲ್ಲಿ ಕೂಡ ಬೆಳದಿಂಗಳಿನ ಪ್ರಭಾವ ಮಾನವ ಶರೀರ ಅದನ್ನು ಬೆಳದಿಂಗಳ ಪ್ರಖರತೆಯಲ್ಲಿ ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ಕುರಿತು ದೇವರ ಹುಬ್ಬಳ್ಳಿಯ ಪರಮಪೂಜ್ಯರು ತಿಳಿಸಿದಾಗ ನಿಜವಾದ ಬೆಳದಿಂಗಳ ಊಟ ಎಂದರೇನು ಎಂಬುದರ ಅರಿವು ಎಲ್ಲರಿಗೂ ಆಗಿತ್ತು ಎಂಬುದನ್ನು ಪೂಜ್ಯರು ತಿಳಿಸಿದರು.

ಅದೇ ರೀತಿ ನಮ್ಮ ಪೂರ್ವಜನ್ಮದ ಪ್ರಾರಬ್ಧ ಕರ್ಮಗಳನುಸಾರ ಬದುಕಿನಲ್ಲಿ ಘಟನೆಗಳು ಜರಗುತ್ತವೆ ಎಂಬುದನ್ನು ಸುದರ್ಶನ ಎಂಬ ರಾಕ್ಷಸ ಹಾವು ಕೃಷ್ಣನ ತಂದೆಯನ್ನು ಗೋಕುಲದಲ್ಲಿ ನುಂಗುವ ಸಂದರ್ಭ ಶ್ರೀಕೃಷ್ಣ ಅಲ್ಲಿಗೆ ಆಗಮಿಸಿ ತನ್ನ ಪಾದದಿಂದ ಹಾವನ್ನು ಸ್ಪರ್ಷಿಸಲು ಅದು ಸ್ಪುರದ್ರೂಪ ಮನುಷ್ಯ ಆಕಾರ ತಾಳಿತು ಎಂಬುದನ್ನು ತಿಳಿಸುತ್ತ ಪೂರ್ವ ಜನ್ಮದ ವೃತ್ತಾಂತದ ಕತೆಯನ್ನು ತಿಳಿಸಿ ಅದು ಋಷಿಯೊಬ್ಬರ ತಪಸ್ಸನ್ನು ಕಂಡು ಅವರು ತಪಸ್ಸಿಗೆ ಕುಳಿತಾಗ ಅವರ ಶರೀರದ ತುಂಬ ರೋಮಗಳು ಬೆಳೆದಿರುವುದನ್ನು ವ್ಯಂಗ್ಯ ಮಾಡಿದಾಗ ಆ ಋಷಿ ನೀಡಿದ ಶಾಪದಿಂದ ಹಾವಾಗಿತ್ತು ಎಂಬುದರ ಹಿಂದಿನ ಜೀವನ ವೃತ್ತಾಂತವನ್ನು ವಿವರಿಸುತ್ತ ಗೋಪಿಕೆಯರಿಗೆ ಶ್ರೀ ಕೃಷ್ಣನು ಸೌಂದರ್ಯದ ಮದದಿಂದ ನಮ್ಮನ್ನು ನಾವು ಮೈಮರೆಯಬಾರದು. ಮನಸ್ಸಿನಲ್ಲಿ ಭಾವಸೌಂದರ್ಯ ತುಂಬಿರಬೇಕು. ಶರೀರದ ಬಾಹ್ಯ ಸೌಂದರ್ಯವಲ್ಲ ಎಂಬುದನ್ನು ತಿಳಿಸುವ ಮೂಲಕ ಶ್ರೀಕೃಷ್ಣನ ರಾಸಲೀಲೆ ಭಕ್ತಿಭಾವದಿಂದ ಕೂಡಿತ್ತು. ಎಲ್ಲ ಗೋಪಿಕೆಯರು ಕೂಡ ಭಕ್ತಿಯ ಆರಾಧಕರಾಗಿದ್ದರು. ರಾವಣ ಬಹಳ ಪಾಂಡಿತ್ಯವನ್ನು ಹೊಂದಿದ್ದ. ಅವನ ಅಹಂಕಾರ ಮತ್ತು ಬೋಗಲಾಲಸೆಯ ದುರಾಲೋಚನೆಯಿಂದ ಅಧಃಪತನ ಕಂಡನು ಎಂಬುದನ್ನು ಕೂಡ ಈ ಸಂದರ್ಭದಲ್ಲಿ ತಿಳಿಸಿದರು.


ಮುಂದುವರೆದು ಅಷ್ಟಾವಕ್ರನ ಜನನ. ನಂತರ ಅವನು ಜನಕ ಮಹಾರಾಜನ ಆಸ್ಥಾನಕ್ಕೆ ಹೋದಾಗ ಅವರ ವಿಕಾರ ರೂಪ ಕಂಡು ಜನಕನ ಆಸ್ಥಾನದ ಪಂಡಿತರು ಕುಹಕ ನಗೆ ಬೀರಲು. ಅಲ್ಲಿನ ಪಂಡಿತರಿಗೆ ತನ್ನ ಜ್ಞಾನವನ್ನು ಸವಾಲಿನ ಮೂಲಕ ತೋರಿಸಿ ಜನಕ ರಾಜ ಅಷ್ಟಾವಕ್ರನನ್ನು ತನ್ನ ಗುರುವನ್ನಾಗಿ ಪಡೆಯುವಂತಾದದ್ದು ದೃಷ್ಠಾಂತವನ್ನು ತಿಳಿಸುತ್ತ ನಮ್ಮ ಬಾಹ್ಯ ಸೌಂದರ್ಯದಿ0ದ ಏನನ್ನೂ ಸಾಧಿಸಲಾಗದು ಶರೀರದ ಅಂತರ0ಗದ ಸೌಂದರ್ಯ ಮಹತ್ವದ್ದು. ಮನಸ್ಸನ್ನು ಸತ್ಕರ್ಮಕ್ಕೆ ಹಚ್ಚುವುದರಿಂದ ಬದುಕಿನಲ್ಲಿ ಉನ್ನತಿಯನ್ನು ಕಾಣಬಹುದು. ಶ್ರೀ ಕೃಷ್ಣ ಕಂಸನನ್ನು ಸಂಹಾರ ಮಾಡಲು ಬರುವ ಕುರಿತು ನಾರದರು ಗೋಕುಲದಲ್ಲಿ ಶ್ರೀಕೃಷ್ಣ ಇರುವನು ಎಂಬ ಸಂಗತಿಯನ್ನು ಕಂಸನಿಗೆ ತಿಳಿಸುವ ಘಟನೆಗಳನ್ನು ಕೂಡ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.


ಸಿಂದೋಗಿ ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಸೋಮವಾರ ರಾತ್ರಿ ಜರುಗಿದ ಗೂಗಲ್ ಮೀಟ್ ಮತ್ತು ಕೋವಿಡ್ ನಿಯಮಾವಳಿಗೆ ಒಳಪಟ್ಟು ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವತದಲ್ಲಿ ಶ್ರೀ ಕೃಷ್ಣನ ರಾಸಲೀಲೆ ಪ್ರಸಂಗವನ್ನು ಕುರಿತು ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದ ಪೂಜ್ಯರು ಸತ್ಸಂಗವನ್ನು ನಡೆಸಿಕೊಟ್ಟರು.

ಸತ್ಸಂಗದಲ್ಲಿ ಯಶವಂತ ಗೌಡರ, ಹಲಗತ್ತಿ, ಚನ್ನಬಸು ನಲವಡೆ, ಕಾಶಪ್ಪ ನಲವಡೆ, ವೈ.ಬಿ.ಕಡಕೋಳ, ಶಿವಪೇಟಿ, ವೀರಣ್ಣ ಕೊಳಕಿ, ಸೇರಿದಂತೆ ಹಲವು ಭಕ್ತರು ಕೋವಿಡ್ ನಿಯಮಾನುಸಾರ ಉಪಸ್ಥಿತರಿದ್ದರು.

ಗೂಗಲ್ ಮೀಟ್ ಸಂಯೋಜನೆ ಸ್ವಾಗತ ಮತ್ತು ವಂದನಾರ್ಪಣೆಯನ್ನು ಶಿಕ್ಷಕರಾದ ವೀರಣ್ಣ ಕೊಳಕಿ ನಿರ್ವಹಿಸಿದರು.


ವರದಿ: ವೈ.ಬಿ.ಕಡಕೋಳ

Related Articles

ಪ್ರತಿಕ್ರಿಯೆ ನೀಡಿ

Latest Articles