*ಶ್ರೀನಿವಾಸ ಮೂರ್ತಿ ಎನ್ ಎಸ್
ಶಿವನ ಸ್ವರೂಪದಂತೆ ನರಸಿಂಹ ಹಾಗು ವಿಷ್ಣುವಿನ ವಿವಿಧ ಸ್ವರೂಪವನ್ನು ಆರಾಧಿಸುವ ಪದ್ದತಿ ಇದೆ. ಅಂತಹ ದೇವಾಲಯಗಳಲ್ಲಿ ಚಿಕ್ಕಬಳ್ಲಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಎಲ್ಲೋಡಿನ ಆದಿನಾರಾಯಣ ದೇವಾಲಯವೂ ಒಂದು.
ಸುತ್ತಲೂ ‘ಬರ’ದ ಛಾಯೆಯಲ್ಲಿ ಇರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಲಲ್ಲಿ ಹಲವೆಡೆ ಹಸಿರಿನ ಸಿರಿ ಕಾಣಬಹುದು. ಅಂತಹ ಸುಂದರ ಬೆಟ್ಟಗಳಲ್ಲಿ ಕೂರ್ಮಗಿರಿ ಎಂದೇ ಕರೆಯುವ ಎಲ್ಲೋಡಿನ ಬೆಟ್ಟವು ಒಂದು. ಇಲ್ಲಿ ಪಾಳೇಗಾರ ಕಾಲದಲ್ಲಿ ಬೆಟ್ಟಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಿರುವುದನ್ನು ಗಮನಿಸಿದಲ್ಲಿ ಅಂದಿನ ಕಾಲದಿಂದಲ್ಲಿಯೇ ಇಲ್ಲಿ ದೇವರ ಆರಾಧನೆ ಇತ್ತು ಎನ್ನುವುದನ್ನ ಊಹಿಸಬಹುದು.
ಸುಮಾರು 650 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲೆ ಹೋದಲ್ಲಿ ಸುಂದರವಾದ ಒಂದು ನೈಸಗಿರ್ಕವಾದ ಗುಹೆ ನಮಗೆ ಕಾಣ ಸಿಗುತ್ತದೆ. ಇಲ್ಲಿನ ಗುಹೆಯಲ್ಲಿ ಒಂದು ನೈಸರ್ಗಿಕ ಶಿಲ್ಪವಿದ್ದು ಸ್ಥಳೀಯವಾಗಿ ಇದನ್ನು ಆದಿನಾರಾಯಣ ಎಂದೇ ಕರೆಯಲಾಗುತ್ತದೆ. ಇದೇ ಹೆಸರಿನಲ್ಲಿ ಪೂಜೆಗೊಳ್ಳುವ ಯಾವುದೇ ಅಲಂಕರಣವಿಲ್ಲದೇ ಸ್ಥಳೀಯ ಭಕ್ತಿ ಹಾಗು ನಂಬಿಕೆಗೆ ಕುರುಹು ಎನ್ನುವಂತೆ ಇದೆ. ಬೆಟ್ಟದಲಿ ಸುಂದರವಾದ ಆಂಜನೇಯನ ಶಿಲ್ಪ ಹಾಗು ಹಲವು ನಾಗರ ಕಲ್ಲುಗಳನ್ನು ನೋಡಬಹುದು.
ಇನ್ನು ದೇವಾಲಯಕ್ಕೆ ಹೊಸದಾಗಿ ರಾಜಗೋಪುರವನ್ನು ನಿರ್ಮಿಸಲಾಗಿದ್ದು ಭಕ್ತರಿಗೆ ಉಳಿದುಕೊಳ್ಳಲು ಹಾಗು ಕಾರ್ಯಕ್ರಮ ನಿರ್ವಹಣೆಗೆ ಯಾತ್ರಿ ನಿವಾಸವಿದೆ.
ಬರದ ನಾಡಿನಲ್ಲಿ ಪ್ರಶಾಂತತೆ ಬಯಸುವವರೆಗೆ ಸುಂದರವಾದ ಸ್ಥಳವಾಗಿದ್ದು ಪ್ರಕೄತಿ ಒಲಿದ ಸಮಯದಲ್ಲಿ ಇಲ್ಲಿನ ಕೆರೆ ತುಂಬಿದಾಗ ಮತ್ತಷ್ಟು ಸೊಬಗನ್ನು ಹಾಗು ಆರಾಧನೆಯ ವಿಶಿಷ್ಟ ಪರಂಪರೆಯ ಕೊಂಡಿಯನ್ನು ನೋಡಿದಂತೆ ಭಾಸವಾಗುತ್ತದೆ.
ತಲುಪುವ ಬಗ್ಗೆ: ಬಾಗೆಪಲ್ಲಿಯಿಂದ ಕೇವಲ 12 ಕಿ.ಮೀ ದೂರದಲ್ಲಿದ್ದು ಬಾಗೇಪಲ್ಲಿ – ಅನಂತಪುರ ರಸ್ತೆಯಲ್ಲಿ ಎಲ್ಲೋಡು ಕಡೆ ತಿರುಗಿ ತಲುಪಬಹುದು.