* ಶ್ರೀನಿವಾಸ ಮೂರ್ತಿ ಎನ್ ಎಸ್
ಶಿವಮೊಗ್ಗದ ಜಿಲ್ಲೆಯಲ್ಲಿ ಹಲವು ಅರಸು ಮನೆತನದ ದೇವಾಲಯಗಳ ನಿರ್ಮಾಣದ ಪರಂಪರೆಯನ್ನೇ ನೋಡಬಹುದು. ಶಾತವಾಹನರ ಕಾಲದಿಂದ ಕೆಳದಿ ಅರಸರ ಕಾಲದಿಂದ ಹಲವು ಅರಸರು ದೇವಾಲಯ ನಿರ್ಮಾಣದಲ್ಲಿ ತಮ್ಮ ಕೊಡುಗೆಯನ್ನ ನೀಡಿದ್ದಾರೆ. ಅಂತಹ ದೇವಾಲಯಗಳಲ್ಲಿ ಸೊರಬ ತಾಲ್ಲೂಕಿನ ಉದ್ರಿಯ ದೇವಾಲಯಗಳು ಸಹ ಒಂದು. ಪ್ರವಾಸಿಗರಿಂದ ದೂರವೇ ಇಲ್ಲಿನ ದೇವಾಲಗಳಲ್ಲಿ ಅಷ್ಟಾಗಿ ಗಮನ ಸೆಳೆಯದ ದೇವಾಲಯವೆಂದರೆ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ.
ಇತಿಹಾಸದ ಪುಟದಲ್ಲಿ ಉದ್ದುರೆ – ಉದ್ದುರ – ಉದ್ದಾಪುರ ಎಂದು ಕರೆಯಲಾಗುತ್ತಿದ್ದ ಈ ಗ್ರಾಮ ಆಗಿನ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿತ್ತು. ಮೂಲತಹ ಚುಟು – ಶಾತವಾಹನರಿಂದ ಆಳ್ವಿಕೆಗೆ ಒಳಪಟ್ಟಿದ್ದ ಈ ಗ್ರಾಮ ನಂತರ ಕಾಲದಲ್ಲಿ ಕದಂಬ – ಚಾಲುಕ್ಯರು – ರಾಷ್ಟ್ರಕೂಟ – ಕಲಚೂರಿಗಳು – ಹೊಯ್ಸಳರು – ವಿಜಯನಗರದ ಕಾಲದಲ್ಲಿ ಪ್ರಮಖ ಪಟ್ಟಣವಾಗಿಯೇ ಇತ್ತು. ಹೊಯ್ಸಳನ ವೀರ ಬಲ್ಲಾಳನ ಕಾಲದಲ್ಲಿ ಒಂದು ಪ್ರಾದೇಶಿಕ ಕೇಂದ್ರವಾಗಿತ್ತು.
ದೇವಾಲಯದ ಗರ್ಭಗುಡಿ ಮಾತ್ರ ಈಗ ಉಳಿದಿದ್ದು ಮುಂದೆ ಇರಬಹುದಾಗಿದ್ದ ಅಂತರಾಳ ಹಾಗು ನವರಂಗ ಭಾಗಗಳ ಅವಶೇಷಗಳು ಮಾತ್ರ ಉಳಿದಿದೆ. ಗರ್ಭಗುಡಿಯಲ್ಲಿ ಸುಂದರವಾದ ಶ್ರೀ ಲಕ್ಷ್ಮಿನಾರಾಯಣ ಶಿಲ್ಪವಿದ್ದು ಸುಂದರವಾಗಿದೆ. ಪದ್ಮಪೀಠದ ಮೇಲೆ ಸುಮಾರು 3 ½ ಅಡಿ ಎತ್ತರದ ಸುಂದರ ಶಿಲ್ಪ ಸುಖಾಸೀನ ಭಂಗಿಯಲಿದ್ದು ಬಲಗಾಲನ್ನು ಕೆಳಚಾಚಿದಂತೆ ಇದ್ದು ಒಂದು ಕಾಲಿನ ಮೇಲೆ ಲಕ್ಷ್ಮಿ ಕುಳಿತಂತೆ ಇದೆ. ಶಿಲ್ಪದ ಪ್ರಭಾವಳಿಯಲ್ಲಿ ದಶಾವತಾರಗಳ ಕೆತ್ತನೆ ಇದ್ದು ಸುಂದರವಾದ ಕಿರೀಟವಿದೆ. ಕೊರಳಿನಲ್ಲಿನ ಕಂಠೀಹಾರ ಮಾತು ಯಜ್ಞೋಪವೀತದ ಕೆತ್ತನೆ ಗಮನ ಸೆಳೆಯುತ್ತದೆ.
ಶಿಲ್ಪದ ಹಿಂದಿನ ಎಡಗೈನಲ್ಲಿ ಗದೆ ಇದ್ದು ಬಲಗೈನಲ್ಲಿ ಕಮಲವಿದೆ. ಮುಂದಿನ ಬಲಗೈನಲ್ಲಿ ಶಂಖವಿದ್ದು ಎಡಗೈ ಲಕ್ಷ್ಮಿಯನ್ನು ಆವರಿಸಿದ್ದು ಚಕ್ರ ಹಿಡಿದಂತೆ ಇದೆ. ದೇವಿ ನಾರಯಾಣನ ಕಡೆಗೆ ಮುಖ ಮಾಡಿದಂತೆ ಇದ್ದು ಲಕ್ಷ್ಮಿಯ ಹಾರಗಳು ಕಿವಿಯ ಕುಂಡಲಗಳು ಗಮನ ಸೆಳೆಯುತ್ತದೆ. ಪೀಠದ ಬಳಿ ಗರುಡನ ಕೆತ್ತನೆ ಇದೆ.
ಸುಂದರವಾಗಿರುವ ಈ ದೇವಾಲಯ ಊರಿನ ಮಧ್ಯ ಭಾಗದಲ್ಲಿದ್ದು, ಇಲ್ಲಿ ಶಿವ ದೇವಾಲಯ ಹಾಗು ಮೊದಲು ಜಿನ ದೇವಾಲಯವಾಗಿದ್ದು ನಂತರ ಕಾಲದಲ್ಲಿ ಪರಿವರ್ತನೆಗೊಂಡ ಈಶ್ವರ ದೇವಾಲಯ ನೋಡಬಹುದು. ಇಲ್ಲಿ ಅದ್ಬುತವಾದ ಭುವನೇಶ್ವರಿ ನೋಡಲೇ ಬೇಕಾದದ್ದು.
ತಲುಪುವ ಬಗ್ಗೆ: ಉದ್ರಿ ಸೊರಬದಿಂದ ಸುಮಾರು 11 ಕಿ ಮೀ ದೂರದಲ್ಲಿದೆ.