ಕೃಷ್ಣರಾಜಮುಡಿ ಜಾತ್ರೆ, ಸಾಂಕೇತಿಕ ರಥೋತ್ಸವ

ಮೇಲುಕೋಟೆ: ಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಏಳನೇ ತಿರುನಾಳ್ ನಿಮಿತ್ತ ಭಾನುವಾರ ಮಹಾರಥೋತ್ಸವದ ಬದಲಿಗೆ ಸಾಂಕೇತಿಕ ಉತ್ಸವ ನೆರವೇರಿತು.

ಸಹಸ್ರಾರು ಭಕ್ತರು ಶ್ರೀಕೃಷ್ಣರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದರು. 

ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಪ್ರಾರಂಭಿಸಿದ ಹತ್ತುದಿನಗಳ ಬ್ರಹ್ಮೋತ್ಸವದಲ್ಲಿ ರಥೋತ್ಸವದ ಬದಲು ಸಾಂಕೇತಿಕ ಉತ್ಸವ ಮಾತ್ರ ನೆರವೇರುತ್ತಿದ್ದು, ಕೋವಿಡ್-19 ನಿಯಮದಂತೆ ದೇವಾಲಯದ ಒಳಪ್ರಾಕಾರದಲ್ಲೇ ಉತ್ಸವ ನೆರವೇರಿತು.

ವಜ್ರಖಚಿತ ಕಿರೀಟ ಮತ್ತು ಮೈಸೂರು ರಾಜಲಾಂಛನ ಗಂಡುಭೇರುಂಡ ಪದಕ ಅಲಂಕಾರದೊಂದಿಗೆ ಶ್ರೀದೇವಿ ಭೂದೇವಿ ಕಲ್ಯಾಣನಾಯಕಿಯೊಂದಿಗೆ ವಿರಾಜಮಾನನಾದ ಚೆಲುವನಿಗೆ ಅಮ್ಮನವರ ಸನ್ನಿಧಿಯ ಬಳಿ ಯಾತ್ರದಾನಮಾಡಿದ ನಂತರ ಮಹಾಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ದಿವ್ಯಪ್ರಬಂಧ ಪಾರಾಯಣಗಳೂ ನೆರವೇರಿದವು.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಭಕ್ತರ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು.

ಬ್ರಹ್ಮೋತ್ಸವದ ಆರನೇ ತಿರುನಾಳ್ ದಿನವಾದ ಶನಿವಾರ ಸಂಜೆ ಗಜೇಂದ್ರಮೋಕ್ಷ ಉತ್ಸವ ನೆರವೇರಿತು. ಈ ವೇಳೆ ಗಜೇಂದ್ರವರದನ ಮಹಿಮೆಯನ್ನು ಪಾರಾಯಣ ಮಾಡಲಾಯಿತು. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ಪಾಂಡವಪುರ ತಾಲ್ಲೂಕು ನೂತನ ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್, ಸಮನ್ವಯಾಧಿಕಾರಿ ತಿಮ್ಮರಾಯಿಗೌಡ, ಪರಿವರ್ತನ ಟ್ರಸ್ಟ್‌ನ ಸಮಾಜಸೇವಕ ಡಾ.ಇಂದ್ರೇಶ್ ದೇವರ ದರ್ಶನ ಪಡೆದರು.

ಆಗಸ್ಟ್ 3ರಂದು ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಅಂತಿಮ ದಿನದ ಕಾರ್ಯಕ್ರಮವಾದ ತೀರ್ಥಸ್ನಾನ ನೆರವೇರಲಿದ್ದು, ಇಡೀ ದಿನ ಕೃಷ್ಣರಾಜಮುಡಿ ಕಿರೀಟ ಸ್ವಾಮಿಯನ್ನು ಅಲಂಕರಿಸಲಿದೆ. ಸಂಜೆ ಪಟ್ಟಾಭಿಷೇಕ ಮಹೋತ್ಸದೊಂದಿಗೆ ಜಾತ್ರಾಮಹೋತ್ಸವ ಸಂಪನ್ನಗೊಳ್ಳಲಿದೆ. ಕೋವಿಡ್ 19 ನಿಯಮಪಾಲನೆಯ ಹಿನ್ನಲೆಯಲ್ಲಿ ಕಲ್ಯಾಣಿಯಲ್ಲಿ ನಡೆಯಬೇಕಿದ್ದ ತೀರ್ಥಸ್ನಾನ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳು ದೇವಾಲಯದ ಒಳಭಾಗದ ಅಮ್ಮನವರ ಸನ್ನಿಧಿಯ ಮುಂಭಾಗ ನೆರವೇರಲಿದೆ.

ನಿಕಟಪೂರ್ವ ಮಂಡ್ಯಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ ಅವರಿಗೆ ಹೊಸ ಸಂಪುಟದಲ್ಲಿ ಪ್ರಮುಖ ಖಾತೆ ಸಿಗುವಂತೆ ಪ್ರಾರ್ಥಿಸಿ ಕೃಷ್ಣರಾಜಮುಡಿ ಬ್ರಹ್ಮೋತ್ಸವದಲ್ಲಿ ನಾಲ್ಕು ದಿನ ವಿಶೆಷ ಪೂಜೆ ಸಲ್ಲಿಸಲಾಯಿತು. ಬ್ರಹ್ಮೋತ್ಸವದ ಆರಂಭವಾದ ಮಹಾರಾಜರ ವರ್ಧಂತಿ ದಿನವಾದ ಮಹಾಭಿಷೇಕ ಮತ್ತು 4ನೇ ದಿನವಾದ ಕೃಷ್ಣರಾಜಮುಡಿ ಉತ್ಸವದಂದು ಯತಿರಾಜದಾಸರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ವಿಶೇಷ ಪೂಜೆಸಲ್ಲಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles