*ಶ್ರೀನಿವಾಸ ಮೂರ್ತಿ ಎನ್ ಎಸ್
ನಾಡಿನಲ್ಲಿ ಶಕ್ತಿ ದೇವತೆಯ ಪೂಜೆ ಅನಾದಿ ಕಾಲದಿಂದಲೂ ನಮ್ಮಲ್ಲಿ ನಡೆದು ಬಂದಿದೆ. ಹಲವು ಶಕ್ತಿ ದೇವತೆಯ ದೇವಾಲಯಗಳು ನಮ್ಮಲ್ಲಿ ಇದ್ದರೂ ಅಪರೂಪದ ಸುಂದರವಾದ ಪುರಾತನ ಬನಶಂಕರಿಯ ಶಿಲ್ಪವೊಂದು ಶಿವಮೊಗ್ಗ ಜಿಲ್ಲೆಯಲ್ಲಿಯೇ ಇದ್ದರೂ ಪ್ರಚಾರ ಕೊರತೆಯಿಂದ ಜನರಿಂದ ದೂರ ಉಳಿದಿದೆ. ಇಂತಹ ಅಪರೂಪದ ಶಿಲ್ಪ ಇರುವುದು ಪ್ರಸಿದ್ದ ಬಳ್ಳಿಗಾವಿಯ ಸಮೀಪದ ಬಂದಳಿಕೆಯಲ್ಲಿ.
ಇತಿಹಾಸ ಪುಟದಲ್ಲಿ ಅತ್ಯಂತ ವೈಭವದಿಂದ ಮೆರೆದಿದ್ದ ಬಂದಳಿಕೆ ಇಂದು ಹಾಳು ಹಂಪೆಯಂತಾಗಿದೆ. ನಾಗರಕಂಡ – 70 ರ ರಾಜದಾನಿಯಾಗಿ ಮೆರೆದಿದ್ದ ಇದು ಶಿಲಾ ಶಾಸನಗಳಲ್ಲಿ ಬನ್ದನಿಕೆ – ವನ್ದನಿಕೆ – ಬಂದನಿಕ್ಕೆ – ಬಂದಣಕ್ಕೆ – ಬಂದಣಕ್ಕೆ ಎಂದೇ ಉಲ್ಲೆಖಗೊಂಡಿದೆ. ಇನ್ನು ಗ್ರಂಥಗಳಲ್ಲಿ ಬಾಂಧವಪುರ – ಬಾಂಧವನಗರ ಎಂದೇ ಬಣ್ಣಿಸಲಾಗಿದೆ. ಇಲ್ಲಿನ 902 ರ ಶಾಸನದಲ್ಲಿ ಶಾಂತಿನಾಥ ಬಸದಿಯ ಜಿನಮುನಿಯ ಉಲ್ಲೇಖವಿದ್ದರೆ ಕದಂಬರು – ಚಾಲುಕ್ಯರು – ಕಳಚೂರಿ – ಹೊಯ್ಸಳ ಹಾಗು ಯಾದವ ಅರಸರ ಹಲವು ಶಾಸನಗಳಿದ್ದು ಇದರೆ ಭವ್ಯ ಪರಂಪರೆಗೆ ಸಾಕ್ಷಿ. ಆಗಿನ ಸಮಯದಲ್ಲಿ ಪ್ರಸಿದ್ಧ ವ್ಯಾಪಾರಿ ಕೇಂದ್ರವಾಗಿ ಇದು ಬೆಳೆದಿತ್ತು.
ಇಲ್ಲಿನ ದೇವಾಲಯಗಳಲ್ಲಿ ಪ್ರಮುಖವಾದ ಶಕ್ತಿ ದೇವತೆ ಬನಶಂಕರಿ. ಮೂಲ ದೇವಾಲಯ ಸಂಪೂರ್ಣವಾಗಿ ನಾಶವಾಗಿ ಅಧುನಿಕ ಕಟ್ಟಡ ನಿರ್ಮಾಣವಾಗಿದ್ದರೂ ಇಲ್ಲಿನ ಶಿಲ್ಪ ಮಾತ್ರ ಪುರಾತನ ಕೊಂಡಿಯಂತೆ ಉಳಿದುಕೊಂಡಿದೆ. ಇನ್ನು 1348 ರಲ್ಲಿ ಚಂಚಲ ಒಡೆಯ ಈ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖ ನೋಡಬಹುದು. ಹೊಸದಾಗಿ ನಿರ್ಮಾಣಗೊಂಡ ದೇವಾಲಯದಲ್ಲಿ ಸುಂದರವಾದ ಪುರಾತನ ಬನಶಂಕರಿಯ ಶಿಲ್ಪವಿದ್ದು ಮುಖದ ಮೇಲಿನ ಮೀಸೆ ಹಾಗು ಕೈಗಳಲ್ಲಿನ ಬಳೆಗಳು ಬನಶಂಕರಿ ಅರಾಧನೆಗೆ ಹೊಸ ಕಲ್ಪನೆ ನೀಡುತ್ತದೆ. ಇನ್ನು ಬನಶಂಕರಿಯೇ ಆದಿ ಶಕ್ತಿಯಾದ ಕಾರಣ ಗಂಡು ಹಾಗು ಹೆಣ್ಣು ಎರಡರ ಸಂಕೇತದಂತೆ ಎಂಬ ನಂಬಿಕೆ ಇದೆ. ದೇವಿಯ ಶಿಲ್ಪದಲ್ಲಿನ ಸರ್ಪದ ಕೆತ್ತೆನೆ ಜಾನಪದ ನಂಬಿಕೆಯ ಸಂಕೇತದಂತೆ ಮೂಡಿ ಬಂದಿದೆ. ಇನ್ನು ಸ್ಥಳೀಯವಾಗಿ ಬಂದಳಿಗೆ ಅಮ್ಮ ಎಂದೇ ಕರೆಯಲಾಗುತ್ತದೆ.
ಇನ್ನು ಇಲ್ಲಿನ ಸ್ಥಳಿಯ ಕಥೆಯಂತೆ ಪಾರ್ವತಿಯ ಅಂಶವಾಗಿ ಜನಿಸಿದ ಮಾಯದೇವಿ ಅಲ್ಲಮ ಪ್ರಭುವಿನಿಂದ ತಿರಸ್ಕೃತಳಾಗಿ ನಂತರ ಪರಿವರ್ತಿತಳಾಗಿ ಇಲ್ಲಿ ಬಂದು ನೆಲೆಸಿದಳು ಹಾಗು ಇಲ್ಲಿನ ಬನಶಂಕರಿಯೇ ಮಾಯದೇವಿ ಎಂಬ ನಂಬಿಕೆ ಇದೆ. ಇಲ್ಲಿನ ಭಕ್ತರ ಆಹಾರ ಸಮಸ್ಯೆಯನ್ನ ದೂರ ಮಾಡಿದ ದೇವತೆ ಎಂಬ ನಂಬಿಕೆ ಇದೆ. ದೇವಾಲಯದ ಸಮೀಪದಲ್ಲಿ ಮೂಲ ದೇವಾಲಯದ ಅವಶೇಷಗಳು ಇದ್ದು ಇಲ್ಲಿನ ಉಳಿದ ದೇವಾಲಯಗಳ ನೆನಪು ತರುತ್ತದೆ.
ಇನ್ನು ಇಲ್ಲಿನ ದೇವಾಲಯದ ಸಮೀಪದಲ್ಲಿ ಹಲವು ಅಪುರೂಪದ ಮಹಾಸತಿಯ ಕಲ್ಲುಗಳು ಇದ್ದು ಅವುಗಳಲ್ಲಿ ಎರಡು ಕೈಗಳನ್ನು ಅಭಯ ಮುದ್ರೆಯಲ್ಲಿ ಎತ್ತಿರುವ ಶಿಲ್ಪ ಗಮನ ಸೆಳೆಯುತ್ತದೆ.
ಸ್ಥಳಿಯವಾಗಿ ಇಲ್ಲಿನ ಸುತ್ತಮುತ್ತಲಿನ ಜನರಿಂದ ಪೂಜೆಗೊಳ್ಳುತ್ತಿರುವ ಬನಶಂಕರಿ ಅಧುನಿಕ ಹಾಗು ಪುರಾತನಕೊಂಡಿಯಂತೆ ಇದ್ದು ದಸರೆಯ ಸಮಯದಲ್ಲಿ ಇಲ್ಲಿ ವಿಷೇಶವಾದ ಪೂಜೆ ನಡೆಯಲಿದ್ದು ಪ್ರತಿ ಶುಕ್ರವಾರ ಹಾಗು ಮಂಗಳವಾರ ಇಲ್ಲಿ ವಿಷೇಶ ಪೂಜೆಗಳು ನಡೆಯಲಿವೆ.
ತಲುಪುವ ಬಗ್ಗೆ:
ಶಿಕಾರಿಪುರ – ಶಿರಾಳಕೊಪ್ಪದಿಂದ ಆನವಟ್ಟಿ ಮಾರ್ಗದಲ್ಲಿ ಬಳ್ಳಿಗಾವಿಯ ದೇವಾಲಯಗಳನ್ನು ನೋಡಿಕೊಂಡು ತಾಳಗುಂದ ಮಾರ್ಗವಾಗಿ ತಾಳಗುಂದರ ಶಾಲೆಯ ಸಮೀಪ ಎಡಕ್ಕೆ ತಿರುಗಿ ತಾಳಗುಂದದ ಮೂಲಕ ಬಂದಳಿಕೆ ತಲುಪಬಹುದು. ಹಾನಗಲ ಮಾರ್ಗವಾಗಿ ಬರುವವರು ತೊಗರ್ಸಿಯ ಮೂಲಕವೂ ಇಲ್ಲಿಗೆ ಬರಬಹುದು.