ವಿಶ್ವವಂದ್ಯ ವಿನಾಯಕನ ಲೀಲೆಗಳು ಅಪಾರ. ಗಣೇಶನ ಕುರಿತಂತೆ ಪುರಾಣಗಳಲ್ಲಿ ಅನೇಕ ಕಥೆಗಳನ್ನು ಓದಬಹುದು. ಅವುಗಳಲ್ಲಿ ಆಯ್ದ ಕೆಲವು ಕಥೆಗಳು ಇಲ್ಲಿವೆ.
ಲಂಬೋದರನ ವಾಹನವಾದ ಕ್ರೌಂಚ
ಗಜಮುಖಾಸುರ ಅನ್ನುವ ರಾಕ್ಷಸ ಇರುತ್ತಾನೆ. ಅವನಿಗೆ ಶಿವನ ಮೇಲೆ ತುಂಬಾ ಭಕ್ತಿ. ಶಿವನನ್ನು ಧ್ಯಾನಿಸಿ ಅವನಿಂದ ವರವನ್ನು ಪಡೆಯುತ್ತಾನೆ. ಯಾವುದೇ ದೇವರಿಂದಾಗಲೀ, ಮನುಷ್ಯನಿಂದಾಗಲೇ ನನಗೆ ಸಾವು ಬರಬಾರದು ಎಂದು. ಶಿವ ಅವನಿಗೆ ವರ ಕೊಟ್ಟು ಆ ವವನ್ನು ದುರುಪಯೋಗ ಮಾಡದಂತೆ ಎಚ್ಚರಿಕೆಯನ್ನೂ ನೀಡಿರುತ್ತಾನೆ. ಆದರೆ ರಾಕ್ಷಸ ತನಗಿರುವ ಶಕ್ತಿಯಿಂದ ಎಲ್ಲರಿಗೂ ಹಿಂಸೆ ನೀಡುತ್ತಿರುತ್ತಾನೆ. ರಾಕ್ಷಸನ ದರ್ಪವನ್ನು ಹೇಗಾದರೂ ಮಾಡಿ ನಿಗ್ರಹಿಸಬೇಕೆಂದು ತೀರ್ಮಾನಿಸಿ ಶಿವನು ಗಣೇಶನನ್ನು ಕಳುಹಿಸುತ್ತಾನೆ. ಗಣೇಶ ರಾಕ್ಷಸನನ್ನೇ ಇಲಿ ಮಾಡಿಕೊಂಡು ವಾಹನವಾಗಿ ಉಪಯೋಗಿಸುತ್ತಾನೆ.
ಹೀಗೆ ಇಲಿ ಗಣೇಶನ ವಾಹನವಾಗುತ್ತದೆ ಎಂಬುದು ಒಂದು ಕಥೆಯಾದರೆ, ಗಣೇಶ ಪುರಾಣದ ಪ್ರಕಾರ ಇಂದ್ರ ಲೋಕದಲ್ಲಿ ಕ್ರೌಂಚ ಎನ್ನುವ ಗಂಧರ್ವ ಇರುತ್ತಾನೆ. ಅವನು ಒಳ್ಳೆಯ ಹಾಡುಗಾರನಾಗಿದ್ದ. ಒಂದು ದಿನ ಇಂದ್ರನ ಸಭೆಯಲ್ಲಿ ಗೊತ್ತಿಲ್ಲದೆ ವಾಮದೇವ ಎಂಬ ಮುನಿಯ ಹೆಬ್ಬೆರಳನ್ನು ತುಳಿಯುತ್ತಾನೆ. ಇದರಿಂದ ಸಿಟ್ಟುಗೊಂಡ ವಾಮದೇವ ಇವನು ಬೇಕಂತಲೇ ಹೀಗೆ ಮಾಡಿದ್ದಾನೆ ಎಂದುಕೊ0ಡು ‘ಇಲಿ’ ಆಗು ಎಂದು ಶಾಪ ನೀಡುತ್ತಾನೆ. ಕ್ರೌಂಚ ವಾಮದೇವನ ಕಾಲಿಗೆ ಬಿದ್ದು ಶಾಪ ಹಿಂತೆಗೆದುಕೊಳ್ಳುವ0ತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಒಮ್ಮೆ ಕೊಟ್ಟ ಶಾಪವನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ. ಆದರೆ ಮುಂದೆ ನೀನು ಗಣೇಶನನ್ನು ಭೇಟಿ ಮಾಡಿ ಅವನ ವಾಹನ ಆದಾಗ ನಿನಗೆ ಮುಕ್ತಿ ಸಿಗುತ್ತದೆ. ಅವನ ಜತೆ ನಿನಗೂ ಭಕ್ತರು ಪೂಜೆ ಸಲ್ಲಿಸುತ್ತಾರೆ. ಎನ್ನುತ್ತಾನೆ. ಕ್ರೌಂಚ ಇಲಿಯಾಗಿ ಭೂಮಿ ಮೇಲೆ ಜನ್ಮ ತಾಳುತ್ತಾನೆ. ಆದರೆ ಅವನು ಬೆಟ್ಟದಷ್ಟು ದೊಡ್ಡದಾಗಿರುತ್ತಾನೆ. ಆಗ ಪರಾಶರ ಮುನಿ ಆಶ್ರಮದಲ್ಲಿ ಗಜಾನನ ಅವತಾರದಲ್ಲಿದ್ದ ಗಣೇಶ ಇಲಿಯನ್ನು ದೊಡ್ಡ ಹಗ್ಗದಿಂದ ಕಟ್ಟಿ ಎಳೆದಾಗ ಅವನು ಗಣೇಶನ ಕಾಲಿನ ಕೆಳಗೆ ಬೀಳುತ್ತಾನೆ. ಗಣೇಶನಲ್ಲಿ ಕ್ಷಮೆ ಕೇಳಿ ಕ್ರೌಂಚ ಗಣೇಶನ ವಾಹನ ಆಗುತ್ತಾನೆ.
ಮುದ್ದು ಗಣಪನ ಆವಿರ್ಭಾವ
ಕೈಲಾಸದಲ್ಲಿದಾಗ ಪಾರ್ವತಿ ಒಮ್ಮೆ ಸ್ನಾನಕ್ಕೆ ಹೋಗಲು ನಿರ್ಧರಿಸುತ್ತಾಳೆ. ಶಿವ ಹೊರಗೆ ಹೋಗಿರುತ್ತಾನೆ. ಮನೆಗೆ ವಾಪಸ್ಸಾಗುವಾಗ ಶಿವನಿಗೆ ಯಾವುದೇ ತೊಂದರೆಯಾಗದಿರಲಿ ಎಂದುಕೊ0ಡು ಶಿವನ ವಾಹನ ನಂದಿಗೆ ಬಾಗಿಲು ಕಾಯುವಂತೆ ಹೇಳುತ್ತಾಳೆ. ನಂದಿ ಅವಳ ಮಾತನ್ನು ಪಾಲಿಸುತ್ತಾಳೆ. ಶಿವ ಮನೆಗೆ ಬಂದಾಗ ಒಳಗೆ ಬಂದೇ ಬರುತ್ತಾನೆ. ನಂದಿ ಶಿವನ ವಾಹನ ಆಗಿರುವುದರಿಂದ ಶಿವನ ಮಾತಿಗೆ ಬೆಲೆ ನೀಡುವುದು ನಿಶ್ಚಿತ ಎಂದುಕೊಳ್ಳುತ್ತಾಳೆ ಪಾರ್ವತಿ.
ಅದಕ್ಕೊಂದು ಉಪಾಯ ಹೂಡುತ್ತಾಳೆ. ಸ್ನಾನಕ್ಕೆಂದು ಮೈಗೆಲ್ಲ ಅರಶಿನ ಲೇಪನ ಮಾಡಿಕೊಂಡಿರುತ್ತಾಳೆ. ಅದನ್ನೆಲ್ಲಾ ಕೈಯಲ್ಲಿ ಸವರಿ ಮೂರ್ತಿಯನ್ನು ಮಾಡಿ ಅದಕ್ಕೆ ಜೀವ ತುಂಬುತ್ತಾಳೆ. ನನಗೆ ಅತ್ಯಂತ ನಿಷ್ಠಯಿಂದಿರುವ ಮಗ ಎಂದುಕೊಳ್ಳುತ್ತಾಳೆ.
ಅವನ ಕೈಯಲ್ಲಿ ದಂಡವೊ0ದನ್ನು ಕೊಟ್ಟು ಸ್ನಾನಗ್ರಹದ ಬಾಗಿಲು ಕಾಯಲು ಹೇಳಿ ಹೋಗುತ್ತಾಳೆ. ಅಷ್ಟರಾಗಲೇ ಅಲ್ಲಿಗೆ ಬಂದ ಶಿವನನ್ನು ಪುಟ್ಟ ದ್ವಾರಪಾಲಕ ತನ್ನ ದಂಡವನ್ನು ಶಿವನ ಮುಂದೆ ಅಡ್ಡವಾಗಿಸಿ ಒಳಗೆ ಪ್ರವೇಶಿಸದಂತೆ ನಿರ್ಭಂಸಿದನು. ಇದೇನು, ಈ ಹುಡುಗ, ನನ್ನನ್ನು ತಡೆಯುತ್ತಿರುವನಲ್ಲ ಎಂದು ಕುಪಿತಗೊಂಡು, ಯಾರು ನೀನು? ಎಂದು ಅವನ ಕುರಿತು ಕೇಳುತ್ತಾನೆ.
ನಾನು ಪಾರ್ವತಿಯ ಮಗ, ಅವಳ ಸೇವಕ, ತಾಯಿಯ ಆಜ್ಞೆಯಿದೆ. ಒಳಗೆ ಯಾರನ್ನೂ ಪ್ರವೇಶಿಸದಂತೆ ತಡೆಯಬೇಕು ಎಂದು. ಆದ್ದರಿಂದ ನಿನ್ನನ್ನು ಒಳಹೋಗಲು ಬಿಡುವುದಿಲ್ಲ ಎನ್ನುತ್ತಾನೆ. ಇದನ್ನು ಕೇಳಿ ರುದ್ರಗಣಗಳು ಸಿಟ್ಟಿನಿಂದ ಅವನ ಮೇಲೆ ಮುಗಿಬಿದ್ದು ತನ್ನ ಪರಾಕ್ರಮವನ್ನು ತೋರಿಸುತ್ತಾನೆ. ಇದೆಲ್ಲವನ್ನು ನೋಡುತ್ತಿದ್ದ ಶಿವ ತನ್ನ ಗಣಗಳ ಸೋಲು ಮತ್ತು ಈ ಹುಡುಗನ ಉದ್ಧಟತನದಿಂದ ಕೋಪಗೊಂಡು ತನ್ನ ಶೂಲದಿಂದ ಅವನ ಶಿರವನ್ನು ತುಂಡರಿಸುತ್ತಾನೆ.
ಇದನ್ನು ನೋಡಿದ ಪಾರ್ವತಿಯು ಪುತ್ರಮರಣದಿಂದ ಶೋಕಗೊಂಡು ರೋದಿಸುತ್ತಾಳೆ. ಗೌರಿಯು ಕ್ಷಣಾರ್ಧದಲ್ಲಿ ದುರ್ಗೆಯಾಗಿ ಅನೇಕ ಮಹಾಶಕ್ತಿಗಳನ್ನು ಸೃಷ್ಟಿಸಿ ರುದ್ರಗಣಗಳ ಮೇಲೆ ಬಿಡುತ್ತಾಳೆ. ಇದರಿಂದ ತ್ರಾಸಗೊಂಡ ಗಣಗಳು ಶಿವನನ್ನು ಪ್ರಾರ್ಥಿಸುತ್ತಾರೆ. ಪಾರ್ವತಿಯನ್ನು ಸಮಾಧಾನ ಪಡಿಸುವುದಕ್ಕಾಗಿ ಬಾಲಕನನ್ನು ಬದುಕಿಸುವುದಾಗಿ ಹೇಳಿ, ತನ್ನ ಭಟರಿಗೆ ಉತ್ತರ ದಿಕ್ಕಿಗೆ ಹೋಗಿ ಮೊದಲು ಸಿಗುವ ಪ್ರಾಣಿಯ ತಲೆಯನ್ನು ತರಲು ಆಜ್ಞಾಪಿಸುತ್ತಾನೆ. ಅವರು ಉತ್ತರಕ್ಕೆ ಹೋಗಲು ಆನೆಯೊಂದು ಉತ್ತರಕ್ಕೆ ತಲೆ ಹಾಕಿ ಮಲಗಿರುತ್ತದೆ. ಆ ಆನೆಯ ಶಿರವನ್ನು ತರುತ್ತಾರೆ. ಶಿವನು ಬಾಲಕನ ದಂಡ ಮತ್ತು ಆನೆಯ ತಲೆಯನ್ನು ಸರಿಯಾಗಿ ಜೋಡಿಸಿ, ಅವನನ್ನು ಪುನಃ ಬದುಕಿಸುತ್ತಾನೆ. ಪಾರ್ವತಿ ಸಂತೋಷಗೊ0ಡು ಆ ಬಾಲಕನನ್ನು ಮುದ್ದಿಸಿ ತನ್ನ ಮಗನಾದ ಗಜಮುಖನಿಗೆ ವರಗಳನ್ನು ದಯಪಾಲಿಸುವಂತೆ ಮಹೇಶ್ವರನನ್ನು ಕೇಳಿಕೊಳ್ಳುತ್ತಾಳೆ. ಇಂದಿನಿ0ದ ನೀನು ನನ್ನ ಕಿರಿಯ ಮಗನೆಂದೂ, ಸರ್ವಕಾರ್ಯಗಳಲ್ಲಿ ನಿನೇ ಪ್ರಥಮಪೂಜಿತನಾಗು ಎಂದು, ಸಕಲ ರುದ್ರಗಣಗಳ ಅಪತಿಯಾಗು ಎಂದು ಶಿವ ಹರಸುತ್ತಾನೆ.