*ಜ್ಯೋತಿ ಸಿ ಕೋಟಗಿ
ತಂದೆ ತಾಯಿ ಹೆಂಡತಿ ಮಕ್ಕಳು
ಅಕ್ಕ ತಂಗಿ ಅಣ್ಣ ತಮ್ಮರು
ಸ್ನೇಹಿತರು ಬಂಧು ಬಾಂಧವರು
ಎಲ್ಲ ಸಂಬ0ಧಗಳ ತೊರೆದು ಹೋದವರು
ತಾಯ್ನೆಲದ ರಕ್ಷಣೆಗೆ ಕಟಿಬದ್ದರಾದವರು //೧//
ಜಾತ್ರೆ ನಿಬ್ಬಣ ಔತಣ ಕೂಟದಿ ನಾವು
ಸಂಭ್ರಮ ಸಡಗರದಿರುವೆವು ನಾವು
ಭಾರೀ ಭಕ್ಷö್ಯಗಳ ಸವಿವೆವು ನಾವು
ಇದೆಲ್ಲ ತ್ಯಾಗವ ಮಾಡಿರುವರು ಅವರು
ಅವರೇ ನಮ್ಮ ಹೆಮ್ಮೆಯ ಸೈನಿಕರು //೨//
ಭಯವೆಂಬ ಪದದ ಅರ್ಥ ತಿಳಿಯದವರು
ಸುಖವೆಂಬ ಪದ ತ್ಯಜಿಸಿ ನಿಂತವರು
ಶರಣಾಗತರ ಜೀವ ಧಾತರು
ಮೋಸಗಾರರಿಗೆ ಯಮ ಧೂತರು
ನಮ್ಮ ಹೆಮ್ಮೆ ನಮ್ಮ ಸೈನಿಕರು //೩//
ವಾಯು ನೆಲ ಜಲದಿ ಸೈನಿಕರು
ಏನೇ ಬಂದರೂ ಮುನ್ನುಗ್ಗುವರು
ಪ್ರವಾಹದಿ ಮೊದಲು ನೆಗೆಯುವರು
ಆಕಾಶದಿ ಹಾರುವರು ಪಾತಾಳದಿ ಧುಮುಕುವರು
ಕಾಯಕ ಒಂದೇ ಉಸಿರಾಗಿಸಿಕೊಂಡವರು //೪//
ಪ್ರತೀ ದಿನ ಇರೆ ಗುಂಡಿನ ಚಕಮಕಿ
ಇವರಿಗಿಲ್ಲ ತಮ್ಮ ಜೀವದ ಕಾಳಜಿ
ಶತೃಗಳ ಸೆದೆ ಬಡೆವದೊಂದೇ ಹಪಹಪಿ
ನೀಚರ ಕತ್ತ ಸಿಳುವದೇ ದಿನಂಪ್ರತಿ
ಇವರೇ ನಮ್ಮ ಕಾಶ್ಮೀರಿ ಕಲಿಗಳು//೫//
ನುಸುಳು ಕೋರರಿಗೆ ಹೊಂಚನು ಹಾಕುವರು
ಉಗ್ರಗಾಮಿಗಳ ಹೊಸಕಿ ಹೂಳುವರು
ಕೊರೆಯುವ ಹಿಮದಿ ಹುದುಗಿ ಹೋದರೂ
ತಾಯ ರಕ್ಷಣೆಗೆ ಪುಟಿದೆದ್ದು ನಿಲ್ಲುವರು
ನಮ್ಮ ಸೀಯಾಚಿನ್ ಸಿಂಹಗಳು //೬//
ಶತ್ರುಗಳ ಚೆಂಡಾಡುವರು
ತ0ಟೆಕೋರರ ಹುಟ್ಟಡಗಿಸುವರು
ಕ್ಯಾತೆ ತಗೆದವರ ಹೂತು ಹಾಕುವರು
ಭಾರತಾಂಭೆಯ ಅಪ್ಪಿಕೊಂಡಿಹರು
ಅವಳನಾರಿಗೂ ಬಿಟ್ಟುಕೊಡದವರು //೭//
ನಡುಗಿತು ಶತ್ರುಗಳ ಎದೆ ಗುಂಡಿಗೆ
ನಲುಗಿದರು ನಮ್ಮವರ ಹೆಸರಿಗೆ
ಕೀರ್ತಿ ತರುವರು ತವರಿಗೆ
ವಿಜಯ ಕಿರೀಟ ಇಡುವರು ಮಾತೆಗೆ
ಜಗದಿ ಹೆಸರಾದವರು ನಮ್ಮ ಸೈನಿಕರೆ //೮//
ಸೈನಿಕ ನಿನ್ನ ನೆನೆದಾಗ ನಮ್ಮ ಮನ
ರೋಮಾಂಚನ ಗೊಳ್ಳುವದು ಕಣಕಣ
ನಿಮಗಿದೋ ಆತ್ಮಾಭಿಮಾನದ ವಂದನೆ
ದೇವನಲ್ಲಿ ಬೇಡುವೆವು ಕಂದನೇ
ಕನಸಲೂ ಸೋಲೆಂಬುದು ಸುಳಿಯದಿರಲೆಂದು //೯//
ಭಾರತಾಂಬೆಯ ಹೆಮ್ಮೆಯ ಪುತ್ರರು
ಮಾತೆಯ ರಕ್ಷಣೆಗಾಗಿ ಜೀವ ತೆತ್ತರು
ಹರಿಯಿತು ಕೋಡಿ ಕೋಡಿಗಳಲಿ ನೆತ್ತರು
ಕೊನೆಗೂ ಮಾತೆಗೆ ವಿಜಯ ಕಿರೀಟನಿತ್ತರು
ಅವರೇ ನಮ್ಮ ಕಾರ್ಗಿಲ್ ವೀರರು //೧೦//