ಅಧ್ಯಾತ್ಮ ಸಾಧನೆಯ ಸಂತೃಪ್ತಿ

ಪ್ರತಿಯೊಬ್ಬ ವ್ಯಕ್ತಿಯನ್ನು ಕಾಡುವ ಭಯ ಅಂದರೆ ಕೊರತೆಗಳು. ನಾಳೆಯ ಬದುಕಿಗೆ ನಾನೇನು ಮಾಡಲಿ? ಬೇಕಾದ್ದು ನನ್ನಲ್ಲಿಲ್ಲವಲ್ಲ ಎನ್ನುವ ಭಯ ಪ್ರತಿಯೊಬ್ಬ ಮನುಷ್ಯನನ್ನು ಪ್ರತಿದಿನ ಕಾಡುತ್ತಲೇ ಇರುತ್ತದೆ. ದಿನ ಬೆಳಗಾದರೆ ನಾಳೆಯ ಬಗ್ಗೆಯೇ ಯೋಚನೆ ಮಾಡುವವರು ಹೆಚ್ಚು. ಮುಂದಿನ ನಾಳೆಗಳಿಗಾಗಿ ಕಷ್ಟಪಡುವುದರಲ್ಲಿಯೇ ದಿನ ದೂಡುತ್ತಾರೆ. ಆದರೆ ಅಧ್ಯಾತ್ಮ ಸಾಧನೆಯಲ್ಲಿ ಸಂತೃಪ್ತಿ ಹೊಂದಿದರೆ ನಾಳೆಯ ಚಿಂತೆ ಇರುವುದಿಲ್ಲ.


ಪ್ರತಿಯೊಬ್ಬರೂ ನಿರಂತರ ಹೋರಾಟ ನಡೆಸುವುದು ಇಲ್ಲದ್ದನ್ನು ಹೊಂದಬೇಕು ಎಂಬ ಬಯಕೆಗೆ. ಇಲ್ಲದ್ದನ್ನು ಪಡೆದುಕೊಳ್ಳುವುದಕ್ಕೆ ಏನೇನೋ ಪ್ರಯತ್ನ ಮಾಡುತ್ತಾರೆ. ಇದ್ದುದರಲ್ಲಿ ಸಂತೃಪ್ತಿ ಪಡೆವ ಮನಸ್ಸು ಅವನದಲ್ಲ. ಒಂದು ಪಡೆದುಕೊಂಡ ಮೇಲೆ ಮತ್ತಿನ್ನೇನೋ ಬಯಕೆ ಮನದಲ್ಲಿ ಮೂಡಿರುತ್ತದೆ. ಬಯಕೆಗಳ ಸರಮಾಲೆಯಲ್ಲಿ ಸಂತೃಪ್ತಿ ಎಂಬುದು ಕನಸಿನ ಮಾತಾಗುತ್ತದೆ. ಇರುವುದರಲ್ಲಿಯೇ ತೃಪಿ ಪಟ್ಟುಕೊಂಡು, ಸಿಗಲಾರದಕ್ಕೆ ಆಸೆ ಪಡುವುದರಲ್ಲಿ ಅರ್ಥ ಇಲ್ಲ. ಅದರಿಂದ ದುಃಖವೇ ಹೊರತು ಸಂತೃಪ್ತಿ ಸಿಗುವುದಕ್ಕೆ ಸಾಧ್ಯವಿಲ್ಲ.

`ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು ಹರುಷಕ್ಕಿದೆ ದಾರಿಯು’ ಎಂದು ಡಿವಿಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ.


 ಕೆಲವರಿಗೆ ಈ ಜಗತ್ತಿಗೆ ಎಷ್ಟು ನೀಡಿದರೂ ತೃಪ್ತಿಯಿಲ್ಲ , ಜಗತ್ತಿನಿಂದ ಎಷ್ಟು ಪಡೆದುಕೊಂಡರೂ ಸಾಕಾಗುವುದಿಲ್ಲ. ಅದರಿಂದ ತೃಪ್ತಿಯ ಭಾವವೇ ಇಲ್ಲ. ಆತ್ಮ ಸಂತೃಪ್ತಿಯೇ ಮುಖ್ಯವಾಗಿರುತ್ತದೆ.
ಇದನ್ನು ಪ್ರತಿಯೊಬ್ಬ ವ್ಯಕ್ತಿಯೂ ಬಯಸುತ್ತಾನೆ. ಆದರೆ ಅದನ್ನು ಪಡೆದುಕೊಳ್ಳುವಲ್ಲಿ ವಿಫಲನಾಗುತ್ತಾನೆ. ಬೇಕು ಎಂದು ಕೊಂಡದ್ದನ್ನು ಪಡೆದುಕೊಂಡಾಗಲೂ ತೃಪ್ತಿ ಆಯಿತಾ ಎಂದರೆ ಏನಾದರೊಂದು ನೆವ ಹೇಳಿ ಇಲ್ಲ ಎನ್ನುವ ಉತ್ತರವೇ ಬರುತ್ತದೆ. ತೃಪ್ತಿ ಎಂಬ ಮನೋಭಾವ ಅವನ ಅಂತರಂಗದೊಳಗೇ ಅಡಗಿರುತ್ತದೆ. ಮನುಷ್ಯನ ಬಯಕೆಗಳಿಗೆ ತಕ್ಕಂತೆ ತೃಪ್ತಿಯ ಮಟ್ಟವೂ ಭಿನ್ನವಾಗಿರುತ್ತದೆ.
ತೃಪ್ತಿ ಎಂಬುದು ಕೇವಲ ಖುಷಿ ಅಷ್ಟೇ ಅಲ್ಲ. ಖುಷಿಯಂತೆ ಅದು ಕ್ಷಣಿಕವಲ್ಲ. ಜೀವನಪೂರ್ತಿ ಇರುವಂಥದ್ದು. ಭೌತಿಕ ಜಗತ್ತಿನಲ್ಲಿ ವಸ್ತುಗಳಿಂದ ಅಥವಾ ಬಯಕೆಗಳನ್ನು  ಈಡೇರಿಸಿಕೊಳ್ಳುವುದರ ಮೂಲಕ ಸಂತೃಪ್ತಿ ಹೊಂದುವುದು ಒಂದು ಬಗೆಯಾದರೆ, ಅಧ್ಯಾತ್ಮದಿಂದ ಅಂತರಂಗದ ಸಂತೃಪ್ತಿಯನ್ನು ಕಂಡುಕೊಳ್ಳಬಹುದು. ಅಧ್ಯಾತ್ಮ ಸಾಧನೆಯಲ್ಲಿ ಆಂತರಿಕ ಸಂತೃಪ್ತಿಯೇ ಮೂಲ ಗುರಿಯಾಗಿರುತ್ತದೆ. ಹಾಗಾಗಿ ಅಲ್ಲಿ ತೃಪ್ತಿ ಅಂದರೆ ಯಾವುದರ ಮೇಲಿನ ತೃಪ್ತಿ ಎಂಬುದರಲ್ಲಿ ಗೊಂದಲವಿಲ್ಲ.

