ದೀಪಾವಳಿ ಹೆಸರೇ ಹೇಳುವಂತೆ ದೀಪಗಳ ಸಾಲು. ಹಣತೆಗಳನ್ನು ಹಚ್ಚಿ ಸಂಭ್ರಮಿಸುವ ದಿನ.
ಹಚ್ಚಿದ ಹಣತೆಯೊಂದು ಪ್ರಕಾಶಮಾನವಾದ ಬೆಳಕು ಬೀರುವುದರ ಜತೆಗೆ ಸಾವಿರ ಸಾವಿರ ದೀಪಗಳನ್ನು ಬೆಳಗುವ ಶಕ್ತಿ ಹೊಂದಿದೆ. ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ.
ಹಬ್ಬದ ಆಚರಣೆ ಮೂಲಕ ಪ್ರಕೃತಿಯಲ್ಲಿ ದೇವರು ದೈವವನ್ನು ಕಾಣುವ ಪರಂಪರೆ ನಮ್ಮದು. ದೀಪಾವಳಿಯ ಆಚರಣೆಗಳೂ ಪರಿಸರದೊಂದಿಗೆ ಬಾಂಧವ್ಯ ಬೆಸೆದುಕೊಂಡಿದೆ. ದೀಪಾವಳಿ ಸಡಗರದ ಹಬ್ಬ. ಹೊಸ ಬಟ್ಟೆಧರಿಸಿ, ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಸಂಭ್ರಮಿಸುತ್ತಾರೆ.
ಕಾರ್ತಿಕ ಮಾಸದ ಆಗಮನ, ದುಡಿಮೆಯ ಫಲಭರಿತ ಭತ್ತದ ಸಸಿಗಳು, ಬಣ್ಣಬಣ್ಣದ ಹೂಗಳಿಂದ ನಳನಳಿಸುತ್ತಿರುವ ಹೂವಿನ ಗಿಡಗಳು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ.
ಅಂತರ0ಗದಲ್ಲಿರುವ ಕತ್ತಲೆಯನ್ನೋಡಿಸಿ, ಮನೆ ಮನ ಬೆಳಗುವ ದೀಪಗಳ ಹಬ್ಬ ದೀಪಾವಳಿ. ನರಕಚತುರ್ದಶಿ ದೀಪಾವಳಿಯ ಪ್ರಮುಖ ದಿನ. ತೈಲದಲ್ಲಿ ಲಕ್ಷ್ಮೀದೇವಿ, ನೀರಿನಲ್ಲಿ ಗಂಗೆ ದೀಪಾವಳಿಯ ಚತುರ್ದಶಿಯಂದು ಸನ್ನಿಹಿತರಾಗಿರುತ್ತಾರೆ ಎಂಬ ನಂಬಿಕೆ ಇದೆ.
ನರಕ ಚತುರ್ದಶಿಯಂದು ಹಬ್ಬದ ಆರಂಭ, ಅಂದೇ ನೀರು ತುಂಬುವ ಹಬ್ಬ, ಜಳಕ ಮಾಡುವ ಹಂಡೆಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುತ್ತಾರೆ. ವಿಷ್ಣು ಪುರಾಣದ ಪ್ರಕಾರ ಶ್ರೀಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿದ್ದು ಬಲಿ ಪಾಡ್ಯಮಿ ದಿನದಂದು. ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನ ಪೂಜೆ ಮಾಡುತ್ತಾರೆ. ಬಲೀಂದ್ರ ಪೂಜೆಯ ನಂತರ ದನ ಕರುಗಳಿಗೆ ಸ್ನಾನ ಮಾಡಿಸಿ ಪೂಜೆ (ಗೋಪೂಜೆ) ಸಲ್ಲಿಸುತ್ತಾರೆ.
ಪೌರಾಣಿಕ ಕಥೆಯ ಪ್ರಕಾರ ಲಕ್ಷ್ಮೀ ಗೋ ರೂಪ ಧರಿಸಿ ಬಂದಾಗ ಪಾರ್ವತಿ ಪೂಜಿಸಿದಳಂತೆ. ಆದ್ದರಿಂದ ಗೋಪೂಜೆಗೆ ವಿಶೇಷ ಮಹತ್ವ. ಗೋವುಗಳಲ್ಲಿ ಲಕ್ಷ್ಮೀ ನೆಲೆಸಿದ್ದಾಳೆ ಎಂಬುದು ನಂಬಿಕೆ. ದೀಪಾವಳಿಯಂದು ವ್ಯಾಪಾರಸ್ಥರು ಲಕ್ಷ್ಮೀಪೂಜೆ ಕೈಗೊಳ್ಳುತ್ತಾರೆ. ಜತೆಗೆ ಹೊಸ ವಸ್ತುವನ್ನು ಖರೀದಿಸುವುದುಂಟು. ಖರೀದಿಸಿದ ವಸ್ತು ಇಮ್ಮಡಿಯಾಗುತ್ತದೆ ಎಂಬುದು ಒಂದು ನಂಬಿಕೆ.
ನರಕ ಚತುರ್ದಶಿ
ಭೂದೇವಿಯ ಮಗನಾದ ನರಕಾಸುರ ಎಲ್ಲ ದೇವತೆಗಳನ್ನು ಎದುರಿಸಿ ಯಕ್ಷ, ಕಿನ್ನರ, ವಿದ್ಯಾಧರ ಮೊದಲಾದ ಹದಿನಾರು ಸಾವಿರ ಮಂದಿ ಸ್ತ್ರೀಯರನ್ನು ಸೆರೆಯಲ್ಲಿಟ್ಟು ಕಿರುಕುಳ ಕೊಡುತ್ತಾನೆ. ಇದನ್ನರಿತ ಭಗವಾನ್ ಶ್ರೀಕೃಷ್ಣ ನರಕಾಸುರನ್ನು ಕೊಂದು ಎಲ್ಲರನ್ನೂ ಪಾರು ಮಾಡುತ್ತಾನೆ. ತನ್ನ ಮಗನ ಸಾವನ್ನು ತಿಳಿದ ಭೂದೇವಿಯ ಅವತಾರವಾದ ಸತ್ಯಭಾಮೆ ತನ್ನ ಮಗ ತೀರಿದ ಆ ದಿನ (ಚತುರ್ದಶಿಯಂದು) ತನ್ನ ಮಗನ ಹೆಸರಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲಿ ಎಂಬುದಾಗ ಶ್ರೀಕೃಷ್ಣನಲ್ಲಿ ವರವನ್ನು ಬೇಡುತ್ತಾಳೆ. ಅಂದಿನಿ0ದ ಆ ದಿನವನ್ನು ನರಕ ಚತುರ್ದಶಿ ಎಂಬುದಾಗಿ ಆಚರಿಸಲಾಗುತ್ತದೆ.
ಅಮವಾಸ್ಯೆಯ ದಿನ ಲಕ್ಷ್ಮೀ ಪೂಜೆ ಮಾಡುತ್ತಾರೆ. ಧನ ಹಾಗೂ ಭಾಗ್ಯ ದೇವತೆಯಾದ ಲಕ್ಷ್ಮೀ ದೇವಿಯು ಭೂಮಿಗೆ ಆಗಮಿಸುತ್ತಾಳೆ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂದು ಜನರ ನಂಬಿಕೆ. ದಿನಪೂರ್ತಿ ಎಣ್ಣೆದೀಪವನ್ನು(ಹಣತೆ) ಯನ್ನು ಬೆಳಗುತ್ತಾರೆ. ಗೂಡುದೀಪಗಳಿಂದ ಅಲಂಕರಿಸುತ್ತಾರೆ. ದೇವಿಯು ಸಂತೃಪ್ತಳಾಗಿ ತಮ್ಮ ಮನೆಯಲ್ಲಿ ನೆಲೆಸಬೇಕೆಂಬ ಹಂಬಲದಿ0ದ ಭಕ್ತರು ಸಂಜೆಯ ವೇಳೆ ದೀಪಗಳಿಂದ ಮನೆಯನ್ನು ಅಲಂಕರಿಸಿ ಲಕ್ಷ್ಮೀ ಯನ್ನು ಸ್ವಾಗತಿಸುತ್ತಾರೆ. ಅದೇ ರೀತಿ ಕೆಟ್ಟ ಶಕ್ತಿಯನ್ನು ಧ್ವಂಸ ಮಾಡುವ ಸಲುವಾಗಿ ಪಟಾಕಿ ಸಿಡಿಸುತ್ತಾರೆ.