ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಾಂಪ್ರದಾಯಿಕ ತಿನಿಸು

ಗೋಕುಲಾಷ್ಟಮಿಯಂದು ಶ್ರೀಕೃಷ್ಣನಿಗೆ ಬಗೆ ಬಗೆ ಸಾಂಪ್ರದಾಯಿಕ ತಿನಿಸುಗಳನ್ನು ಮಾಡಿ ನೈವೇದ್ಯವಾಗಿ ಅರ್ಪಿಸುತ್ತಾರೆ. ಮನೆಯಲ್ಲಿಯೇ ಶುಚಿ-ರುಚಿಯಾಗಿ ತಯಾರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು.

ಪುರಿ ಉಂಡೆ

ಬೇಕಾಗುವ ಸಾಮಗ್ರಿ: ಹುರಿದ ಪುರಿ-2ಕಪ್, ಹುರಿದು ಬಿಡಿಸಿದ ಶೇಂಗಾಬೀಜ-1/4 ಕಪ್, ಎಳ್ಳು-2 ಚಮಚ, ಹುರಿಗಡಲೆ- 3ಚಮಚ, ತುರಿದ ಕೊಬ್ಬರಿ – 3ಚಮಚ, ಪುಡಿ ಬೆಲ್ಲ-1ಕಪ್, ನೀರು -5 ಚಮಚ.

ತಯಾರಿಸುವ ವಿಧಾನ: ಎಳ್ಳು ಹಾಗೂ ಶೇಂಗಾವನ್ನು ಹುರಿದುಕೊಳ್ಳಿ. ಶೇಂಗಾವನ್ನು ಸಿಪ್ಪೆ ತೆಗೆದು ಬಿಡಿ ಮಾಡಿಕೊಳ್ಳಿ. ಪುರಿಯನ್ನು ಬಿಸಿ ಮಾಡಿಕೊಂಡು ಗರಿಗರಿಯಾಗಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ  ಪುರಿ, ಹುರಿದಿಟ್ಟುಕೊಂಡ ಶೇಂಗಾ, ತುರಿದ ಕೊಬ್ಬರಿ, ಹುರಿಗಡಲೆ ಸೇರಿಸಿ. ಎಳ್ಳನ್ನು ಕೊನೆಗೆ ಸೇರಿಸಿ.

ಬೆಲ್ಲದ ಸಿರಪ್ ತಯಾರಿಸುವ ವಿಧಾನ: ಬೆಲ್ಲಕ್ಕೆ 4ರಿಂದ 5 ಚಮಚ ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಯಲು ಇಡಿ.ಬೆಲ್ಲ ಪೂರ್ಣವಾಗಿ ಕರಗುವವರೆಗೆ ಬಿಸಿ ಮಾಡಿ. ನಂತರ ಬಟ್ಟೆಯಲ್ಲಿ ಸೋಸಿ. ನಂತರ ಬೆಲ್ಲದ ನೀರನ್ನು ಜೇನಿನ ರೂಪಕ್ಕೆ ಬರುವವರೆಗೆ ಬಿಸಿ ಮಾಡಿ. ಮಾಡಿಟ್ಟುಕೊಂಡಿರುವ ಮಿಶ್ರಣಕ್ಕೆ ಸಿರಪ್‌ನ್ನು ಸೇರಿಸಿ. ಬಿಸಿ ಹದವಾಗಿರುವಾಗಲೇ ಉಂಡೆ ಕಟ್ಟಿ.

ಉದ್ದಿನಬೇಳೆ ಚಕ್ಕುಲಿ


ಬೇಕಾಗುವ ಸಾಮಗ್ರಿಗಳು:
ಉದ್ದಿನಬೇಳೆ – 1/2 ಕಪ್, ಅಕ್ಕಿ ಹಿಟ್ಟು – ಎರಡೂವರೆ ಕಪ್, ಖಾರ- 2 ಚಮಚ, ಜೀರಿಗೆ 1 ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಉದ್ದಿನಬೇಳೆಯನ್ನು 1 ಕಪ್ ನೀರು ಸೇರಿಸಿ ಕುಕ್ಕರ್‌ನಲ್ಲಿ ಬೇಯಿಸಿಕೊಂಡು, ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟು ದೋಸೆ ಹಿಟ್ಟಿನ ಹದದಲ್ಲಿರಲಿ. ಈಗ ರುಬ್ಬಿಕೊಂಡ ಉದ್ದಿನ ಹಿಟ್ಟಿಗೆ ಉಪ್ಪು, ಖಾರದ ಪುಡಿ, ಜೀರಿಗೆ, ಅಕ್ಕಿಹಿಟ್ಟು ಸೇರಿಸಿ ಗಟ್ಟಿಯಾಗಿ ಕಲೆಸಿ. ಹಿಟ್ಟು ಸ್ವಲ್ಪ ನೀರು-ನೀರಾಗಿದ್ದರೆ ಇನ್ನೂ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಕಲೆಸಿ. ಕಲೆಸಿಕೊಂಡ ಹಿಟ್ಟನ್ನು ಚಕ್ಕುಲಿ ಒರಳಿನಲ್ಲಿ ಒತ್ತಿ, ಚಕ್ಕುಲಿಗಳನ್ನು ತಯಾರಿಸಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಗರಿಗರಿ ಚಕ್ಕುಲಿ ರೆಡಿ.

