*ಡಾ. ಪಿ. ವಿ. ಸುದರ್ಶನ ಭಾರತೀಯ
ಬೆಂಗಳೂರು: ರಾಜಧಾನಿಯ ಓಂಕಾರಾಶ್ರಮದಲ್ಲಿ ಗುರುಪೂರ್ಣಿಮಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ದಕ್ಷಿಣ ಭಾರತದಲ್ಲೇ ಅಪರ್ವವೆನಿಸುವ ಸಮಗ್ರ ದ್ವಾದಶ ಜ್ಯೋತಿರ್ಲಿಂಗ ಸನ್ನಿಧಾನದ ಎಡಕ್ಕೆ ಸ್ಥಾಪಿತ ಆಶ್ರಮದ ಸಂಸ್ಥಾಪಕ ಗುರು ಶಿವಪುರಿ ಸ್ವಾಮಿಗಳ ಸಮಾಧಿಯ ಮೇಲಿರುವ ಅಪರೂಪದ ಸ್ಫಟಿಕ ಲಿಂಗಕ್ಕೆ ಅಭಿಷೇಕದೊಂದಿಗೆ ಆರಂಭವಾಗಿತ್ತು ಕಾರ್ಯಕ್ರಮಗಳ ಸರದಿ!
ಕಳೆದೆರಡುವರೆ ದಶಕಗಳಿಂದ ಭಾರತವ್ಯಾಪಿ ಓಂಕಾರಾಶ್ರಮದ ದಿವ್ಯತೆಯ ಕಂಪನ್ನು ಪಸರಿಸುತ್ತಿರುವ ಶ್ರೀ ಶ್ರೀ ಮಧುಸೂಧನಾನಂದ ಪುರಿ ಸ್ವಾಮೀಜಿಯವರನ್ನು ಈ ನಿಟ್ಟಿನಲ್ಲಿ ಸಂದರ್ಶಿಸಿದಾಗ ಅವರ ಅಮೃತ ನುಡಿಗಳು ಹರಿದದ್ದು ಹೀಗೆ…
” ಇಂದು ವೇದವ್ಯಾಸರು ಅವತರಿಸಿದ ದಿನ, ಅವರು ಮಹಾಭಾರತ ಉದ್ಗçಂಥವನ್ನು ಸಂಪನ್ನಗೊಳಿಸಿದ ದಿನ! ಅವರ ರಚನೆಗಳಾದ ಹದಿನೆಂಟು ಪುರಾಣ-ಉಪನಿಷತ್ತುಗಳಲ್ಲಿ ಮಹಾಭಾರತ ಅತಿಶ್ರೇಷ್ಠ. ಕೃತಯುಗದ ಜಗದ್ಗುರು ದತ್ತಾತ್ರೇಯ ಸ್ವಾಮಿಯಾದರೆ, ತ್ರೇತಾಯುಗಕ್ಕೆ ವಾಲ್ಮೀಕಿ, ದ್ವಾಪರಯುಗಕ್ಕೆ ವೇದವ್ಯಾಸರು, ಕಲಿಯುಗಕ್ಕೆ ಆದಿಶಂಕರ ಭಗವತ್ಪಾದರು! ಏಳೆಂಟನೇ ಶತಮಾನದಲ್ಲಿ ಭೌದ್ಧ ಧರ್ಮದ ಪ್ರಾಬಲ್ಯದಿಂದ ಹಿಂದೂ ಧರ್ಮ ನಶಿಸಿಹೋಗುವುದರಲ್ಲಿದ್ದಾಗ ಭರತವರ್ಷದಲ್ಲಿ ಧರ್ಮ ಸಂಸ್ಥಾಪನೆ ಮಾಡಿದವರು ಆದಿಶಂಕರರು! ಆನಂತರ ರಾಮಾನುಜಾಚಾರ್ಯ, ಮಧ್ವಾಚಾರ್ಯರ ಆಗಮನ. ಸನಾತನ ಧರ್ಮವನ್ನು ಉಳಿಸಿ, ಬೆಳೆಸಿದ ಗುರು ಪರಂಪರೆಗೆ ಕೃತಜ್ಞತೆ ಸಲ್ಲಿಸುವ ದಿನವಿದು”.
“ಇಂಥಾ ವೇದವ್ಯಾಸರು ಆವಿರ್ಭವಿಸಿದ ದಿನದಂದು ನಮ್ಮ ಆಶ್ರಮದಲ್ಲಿ ನಮ್ಮ ಗುರುವರ್ಯರಾದ ಶ್ರೀ ಶ್ರೀ ಶಿವಪುರಿ ಮಹಾಸ್ವಾಮಿಗಳಿಗೆ, ಅವರ ಗುರುಗಳಾದ ಶ್ರೀ ಶ್ರೀ ಶಿವ್ಪುರಿ ಬಾಬಾರವರಿಗೆ ನಾವೆಲ್ಲಾ ಕೃತಜ್ಞತೆ ಅರ್ಪಿಸಿದ ದಿನವಿದು. ಬದುಕಿಗೊಂದು ಮಾರ್ಗದರ್ಶನ ಮಾಡಿಸುವವನೇ ಗುರು. ಮೋಕ್ಷದ ಹಾದಿ ತೋರುವವನೇ ಗುರು. ನಮ್ಮಲ್ಲಿ 47 ಗುರುಗಳ ಪರಂಪರೆಯಿದೆ. ಅವರೆಲ್ಲರನ್ನೂ ಸಾಂಕೇತಿಕವಾಗಿ ನಿಂಬೆಹಣ್ಣಿನಲ್ಲಿ ಆವಾಹನೆ ಮಾಡಿ, ಇಂದು ಪಂಚೋಪಚಾರ ಪೂಜೆ ನೆರೆವೇರಿಸಲಾಯ್ತು! ಓಘತ್ರಯವಾಗಿ…, ದಿವ್ಯೋಘ-ಸಿಧ್ಧೋಘ-ಮಾನೌಘ ಅನುಸಾರ ನಮ್ಮ ಗುರು-ಪರಮಗುರು-ಪರಮೇಶ್ಠಿ ಗುರುಗಳಿಗೆ ಪರಂಪರೆಯ ಸ್ರೋತದಲ್ಲಿ ನಾವಿಂದು ಅದ್ವೆöÊತ ಸಿದ್ಧಾಂತದ ಚೌಕಟ್ಟಿನಲ್ಲಿ ಕೃತಜ್ಞತೆ ಸಲ್ಲಿಸಿದೆವು”.
“ನಮ್ಮ ಗುರುಗಳು ನುಡಿದ ಹಾಗೆ, ಈ ಭುವಿಯಲ್ಲಿ ಮಾನವನ ಜೀವನ ಸುಖ-ದುಃಖ-ಸುಖ-ದು:ಖ-ಸುಖ-ದು:ಖಗಳ ಅನವರತ ಚೆಲ್ಲಾಟವಾಗರುತ್ತದೆ! ಅಂಥಾ ದುಃಖಸಾಗರದಿಂದ ನಿವೃತ್ತಿಹೊಂದಲು ಸೂಕ್ತಗುರುವಿನ ಮಾರ್ಗದರ್ಶನವೇ ನಮಗೆ ಆಧಾರ!
ಮಹಾವಿಷ್ಣುವಿನ ಉಲಿದೆಲ್ಲಾ ಅವತಾರಗಳೂ ಅಂಶಾವತಾರವಾದರೆ, ಶೋಡಷಕಲಾತೀತನಾದ ಭಗವಾನ್ ಶ್ರೀಕೃಷ್ಣ ತನ್ನ ಅವತಾರದಲ್ಲೂ ಗುರು ಸಾಂದೀಪನೀ ಆಶ್ರಮದಲ್ಲಿ ಜ್ಞಾನರ್ಜನೆ ಮಾಡಿದ ಉದಾಹರಣೆಯಿದೆ ನಮ್ಮ ಮುಂದಿದೆ! ಸಕಲವೂ ಶ್ರೀಕೃಷ್ಣನಿಂದಲೇ ಆರಂಭವಾಗಿ ಅವನಲ್ಲೇ ಅವಸಾನವಾಗುತ್ತದೆ. ಭಗವದ್ದರ್ಶನವಾಗಲು ಗುರುವೇ ಮೂಲ ಕಾರಣ ಎಂಬ ಸತ್ಯವನ್ನು ನಾವ್ಯಾರೂ ಮರೆಯುವಂತಿಲ್ಲ” ಎಂದು ಹೇಳುತ್ತಾ “ಸಾಕ್ಷಾತ್ಕಾರ”ಕ್ಕೆ ಶುಭ ಹಾರೈಸಿದರು.