ಕೃತಿ ಪರಿಚಯ: ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ
ವೈ.ಬಿ.ಕಡಕೋಳ ಅವರ ಸುಂದರ ಕೃತಿ “ತುಂಬಿದಹೊಳೆ”. ಈ ಕೃತಿಯ ಮೊದಲ ವಿಭಾಗ ‘ಜೀವನಶೈಲಿ’ಯಲ್ಲಿ ಹದಿಮೂರು ಲೇಖನಗಳು ಅರಳಿವೆ. ‘ನೆರೆಹೊರೆಯವರೊಂದಿಗೆ ಹೇಗಿರಬೇಕು?’ ಲೇಖನದಿಂದ ‘ವೃದ್ದಾಪ್ಯದವರಗಿನ’ ಲೇಖನಗಳು ಚಿಕ್ಕದಾಗಿ ಚೊಕ್ಕಾಗಿ ಮೂಡಿವೆ. ಆಧುನಿಕ ಜೀವನ ಶೈಲಿಯ ವಿಧಾನಗಳು, ಸಲಹೆ, ಸೂಚನೆ, ರಕ್ಷಣೆ ಮೊದಲಾದ ಆರೋಗ್ಯವಂತ ಸಮಾಜದ ಚಹರೆಗಳು ನಿಚ್ಚಳವಾಗಿ ಬರಹದಲ್ಲಿ ಕಾಣಸಿಗುತ್ತವೆ ಸಿದ್ದ ಸೂತ್ರದಂತೆ. ಜೀವನ ಶೈಲಿಯ ಬದಲಾವಣೆಯ ಪಕ್ಷಿನೋಟವನ್ನು ಇಲ್ಲಿ ಕಾಣಬಹುದು. ಕಾಯಕದ ಮಹತ್ವ ಇಲ್ಲಿ ಅಂದದಿಂದ ಅರಳಿದೆ. ನಗುವಿನ ಲಕ್ಷಣ, ಇಂದಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ ಮೊದಲಾದ ವೈಜ್ಞಾನಿಕ ಹಾಗೂ ವೈಚಾರಿಕ ಅಂಶಗಳು ಈ ವಿಭಾಗದಲ್ಲಿ ಕೆನೆಗಟ್ಟಿ ನಿಂತಿವೆ. ‘ಶಿಕ್ಷಣ’ ಎಂಬ ಎರಡನೆಯ ವಿಭಾಗದಲ್ಲಿ ನಮ್ಮ ರಾಷ್ಟ್ರಧ್ವಜ, ನನ್ನ ಗುರುಗಳು ವರೆಗಿನ ಹದಿಮೂರು ಲೇಖನ ಇಲ್ಲಿ ಹರಡಿವೆ. ಸಮನ್ವಯ ಶಿಕ್ಷಣ, ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕ ಶಿಕ್ಷಣ, ಸೃಜನಶೀಲತೆ ಕುರಿತು ತಾರ್ಕಿಕ ನೆಲೆಯಲ್ಲಿ ಚಿಂತಿಸಲಾಗಿದೆ. ಶಿಕ್ಷಣದ ಮಹತ್ವವನ್ನು ಎತ್ತಿ ಹೇಳಲಾಗಿದೆ. ಶಿಕ್ಷಣ ಪ್ರಗತಿಯ ಮಜಲಿನ ಎಳೆಯಲ್ಲಿ ಕೆಲವು ವಿಚಾರಗಳು ಇಲ್ಲಿ ಅರಳಿರುವದು ವಿಶೇಷವೆನಿಸಿದೆ. ‘ಲಹರಿ’ ಎಂಬ ಮೂರನೆಯ ವಿಭಾಗದಲ್ಲಿ ನಾಲ್ಕು ಲೇಖನಗಳು ವಾಸ್ತವಿಕ ವಿಚಾರಗಳು ತಿಳಿಹಾಸ್ಯದ ನೆಲೆಯಲ್ಲಿ ಹರಡಿದರೆ. ಪ್ರೇಮ ಮೊದಲಾದ ವಿಚಾರಗಳು ಇಲ್ಲಿ ಹದ ತುಂಬಿನಿಂತಿವೆ. ‘ಜನಪದ’ ವೆಂಬ ನಾಲ್ಕನೆಯ ವಿಭಾಗದಲ್ಲಿ ನಾಲ್ಕು ಲೇಖನ ಎಡೆಪಡೆದಿವೆ. ಬೀಸುವ, ಬುಡಬುಡಕೆ, ಹೆಳವರ ಜೀವನ ವಿಧಾನ ಜನಪದದ ಹಿನ್ನಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಬೀಸುವ ಕ್ರಿಯೇ ಜನಪದದ ಶ್ರೇಷ್ಠ ಕಾಯಕದಲ್ಲಿ ಒಂದು ಅದನ್ನು ಸಹಜವಾಗಿ ಇಲ್ಲಿ ಚಿತ್ರಿಸಲಾಗಿದೆ. ದೈವಿ ಕಲ್ಪನೆ ಜನಪದರ ಕೃಷಿಯಲ್ಲಿ ಅನಾವರಣಗೊಂಡುದನ್ನು ತಿಳಿಸುತ್ತದೆ ಈ ವಿಭಾಗದ ಕೊನೆಯ ಲೇಖನ. ‘ನಮ್ಮ ಸುತ್ತ ಮುತ್ತ’ ವೆಂಬ ಐದನೆಯ ವಿಭಾಗದಲ್ಲಿ ಸವದತ್ತಿ ತಾಲೂಕಿನ ದೇವಿ ಆರಾಧನೆಯ ತಾಣಗಳ ಐತಿಹಾಸಿಕ ನೆಲೆಯಲ್ಲಿ ಬರಹವನ್ನು ಆಧಾರ ಸಹಿತ ವಿವರಿಸಿರುವರು, ರಟ್ಟರು, ಮುನವಳ್ಳಿ ಶಾಸನಗಳು ಬರಹಗಳನ್ನು ಶಾಸನಗಳ ಹಿನ್ನೆಲೆಯಲ್ಲಿ ಚಿತ್ರಿಸಿರುವರು ಅಂದವಾಗಿ. ‘ಮುಕ್ತ-ಮುಕ್ತ’ ವೆಂಬ ಆರನೆಯ ಅಧ್ಯಾಯ; ಈ ಕೃತಿಯ ಕೊನೆಯ ಅಧ್ಯಾಯವು ಹೌದು. ಇಲ್ಲ ಇಪ್ಪತ್ತಮೂರು ಲೇಖನಗಳು ಎಡೆಪಡೆದಿವೆ. ‘ವಚನ ನಿರ್ವಚನ’ವೆಂಬ ಲೇಖನದಿಂದ ಆರಂಭಗೊಂಡು ‘ಆಲಮಟ್ಟಿಯಲ್ಲಿ ಶೈಕ್ಷಣಿಕ ಸಮ್ಮೇಳನದ ಸವಿನೆನಪು’ ವರಗೆ ಹರಡಿಕೊಂಡಿವೆ. ವಚನ ಸಾಹಿತ್ಯದ ಪರಿಕಲ್ಪನೆ ಲೇಖಕರಲ್ಲಿ ಅಂದವಾಗಿ ಅರಳಿ ಹೊಸವಿಚಾರಗಳನ್ನು ತೆರೆದು ತೋರುತ್ತದೆ. ಅಂತರ್ಜಾಲದ ಲಾಭ ನಷ್ಟಗಳ ವಿಚಾರ ಹಾಗೂ ಧಾರವಾಡ ಜಿಲ್ಲೆಯ ಕೆಲವು ಸ್ಥಳನಾಮಗಳ ವಿವೇಚನೆ ಕ್ಷೇತ್ರ ಕಾರ್ಯದ ತಳಹದಿ ಮೇಲೆ ನಡೆದಿವೆÉ. ಲಾಕ್‍ಡೌನ್ ಸಮಯದ ಸದುಪಯೋಗ ಹೊಸವಿಚಾರದ ಕುರುಹುಗಳಾಗಿವೆ. ಅನೇಕ ನೂತನ ವಿಚಾರಗಳನ್ನು ಇಟ್ಟುಕೊಂಡು ತಮ್ಮ ಶಕ್ತಿಗೆ ಅನುಸಾರ ತಕ್ಕ ಮಟ್ಟಿನ ಪ್ರಯತ್ನವನ್ನು ಇಲ್ಲಿ ಕಡಕೋಳರು ಮಾಡಿದ್ದಾರೆ. ಅನುಭವಿಕ ವಿಚಾರಗಳಿಗೆ ಸೃಜನಶೀಲ ಲೇಪನದಿಂದ ಓದುಗರನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಬರವಣಿಗೆ ಬರಾಟೆ ಬರದಿಂದ ಸಾಗಿದೆ ನಿಜ. ಅಲ್ಲಲ್ಲಿ ನಿಂತು ಸಪ್ಪೆತನದ ಹೊಳವನ್ನು ತೋರಿಸುತ್ತದೆ. ಅದನ್ನು ಕಡಿಮೆ ಮಾಡಿಕೊಂಡು ಗಟ್ಟಿತನದ ಪರಿಕಲ್ಪನೆಯತ್ತ ಮುಖಮಾಡಿದರೆ ಬರಹಗಾರ ಬರಹಕ್ಕೆ ಹೆಚ್ಚಿನ ಬೆಲೆ ನಿರೀಕ್ಷಿಸಲು ಸಾಧ್ಯವೆನಿಸುತ್ತದೆ. ಕೆಲವು ಎತ್ತಿಕೊಂಡ ವಿಷಯ ವಸ್ತುಗಳು ಜಾಳುತನದ ಜಾಳಿಗೆಯಲ್ಲಿ ಬಿದ್ದು ಒದ್ದಾಡಿದಂತೆ ಭಾಸವಾಗುತ್ತವೆ. ಒಟ್ಟಂದದಿ ಹೇಳುವದಾದರೆ ಬಿಡುವಿನ ವೇಳೆಯಲ್ಲಿ ಇಷ್ಟೊಂದು ಹುಲುಸಾದ ಸಾಹಿತ್ಯ ರಾಶಿ ಹಾಕುತ್ತಿದ್ದಾರಲ್ಲ ಅದು ಆಶ್ಚರ್ಯಪಡುವ ವಿಚಾರವೆನಿಸಿದೆ. ಕ್ರಿಯಾಶೀಲ ಶಿಕ್ಷಕನ ಸತ್ವದ ಸರಕು ಇದಾಗಿದೆ ಎಂದು ಸಾಕ್ಷೀಕರಿಸಿದಂತಿದೆ ‘ತುಂಬಿದ ಹೊಳೆ’ ಎಂಬ ಈ ಕೃತಿ. . * ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ ಯುವ ಸಾಹಿತಿ ಬಾದಾಮಿ
ಅಭಿನಂದನೆಗಳು. ಇಂಥ ಪುಸ್ತಕ ಪರಿಚಯ ಉಪಯುಕ್ತ.
thank u sir