ಒಂದು ದಿನ ಗಣೇಶನು ತನ್ನ ವಾಹನವಾದ ಇಲಿಯ ಮೇಲೆ ಕುಳಿತು ಲೋಕಸಂಚಾರ ಮಾಡುತ್ತಾ ಚಂದ್ರಲೋಕಕ್ಕೇ ಬಂದನು. ಚಂದ್ರನು ಅವನನ್ನು ನೋಡಿದನು. ಚಂದ್ರ ಸರ್ವಾಂಗ ಸುಂದರ. ಅದೇ ಅವನಿಗೆ ಜಂಬ. ಗಣಪತಿಯ ಆನೆಮುಖ, ಡೊಳ್ಳುಹೊಟ್ಟೆ ಮತ್ತು ಅವನ ಇಲಿಯನ್ನು ನೋಡಿ ಹಾಸ್ಯಮಾಡಿ ನಕ್ಕನು. ಇದರಿಂದ ಅಪಮಾನಿತನಾದ ಗಣೇಶನಿಗೆ ಚಂದ್ರನ ಮೇಲೆ ಬಹಳ ಕೋಪ ಬಂದಿತು. ಕೂಡಲೇ ಅವನ ಕಣ್ಣುಗಳು ಕೆಂಪಾದವು. ಅವನು ಎಲೈ ಚಂದ್ರ, ನಿನಗೆ ನಿನ್ನ ಸೌಂದರ್ಯದ ಮದ ಹೆಚ್ಚಿ ಹೋಗಿದೆ. ಎಲ್ಲ ಲೋಕಗಳೂ ಪೂಜಿಸುವ ನನನ್ನೇ ಹಾಸ್ಯಮಾಡಿ ನಗುತ್ತಿರುವೆಯಾ, ಮೂರ್ಖ! ಇದೊ, ನಿನ್ನ ಅಹಂಕಾರಕ್ಕೆ ತಕ್ಕ ಫಲವನ್ನು ಅನುಭವಿಸು!' ಎಂದು ಗುಡುಗಿದನು.
ನಿನ್ನ ಗರ್ವಕ್ಕೂ ಅಜ್ಞಾನಕ್ಕೂ ಕಾರಣವಾದ ನಿನ್ನ ಈ ಸೌಂದರ್ಯವು ಕುಂದಿ ಹೋಗಲಿ! ಇನ್ನು ಮುಂದೆ ನನ್ನ ಹುಟ್ಟಿದ ದಿನವಾದ ಭಾದ್ರಪದ ಶುದ್ಧ ಚೌತಿಯ ದಿನ ನಿನ್ನನ್ನು ನೋಡುವವರು ಸುಳ್ಳು ಅಪವಾದಕ್ಕೆ ಗುರಿಯಾಗಲಿ’ ಎಂದು ಶಾಪ ಕೊಟ್ಟನು.
ಶಾಪಗ್ರಸ್ತನಾದ ಚಂದ್ರನ ಅಹಂಕಾರವೆಲ್ಲಾ ಚೂರುಚೂರಾಯಿತು. ಅವನಿಗೆ ತನ್ನ ತಪ್ಪಿನ ಅರಿವಾಯಿತು. ಪಶ್ಚಾತ್ತಾಪವೂ ಆಯಿತು. ಆಗ ಅವನು ಗಣೇಶನ ಮುಂದೆ ಭಯ-ಭಕ್ತಿಗಳಿಂದ ಕೈಮುಗಿದು ನಿಂತು,’ಸ್ವಾಮಿ, ನನ್ನ ಅಜ್ಞಾನವನ್ನು ಕ್ಷಮಿಸಿಬಿಡು ನನಗೆ ಕೊಟ್ಟ ಶಾಪವನ್ನು ಹಿಂತೆಗೆದುಕೊ0ಡು ನನ್ನನ್ನು ಉದ್ಧರಿಸು’ ಎಂದು ಅಂಗಲಾಚಿ ಬೇಡಿಕೊಂಡನು.
ಆಗ ಕ್ಷಮಾಶೀಲನಾದ ಗಣೇಶನು ಶಾಂತನಾದನು. ಅವನು ಸಂಕಟದಲ್ಲಿದ್ದ ಚಂದ್ರನನ್ನು ಸಂತೈಸುತ್ತಾ, ಚಂದ್ರ ನೀನು ನಿನ್ನ ತಪ್ಪನ್ನು ತಿಳಿದುಕೊಂಡೆ. ನಿನ್ನ ಗರ್ವ ಹೋಗುವುದೇ ಮುಖ್ಯ. ಆದರೆ ನನ್ನ ಶಾಪ ಎಂದಿಗೂ ಸುಳ್ಳಾಗದು. ಆದರೆ ಚೌತಿಯ ದಿನ ನಿನ್ನನ್ನು ನೋಡಿ ಮಿಥ್ಯಾಪವಾದಕ್ಕೆ ಗುರಿಯಾದವರು ಶುದ್ಧ ಬಿದಿಗೆಯ ದಿನವು ನಿನ್ನ ದರ್ಶನ ಮಾಡಿದರೆ ಅಥವಾ ಶ್ಯಮಂತಕ ಮಣಿಯ ಕಥೆಯನ್ನು ಕೇಳಿದರೆ ಅಂಥವರು ಅಪವಾದದಿಂದ ಮುಕ್ತರಾಗಲಿ’ ಎಂದು ಹೇಳಿದನು. ಆಗ ಚಂದ್ರನಿಗೆ ಸಮಾಧಾನವಾಯಿತು.