ಶ್ರಾವಣ ಮಾಸದ ಕೃಷ್ಣ ಪಕ್ಷದ ರೋಹಿಣಿ ನಕ್ಷತ್ರ ಅಷ್ಟಮಿ ತಿಥಿಯಂದು ಶ್ರೀಕೃಷ್ಣನ ಆವಿರ್ಭಾವವನ್ನು ಕೊಂಡಾಡುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ. ಈ ಪ್ರಯುಕ್ತ ಆಗಸ್ಟ್ 29, 30 ರಂದು ಬೆಂಗಳೂರಿನ ಇಸ್ಕಾನ್‌ನ ಹರೇಕೃಷ್ಣ ಗಿರಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.
ಶ್ರೀ ಶ್ರೀ ರಾಧಾಕೃಷ್ಣಚಂದ್ರರ ಮೂರ್ತಿಗಳನ್ನು ಕಣ್ಣುಕೋರೈಸುವ ವಜ್ರಾಭರಣಗಳಿಂದ, ಚಿನ್ನದ ನೇಯ್ಗೆಯುಳ್ಳ ಚಿತ್ತಾಕರ್ಷಕ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಭಗವಂತನ ಅವತಾರವನ್ನು ಸಂಭ್ರಮಿಸಲು ಮಂದಿರದ ಶ್ರೀರಾಧಾಕೃಷ್ಣ, ಕೃಷ್ಣಬಲರಾಮ ವಿಗ್ರಹಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿ ತ್ತು.
ಈ ಎರಡೂ ದಿನ ಶ್ರೀ ರಾಧಾಕೃಷ್ಣಚಂದ್ರರಿಗೆ ಮುಂಜಾನೆ 4.30ಕ್ಕೆ ಮಹಾಮಂಗಳಾರತಿ ಮತ್ತು ಕೀರ್ತನೆಗಳಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿ ನಂತರ ಪಂಚಾಮೃತ, ಪಂಚಗವ್ಯ, ಪುಷ್ಪೋದಕ, ಫಲೋದಕ ಮತ್ತು ಔಷಧಗಳಿಂದ ಅಭಿಷೇಕ ಮಾಡಲಾಯಿತು. ದೇವಸ್ಥಾನದ ಗೋಶಾಲೆಯಲ್ಲಿ ಗೋಪೂಜೆ ಮಾಡಲಾಯಿತು ಮತ್ತು ಶ್ರೀ ರಾಧಾಕೃಷ್ಣಚಂದ್ರ ಉತ್ಸವ ಮೂರ್ತಿಗಳಿಗೆ ಉಯ್ಯಾಲೆ ಸೇವೆ, ತೆಪ್ಪೋತ್ಸವ ಮತ್ತು ಕೃಷ್ಣನಿಗೆ ಪ್ರಿಯವಾದ 108 ಭಕ್ಷ್ಯಗಳ ನೈವೇದ್ಯಗಳ ಸೇವೆ ಸಲ್ಲಿಸಲಾಯಿತು. ಇಡೀ ಮಂದಿರವನ್ನು ವಿಧವಿಧ ಸುಗಂಧಭರಿತವಾದ ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು.
ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ಪ್ರವೇಶವಿರಲ್ಲಿಲ್ಲ ಆದ್ದರಿಂದ ಇಸ್ಕಾನ್ ಬೆಂಗಳೂರಿನ ಯೂಟ್ಯೂಬ್ ಚಾನೆಲ್ ಮತ್ತು ಇತರ ಸಾಮಾಜಿಕ ಜಾಲತಾಣಗಳಿಂದ ಲಕ್ಷಾಂತರ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಂದು ಇಸ್ಕಾನ್, ಬೆಂಗಳೂರು ಮುಖ್ಯಸ್ಥ (ಸಂಪರ್ಕ ಮತ್ತು ಯೋಜನೆಗಳು) ನವೀನ ನೀರದ ದಾಸ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಕುಲಶೇಖರ ಚೈತನ್ಯ ದಾಸ- 9379464312. ಬಾಲಸುಬ್ರಹ್ಮಣ್ಯ- 8123469518.