- ಶ್ರೀನಿವಾಸ ಮೂರ್ತಿ ಎಸ್ ಎಸ್
ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯಂದು ರಾಜ್ಯದೆಲ್ಲೆಡೆ ಮನೆಗಳಲ್ಲಿ, ನಾಡಿನ ಎಲ್ಲಾ ಭಾಗದಲ್ಲೂ ಸಂಭ್ರಮದಿಂದ ಆಚರಿಸುವ ಹಬ್ಬವೆಂದರೆ ಗಣಪತಿ ಹಬ್ಬ.
ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಗಣೇಶನ ದೇಗುಲಗಳ ಪರಿಚಯ ಇಲ್ಲಿದೆ.
ಶಿರಾಲಿ ಮಹಾಮ್ಮಯ ಗಣಪತಿ ದೇವಾಲಯ
ಗೌಡ ಸಾರಸ್ವತ ಕುಟುಂಬದ ದೇವತೆಯಾದ ಇದು ಗೋವಾದಿಂದ ವಲಸೆ ಬಂದ ಕುಟುಂಬದಿಂದ ಸುಮಾರು 500 ವರ್ಷದ ಕೆಳಗೆ ಸ್ಥಾಪಿಸಲ್ಪಟ್ಟಿತ್ತು. 1904 ರಲ್ಲಿ ದೇವಾಲಯ ನವೀಕರಣಗೊಂಡಿದ್ದು ಇಲ್ಲಿನ ಮಾರ್ಗಶಿರ ಶುದ್ದ ನವಮಿಯಂದು ರಥೋತ್ಸವ ನಡೆಯುತ್ತದೆ. ಗಣಪತಿ ಹಬ್ಬದಂದು ವಿಶೇಷ ಪೂಜೆ ನಡೆಯಲಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿದೆ. ಪ್ರಸಿದ್ದ ಮುರ್ಡೇಶ್ವರದಿಂದ ಸುಮಾರು 10 ಕಿ ಮೀ ದೂರದಲ್ಲಿದೆ.
ಆನೆಗುಡ್ದೆ ವಿನಾಯಕ ದೇವಾಲಯ :
ಕರಾವಳಿಯ ಪ್ರಮುಖ ಗಣಪತಿ ದೇವಾಲಯಗಳಲ್ಲಿ ಇದು ಒಂದು. ಸ್ಥಳ ಪುರಾಣದ ಪ್ರಕಾರ ಬರಗಾಲದ ಸಮಯದಲ್ಲಿ ಇಲ್ಲಿ ಅಗಸ್ತ್ಯ ಮುನಿಗಳು ಯಾಗ ಮಾಡುವಾಗ ತೊಂದರೆ ನೀಡುತ್ತಿದ್ದ ಕುಂಭಾಸುರನನ್ನು ಗಣಪತಿಯ ವರದಿಂದ ಭೀಮ ವದಿಸಿ ನಂತರ ಕೋರಿಕೆಯ ಮೇರೆಗೆ ಇಲ್ಲಿ ನೆಲೆಸಿದ ಎಂಬ ನಂಬಿಕೆ ಇದೆ. ಹಾಗಾಗಿ ಈ ಸ್ಥಳಕ್ಕೆ ಕುಂಭಾಶಿ ಎಂಬ ಹೆಸರು ಇದೆ. ಇದು ಪರುಶರಾಮನ ಸೃಷ್ಟಿಯ ಕ್ಷೇತ್ರಗಳಲ್ಲಿ ಒಂದು ಎಂದು ಹೇಳಲಾಗಿದೆ. ಸಪ್ತ ಕ್ಷೇತ್ರಗಳಲ್ಲಿ ಒಂದಾದ ಈ ದೇವಾಲಯ ಆನೆಯಾಕರಾದ ಗುಡ್ಡೆಯ ಮೇಲೆ ಇರುವದರಿಂದ ಆನೆಗುಡ್ಡೆ ಎಂಬ ಹೆಸರು ಬಂದಿದೆ. ಇನ್ನು ಇಲ್ಲಿನ ನಂಬಿಕೆಯಂತೆ ವಿಶ್ವೇಶ್ವರ ಉಪಾಧ್ಯಾಯ ಎಂಬುವರಿಗೆ ಕನಸಿನಲ್ಲಿ ಗಣಪತಿ ತನ್ನ ಇರುವನ್ನ ಬಾಲಕನ ಮೂಲಕ ಕಾಣಿಸಿತು. ಇದರ ಹಾದಿಯಲ್ಲಿ ಸಾಗಿದ ಇವರಿಗೆ ಕೊಳದಲ್ಲಿ ಗಣಪತಿಯನ್ನು ಹೋಲುವ ಕಲ್ಲು ಕಾಣುತ್ತದೆ. ಇದನ್ನ ಭಕ್ತಿಯಿಂದ ಪೂಜೆ ಮಾಡುತ್ತ ಬಂದರು. ನಂತರ ಭಕ್ತರು ಸಹ ಇದರ ಮಹಿಮೆಯ ಅರಿತ ಬರಲು ಆರಂಭ ಮಾಡಿದರು. ಗರ್ಭಗುಡಿಯಲ್ಲಿ ಗಣೇಶನ ಹೋಲುವ ಬಿಂಬ ಇದ್ದು ಅಲಂಕೃತಗೊಂಡಾಗಿ ಸುಂದರವಾಗಿ ಕಾಣುವ ಗಣೇಶನ ದರ್ಶನದಿಂದ ಪ್ರಸಿದ್ದಿ ಪಡೆದಿದೆ. ಈ ಮೂರ್ತಿ ಸುಮಾರು 12 ಅಡಿ ಎತ್ತರವಿದೆಇನ್ನು ಇಲ್ಲಿನ ಗಣಪತಿ ಸ್ಥಾನಿಕ ಹಾಗು ಆಸೀನ ಭಂಗಿಯಲ್ಲಿದ್ದು ವರದ ಹಸ್ತನಾಗಿರುವುದು ವಿಶೇಷ. ಇಲ್ಲಿ ಪ್ರತಿ ಹುಣ್ಣಿಮೆಯ ನಂತರದ ಚೌತಿ ಹಾಗು ಗಣಪತಿಯ ಹಬ್ಬದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇದು ಕುಂದಾಪುರದಿಂದ ಸುಮಾರು 9 ಕಿ ಮೀ ದೂರದಲ್ಲಿದೆ.
ಹಟ್ಟಿಯಂಗಡಿ ಗಣಪತಿ ದೇವಾಲಯ :
ಆಳುಪರ ರಾಜಧಾನಿಯಾಗಿದ್ದ ಇಲ್ಲಿ ಸುಂದರ ಗಣಪತಿ ದೇವಾಲಯ ಇದೆ. ಕಪ್ಪು ಶಿಲೆಯಲ್ಲಿ ನಿರ್ಮಾಣವಾದ ಈ ಶಿಲ್ಪ ಉದರದ ತನಕ ಪಾಣಿ ಪೀಠ ಇರುವುದು ವಿಶೇಷ. ಸುಮಾರು 8 ನೇ ಶತಾಮನದಲ್ಲಿ ಸ್ಥಾಪಿತವಾದ ಈ ಮೂರ್ತಿ ನಂತರ ಕಾಲದಲ್ಲಿ ಹೊಯ್ಸಳ ಹಾಗು ಕೆಳದಿ ಅರಸರ ಕಾಲದಲ್ಲಿ ಅಭಿವೃದ್ದಿಗೊಂಡಿದೆ. ವರಾಹಿ ನದಿ ತಟದಲ್ಲಿ ಇರುವ ಈ ಮೂರ್ತಿ ಸಾಲಿಗ್ರಾಮ ಶಿಲ್ಪವಾಗಿದ್ದು ದ್ವಿಬಾಹು, ವಾಮಹಸ್ತ ಮತ್ತು ಜಟಾಧಾರಿಯಾಗಿದ್ದು ಮೂರ್ತಿಗೆ ನೂತನ ದೇವಾಲಯ ನಿರ್ಮಾಣವಾಗಿದೆ. ಕಾರಣಿಕ ಶಕ್ತಿ ಹೊಂದಿರುವ ಇಲ್ಲಿ ಕವಿ ರಾಮ ಭಟ್ಟ ದೇವಾಲಯದ ಬಗ್ಗೆ ಹಾಗು ವಿನಾಯಕನ ಬಗ್ಗೆ ಬರೆದ ಪದ್ಯಗಳು ಈ ದೇವಾಲಯ ಪ್ರಸಿದ್ದಿ ಪಡೆಯಿತು. ಇಲ್ಲಿನ ಸಹಸ್ರ ನಾರಿಕೇಳ ಗಣ ಯಾಗ ಪ್ರಸಿದ್ದಿಯಾಗಿದ್ದು ತ್ರಿಕಾಲ ಪೂಜೆ ಪ್ರತಿ ದಿನ ನಡೆಯುತ್ತದೆ. ಈ ದೇವಾಲಯ ಕುಂದಾಪುರದಿಂದ ಸುಮಾರು 8 ಕಿ ಮೀ ದೂರದಲ್ಲಿದೆ.
ಶರವು ಮಹಾಗಣಪತಿ, ಮಂಗಳೂರು :
ಅಸುರನ ಹತ್ಯೆ ನಂತರ ಕುಮಾರಸ್ವಾಮಿ ಕುಮಾರ ಪರ್ವತದಲ್ಲಿ ನೆಲೆಸಿದರೆ ಸಹೋದರ ಗಣಪತಿ ತಾನು ಪವಿತ್ರ ನದಿ ಹಾಗು ಸಮುದ್ರ ಸೇರುವ ಸ್ಥಳದಲ್ಲಿ ನೆಲೆಸುವೆ ಎಂದು ಸಮಯಕ್ಕಾಗಿ ಕಾಯಿತ್ತಿರುತ್ತಾನೆ. ಇನ್ನು ಇಲ್ಲಿ ಆಳುತ್ತಿದ್ದ ಬೈರವ ಅರಸ ಭೇಟೆ ಮಾಡುತ್ತ ಇಲ್ಲಿನ ಕದಳಿ ಕ್ಷೇತ್ರಕ್ಕೆ ಬರುತ್ತಾನೆ. ಇಲ್ಲಿ ಹುಲಿ ಮತ್ತು ಹಸು ಒಟ್ಟಿಗೆ ಇದ್ದದ್ದನ್ನ ನೋಡಿದ ಅವನು ಹಸುವಿನ ರಕ್ಶಣೆಗೆ ಹುಲಿಯತ್ತ ಬಾಣ ಬಿಡುತ್ತಾನೆ. ಅದು ಹಸುವಿಗೆ ತಾಗಿ ಗೋಹತ್ಯೆಯ ಪರಿಹಾರಕ್ಕಾಗಿ ಇಲ್ಲಿ ತಪಸ್ಸು ಮಾಡುತ್ತಿದ್ದ ಭಾರದ್ವಾಜ ಮುನಿಯ ಬಳಿ ಬರುತ್ತಾನೆ. ಮುನಿಗಳು ಇದ ಪವಿತ್ರ ಕ್ಷೇತ್ರವಾದ ಕಾರಣ ಅವು ಒಟ್ಟಿಗೆ ನೆಲೆಸಿವೆ. ಆದರೆ ಒಳ್ಳೆಯ ಉದ್ದೇಶದಿಂದ ಬಾಣ ಬಿಟ್ಟಿರುವೆ ಚಿಂತಿಸುವ ಅಗತ್ಯವಿಲ್ಲ ಎನ್ನುತ್ತಾರೆ.
ಆದರೂ ಗೋಹತ್ಯೆ ಪರಿಹಾರಾರ್ಥವಾಗಿ ಮುನಿಯ ಸಲಹೆಯಂತೆ ಶರಪುರದಲ್ಲಿ ಒಂದು ಕಲ್ಯಾಣಿ ಹಾಗು ಶಿವನ ದೇವಾಲಯವನ್ನು ಇದಕ್ಕಾಗಿ ನಿರ್ಮಾಣ ಮಾಡುತ್ತಾನೆ. ಈ ಸಮಯಕ್ಕಾಗಿ ಕಾಯುತ್ತಿದ್ದ ಗಣಪತಿ ಇಲ್ಲಿ ದಕ್ಷಿಣದ ಕಂಬದಲ್ಲಿ ಬಂದು ನೆಲೆಸುತ್ತಾನೆ. ಶರಪುರದಲ್ಲಿ ನೆಲೆಸಿದ ಕಾರಣ ಈ ದೇವಾಲಯ ಶರವು ಮಹಾ ಗಣಪತಿ ಎಂದೇ ಪ್ರಸಿದ್ದಿ ಪಡೆಯುತ್ತದೆ. ಈ ದೇವಾಲಯ ಮಂಗಳೂರು ನಗರದ ಹೄದಯ ಭಾಗದಲ್ಲಿದೆ.
ಗುಡ್ಡಟ್ಟು ಶ್ರೀ ವಿನಾಯಕ ದೇವಾಲಯ :
ಸುಂದರವಾದ ಹಸಿರಿನ ಪರಿಸರದಲ್ಲಿ ಬೄಹತ್ ಬಂಡೆಯಲ್ಲಿ ಮೂಡಿದ ಕಾಲು ಮಡಿಚಿ ಕುಳಿತಿರುವ ಸ್ವಯಂಭೂ ಮೂರ್ತಿ. ಇಲ್ಲಿನ ಮೂರ್ತಿ ಸದಾ ನೀರಿನಲ್ಲಿ ಕಂಠದ ಪ್ರಮಾಣದವರೆಗೆ ಮುಳುಗಿರಿವುದು ವಿಷೇಶ. ಇಲ್ಲಿ ತಾಮ್ರದ ಬಟ್ಟಲಿನಿಂದ ನೀರನ್ನು ಹೊರ ಹಾಕಿ ಪಂಚಾಮೃತ ಹಾಗು ವಿವಿಧ ಪೂಜೆಗಳನ್ನು ನೆರೆವೇರಿಸಿದ ನಂತರ ಪುನಹ ಮರುದಿನ ಶಿಲ್ಪ ಜಲ ಸಮಾಧಿಯಾಗುವುದು ವಿಷೇಶ. ಇನ್ನು ಸ್ಥಳ ಪುರಾಣದಂತೆ ತ್ರಿಪುರಾಸನ ಸಂಹಾರ ಕಾಲದಲ್ಲಿ ಶಿವ ಗಣಪತಿಯನ್ನ ಸ್ಮರಿಸದೆ ತೆರುಳುತ್ತಾನೆ. ಹಾಗಾಗಿ ಜಯ ಲಭಿಸಿವುದಿಲ್ಲ. ಇದಕ್ಕೆ ತನ್ನ ಮಗನೇ ಕಾರಣ ಎಂದು ಕೋಪದಿಂದ ಶಿವ ಅಸ್ತ್ರ ಪ್ರಯೋಗಿಸುತ್ತಾನೆ. ಆದರೆ ಇದರಿಂದ ಯಾವ ಪ್ರಯೋಜವಾಗುವುದಿಲ್ಲ. ಆದರೆ ಶಿವ ಪ್ರಯೋಗಿಸಿದ ಕಾರಣ ಅದು ಗಣಪತಿಯನ್ನ ಹೊತ್ತು ಮಧು ಸಾಗರದಲ್ಲಿ ಬಿಡುತ್ತದೆ. ಇದರಿಂದ ಸಂಪ್ರೀತನಾದ ಗಣಪತಿ ತನ್ನನ್ನ ಇಲ್ಲಿಗೆ ಹಾಕಿದವರಿಗೆ ಜಯದ ಅಭಯವಿತ್ತ ಕಾರಣ ಶಿವ ತ್ರಿಪುರಾಸರನನ್ನು ಸಂಹರಿಸುತ್ತಾನೆ.
ಆದರೆ ಮಧವಾಸಿಯಾದ ಕಾರಣ ಆದ ಉರಿ ಶಮನಕ್ಕೆ ಶಿವ ಇಲ್ಲಿ ಜಲಾಧಿವಾಸಿಯಾಗು ಎಂದು ಹೇಳುತ್ತಾನೆ ಹಾಗಾಗಿ ಇಲ್ಲಿ ಗಣಪತಿ ಸದಾ ಜಲಾಧಿವಾಸಿಯಾಗಿದು ಜಲ ಬತ್ತುವುದಿಲ್ಲ ಎಂಬ ನಂಬಿಕೆ ಇದೆ. ಈ ದೇವಾಲಯ ಉಡುಪಿಯಿಂದ ಸುಮಾರು 30 ಕಿ ಮೀ ದೂರದಲ್ಲಿದೆ.
ಗೋಕರ್ಣದ ಗಣಪತಿ :
ಕರ್ನಾಟಕ ಆರಂಭಿಕ ಗಣಪತಿಯ ಶಿಲ್ಪಗಳಲ್ಲಿ ಅತ್ಯಂತ ಪುರಾತನವಾದ ಮೂರ್ತಿ. ಸುಮಾರು 4 ನೇ ಶತಮಾನಕ್ಕೆ ಸೇರುವ ಈ ಗಣಪತಿಯ ಮೂರ್ತಿ ಕದಂಬರ ಆರಂಭಿಕ ಶಿಲ್ಪಗಳಲ್ಲಿ ಪ್ರಮುಖವಾದುದು. ನಿಂತಿರುವ ಭಂಗಿಯಲ್ಲಿರುವ ಈ ಮೂರ್ತಿ ಸುಮಾರು 29 ಸೆ ಮೀ ಎತ್ತರವಿದ್ದು ಎತ್ತರದ ಪೀಠದ ಮೇಲೆ ಇದೆ. ಬಲಗೈನಲ್ಲಿ ಮೂಲಿಯನ್ನು ಹಿಡಿದಿದ್ದು ಅರ್ಧವೃತ್ತಾಕಾರವಾಗಿರುವ ನಡು ಭಾಗ ಮತ್ತು ಇದಕ್ಕೆ ಹೊಂದಿದಂತೆ ಕಾಲನ್ನು ಮುಖ್ಯ ಶಿಲ್ಪಕ್ಕೆ ಹೊಂದಿದಂತೆ ಇದೆ. ಎಡ ಕೈನಲ್ಲಿ ಮೋದಕ ಇದೆ. ಮೂರ್ತಿಯ ದೇಹದ ಕೆಳಭಾಗಕ್ಕೆ ಹೆಚ್ಚಿನ ಪ್ರಾಮುಖ್ಯ ಕಾಣುವದಿಲ್ಲ. ವಿಶಾಲವಾದ ಭುಜ ಹೊಂದಿದ್ದು ಅನೆಯ ಮುಖ ಹೊಂದಿದ್ದರೂ ಹಿಂಬದಿಯಲ್ಲಿ ಮಾನವ ಸ್ವರೂಪ ಹೊಂದಿದೆ. ಗಣಪತಿಯ ರಾಜ್ಯದಲ್ಲಿ ಆರಾಧನೆ ಬೆಳೆದು ಬಂದ ಪರಂಪರಯ ಬಗ್ಗೆ ಒಂದು ಅತ್ಯುತ್ತತ್ತಮ ಉದಾಹರಣೆ. ಇದೇ ತರಹದ ಮೂರ್ತಿ ಇಡುಗಂಜಿಯಲ್ಲೂ ಕಾಣಬಹುದು.
ಇಡುಗಂಜಿ ಗಣಪತಿ ದೇವಾಲಯ :
ಕರ್ನಾಟಕದ ಪುರಾತನ ಗಣಪತಿಯ ಮೂರ್ತಿಗಳಲ್ಲಿ ಇದು ಒಂದು. ಮಹೋತಾಭಾರ ವಿನಾಯಕ ಎಂದೇ ಪ್ರಸಿದ್ದಿ ಪಡೆದಿರುವ ಈ ಮೂರ್ತಿ ದ್ವಿಭುಜ ಗಣಪತಿ ಮೂರ್ತಿಗಳಲ್ಲಿ ಒಂದು. ಸುಮಾರು 90 ಸೆ ಮೀ ಎತ್ತರದ ಸ್ಥಾನಿಕ ಮೂರ್ತಿಯ ಬಲಕೈನಲ್ಲಿ ಕಮಲದ ಹೂವು ಹಾಗು ಎಡ ಕೈನಲ್ಲಿ ಮೋದಕವಿದೆ. ಇಡುಗಂಜಿ ಹೊನ್ನಾವರದಿಂದ ಸುಮಾರು 15 ಕಿ ಮೀ ದೂರದಲ್ಲಿದೆ.
ಸೌತಡ್ಕ ಗಣಪತಿ ದೇವಾಲಯ :
ಬಯಲಿನ ಗಣಪತಿ ಎಂದೇ ಪ್ರಸಿದ್ದಿ ಪಡೆದಿರುವ ಈ ಗಣಪತಿ ಮುಂಚೆ ಬಯಲಿನಲಿದ್ದು ಈಗ ದೇವಾಲಯ ನಿರ್ಮಾಣವಾಗಿದ್ದರೂ ಪ್ರತ್ಯೇಕ ಗರ್ಭಗುಡಿ ಇರದೇ ಬಯಲಿನಲ್ಲಿ ಇರುವುದು ವಿಶೇಷ. ಇಲ್ಲಿ ಭಕ್ತರು ಹರಕೆಯ ಘಂಟೆಯ ಕಟ್ಟುವುದು ವಿಶೇಷ. ಇಲ್ಲಿ ಜನವರಿ ಮಾಸದಲ್ಲಿ ಮಹಾಪೂಜೆ ನಡೆಯಲಿದ್ದು ವಿನಯಾಕ ಚತುರ್ಥಿಯಂದು ವಿಶೇಷ ಪೂಜೆ ಇರುತ್ತದೆ. ಇಲ್ಲಿ ನಿತ್ಯ ಪೂಜೆ ಹಾಗು ಅನ್ನದಾನವಿದ್ದು ಧರ್ಮಸ್ಥಳದಿಂದ ಸುಮಾರು 16 ಕಿ ಮೀ ದೂರದಲ್ಲಿದೆ.