ಬ್ಯಾಡಗಿ: ಜೀವನದ ಉನ್ನತಿಗೆ ಧರ್ಮವೇ ದಿಕ್ಸೂಚಿ. ಕ್ರಿಯಾತ್ಮಕ ಸಾಧನೆಯಿಂದ ಪ್ರಗತಿ ಸಾಧ್ಯ. ಸಂಸ್ಕಾರದಿಂದ ಮೌಲ್ಯಾಧಾರಿತ ಬದುಕು ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜರುಗಿದ 5ನೇ ವರ್ಷದ ಕಾರ್ತೀಕ ದೀಪೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾನವೀಯ ಸಂಬ0ಧಗಳು ಸಡಿಲಗೊಳ್ಳುತ್ತಿರುವ ಕಾರಣ ಹಲವಾರು ಸಮಸ್ಯೆಗಳು ತಲೆದೋರುತ್ತಿವೆ. ಕೌಟುಂಬಿಕ ಜೀವನದಲ್ಲಿ ಆಗಲಿ ಸಾರ್ವಜನಿಕ ರಂಗದಲ್ಲಾಗಲಿ ಮೊದಲಿನಷ್ಟು ಸಂಬ0ಧಗಳು ಗಟ್ಟಿಯಾಗಿ ಉಳಿದಿಲ್ಲ. ಇದರಿಂದಾಗಿ ಪರಸ್ಪರ ಸಂಘರ್ಷ, ಅತೃಪ್ತಿ ಮತ್ತು ಅಸಮಾಧಾನಗಳು ಹೆಚ್ಚುತ್ತಿವೆ. ಇದಕ್ಕೆಲ್ಲ ಕಾರಣ ಧಾರ್ಮಿಕ ಸಂಸ್ಕಾರದ ಕೊರತೆಯೆಂದರೆ ತಪ್ಪಾಗದು. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಸಂಸ್ಕಾರ ಸಂಸ್ಕೃತಿಯ ಪುನರುತ್ಥಾನಕ್ಕೆ ಬಹಳಷ್ಟು ಆದ್ಯತೆ ಕೊಟ್ಟಿದ್ದಾರೆ ಎಂದ ಅವರು ಶಿರಡಿ ಸಾಯಿಬಾಬಾ ಮಂದಿರ ನಿರ್ಮಾತೃ ಮಂಜಯ್ಯ ಶಾಸ್ತಿçಗಳು ಆಧ್ಯಾತ್ಮಿಕ ಸದ್ಭಾವನೆಗಳನ್ನು ಬೆಳೆಸಲು ಶ್ರಮಿಸಿದ್ದನ್ನು ನೆನಪಿಸಿ ಅವರಿಗೆ ಶಾಲು ಹೊದಿಸಿ ಫಲ ಪುಷ್ಪವಿತ್ತು ಶುಭ ಹಾರೈಸಿದರು.
ಸಮಾರಂಭ ಉದ್ಘಾಟಿಸಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ ಆಧುನಿಕತೆ ವೈಚಾರಿಕತೆಗೆ ಮಾರು ಹೋಗಿ ನಮ್ಮ ಸಂಸ್ಕೃತಿ ಮರೆಯಬಾರದು. ಸ್ವಧರ್ಮ ನಿಷ್ಠೆ-ಪರಧರ್ಮ ಸಹಿಷ್ಣುತೆಯಿಂದ ಎಲ್ಲರೂ ಬಾಳಬೇಕೆಂದರು. ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ ಮಾತನಾಡಿ ವೀರಶೈವ ಧರ್ಮ ಸಕಲರಿಗೂ ಹಿತವನ್ನೆ ಬಯಸಿದೆ ಎಂದರು. ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ ಸಾರ್ವತ್ರಿಕ ಬದುಕು ಅಸ್ತವ್ಯಸ್ತಗೊಳ್ಳುತ್ತಿದೆ. ಮಕ್ಕಳು ಟಿ.ವಿ. ಮತ್ತು ಮೊಬೈಲ್ ಗೀಳಿಗೆ ಬಿದ್ದು ದಾರಿ ತಪ್ಪುತ್ತಿದ್ದಾರೆ. ಹಾಗೆ ಆಗಬಾರದೆಂದು ಬಯಸಿದರೆ ಮಕ್ಕಳಲ್ಲಿ ಧರ್ಮಾಸಕ್ತಿ ಬೆಳೆಸಬೇಕೆಂದರು. ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ ಭಗವಂತನ ಮತ್ತು ಗುರುವಿನ ಆಶೀರ್ವಾದ ಇಲ್ಲದೇ ಬದುಕಲು ಸಾಧ್ಯವಿಲ್ಲ. ದೇವರು ಕೊಟ್ಟ ಅಮೂಲ್ಯ ಕೊಡುಗೆ ಈ ಮಾನವ ಜೀವನ. ಬದುಕು ಬಲಗೊಳ್ಳಲು ಗುರುವಿನ ಮಾರ್ಗದರ್ಶನ ಇರಬೇಕೆಂದರು.
ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಕುಮಾರಪಟ್ಟಣ ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮಿಗಳು ನುಡಿ ನಮನ ಸಲ್ಲಿಸಿದರು. ಪುರಸಭಾ ಅಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಮಾಜಿ ಪುರಸಭಾ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಬಸವಣ್ಣೆಪ್ಪ ಛತ್ರದ, ವಿನಯಕುಮಾರ ಹಿರೇಮಠ, ಕೆ.ರವೀಂದ್ರ ಮೊದಲ್ಗೊಂಡು ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ವೃಷಭ ರೂಪಿ ಮೂಕಪ್ಪಸ್ವಾಮಿಗಳು ಸಮಾರಂಭಕ್ಕೆ ಆಗಮಿಸಿ ಆಶೀರ್ವಾದ ಪಡೆದದ್ದು ವಿಶೇಷವಾಗಿತ್ತು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.