ರಂಭಾಪುರಿ ಪೀಠ (ಬಾಳೆಹೊನ್ನೂರು) : ಬದುಕೊಂದು ಹೋರಾಟ. ಏನೇ ಬಂದರೂ ಎದುರಿಸಿ ಬಾಳಬೇಕಾಗುತ್ತದೆ. ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯಲು ಗುರುವಿನ ಅವಶ್ಯಕತೆಯಿದೆ. ಗುರಿ ಮುಟ್ಟಲು ಮನುಷ್ಯನಲ್ಲಿ ನಂಬಿಕೆ ಮತ್ತು ಛಲ ಇರಬೇಕಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಆಗಸ್ಟ್ 12 ರಂದು ಶ್ರೀ ರಂಭಾಪುರಿ ಪೀಠದಲ್ಲಿ ಲಿಂ.ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳವರ 74 ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಾಧನೆಯ ಹಾದಿಯಲ್ಲಿ ಸಂಕಷ್ಟಗಳು ಹೆಚ್ಚು. ಅರಿವಿಲ್ಲದ ಅಧಮರೊಂದಿಗೆ ಹೋರಾಡುವುದಕ್ಕಿಂತ ಸಜ್ಜನರೊಡನೆ ಸಂಸ್ಕೃತಿ ಹಂಚಿಕೊ0ಡು ಬಾಳುವುದು ಶ್ರೇಯಸ್ಕರ. ಶ್ರೀಮಂತರು ತಮ್ಮ ಬಗೆಗೆ ಅಷ್ಟೆ ಚಿಂತಿಸಿದರೆ ಸತ್ಪುರುಷರು ಬೇರೆಯವರ ಹಿತಚಿಂತನೆಗಳ ಬಗೆಗೆ ಸದಾ ಯೋಚಿಸುತ್ತಾರೆ. ಸತ್ಯ ಅರಿತಾಗ ಸ್ವಾಭಿಮಾನ ಎಲ್ಲರಲ್ಲಿ ಬೆಳೆದು ಬಂದಾಗ ಉತ್ತಮ ಸಮಾಜ ಕಟ್ಟಿ ಬೆಳೆಸಲು ಸಾಧ್ಯ ಎಂಬುದನ್ನು ಲಿಂ.ಶಿವಾನ0ದ ಜಗದ್ಗುರುಗಳು ಭಕ್ತರಿಗೆ ಬೋಧಿಸುತ್ತಿದ್ದರು. ಮನುಷ್ಯತ್ವ ಮರೆತು ಬಾಳಿದರೆ ಅವನತಿ ಶತಸಿದ್ಧ. ಸೌಜನ್ಯಶೀಲನಾಗಿ ಬಾಳಿದ್ದಾದರೆ ಜೀವನವೆಲ್ಲ ಸುಖಮಯವಾಗುತ್ತದೆಂದು ಎಚ್ಚರಿಸುತ್ತಿದ್ದರು. ಶ್ರೀ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ ಎಂಬ ಪ್ರಖ್ಯಾತಿ ಪಡೆದ ಶಿವಾನಂದ ಜಗದ್ಗುರುಗಳು ದೂರ ದೃಷ್ಠಿ ಹೊಂದಿದ ಕ್ರಿಯಾಶೀಲ ಮಹಾಚಾರ್ಯರಾಗಿ ಧರ್ಮ ಸಂಸ್ಕೃತಿ ಬೆಳೆಸಿದ್ದನ್ನು ಮರೆಯಲಾಗದು. ಅಂಥ ಮಹಾನ್ ಪುಣ್ಯ ಪುರುಷರ 74ನೇ ವರ್ಷದ ಲಿಂಗಾ0ಗ ಸಾಮರಸ್ಯದ ಪುಣ್ಯ ಸ್ಮರಣೋತ್ಸವ ಆಚರಿಸುತ್ತಿದ್ದೇವೆ. ಲಿಂ. ಶಿವಾನಂದ ಜಗದ್ಗುರುಗಳ ಮೌಲ್ಯಾಧಾರಿತ ತತ್ವ ಚಿಂತನೆ, ಧರ್ಮ ಸಮನ್ವಯ, ತೋರಿದ ಸತ್ಪಥದ ದಾರಿ ಸರ್ವರಿಗೂ ದಾರಿದೀಪವೆಂದು ಸ್ಮರಿಸಿದರು.
ಲಿಂಗೈಕ್ಯ ಜಗದ್ಗುರುಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಅಷ್ಟೋತ್ತರ ಮಹಾಪೂಜೆ ನೆರವೇರಿಸಲಾಯಿತು. ಬಬಲಾದ ಹಿರೇಮಠದ ದಾನಯ್ಯ ದೇವರು ಇವರಿಂದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಜರುಗಿತು.
ನೇತೃತ್ವ ವಹಿಸಿದ ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಲಿಂಗೈಕ್ಯ ಶಿವಾನಂದ ಜಗದ್ಗುರುಗಳ ಸಿದ್ದಿ ಸಾಧನೆ ಕುರಿತು ಉಪದೇಶಾಮೃತವನ್ನಿತ್ತರು. ಉಟಗಿ ಶಿವಪ್ರಸಾದ ದೇವರು, ರೇವತಗಾಂವ ವಿಶ್ವನಾಥ ದೇವರು, ಬೀದರ ಘನಲಿಂಗ ದೇವರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಅವರಿಂದ ಭಕ್ತಿಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಅಬ್ಬಿಗೇರಿ ಹಿರೇಮಠದ ಲಿಂ.ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳ ಸ್ಮರಣಾರ್ಥ ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮತ್ತು ಅಬ್ಬಿಗೇರಿ ಸದ್ಭಕ್ತರು ಹಾಗೂ ಚಿಕ್ಕಮಗಳೂರು ಜಿಲ್ಲೆ ಖಾಂಡ್ಯ-ಜಾಗರಹಳ್ಳಿ ಹೋಬಳಿ ವೀರಶೈವ ಶಿಷ್ಯ ಸದ್ಭಕ್ತರು ಅನ್ನದಾಸೋಹ ಸೇವೆಯನ್ನು ಸಲ್ಲಿಸಿದರು ಬೆಳಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳವರ ೪ನೇ ದಿನದ ತಪೋನುಷ್ಠಾನ ಪೂಜಾ ನೆರವೇರಿತು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂಸರ್ವತೋ ಮುಖಂ
ನರಸಿಂಹಂ ಭೀಷಣಂ ಭದ್ರಂ ಮೃತ್ಯುಂ ಮೃತ್ಯುಂ ನಮಾಮ್ಯಹಂ
ಓಂ ನರಸಿಂಹಾಯನಮಃ||