ಸಹೋದರ ಸಹೋದರಿಯರ ಬಾಂಧವ್ಯದ ಸಂಕೇತ ‘ರಕ್ಷಾಬಂಧನ’

ಅಣ್ಣ ತಂಗಿಯ ಬಂಧವನ್ನು ಸಾರುವ ಸಂಭ್ರಮದ ಹಬ್ಬ ರಕ್ಷಾಬಂಧನ ಇಂದು. ಸಹೋದರ ಸಹೋದರಿಯರ ನಡುವಿನ ಬಾಂಧವ್ಯ ಎಂತಹದ್ದುಎನ್ನುವ ಕುರಿತ ಬರಹ ಇಲ್ಲಿದೆ.

*ಎಸ್. ಎಲ್. ವರಲಕ್ಷ್ಮೀ ಮಂಜುನಾಥ್

ಅಣ್ಣ, ಸಹೋದರ ಈ ಪದವೇ ಮನಸ್ಸಿಗೆ ಅದೆಷ್ಟು ತಂಪು, ಧೈರ್ಯ, ಆತ್ಮವಿಶ್ವಾಸ, ಪ್ರೀತಿ ವಾತ್ಸಲ್ಯಗಳ ಭಾವನೆಗಳನ್ನು ನೀಡುತ್ತದೆ! ಅಣ್ಣ ತಮ್ಮಂದಿರಿಲ್ಲದ ತವರು ಮನೆ ಅಪೂರ್ಣವೇನೋ!.

ಅವನು ತನ್ನ ತವರಿನ ನೌಕೆ ಸಾಗಿಸುತ್ತಿರುವ ಮಮತೆಯ ಸರದಾರ. ತನ್ನ ಜೊತೆಯಲ್ಲಿ ಹುಟ್ಟಿ ಬೆಳೆದ ತಂಗಿಯನ್ನು ಕಂಡರೆ ಅಣ್ಣನಿಗೆ ಇನ್ನಿಲ್ಲದ ಅಕ್ಕರೆ, ತಂಗಿ ಬೆಳೆದು ದೊಡ್ಡವಳಾಗಿ ತಾಯಿಯಾದರೂ ಅಣ್ಣನಿಗೆ ಮಾತ್ರ ಅವಳು ಪುಟ್ಟ ತಂಗಿಯೇ. ಮುದ್ದು ತಂಗಿಯೇ.

ತನ್ನ ಕಷ್ಟ ಸುಖಗಳಿಗೆ ಓಡೋಡಿ ಬರುವ ಅಣ್ಣನನ್ನು ಕಂಡರೆ ತಂಗಿಯಾದವಳಿಗೆ ಮೇರೆ ಮೀರಿದ ಪ್ರೀತಿ. ತನ್ನ ಮನದ ಏನೇ ವಿಚಾರಗಳನ್ನು ಸಹೋದರನ ಬಳಿ ಹೇಳಿಕೊಂಡು ಹಗುರಾಗಲು ಅವಳ ಮನಸ್ಸು ತವಕಿಸುತ್ತದೆ. ತನ್ನ ಸ್ನೇಹಿತೆಯರ ಮುಂದೆ ತನ್ನ ಸಹೋದರನ ರೂಪ, ಗುಣಗಳ ಬಗ್ಗೆ ಗುಣಗಾನ ಮಾಡದ ಯಾವ ಸಹೋದರಿಯು ಬಹುಶಃ ಇಲ್ಲವೇನೋ.

ಸಹೋದರನಿಗೆ, ತನ್ನ ಸಹೋದರಿ ಸದ್ಗುಣಗಳ ಗಣಿಯಾದರೆ ಸಹೋದರಿಯ ಪಾಲಿಗೆ ತನ್ನ ಸಹೋದರ ಎಲ್ಲರಿಗಿಂತ ಚೆಲುವ ಚೆನ್ನಿಗ, ವೀರ, ಶೂರ ಎಲ್ಲವೂ. ತಾನೆಲ್ಲೇ ಹೋಗಲಿ ತನ್ನ ಒಡಹುಟ್ಟಿದವಳಿಗಿಷ್ಟವಾದದ್ದು ಕಂಡು ಬಂದರೆ ಅದನ್ನು ತಂದು ಕೊಟ್ಟರಷ್ಟೇ ಸಹೋದರನಿಗೆ ಸಮಾಧಾನ. ಸಹೋದರಿಗೂ ಅಷ್ಟೇ. ತನ್ನ ಅಣ್ಣನಿಗೆ ಒಪ್ಪುವ ಬಟ್ಟೆಯೋ, ಉಡುಗೊರೆಯೊ ಕೊಡಲು ಅವಳಿಗೂ ಇನ್ನಿಲ್ಲದ ಪ್ರೀತಿ ಆಸಕ್ತಿ. ಮದುವೆಯಾಗಿ ಗಂಡನ ಮನೆ ಸೇರಿದ ಮೇಲೂ ತನ್ನ ಅಣ್ಣನೊಂದಿಗೆ ಕಳೆದ ಕಾಲವನ್ನು ಅವಳು ನೆನಪಿಸಿಕೊಳ್ಳುತ್ತಲೇ ಇರುತ್ತಾಳೆ. ಮತ್ತೆ ಆ ಪ್ರೀತಿ, ವಾತ್ಸಲ್ಯ, ಓಡನಾಟಕ್ಕಾಗಿ ಅವಳ ಮನಸು ಹಂಬಲಿಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಅವಳು ಹಬ್ಬಗಳನ್ನು ನಿರೀಕ್ಷಿಸುತ್ತಿರುತ್ತಾಳೆ.

ತನ್ನ ಪತಿ ಎಷ್ಟೇ ಬೆಲೆ ಬಾಳುವ ಸೀರೆ ತೆಗೆದುಕೊಟ್ಟರೂ, ತವರಿನಲ್ಲಿನ ಅಣ್ಣ ತೆಗೆದುಕೊಡುವ ಸೀರೆ ಅವಳಿಗೆ ಎಲ್ಲಕ್ಕಿಂತ ಅಮೂಲ್ಯವಾದದ್ದು. ನಮ್ಮ ಸಂಸ್ಕೃತಿಯಲ್ಲಿ ನಾಗರ ಪಂಚಮಿ ರಕ್ಷಾಬಂಧನದಂತಹ ಹಬ್ಬಗಳು ಸಹೋದರ ಸಹೋದರಿಯರ ಬಾಂಧವ್ಯವನ್ನು ಬೆಸೆಯಲು ಸಹಕಾರಿಯಾಗಿವೆ. ಹಬ್ಬಕ್ಕೆ ಕರೆಯಲೋ, ಹಬ್ಬಕ್ಕಾಗಿಯೋ ಸಹೋದರ ಮನೆಗೆ ಬಂದುಬಿಟ್ಟನೆಂದರೆ ಸಹೋದರಿಗೆ ಎಲ್ಲಿಲ್ಲದ ಸಂಭ್ರಮ. ಸಹೋದರನಿಗೆ ಇಷ್ಟವಾದ ಬಗೆ ಬಗೆ ಅಡುಗೆ ತಯಾರಿಸಿ ತನ್ನ ಕೈಯಾರೆ ಬಡಿಸಿದಾಗಲೇ ಅವಳಿಗೆ ತೃಪ್ತಿ, ಸಮಾಧಾನ. ಮನೆಗೆ ಬಂದ ಸಹೋದರ ಹೊರಟು ನಿಂತಾಗ ಸಹೋದರಿಯ ಕಣ್ಣಂಚು ಒದ್ದೆಯಾಗದಿರದು.

ಇದೇ ತರ ಹಬ್ಬಕ್ಕಾಗಿ ತವರಿಗೆ ಸಹೋದರಿ ಮನೆಗೆ ಬಂದಾಗ ಸಹೋದರನಿಗೆ ಅಪಾರ ಸಂತಸ, ಅವಳು ಹಬ್ಬ ಮುಗಿಸಿ ಪತಿಯ ಮನೆಗೆ ಹೊರಟು ನಿಂತರೆ ಅಣ್ಣನ ಮನಸ್ಸಿಗೆ ಏನೋ ತಳಮಳ, ಶೂನ್ಯಭಾವ. ‘ಇನ್ನೊಂದೆರಡು ದಿನ ಇದ್ದು ಹೋಗಬಾರದೇ’ ಎಂಬ ಆಪ್ತತೆ. ಸಂಬಂಧಗಳ ನಡುವೆ ಏನೇ ವೈಮನಸ್ಯ ಬಂದರೂ ಅವೆಲ್ಲವೂ ಕ್ಷಣಿಕವಷ್ಟೇ. ಇವೆಲ್ಲವುಗಳನ್ನು ಮೀರಿ ಬಂಧಿಸುವುದು ಅವರ ನಡುವಿನ ಅಪರಿಮಿತ ಪ್ರೀತಿ ವಾತ್ಸಲ್ಯಗಳು.

ಸಹೋದರ ತನ್ನ ಸಹೋದರಿಯಲ್ಲಿ ತಾಯಿಯ ಮಮತೆಯನ್ನು ಕಂಡರೆ, ಸಹೋದರಿ ತನ್ನ ಸಹೋದರನಲ್ಲಿ ತಂದೆಯ ವಾತ್ಸಲ್ಯವನ್ನು ಕಾಣುತ್ತಾಳೆ. ಅಣ್ಣ ಜೊತೆಗಿದ್ದನೆಂದರೆ ಸಹೋದರಿಗೆ ಏನೋ ಭದ್ರತೆಯ ಭಾವ. ಸಹೋದರ ತನ್ನನ್ನು ಎಲ್ಲಾ ಸಂಕಷ್ಟಗಳಿಂದಲೂ ಪಾರು ಮಾಡುತ್ತಾನೆ ಎಂಬುದು ಪ್ರತಿಯೊಬ್ಬ ಸಹೋದರಿಯ ಪರಮ ನಂಬಿಕೆ. ಈ ನಂಬಿಕೆಯ ಹಿನ್ನೆಲೆಯಲ್ಲಿಯೇ ರಕ್ಷಾಬಂಧನದ ಆಚರಣೆ.

ತನ್ನನ್ನು ಸರ್ವ ರೀತಿಯಿಂದಲೂ ಕಾಪಾಡುವ ಸಹೋದರ ನೂರು ಕಾಲ ಸುಖವಾಗಿ ಬಾಳಲೆಂದು ಸಹೋದರಿ ಮನದುಂಬಿ ಹರಸುತ್ತಾಳೆ, ಹಾರೈಸುತ್ತಾಳೆ. ಹಾಗಾಗಿಯೇ ಸಹೋದರಿ ನುಡಿಯುತ್ತಾಳೆ, ‘ಅಣ್ಣ ನೀನೆಷ್ಟು ನನಗೆ ಪ್ರೀತಿ ಕೊಟ್ಟಿರುವೆ ಎಂದರೆ ಪ್ರತಿಯೊಬ್ಬ ಪುರುಷನಲ್ಲೂ ನಿನ್ನನ್ನು ಹುಡುಕುವಷ್ಟು, ನಿನ್ನನ್ನು ಗುರುತಿಸುವಷ್ಟು, ಸಹೋದರನನ್ನಾಗಿ ಸ್ವೀಕರಿಸುವಷ್ಟು’ ಎಂದು.

Related Articles

ಪ್ರತಿಕ್ರಿಯೆ ನೀಡಿ

Latest Articles