ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಉತ್ಸವ

 ಮೇಲುಕೋಟೆ: ಚೆಲುವನಾರಾಯಣಸ್ವಾಮಿಗೆ ಶ್ರೀಕೃಷ್ಣರಾಜಮುಡಿ ಉತ್ಸವ ಗುರುವಾರ ರಾತ್ರಿ ಸಂಭ್ರಮದಿಂದ ನೆರವೇರಿತು. ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಮೈಸೂರು ಮಹಾರಾಜರಾಗಿದ್ದ ಮುಮ್ಮುಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಅವರೇ ಆರಂಭಿಸಿದ್ದ ಆಷಾಢ ಜಾತ್ರಾ ಮಹೋತ್ಸವವು ಕೃಷ್ಣರಾಜಮುಡಿ ಬ್ರಹ್ಮೋತ್ಸವ ಎಂದು ನೆರವೇರುತ್ತಿದೆ. ಮಹೋತ್ಸವದ 4ನೇ ದಿನವಾದ ಗುರುವಾರ ರಾತ್ರಿ ಚಂದ್ರಪ್ರಭೆಯಲ್ಲಿ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾಗಿ ಅಲಂಕಾರಗೊಂಡ ಚೆಲುವನಾರಾಯಣಸ್ವಾಮಿಗೆ ಮೈಸೂರು ಮಹಾರಾಜರು ಸಮರ್ಪಿಸಿದ್ದ ವಜ್ರಖಚಿತ ಕೃಷ್ಣರಾಜಮುಡಿಯನ್ನ ತೊಡಿಸಿ ಅಲಂಕರಿಸಲಾಗಿತ್ತು.

ಗರುಡದೇವನಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು. ಮಂಗಳವಾದ್ಯ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ಒಳಪ್ರಕಾರದಲ್ಲಿ ನಡೆದ ಸ್ವಾಮಿಯ ಉತ್ಸವ ಕೋವಿಡ್ ಕಾರಣದಿಂದ ಒಳಪ್ರಾಕಾರಕ್ಕೆ ಸೀಮಿತವಾಗಿತ್ತು. ಸಂಜೆ 4ರವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಉತ್ಸವ ದರ್ಶನಕ್ಕೆ ಭಕ್ತರನ್ನು ನಿರ್ಬಂಧಿಸಲಾಗಿತ್ತು.

ಕೋವಿಡ್‌ ಮಾರ್ಗಸೂಚಿ ಕಾರಣದಿಂದ ದೇವಾಲಯದ ಹೊರಭಾಗದಲ್ಲಿ ಉತ್ಸವ ನಡೆಸಲು ಅನುಮತಿ ಇಲ್ಲದೆ ಇರುವುದರಿಂದ ವೈರಮುಡಿ ಕಿರೀಟಧಾರಣೆಯಾಗುವ ಆಚಾರ್ಯ ರಾಮಾನುಜರ ಸನ್ನಿಧಿಯ ಆವರಣದಲ್ಲೇ ಸ್ವಾಮಿಗೆ ಅಲಂಕಾರ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಅಧಿಕಾರಿಗಳು ಮತ್ತು ದೇವಾಲಯದ ಸ್ಥಾನೀಕರು, ಅರ್ಚಕ ಪರಿಚಾರಕರು, ಸಿಬ್ಬಂದಿವರ್ಗದವರು ಮಾತ್ರ ಉತ್ಸವದಲ್ಲಿ ಭಾಗಿಯಾಗಿದ್ದರು.

ಆಗಸ್ಟ್ 4 ರವರೆಗೆ ಕೃಷ್ಣರಾಜಮುಡಿ ಜಾತ್ರಾಮಹೋತ್ಸವ ನಡೆಯಲಿದ್ದು, ಪ್ರತಿದಿನ ನಡೆಯುವ ಉತ್ಸವಗಳಲ್ಲಿ ಕೃಷ್ಣರಾಜಮುಡಿ ಕಿರೀಟ ಸ್ವಾಮಿಯನ್ನು ಅಲಂಕರಿಸಲಿದೆ. ಉತ್ಸವದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ ಭಾಗವಹಿಸಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles