ಬಳ್ಳಾರಿ ಜಿಲ್ಲೆ, ಸಿರುಗುಪ್ಪ ತಾಲೂಕು, ಕೆಂಚನಗುಡ್ಡ ಗ್ರಾಮ, ತುಂಗಭದ್ರಾ ತಟದ ಶ್ರೀ ವಸುಧೇಂದ್ರ ತೀರ್ಥರು ಮಹಿಮಾನ್ವಿತರು. ಶ್ರೀ ವಸುಧೇಂದ್ರ ತೀರ್ಥರು ಮಹಾ ಪಂಡಿತರು, ವಾಗ್ಮಿಗಳು, ಅನುಗ್ರಹ ಸಂಪನ್ನರು, ಮಹಿಮಾನ್ವಿತರಾಗಿದ್ದು ಅವರು ಕಠಿಣವಾದ ನಿಯಮ-ನಿಷ್ಠೆಗಳನ್ನು ಆಚರಿಸುತ್ತಿದ್ದರು. ಅವರು ಬೃಂದಾವನದಲ್ಲಿ ಜಾಗೃತರಾಗಿದ್ದು ಭಕ್ತರು ನಿಯಮ ನಿಷ್ಠೆಗಳನ್ನು ಆಚರಿಸದೇ ಇದ್ದಲ್ಲಿ ಸಂಕಷ್ಟ ಎದುರುಸುತ್ತಿದ್ದರು. ಭಕ್ತರ ಕೋರಿಕೆಯನ್ನು ಮನ್ನಿಸಿ ಶಾಂತ ಸ್ವಭಾವ ಹೊಂದಿ ಭಕ್ತರನ್ನು ಅನುಗ್ರಹಿಸುವವರು. ಪೀಠಾಧಿಪತಿಗಳಾಗಿದ್ದಾಗ ತಮಿಳುನಾಡಿನ ರಾಜ ವಿಜಯವಪ್ಪಳ ಮಾಳವರಾಯ ಗುರುಗಳಿಂದ ಕೆರೆ ನಿರ್ಮಾಣ ಹಾಗೂ ಮಂಟಪ ನಿರ್ಮಾಣ ಭೂಮಿ ಪೂಜೆ ಸಮಯದಲ್ಲಿ ಆಶೀರ್ವಾದ ಪಡೆದು ಮೂಲ ರಾಮನ ಕೋಶಕ್ಕೆ ಹಾಗೂ ಶ್ರೀಮಠಕ್ಕೆ ಅನೇಕ ಗ್ರಾಮಗಳನ್ನು ಬಳುವಳಿಯಾಗಿ ನೀಡುತ್ತಾನೆ. ಅಪಾರ ನಿಧಿ ಯನ್ನು ದೇಣಿಗೆ ನೀಡಿದ ಕುರಿತು ತಾಮ್ರ ಶಾಸನದಲ್ಲಿ ಮಾಹಿತಿ ನೀಡಿದ್ದು, ಶ್ರೀಮೂಲರಾಮನ ಜೊತೆಯಲ್ಲಿ ತಾಮ್ರ ಶಾಸನಕ್ಕೂ ನಿತ್ಯ ಪುಜೆ ಸಲ್ಲಿಸಲಾಗುತ್ತಿದೆ. ಮಂತ್ರಾಲಯದಲ್ಲಿ ಲೌಕಿಕವಾಗಿ ಶ್ರೀಮಠಕ್ಕೆ ತೊಂದರೆಯಾಗಿ ಭೂಮಿ ಕಳೆದುಕೊಂಡಾಗ ಶ್ರೀಗಳ ಮಹಿಮೆಯಿಂದಾಗಿ ಆಗಿನ ಮುಸಲ್ಮಾನ ನವಾಬರು ಮರಳಿ ಮಠಕ್ಕೆ ಭೂಮಿಯನ್ನು ಹಿಂತಿರುಗಿಸಿದರು. ಅಪಾರ ಪಂಡಿತರಾಗಿದ್ದ ವಸುಧೇಂದ್ರ ತೀರ್ಥರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ತಂತ್ರಸಾರದಿ ಗ್ರಂಥ, ಚಂದ್ರಿಕಾ ಸುಧಾ ಗ್ರಂಥ ವಿಮರ್ಶೆ, ವಿವಿಧ ಮತಗಳ ಸಾರವನ್ನು ತಿಳಿಸುವ ಗ್ರಂಥವನ್ನು ರಚಿಸಿದ್ದಾರೆ. ಅಧ್ಯಾಯ ಸೂತ್ರ ಗ್ರಂಥಸಾರ ಸೇರಿದಂತೆ ಅನೇಕ ಗ್ರಂಥಗಳನ್ನು ಸಂಗ್ರಹಿಸಿ ಪುನರ್ ಮುದ್ರಿಸಿ ಶ್ರೀಮಠದ ಮೂಲಕ ಭಕ್ತರಿಗೆ ನೀಡಲಾಗುತ್ತದೆ.