ರಂಭಾಪುರಿ ಪೀಠ (ಬಾಳೆಹೊನ್ನೂರು): ಹೊಟ್ಟೆ ತುಂಬಿಸಿಕೊoಡು ಬಾಳುವುದೊಂದೇ ಮನುಷ್ಯನ ಗುರಿಯಲ್ಲ. ಆಧ್ಯಾತ್ಮಿಕ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಂಡು ಬಾಳಿನ ಗುರಿ ತಲುಪುವುದು ಮುಖ್ಯ. ಕಾಯ ಮತ್ತು ಕಾಲ ಇವೆರಡನ್ನು ಸರಿಯಾಗಿ ಅರಿತು ಆಚರಿಸಿಕೊಂಡು ಬಾಳಿದಾಗ ಜೀವನ ಸಾರ್ಥಕಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಆಗಸ್ಟ್ 19ರಂದು ಕೈಗೊಂಡ 30ನೇ ವರ್ಷದ ಶ್ರಾವಣ ಮಾಸ ಇಷ್ಟಲಿಂಗ ತಪೋನುಷ್ಠಾನ ಹಾಗೂ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬದುಕಿನ ಹರವುಗೆ ಧರ್ಮ ದಾರಿ ದೀಪ. ಅರ್ಥ ಅಂತಸ್ತುಗಳ, ಸುಖ ದು:ಖಗಳ ಅಸಮತೋಲನದಿಂದಾಗಿ ತೊಳಲಾಟ ನಡೆಯುತ್ತಿದೆ. ಜೀವನದ ಉಲ್ಲಾಸಕ್ಕೆ ನೆಮ್ಮದಿಯ ಬದುಕಿಗೆ ಆಧ್ಯಾತ್ಮದ ಹಸಿವು ಹಂಬಲ ಬೇಕಾಗುತ್ತದೆ. ಮನುಷ್ಯ ದುಡಿಯುವ ಯಂತ್ರವಾಗಿದ್ದಾನೆ. ಸಂಪಾದನೆಯೇ ಆತನ ದಾರಿಯಾಗಿದೆ. ಹೀಗಾಗಿ ಮಾನಸಿಕ ಸಮತೋಲನ ಮರೆಯಾಗಿ ಸಂಕಷ್ಟಕ್ಕೆ ಬಲಿಯಾಗುತ್ತಿದ್ದಾನೆ. ಧರ್ಮದಿಂದ ದೂರವಾದ ಅರ್ಥ ಕಾಮನೆಗಳು ಊರ್ಜಿತಗೊಳ್ಳಲಾರವು. ಧರ್ಮದ ಚೌಕಟ್ಟಿನಲ್ಲಿ ಬೆಳೆದಾಗ ನಿಜವಾದ ಶ್ರೇಯಸ್ಸು ಪ್ರಾಪ್ತವಾಗುತ್ತದೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರ ಬೋಧಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂದೇಶ ಭೂಮಿ ಆಗಸದಷ್ಟು ವಿಶಾಲವಾಗಿವೆ ಎಂದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನವನ್ನು ಬಬಲಾದ ಹಿರೇಮಠದ ದಾನಯ್ಯ ದೇವರು ನಡೆಸಿಕೊಟ್ಟರು. ಉಟಗಿ ಹಿರೇಮಠದ ಶಿವಪ್ರಸಾದ ದೇವರು ಮತ್ತು ಬೀದರ ಘನಲಿಂಗ ದೇವರು ನುಡಿ ನಮನ ಸಲ್ಲಿಸಿದರು. ಶ್ರಾವಣ ಗುರುವಾರದ ಶುಭ ಸಂದರ್ಭದಲ್ಲಿ “ಜೇನುಗೂಡು” ಸಾಹಿತ್ಯ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು. ಲೆಕ್ಕಾಧಿಕಾರಿ ಸಂಕಪ್ಪನವರ, ಚನವೀರಯ್ಯ ಚಿಗರಿಮಠ, ಚಂದ್ರಶೇಖರ, ರವಿ, ರೇಣುಕ ಮತ್ತು ಕೊಟ್ರಯ್ಯ ಉಪಸ್ಥಿತರಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಇವರಿಂದ ಭಕ್ತಿಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು