ಬೆಂಗಳೂರು ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಸಂಸ್ಕೃತಿಗೆ ಗೌರವ ಸೂಚಿಸಲು ಪ್ರಣವಾಂಜಲಿ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆ ಆಯೋಜಿಸಿದ್ದ ನೃತ್ಯ ಸಂಹಿತಾ 2021 ಕಾರ್ಯಕ್ರಮದಲ್ಲಿ ಯುವಪ್ರತಿಭೆಗಳು ಭರತನಾಟ್ಯ ಪ್ರದರ್ಶನ ನೀಡಿ ಮನಸೆಳೆದರು. ನಗರದ ಸೇವಾಸದನದಲ್ಲಿ ವಿವಿಧ ಗುರುಗಳ ಬಳಿ ತರಬೇತಿ ಪಡೆದ ವಿದ್ಯಾರ್ಥಿಗಳು ವಿಶೇಷ ಭರತನಾಟ್ಯ ಪ್ರದರ್ಶನ ನೀಡಿದರು. ಪ್ರತಿಭೆಗಳಿಗೆ ವೇದಿಕೆ: ಪ್ರಣವಾಂಜಲಿ ಅಕಾಡೆಮಿ ನಿರ್ದೇಶಕಿಯಾದ ಪವಿತ್ರ ಪ್ರಶಾಂತ್, ಹಲವು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಸಲುವಾಗಿ ಈ ನೃತ್ಯಹಬ್ಬ ಆಯೋಜಿಸಿದ್ದರು. ಈಗಾಗಲೇ ನಾಡಿನ ವಿವಿಧೆಡೆ ಹಲವು ಕಾರ್ಯಕ್ರಮ ನೀಡಿದ್ದ ಕಲಾವಿದರೂ, ಕಲಾ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಸುಮಾರು ಹತ್ತು ತಂಡಗಳು ಎಪತ್ತಕ್ಕೂ ಹೆಚ್ಚು ಕಲಾವಿದರು ನೃತ್ಯ ಪ್ರದರ್ಶಿಸಿದರು. ಗುರು ನಾಗೇಶ್ ಹಾಗು ಶ್ರೀರಂಜಿನಿ ನಾಗೇಶ್, ಗುರು ಅಶೋಕ್ ಕುಮಾರ್, ಗುರು ಮಿಥುನ್ ಶ್ಯಾಮ್, ಗುರು ಜ್ಯೋತಿ ಪಟ್ಟಾಭಿರಾಮ್, ಗುರು ರೇವತಿ ನರಸಿಂಹನ್ , ಗುರು ಪ್ರಭಾ ಕಿಣಿ, ಗುರು ಸೀತಾ ಗುರುಪ್ರಸಾದ್, ಗುರು ವಿದ್ಯಾ ಮುರಳಿ, ಗುರು ರಾಧಿಕಾ ಬಿಜು ಶಿಷ್ಯೆಯರು ಕಲಾ ಪ್ರೌಢಿಮೆ ಮೆರೆದದ್ದು ಹಲವರ ಹೃನ್ಮನ ತಣಿಸಿತು. ಭರತನಾಟ್ಯ ಕಲಾವಿದರಾದ ರಂಜಿನಿ ಶ್ರೀನಿವಾಸನ್, ಕಾವ್ಯ ಕಾಶೀನಾಥನ್, ಬಿ ಏನ್ ನಿಕಿತಾ, ಕೃಪಾ ರಾಮಚಂದ್ರನ್, ತೇಜಸ್ವಿನಿ-ಯಶಸ್ವಿನಿ, ಪೂಜಾ ಸಾತನೂರು, ಪೂಜಾ ಗೋಪಿ ಮತ್ತು ವರ್ಷಿಣಿ - ಚಂದನಾ ಅವರು ಭರತನಾಟ್ಯ ಪ್ರಸ್ತುತ ಪಡಿಸಿದರು. ಕರ್ನಾಟಕ ಕಲಾಶ್ರೀ ಆಚಾರ್ಯ ಅಶೋಕ್ ಕುಮಾರ್ ಎಲ್ಲಾ ಕಲಾವಿದರನ್ನು ಪ್ರೋತ್ಸಹಿಸಿ ಸನ್ಮಾನಿಸಿದರು. ಸುಗ್ಗನಹಳ್ಳಿ ಷಡಕ್ಷರಿ ಅವರು ಕಾರ್ಯಕ್ರಮ ನಿರೂಪಿಸಿದರು.