ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ: ರಂಭಾಪುರಿ ಶ್ರೀ

ರಂಭಾಪುರಿ ಪೀಠ (ಬಾಳೆಹೊನ್ನೂರು): ಮಾನವ ವ್ಯಕ್ತಿತ್ವ ವಿಕಸನಕ್ಕೆ ಧರ್ಮದ ಕೊಡುಗೆ ಅಪಾರವಾದುದು. ಧಾರ್ಮಿಕ ಮೌಲ್ಯಗಳ ಸಹಾಯದಿಂದ ಕೂಡಿದ ಬದುಕು ಅರ್ಥಪೂರ್ಣವಾಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿ ದೀಪ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಸಪ್ಟಂಬರ್ 2 ರಂದು ಕೈಗೊಂಡ 30ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ತಪೋನುಷ್ಠಾನ ಹಾಗೂ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯನ ಬುದ್ಧಿ ಶಕ್ತಿ ಅಸಾಧಾರಣವಾಗಿದೆ. ಮಾನವ ಪಕ್ಷಿಯಂತೆ ಹಾರಾಡಲು ಬಲ್ಲ. ಮೀನಿನಂತೆ ಈಜಾಡಬಲ್ಲ. ಆದರೆ ಮನುಷ್ಯ ಮನುಷ್ಯನಾಗಿ ಈ ಭೂಮಿಯ ಮೇಲೆ ಬದುಕಿ ಬಾಳುವುದನ್ನು ಕಲಿಯಲಿಲ್ಲ. ದುಡಿಯುವ ಕೈಗೆ ಬಡತನವಿಲ್ಲ. ಆಲಸ್ಯದ ಬದುಕಿಗೆ ನೆಮ್ಮದಿ ಇಲ್ಲ. ಕರ್ತವ್ಯದ ಕಾಲು ದಾರಿಯಲ್ಲಿ ಹೆಜ್ಜೆ ಹೆಜ್ಜೆಗೆ ತೊಡಕುಗಳು ಬರಬಹುದು. ಅಜ್ಞಾನ ಅಧರ್ಮಗಳ ಅಂಧಕಾರದ ಬದುಕು ಧರ್ಮ ದೀಪದ ಬೆಳಕಿನಿಂದ ಮಾತ್ರ ಸಂತೋಷ ಪಡೆಯಬಲ್ಲ. ಮನುಷ್ಯನ ಕಷ್ಟ ನಷ್ಟಗಳಿಗೆ ಧರ್ಮದ ಅಭಾವವೇ ಕಾರಣ. ಜೀವನ ಮಾರ್ಗದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವಾದ್ವೆöÊತ ಜ್ಞಾನ ಸಿರಿಯನ್ನು ಬೋಧಿಸಿದ್ದಾರೆ ಎಂದರು.


ಬಬಲಾದ ಹಿರೇಮಠದ ದಾನಯ್ಯ ದೇವರು ಪುರಾಣ ಪ್ರವಚನದಲ್ಲಿ ಮಾತನಾಡಿ ಲಿಂ. ಭೂಗರ್ಭ ಸಂಜಾತ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯರು ಬರೆದಿಟ್ಟ ಕಾಲ ಜ್ಞಾನದಲ್ಲಿ ಏನೆಲ್ಲವನ್ನು ಬೋಧಿಸಿದ್ದಾರೆಂದರು. ರಾಯಚೂರು ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ದೇವಾಪುರ-ಬಬಲಾದ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು, ನವಿಲಕಲ್ಲ ಶಾಂಭವಿ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಉಟಗಿ ಹಿರೇಮಠದ ಶಿವಪ್ರಸಾದ ದೇವರು, ಬೀದರ ಜಿಲ್ಲೆಯ ಘನಲಿಂಗ ದೇವರು, ರೇವತ್‌ಗಾಂವ ವಿಶ್ವನಾಥ ದೇವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ರಾಯಚೂರು ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.


ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಮತ್ತು ಬಸಯ್ಯ ಸ್ವಾಮಿ ಭಕ್ತಿ ಗೀತೆ ಹಾಡಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles