ಚಿತ್ರಗಳು: ಡಾ.ಸಂಜೋತಾ ಧರ್ಮ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿ0ದ 28 ಕಿಮೀ ದೂರದಲ್ಲಿರುವ ಇನೋಳಿಯಲ್ಲಿರುವ ಬೆಟ್ಟದ ಮೇಲೆ ಸುಂದರವಾದ ವಿಶಾಲ ಜಾಗದಲ್ಲಿ ಐತಿಹ್ಯವುಳ್ಳ ದೇವಮಂದಿರವೊ0ದು ಮೈದಳೆದು ನಿಂತಿದೆ. ಶಿವದೇವನನ್ನು ಇಲ್ಲಿ ಶ್ರೀ ಸೋಮನಾಥೇಶ್ವರನಾಗಿ ಪೂಜಿಸಲಾಗುತ್ತದೆ.
ದೇಗುಲದ ಸುತ್ತ ವಿಶಾಲವಾದ ಪ್ರದೇಶವಿದ್ದು, ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದೆ. ಹತ್ತಿರದಲ್ಲೇ ಸದ್ದಿಲ್ಲದೇ ಹರಿಯುತ್ತಿರುವ ನೇತ್ರಾವತಿ ನದಿ ಆ ಪ್ರದೇಶಕ್ಕೆ ಪ್ರಶಾಂತವಾದ ವಾತಾವರಣವನ್ನು ಕಲ್ಪಿಸಿದೆ.
ನೇತ್ರಾವತಿ ನದಿ ತಟದಲ್ಲಿರುವ ಒಂದು ಪುಟ್ಟ ಹಳ್ಳಿ ಇನೋಳಿ. ಈ ಊರಿಗೆ ದೇವಂದಹಳ್ಳಿ ಎಂದೂ ಕರೆಯುತ್ತಾರೆ. ಈ ಗ್ರಾಮದ ಗ್ರಾಮ ದೇವರು ಶ್ರೀ ಸೋಮನಾಥೇಶ್ವರ. ಮೂರು ಸಾವಿರ ವರ್ಷಗಳ ಐತಿಹ್ಯ ಹೊಂದಿರುವ ಈ ದೇಗುಲ ಈಗ ಸುಂದರ ಆಲಯವಾಗಿ, ಭಕ್ತರ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.
ಕೆಲವು ವರ್ಷಗಳ ಹಿಂದಷ್ಟೇ ಜೀರ್ಣೋದ್ಧಾರಗೊಂಡಿರುವ ಈ
ದೇವಸ್ಥಾನದ ಮುಂಭಾಗದಲ್ಲಿ ವಿಶಾಲವಾದ ಮೈದಾನವಿದೆ. ಹೂ ತೋಟ, ಬೃಹದಾಕಾರಾದ ಘಂಟೆಯನ್ನು ನೋಡಬಹುದು.
ದೇಗುಲದ ಒಳಗೆ ವಿಶಾಲವಾದ ಗರ್ಭಗುಡಿ, ಅದರ ಸುತ್ತಲೂ ಸುಂದರವಾದ ಕೆತ್ತನೆಗಳನ್ನೊಳ ಗೊಂಡಿರುವ ಕಲ್ಲಿನ ಕಂಬಗಳು ದೇವಸ್ಥಾನದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.
ದೇಗುಲ ಪ್ರವೇಶ ಸಮಯ: ಪ್ರತಿದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 1, ಹಾಗೂ ಸೋಮವಾರ ಮಾತ್ರ ಸಂಜೆ 5vರಿಂದ 7.30 ರ ವರೆಗೆ ತೆರೆದಿರುತ್ತದೆ.
ಸುತ್ತಲೂ ಕಣ್ಣು ಹಾಯಿಸಿದಷ್ಟೂ ಕಾಣುವ ರಮಣೀಯ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಸಂಜೆಯ ಹೊತ್ತು ಈ ಬೆಟ್ಟದ ಮೇಲೊಂದು ಸುತ್ತು ಹಾಕಿ ಸಮಯ ಕಳೆಯುವುದಕ್ಕೆ ಪ್ರಶಸ್ತ ಸ್ಥಳ ಇದಾಗಿದೆ.
ಹೋಗುವುದು ಹೇಗೆ?
ಮಂಗಳೂರಿನಿ0ದ ಬರುವವರು ಉಳ್ಳಾಲ ಸೇತುವೆಯಿಂದ ಸ್ವಲ್ಪ ಮುಂದೆ ಬಂದು ಎಡಕ್ಕೆ ಎಲ್ಯಾರುಪದವು – ಇನೋಳಿ ರಸ್ತೆ ಮೂಲಕ ಪ್ರಯಾಣಿಸಬೇಕು. ಪಜೀರಿನಿಂದ ಇನೋಳಿಗೆ ಬರುವವರು ಪಜೀರಿನಿಂದ ಇನೋಳಿಯತ್ತ ಹೋಗುವಾಗ ಬಲಭಾಗಕ್ಕೆ ದೇವಸ್ಥಾನದ ದ್ವಾರ ಕಾಣಿಸುತ್ತದೆ. ಅದೇ ದಾರಿಯಾಗಿ ಸ್ವಲ್ಪ ಮುಂದೆ ಬಂದರೆ ದೇವಸ್ಥಾನ ಸಿಗುತ್ತದೆ.