ಡ್ರೈಫ್ರೂಟ್ಸ್ ಲಡ್ಡು


ಡ್ರೈಫ್ರೂಟ್ಸ್ ಎಂದರೆ ಎಲ್ಲರಿಗೂ ಇಷ್ಟ. ಎಲ್ಲರಿಗೂ ಪ್ರಿಯವಾದ ಹಾಗೂ ಆರೋಗ್ಯಕ್ಕೆ ಉತ್ತಮವಾದ ಆಹಾರವೂ ಇದಾಗಿದೆ. ಒಣಹಣ್ಣುಗಳಿಂದ ಲಡ್ಡು ತಯಾರಿಸಿ ಸವಿಯಬಹುದು.

ಬೇಕಾಗುವ  ಸಾಮಾಗ್ರಿ: ಗೋಡಂಬಿ 1 ಕಪ್, ಬಾದಾಮಿ 1 ಕಪ್, ದ್ರಾಕ್ಷಿ 1 ಕಪ್, ಒಣ ಕೊಬ್ಬರಿ ತುರಿ 1 ಕಪ್, ಗಸಗಸೆ 2 ಚಮಚ, ಎಳ್ಳು 2 ಚಮಚ, ಬೆಲ್ಲ ರುಚಿಗೆ ತಕ್ಕಷ್ಟು, ತುಪ್ಪ ಸ್ವಲ್ಪ.

ಮಾಡುವ ವಿಧಾನ: ಗೋಡಂಬಿ, ಬಾದಾಮಿ ಮತ್ತು ಖರ್ಜೂರವನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಬೆಲ್ಲವನ್ನು ಪುಡಿ ಮಾಡಿ.
ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ, ದ್ರಾಕ್ಷಿ, ಖರ್ಜೂರ,ಕೊಬ್ಬರಿ ತುರಿ, ಎಲ್ಲವನ್ನು ಬೇರೆ ಬೇರೆಯಾಗಿ ಹುರಿದು ಒಂದು ಪಾತ್ರೆಗೆ ಹಾಕಿ ಮಿಶ್ರಣ ಮಾಡಿ. ನಂತರ ಎಳ್ಳು ಮತ್ತು ಗಸಗಸೆಯನ್ನು ಹುರಿದು ಸೇರಿಸಿ.
ಬೆಲ್ಲದ ಪಾಕವನ್ನು ಮಾಡಿ ಅದಕ್ಕೆ ಹುರಿದಿಟ್ಟ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ. ಅದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ.

ಬ್ರೆಡ್ ಮುರುಕ್ಕು

ಬೇಕಾಗುವ ಸಾಮಗ್ರಿ: ಕಡಲೆ ಹಿಟ್ಟು- 1ಕಪ್, ಅಕ್ಕಿ ಹಿಟ್ಟು-ಅರ್ಧ ಕಪ್, ಬ್ರೆಡ್ 8-10 ಸ್ಲೈಸ್, ಉಪ್ಪು ರುಚಿಗೆ, ಖಾರದಪುಡಿ-ಅರ್ಧ ಚಮಚ, ಇಂಗು-1/4 ಚಮಚ, ಬಿಸಿ ಎಣ್ಣೆ- 2ಚಮಚ, ಎಣ್ಣೆ ಕರಿಯಲು.

ತಯಾರಿಸುವ ವಿಧಾನ: ಬ್ರೆಡ್‌ನ ಗಡುಸಾಗಿರುವುದನ್ನು ತೆಗೆದು, ಒಂದು ಸಲ ನೀರಿನಲ್ಲಿ ಅದ್ದಿ ತೆಗೆಯಬೇಕು. ನೀರನ್ನು ಹಿಂಡಿ ತೆಗೆಯಿರಿ. ಅದಕ್ಕೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಉಪ್ಪು, ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣಕ್ಕೆ ಬಿಸಿ ಎಣ್ಣೆ, ಇಂಗು ಸೇರಿಸಿ ನಾದಿ. ಚಕ್ಕುಲಿಮಣೆಯಲ್ಲಿ ಒತ್ತಿ ಎಣ್ಣೆಗೆ ಬೀಳಿಸಿ. ಹೊಂಬಣ್ಣ ಬರುವವರೆಗೆ ಕರಿಯಿರಿ.

Related Articles

ಪ್ರತಿಕ್ರಿಯೆ ನೀಡಿ

Latest Articles