ಹೊಸಗುಂದ ಉತ್ಸವ, ಲಕ್ಷದೀಪೋತ್ಸವ ಡಿ. 1ರಿಂದ

ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಹೊಸಗುಂದ ಉತ್ಸವ ಮತ್ತು ಲಕ್ಷದೀಪೋತ್ಸವ ನಡೆಸುತ್ತಿದ್ದು, ಈ ವರ್ಷ ಡಿ. 1 ರಿಂದ 3 ರವರೆಗೂ ಉತ್ಸವ ಆಯೋಜಿಸಲಾಗಿದೆ.

ಶೃಂಗೇರಿಯ ಉಭಯ ಜಗದ್ಗುರುಗಳ ಆಶೀರ್ವಾದದೊಂದಿಗೆ ಹೊಸಗುಂದ ಉತ್ಸವವು ನಡೆಯಲಿದ್ದು, ಡಿಸೆಂಬರ್ 1 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಹಕಾರದಲ್ಲಿ ಗಿರಿಜನ ಉತ್ಸವ ಆಯೋಜಿಸಲಾಗಿದೆ. ನಾಡಿನ ಹೆಸರಾಂತ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ ನೀಡಲಿದ್ದಾರೆ.


ಜಾನಪದ ನೃತ್ಯ ಸ್ಪರ್ಧೆ

ಡಿಸೆಂಬರ್ 2  ರಂದು ಹೊಸಗುಂದ ಉತ್ಸವದ ಪ್ರಯುಕ್ತ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಸಂಜೆ 4 ಕ್ಕೆ ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಸಂಜೆ 7ಕ್ಕೆ ಯೋಗ ನೃತ್ಯ , ಪ್ರಸಿದ್ಧ ಗಾಯಕ ಹುಮಾಯೂನ್ ಹರ್ಲಾಪುರ ಅವರಿಂದ ಸಂಗೀತ, ನಂತರ ಕಲಾಸಿಂಚನ ಬಳಗದಿಂದ ಕೆರೆಗೆ ಹಾರ ನಾಟಕ ಪ್ರದರ್ಶನ ಇರಲಿದೆ.


ಜಲಯೋಗ
ಡಿಸೆಂಬರ್ 3 ರಂದು ಸಂಜೆ 5.30 ಕ್ಕೆ ವನಶ್ರೀ ಸಂಸ್ಥೆಯಿಂದ  ಜಲಯೋಗ,  6 ಕ್ಕೆ ತೇಜಸ್ವಿ ತಬಲಾ ತಂಡ, ಸಾಗರ ಇವರಿಂದ ವಾದ್ಯ ವೈವಿಧ್ಯ, ನಂತರ ವಿದ್ವಾನ್ ಪ್ರದ್ಯುಮ್ನ ಮತ್ತು ತಂಡದವ ರಿಂದ  ಶ್ರೀ ದುರ್ಗಾದೇವಿ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ  ಪ್ರಶಸ್ತಿ ಪುರಸ್ಕೃತ ಸಾಧಕರನ್ನು ಸನ್ಮಾನಿಸಲಾಗುವುದು.

ಲಕ್ಷದೀಪೋತ್ಸವಕ್ಕೆ ಚಾಲನೆ

ಡಿಸೆಂಬರ್ 3 ರಂದು ರಾತ್ರಿ 8 ಕ್ಕೆ ಲಕ್ಷದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಶೃಂಗೇರಿ ಪೀಠದ ಆಡಳಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿ.ಆರ್. ಗೌರಿಶಂಕರ್ ಅವರು ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ದೇವಾಲಯದ ಬಗ್ಗೆ 

ಕರ್ನಾಟಕ ಹಲವು ಪರಂಪಾರಿಕ  ತಾಣಗಳ  ತವರೊರು ,  ಅಡಿಕೆಯ ನಾಡು ಎಂದೇ ಕರೆಯುವ  ತೀರ್ಥಹಳ್ಳಿ ಅತ್ಯಂತ ಸುಂದರ  ತಾಲೂಕುಗಳಲ್ಲಿ ಒಂದು  ಅಲ್ಲಿಂದ   ಆನಂದಪುರಂ ಮಾರ್ಗದಲ್ಲಿ ಸಂಚರಿಸಿ  ಆನಂದಪುರಂ ನಿಂದ  8 ಕಿ.ಮೀ. ಸಾಗಿ, ಎಡಕ್ಕೆ ತಿರುಗಿ ಮತ್ತೆ 3 ಕಿ.ಮೀ. ಕ್ರಮಿಸಿದರೆ ಸಿಗುವ ಪುಟ್ಟ ಗ್ರಾಮ ಹೊಸಗುಂದ .

ಹೊಸಗುಂದ ಕೇವಲ ಪೂಜಾ ಸ್ಥಳವಲ್ಲ, ಅದು ಪ್ರಕೃತಿ ಪ್ರಿಯರಿಗೆ ಶಾಂತಿಯ ವಾಸಸ್ಥಾನ. ಅಲ್ಲಿನ 600 ಎಕರೆಗೂ ವಿಸ್ತಾರವಾದ ದಟ್ಟಾರಣ್ಯದಲ್ಲಿ ದೇವಾಲಯ ನಗರಿ ತೆರೆದುಕೊಂಡಿದೆ. 

ಶ್ರೀ ಉಮಾಮಹೇಶ್ವರ ದೇವಾಲಯವು ಶಿಲಾಮಯವಾಗಿದ್ದು ಇಲ್ಲಿನ ಫಲಕಗಳಲ್ಲಿ ಪೌರಾಣಿಕ ಪ್ರಸಂಗಗಳನ್ನು, ಸಾಮಾಜಿಕ ಬದುಕಿನ ಚಿತ್ರಣವನ್ನು ಕಟ್ಟಿಕೊಡುವುದರ ಇತರೆ ಶಿಲ್ಪಗಳು ಮನೋಹರವಾಗಿದೆ.

ದೇವಾಲಯ 21 ಮೀಟರ್ ಉದ್ದವಿದ್ದು 9 ಮೀಟರ್ ಅಗಲವಿದೆ. ದೇವಾಲಯದ  ಪೂರ್ವ ಮತ್ತು ದಕ್ಷಿಣ ಬದಿಗಳಲ್ಲಿ ಪ್ರವೇಶದ್ವಾರವಿದೆ. ಕಲ್ಯಾಣ ಚಾಲುಕ್ಯ ಕಾಲದ ಸ್ಥಂಭ ಮಾದರಿಗಳಲ್ಲಿ ಒಂದಾದ  ಪುಷ್ಪದ ಫಲಕಗಳಿವೆ.

ದೇವಾಲಯದ ವಾಸ್ತುಶಿಲ್ಪ, ಲಕ್ಷಣ ಮತ್ತು ಶೈಲಿಯನ್ನು ಅವಲೋಕನ ಮಾಡಿದಾಗ  12ನೇ ಶತಮಾನದ ಆದಿಭಾಗದಲ್ಲಿ ನಿರ್ಮಾಣ ಮಾಡಿದ ದೇವಾಲಯವೆಂದು ಹೇಳಬಹುದು.

ದೇವಾಲಯದ ಸುತ್ತಲೂ ಕೃಷ್ಣನ ಬಾಲಲೀಲೆಗಳು, ರತಿ ಮನ್ಮಥ , ಸಂನ್ಯಾಸಿ,  ದರ್ಪಣಸುಂದರಿ , ಮತ್ಸ್ಯ ಕನ್ಯೆ, ಬೇಟೆಗಾರರು, ಬೇಟೆಯ ಸನ್ನಿವೇಶ, ವಾದ್ಯಗಾರರು, ನೃತ್ಯ ಭಂಗಿಗಳು  ಮುಂತಾದ ಸಾಮಾಜಿಕ  ಜೀವನವನ್ನು ಬಿಂಬಿಸುವ ಶಿಲ್ಪಗಳನ್ನು ಕೆತ್ತಲಾಗಿದೆ.

ಸನ್ನಿಧಾನ

ಶ್ರೀ ಉಮಾ ಮಹೇಶ್ವರ ದೇವಾಲಯ,  ಶ್ರೀ ಪ್ರಸನ್ನ ನಾರಾಯಣ ದೇವಾಲಯ, ಶ್ರೀ ಕಂಚಿ ಕಾಳಮ್ಮ ದೇವಾಲಯ, ಶ್ರೀಲಕ್ಷ್ಮೀ ಗಣಪತಿ ದೇವಾಲಯ ಹಾಗೂ ಪರಿವಾರ ದೇವತೆಗಳಾದ  ಕದಂಬ ನಾಗರ ಮಾದರಿಯ ಚಿಕ್ಕ  ಗುಡಿಯಲ್ಲಿ ಶ್ರೀ ವೀರಭದ್ರ ದೇವರು ಮತ್ತು ಶ್ರೀ ಗಣೇಶ – ಸುಬ್ರಹ್ಮಣ್ಯ ಮತ್ತು ಮಹಿಷಮರ್ದಿನಿ ದೇವತೆಗಳ ಸಾನಿಧ್ಯವಿತ್ತು ಎಂದು ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದಿದ್ದು ಈಗ ದೇವಾಲಯಗಳು ನಿರ್ಮಾಣವಾಗಿದೆ.

ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ

Related Articles

ಪ್ರತಿಕ್ರಿಯೆ ನೀಡಿ

Latest Articles