ಪ್ರತಿಯೊಬ್ಬ ವ್ಯಕ್ತಿ ಕೂಡಾ ತನ್ನ ಹುಟ್ಟು, ಜೀವನ, ಜೀವನದ ಉದ್ದೇಶ, ಗುರಿ ಹಾಗೂ ಸಾಧನೆಯೆಡೆಗಿನ ಪ್ರಯತ್ನ ಇವೇ ಮೊದಲಾದುವುಗಳ ಬಗ್ಗೆ ಪ್ರಶ್ನಿಸಿಕೊಂಡರೆ ಜೀವನದಲ್ಲಿ ತೃಪ್ತಿ ಹೊಂದುವುದು ಕಷ್ಟವಲ್ಲ. ಇಲ್ಲವಾದರೆ ಅನಿರೀಕ್ಷಿತವಾಗಿ ದುಃಖ ಅನುಭವಿಸಬೇಕಾಗುತ್ತದೆ.
ಬದುಕಿನ ಯಾನದಲ್ಲಿ ಸಾಧಿಸಿದ ಯಶಸ್ಸು, ಶ್ರೀಮಂತಿಕೆ ಮುಖ್ಯವಲ್ಲ. ಅದರಿಂದ ಎಷ್ಟು ತೃಪ್ತಿ ಪಡೆದುಕೊಂಡಿದ್ದೇನೆ ಎಂಬುದು ಮುಖ್ಯ. ಆತ್ಮ ಸಂತೃಪ್ತಿ ಎಂಬುದು ವ್ಯಕ್ತಿಯ ಆತ್ಮದ ಅನ್ವೇಷಣೆ. ಅಧ್ಯಾತ್ಮ ಸಾಧಕನಿಗೆ ಅದುವೇ ಜೀವನದ ಉನ್ನತ ಗುರಿ. ತನ್ನ ಹಾಗೂ ಸಾಧನೆಯ ಬಗ್ಗೆ ತನಗಿರುವ ಸಂಪೂರ್ಣ ತೃಪ್ತಿಯ ಭಾವ.
 ಬದುಕಿನ ಉದ್ದೇಶವನ್ನು ಅರಿತುಕೊಂಡರೆ ಆತ್ಮಸಂತೃಪ್ತಿಯ ಭಾವ ಹೊಂದುವುದಕ್ಕೆ ಸಾಧ್ಯ.
ಅಧ್ಯಾತ್ಮ ಅಂದರೆ ತೃಪ್ತಿ. ತೃಪ್ತಿಯ ಭಾವಕ್ಕಿಂತ ಕಡಿಮೆಯೂ ಅಲ್ಲ, ಹೆಚ್ಚೂ ಅಲ್ಲ. ನಮ್ಮತನದ ಹುಡುಕಾಟ ಮತ್ತು ಆ ಹುಡುಕಾಟದಲ್ಲಿ ತೃಪ್ತಿಯನ್ನು ಕಂಡುಕೊಳ್ಳುವುದೇ ಆಗಿದೆ. ತೃಪ್ತಿಗಾಗಿ ನಿರಂತರ ಪ್ರಯತ್ನ ಮತ್ತು ಹೋರಾಟ ನಡೆಯುತ್ತಲೇ ಇರುತ್ತದೆ. ಆ ಹೋರಾಟದಲ್ಲಿ ಯಶಸ್ಸು ಕಂಡರೆ ಮನಸ್ಸಿಗೆ ಏನೋ ಸಮಾಧಾನ, ತೃಪ್ತಿ. ದೇವರೆಡೆಗಿನ ನಮ್ಮ ಪ್ರಾರ್ಥನೆ ಮತ್ತು ದೇವರ ಸ್ಪಂದನೆ ಎರಡೂ ಸಂಧಿಸಿದಾಗ ತೃಪ್ತಿಯನ್ನು ಹೊಂದುತ್ತೇವೆ. ಅದುವೇ ಅಧ್ಯಾತ್ಮದ ಸಂತೃಪ್ತಿ.


ಈ ಜಗತ್ತು ನಮ್ಮನ್ನು ಅಸಂತೃಪ್ತಿಯ ಕೂಪದಲ್ಲಿಟ್ಟಾಗ ಅಧ್ಯಾತ್ಮದ ಮೊರೆ ಹೋಗುತ್ತೇವೆ. ಮತ್ತೆ ಕೆಲವರು ಕುತೂಹಲದಿಂದ ಅಧ್ಯಾತ್ಮದಲ್ಲಿ ತೊಡಗಿಸಿಕೊಳ್ಳುವವರೂ ಇದ್ದಾರೆ. ನಿಜವಾದ ಆಧ್ಯಾತ್ಮಿಕ ಬದುಕು ಅಂದರೆ ಆಂತರಿಕವಾಗಿ ದೇವರ ಇಚ್ಛೆಯನ್ನು ಒಪ್ಪಿಕೊಳ್ಳುವುದು. ಧ್ಯಾನ ಮತ್ತು ಪ್ರಾರ್ಥನೆ ಮಾಡುತ್ತಿದ್ದಾಗ ದೇವರ ಇಚ್ಛೆಯೊಂದಿಗೆ ಪ್ರಜ್ಞಾಪೂರ್ವಕವಾಗಿ ಒಂದಾಗಲು ಪ್ರಯತ್ನಿಸುತ್ತೇವೆ. ದೇವರ ಇಚ್ಛೆಯಿಂದ ಮಾತ್ರ ನಮ್ಮ ಬಯಕೆಗಳನ್ನು ಪೂರೈಸಲು ಸಾಧ್ಯ ಎಂಬುದರ ಅರಿವಾಗಿರುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles