ಜ್ಞಾನ ದಾಸೋಹ ಉಣಬಡಿಸುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ದಸರಾ ಮಹೋತ್ಸವ


ಶರನ್ನವರಾತ್ರಿ ದಸರಾ ಮಹೋತ್ಸವ ನಾಡಿನೆಲ್ಲೆಡೆ ಆಚರಿಸಲಾಗುತ್ತಿದೆ. ನವರಾತ್ರಿಯನ್ನು ಶರತ್ ಋತುವಿನಲ್ಲಿ ಆಚರಿಸುವುದರಿಂದ ಶರನ್ನವರಾತ್ರಿ ಎಂಬ ಹೆಸರು ಬಂದಿದೆ. ಈ ಸಂದರ್ಭದಲ್ಲಿ ದುರ್ಗೆಯ ಆರಾಧನೆ ಹಲವು ಕಡೆಗೆ ನಡೆಯುತ್ತದೆ.

ವಿಜಯ ದಶಮಿಯಂದು ಶಮಿ ವಿನಿಮಯ ಮಾಡಿ ಸ್ನೇಹಿತರು ಬಂಧುಗಳ ಜೊತೆಗೆ ಪರಸ್ಪರ ವಿನಿಮಯ ಮಾಡಿಕೊಳ್ಳುವುದನ್ನು ಕಾಣುತ್ತೇವೆ. ನವರಾತ್ರಿಯನ್ನು ವಿವಿಧ ಆಚರಣೆಗಳೊಂದಿಗೆ ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಗೆ ವಿಶಿಷ್ಠ ಸ್ಥಾನವಿದೆ. ಶಿವನ ಬಿಟ್ಟು ಶಕ್ತಿ, ಶಕ್ತಿ ಬಿಟ್ಟು ಶಿವನಿಲ್ಲ. ಇವರೀರ್ವರು ಒಂದಾಗಿರುವುದೇ ವೀರಶೈವ ಧರ್ಮದ ವೈಶಿಷ್ಠ್ಯ.

ವೀರಶೈವ ಧರ್ಮ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಬೋಧಿಸಿದ ಸಂವೇದನಾಶೀಲ ಧರ್ಮ. ಶಕ್ತಿ ಆರಾಧನೆಯೇ ನವರಾತ್ರಿಯ ಮೂಲ ಉದ್ದೇಶ. ಇದರ ಆಚರಣೆ ಅರಮನೆ ಮತ್ತು ಗುರು ಮಠಗಳಲ್ಲಿ ಇಂದಿಗೂ ಬೆಳೆದು ಬಂದಿರುವುದನ್ನು ನೋಡುತ್ತೇವೆ. ಪ್ರಜೆಗಳ ಹಿತಕ್ಕಾಗಿ ರಾಜರು ನವರಾತ್ರಿ ಶಕ್ತಿಯನ್ನು ಆರಾಧಿಸಿದ್ದಾರೆ. ಗುರುಪೀಠಗಳು ಭಕ್ತರ ಒಳಿತಿಗಾಗಿ ಶ್ರಮಿಸುತ್ತಾ ಬಂದಿವೆ. ಹತ್ತು ದಿನಗಳ ಈ ನಾಡ ಹಬ್ಬವನ್ನು ಎಲ್ಲರೂ ಎಲ್ಲೆಡೆಯಿಂದ ಆಚರಿಸಿಕೊಂಡು ಬಂದ ಇತಿಹಾಸವಿದೆ.


ಮಲಯಾಚಲ ನಿಸರ್ಗದ ರಮ್ಯ ತಾಣದಲ್ಲಿ ಭದ್ರೆಯ ಪ್ರಶಾಂತ ಮಡಿಲಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಪೀಠವನ್ನು ಸಂಸ್ಥಾಪಿಸಿದರು. ಈ ಧರ್ಮ ಪೀಠ ಆದರ್ಶ ಗುರು ಪರಂಪರೆ ಮತ್ತು ಪ್ರಾಚೀನ ಇತಿಹಾಸ ಹೊಂದಿದೆ. ವಿಶ್ವಬಂಧುತ್ವದ ದೂರದೃಷ್ಟಿಯ ಜೀವನ ವಿಕಾಸದ ಅರಿವನ್ನು ಬೋಧಿಸಿದೆ. ಈ ಪೂರ್ವದಲ್ಲಿ 120 ಜನ ಪರಮಾಚಾರ್ಯರು ಅವತರಿಸಿ ನಾಡಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ.

ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಪ್ರಾಚೀನ ಕಾಲದಿಂದಲೂ ಈ ದಸರೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀ ಪೀಠದಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕವಾಗಿ ನಡೆಯುತ್ತಿದ್ದ ಈ ದಸರೆಯನ್ನು ಶ್ರೀ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರು 1934ರಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಾರ್ಥನೆಯನುಸಾರ ಅರಮನೆಗೆ ಆಗಮಿಸಿ ದಸರಾ ಮಹೋತ್ಸವಕ್ಕೆ ಚಾಲನೆಯನ್ನು ಕೊಟ್ಟರು.

ಅಂದಿನಿ0ದ ನಾಡಿನ ಬೇರೆ ಬೇರೆ ಭಾಗದಲ್ಲೂ ಹೊಸ ರೂಪದೊಂದಿಗೆ ದಸರಾ ನಾಡಹಬ್ಬ ಆಚರಿಸುತ್ತಾ ಬಂದಿರುವುದು ಇತಿಹಾಸ. ಪರಮ ಪೂಜ್ಯ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ನಾಡಿನೆಲ್ಲೆಡೆ ಶರನ್ನವರಾತ್ರಿ ಆಚರಿಸಿ ನಾಡಹಬ್ಬದ ಹಿರಿಮೆಯನ್ನು ಹೆಚ್ಚಿಸಿದರು. ಧರ್ಮ ಸಂಸ್ಕೃತಿಯ ಸಂವರ್ಧನೆಯ ಕೀರ್ತಿ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳಿಗೆ ಸಲ್ಲುತ್ತದೆ.

1983ನೇ ಇಸ್ವಿಯಿಂದ ಶ್ರೀಮದ್ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳು ದಸರಾ ನಾಡಹಬ್ಬದ ಜೊತೆಗೆ ಧರ್ಮ ದರ್ಶನಗಳ ಅರಿವನ್ನು ಉಂಟು ಮಾಡುವ ಬೃಹತ್ ಸಮಾರಂಭಗಳನ್ನು ಸಂಯೋಜಿಸಿ ಮಾರ್ಗದರ್ಶನ ನೀಡಿದರು.

1992ರಲ್ಲಿ 121ನೆಯ ಗುರುಪೀಠವನ್ನು ಆರೋಹಣ ಮಾಡಿದ ಇಂದಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಸಂಗೀತ, ಕಲೆ, ಜಾನಪದ, ಯೋಗ, ಕೃಷಿ, ಶಿಕ್ಷಣ, ಸಾಂಸ್ಕೃತಿಕ ಮತ್ತು ಚಿಂತನ ಪರವಾದ ಹಲವಾರು ಕಾರ್ಯಕ್ರಮಗಳಿಗೆ ಆದ್ಯತೆ ಕೊಟ್ಟು ಬೆಳೆಸಿದ್ದಾರೆ.

ಯಾವುದೇ ಭಾಗದಲ್ಲಿ ದಸರಾ ಧರ್ಮ ಸಮಾರಂಭ ನಡೆದರೂ ಅಚ್ಚು ಕಟ್ಟಾಗಿ ನಡೆದುಕೊಂಡು ಬರುತ್ತಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಮಹಾರಾಷ್ಟçದ ಸೊಲ್ಲಾಪುರದಲ್ಲಿಯೂ ಈ ಕಾರ್ಯ ಕ್ರಮ ನಡೆದು ಜನರಲ್ಲಿ ಧರ್ಮ ಜಾಗೃತಿ ಮಾಡುತ್ತಾ ಬಂದಿದೆ.


ಶ್ರೀ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಗಳು ಬೋಧಾತ್ಮಕವಾಗಿದ್ದು ಆಧ್ಯಾತ್ಮದ ಹಸಿವನ್ನು ನೀಗಿಸುವ ಕಾರ್ಯಕ್ರಮಗಳಾಗಿವೆ. ಧರ್ಮ ಜಾಗೃತಿಯ ಜೊತೆಗೆ ದೇಶ ಪ್ರೇಮ, ರಾಷ್ಟ್ರೀಯ ಭಾವೈಕ್ಯತೆ, ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ಬಗ್ಗೆ ತಿಳಿಸುವ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಇಲ್ಲಿ ನಡೆಯುತ್ತದೆ. ಈ ನಾಡು ಈ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂಬುದು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಸದಾಶಯವಾಗಿದೆ. ಸಮಾಜದ ಎಲ್ಲ ರಂಗಗಳಲ್ಲಿ ಆದರ್ಶ ಮೌಲ್ಯಗಳು ಮತ್ತು ಆಚರಣೆಗಳು ನಶಿಸುತ್ತಿರುವ ಸಂದರ್ಭದಲ್ಲಿ ಬದುಕಿ ಬಾಳುವ ಜನಾಂಗಕ್ಕೆ ಧರ್ಮ-ನಿಷ್ಠೆ, ರಾಷ್ಟ್ರ ಪ್ರೇಮ ಮತ್ತು ಸಾಮರಸ್ಯ ಸದ್ಭಾವನೆಗಳನ್ನು ಬೆಳೆಸುವ ಅಗತ್ಯವಿದೆ. ಇವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಧರ್ಮಪೀಠಗಳ ಮೇಲಿದೆ. ಬದುಕಿನ ವಿಕಾಸಕ್ಕೆ ಆದರ್ಶ ಮೌಲ್ಯಗಳನ್ನು ಬೋಧಿಸಿ ಬೆಳೆಸುವುದೇ ದಸರಾ ಮಹೋತ್ಸವದ ಮೂಲ ಗುರಿಯಾಗಿದ್ದು ಇದು ಸಕಲರ ಬಾಳಿಗೆ ಹೊಸ ಚೈತನ್ಯ ಉಂಟು ಮಾಡಲಿ ಎನ್ನುವುದು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಅಭಿಪ್ರಾಯವಾಗಿದೆ.


ಸಾಮರಸ್ಯ-ಭಾವೈಕ್ಯತೆಯ ಸಂಕೇತ : ಶ್ರೀಮದ್ ರಂಭಾಪುರಿ ಜಗದ್ಗುರುಗಳು ಪ್ರತಿ ನಿತ್ಯ ಧರಿಸುವ ಪೋಷಾಕುಗಳು ಬೇರೆ ಬೇರೆಯೇ ಇರುತ್ತವೆ. ಇವು ಹಿಂದೂ-ಮುಸ್ಲಿ0 ಭಾವೈಕ್ಯತೆಯ ಸಂಕೇತವಾಗಿ ಕಂಗೊಳಿಸುತ್ತಿದೆ ಎಂಬುದನ್ನು ಮರೆಯಲಾಗದು. ಜಾತಿ ಮತ ಪಂಥವೆನ್ನದೇ ಪ್ರತಿಭಾವಂತರಿಗೆ ವಿವಿಧ ರಂಗಗಗಳಲ್ಲಿ ಇರುವ ಸಾತ್ವಿಕ ಶಕ್ತಿಗಳನ್ನು ಗುರುತಿಸಿ ಪುರಸ್ಕಾರ ಪ್ರೋತ್ಸಾಹ ಕೊಡುತ್ತಿರುವುದು ಶ್ರೀಪೀಠದ ವೈಶಾಲ್ಯತೆಗೆ ಸಾಕ್ಷಿಯಾಗಿದೆ.


ಪ್ರಶಸ್ತಿ ಪ್ರದಾನ: ಸಾಮಾಜಿಕ ಹಾಗೂ ಧಾರ್ಮಿಕ ರಂಗದ ಗಣ್ಯರನ್ನು ಗುರುತಿಸಿ ಅವರಿಗೆ ಶ್ರೀ ಜಗದ್ಗುರು ರಂಭಾಪುರಿ ಪೀಠದಿಂದ ದಸರಾ ನಾಡಹಬ್ಬದಲ್ಲಿ ‘ಸಾಧನಸಿರಿ’, ‘ರಂಭಾಪುರಿ ಯುವಸಿರಿ’, ‘ವೀರಶೈವಸಿರಿ’, ‘ಸಾಹಿತ್ಯ ಸಿರಿ’ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗುರುರಕ್ಷೆ ನೀಡಲಾಗುವುದು.


ನಜರ್ ಸಮರ್ಪಣೆ : ಪ್ರತಿ ದಿನದ ಸಭಾ ಕಾರ್ಯಕ್ರಮದ ಕೊನೆಗೆ ಶ್ರೀ ಶಿವಾಚಾರ್ಯರ ಬಳಗ, ಶ್ರೀಪೀಠದ ಸಿಬ್ಬಂದಿ ವರ್ಗ, ಪೀಠಾಭಿಮಾನಿಗಳು, ಹಗಲು ದೀವಟಿಗೆಯವರು ಸಲ್ಲಿಸುವ ನಜರ (ಗೌರವ) ಸಮರ್ಪಣೆ ಕಾರ್ಯಕ್ರಮ ಅತ್ಯಂತ ಆಕರ್ಷರ್ಣೀಯವಾಗಿರುತ್ತದೆ.


ಇಷ್ಟಲಿಂಗ ಮಹಾಪೂಜೆ : ಆಶ್ವೀಜ ಶುದ್ಧ ಪ್ರತಿಪದೆಯಿಂದ ವಿಜಯ ದಶಮಿಯವರೆಗೆ ಶರನ್ನವರಾತ್ರಿ ದಸರಾ ಮಹೋತ್ಸವ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ವಿಶ್ವಶಾಂತಿ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರತಿ ನಿತ್ಯ ಬೆಳಿಗ್ಗೆ ಇಷ್ಟಲಿಂಗ ಮಹಾಪೂಜೆ ನಡೆಸುವರು. ವಿಜಯ ದಶಮಿಯಂದು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆಗೆ ಸ್ವತ: ಕುಂಭವನ್ನು ಹೊತ್ತು ಅಗ್ರೋದಕ ತರುತ್ತಾರೆ.
ವಿಜಯ ದಶಮಿಯಂದು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆದು ಶಮಿ ಸೀಮೋಲಂಘನ ಮಾಡುತ್ತಾರೆ. ನಂತರ ವೇದಿಕೆಗೆ ಆಗಮಿಸಿ ಶಾಂತಿ ಸಂದೇಶ ನೀಡುತ್ತಾರೆ. ಈ ದಿವಸ ಮಾತ್ರ ಪ್ರತಿಯೊಬ್ಬರೂ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಬನ್ನಿ ಕಾಣಿಕೆ ಸಮರ್ಪಿಸಲು ಅವಕಾಶ ಇರುತ್ತದೆ.


ಇದುವರೆಗೆ ದಸರಾ ನಡೆದ ಸ್ಥಳಗಳು: ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ಪ್ರಥಮ ದಸರಾ ಬಿಜಾಪುರ ಜಿಲ್ಲೆ ನಿಡಗುಂದಿಯಲ್ಲಿ(೧೯೯೨) ನಡೆದಿತ್ತು. ನಂತರ ತುಮಕೂರು(೧೯೯೩), ಮುಂಡರಗಿ(೧೯೯೪), ಬಾಗಲಕೋಟೆ(೧೯೯೫), ಶಿಗ್ಗಾಂವ(೧೯೯೬), ಸವದತ್ತಿ(೧೯೯೭), ಸಿಂಧನೂರು(೧೯೯೮), ಕುಂದಗೋಳ(೧೯೯೯), ಬೀರೂರು(೨೦೦೦), ಹಾವೇರಿ(೨೦೦೧), ಮಹಾರಾಷ್ಟçದ ಸೊಲ್ಲಾಪುರ(೨೦೦೨), ಗುಲಬರ್ಗಾ(೨೦೦೩), ಹೊಸದುರ್ಗ(೨೦೦೪), ರಾಣೆಬೆನ್ನೂರು(೨೦೦೫), ಶಿವಮೊಗ್ಗ(೨೦೦೬), ಹುಬ್ಬಳ್ಳಿ(೨೦೦೭), ತಿಪಟೂರು(೨೦೦೮), ಚಿಕ್ಕಮಗಳೂರು(೨೦೦೯), ಗಜೇಂದ್ರಗಡ(೨೦೧೦), ಬೆಂಗಳೂರು(೨೦೧೧), ಗಂಗಾವತಿ(೨೦೧೨), ಜೇವರ್ಗಿ(೨೦೧೩), ಅರಸೀಕೆರೆ(೨೦೧೪), ಭದ್ರಾವತಿ(೨೦೧೫), ಗೊಡಚಿ ಶ್ರೀ ವೀರಭದ್ರೇಶ್ವರ ಕ್ಷೇತ್ರ(೨೦೧೬), ಕಡೂರು(೨೦೧೭), ಲಕ್ಷ್ಮೇಶ್ವರ(೨೦೧೮), ದಾವಣಗೆರೆ(೨೦೧೯).

2020ರಲ್ಲಿ ಕೊರೊನಾ ಆತಂಕದಿ0ದಾಗಿ 29ನೇ ವರ್ಷದ ದಸರಾ ಸರಳವಾಗಿ ಸಾಂಪ್ರದಾಯಿಕವಾಗಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಪರಿಸರದಲ್ಲಿಯೇ ನಡೆದಿತ್ತು. ಹತ್ತು ಹಲವು ವೈಶಿಷ್ಠ್ಯಗಳ ಈ ಗುರುಪೀಠ ಪರಂಪರೆಯ ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ 30ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭ ಈ ವರ್ಷ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದ ಪರಿಸರದಲ್ಲಿ ಸರಳ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ನಡೆಯುತ್ತಿದೆ.

  • ಸಿ.ಎಚ್. ಬಾಳನಗೌಡ್ರ
    ವಾರ್ತಾ ಸಂಯೋಜನಾಧಿಕಾರಿ
    ಶ್ರೀ ಜಗದ್ಗುರು ರಂಭಾಪುರಿ ಪೀಠ ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles