ಮುನವಳ್ಳಿಃ ಪಟ್ಟಣದ ಸುಪ್ರಸಿದ್ಧ ಧಾರ್ಮಿಕ ಕೇಂದ್ರ ಸೋಮಶೇಖರ ಮಠದಲ್ಲಿ ಡಿಸೆಂಬರ್ 7 ರಂದು ಸಂಜೆ 6 ಗಂಟೆಗೆ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮುನವಳ್ಳಿಯ ಅಕ್ಕನ ಬಳಗ ಹಾಗೂ ಅನ್ನದಾನೇಶ್ವರ ಮಹಿಳಾ ಬಳಗ ಮತ್ತು ಸಹಜ ಸ್ಥಿತಿ ಯೋಗ ಸತ್ಸಂಗ ಬಳಗ ಶ್ರೀ ಮಠದ ಶಿಕ್ಷಣ ಸಂಸ್ಥೆಗಳ ಎಲ್ಲ ಗುರುವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆ ನಂತರ ಭಜನೆ ಪೂಜ್ಯರಿಂದ ಆಶೀರ್ವಚನ ಜರಗುವ ಮೂಲಕ ಕಾರ್ತಿಕೋತ್ಸವ ಜರಗುವುದು ಎಂದು ಶ್ರೀ ಮಠದ ಸದ್ಬಕ್ತರಾದ ಶಿಕ್ಷಕ ಬಸನಗೌಡ ಹುಲಿಗೊಪ್ಪ ತಿಳಿಸಿದ್ದಾರೆ.
ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮೀಜಿಯವರ ಬಗ್ಗೆ
ಸಮಾಜಮುಖಿ-ಸರ್ವತೋಮುಖಿ ಕಾರ್ಯಗಳು ಜನಮಾನಸದಲ್ಲಿ ಯಶಸ್ವಿ ರೀತಿಯಲ್ಲಿ ಒಡಮೂಡಿ ಕಾರ್ಯಗತವಾಗುವ ಜೊತೆಗೆ ಎಲ್ಲ ಜನಾಂಗದವರೂ ಈ ಕಾರ್ಯದಲ್ಲಿ ಕೈಗೂಡಿ “ಬಹುಜನ ಸಿಖಾಯ-ಬಹು ಜನ ಹಿತಾಯ” ಎಂಬಂತೆ ಸಾಗಿರುವುದು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ “ಇವ ನಮ್ಮವ ಇವ ನಮ್ಮವ” ಎಂದು ಬಗೆದು ನಾಡ ಕಟ್ಟುವ ಧರ್ಮ ರಕ್ಷಿಸುವ ಕಾರ್ಯದಲ್ಲಿ ಈ ಚಿಕ್ಕ ವಯಸ್ಸಿನ ಶ್ರೀಗಳವರು ಹಲವು ಮಾನ ಸನ್ಮಾನಗಳಿಗೆ ಭಾಜನರಾಗಿರುವರು.
ಪೂಜ್ಯರು ಮುನವಳ್ಳಿಯಲ್ಲಿ ಪಿ.ಯು. ಕಾಲೇಜು (ಕಲೆ ಮತ್ತು ವಾಣಿಜ್ಯ ವಿಭಾಗ) ಪದವಿ ಮಹಾವಿದ್ಯಾಲಯ, ಯೋಗ ಕೇಂದ್ರ, ಬಂಡಾರಹಳ್ಳಿಯಲ್ಲಿ ಪ್ರಾಥಮಿಕ ಶಾಲೆಯನ್ನು ತೆರೆಯುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಕೂಡ ಮಾಡುತ್ತಿರುವರು.
ಕೊರೋನಾ ಸಂದರ್ಭದಲ್ಲಿ ಉಚಿತ ಆರೋಗ್ಯ ಕಿಟ್ ಗಳನ್ನು ಸ್ವತಃ ಶ್ರೀಗಳೇ ವಿತರಿಸಿದ್ದಾರೆ. ಮೊದಲು ಕೊರೋನಾ ಲಸಿಕೆ ಪಡೆದು ಇತರರಿಗೆ ಮಾದರಿಯಾಗಿರುವರು. ಮುನವಳ್ಳಿಯ ಮಲಪ್ರಭಾ ನದಿಯ ಮಹಾಪೂರ ಬಂದಾಗ ನೆರೆ ಸಂತೃಸ್ತರಿಗೆ ಮಠದಲ್ಲಿ ಮೊದಲು ಗಂಜಿ ಕೇಂದ್ರ ಆರಂಭಿಸಿ ಆಶ್ರಯ ಕಲ್ಪಿಸಿದ್ದು ಪಾತ್ರೆ ಬಟ್ಟೆ ಹಾಸಿಗೆ ಹೊದಿಕೆ, ಆಹಾರ ಧಾನ್ಯ ಒದಗಿಸುವ ಮೂಲಕ ಮಾನವೀಯತೆ ಮೆರೆದವರು.
ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರದಿಂದ ತರಬೇತುದಾರ ಶ್ರೀಶೈಲ್ ಗೋಪಶೆಟ್ಟಿ ಅವರಿಂದ ಉಚಿತ ಆನ್ಲೈನ್ ಯೋಗ ತರಬೇತಿ, ಕಾರ್ತಿಕ ಬೆಲ್ಲದ ಅವರಿಂದ ಮಹಿಳೆಯರಿಗೆ ಉಚಿತ ಯೋಗ ಸಪ್ತಾಹ ಇತ್ತೀಚೆಗೆ ಜರುಗಿಸಲಾಗಿದೆ. ಹೀಗೆ ಬಹುಮುಖ ಸೇವೆಗಳನ್ನು ಶ್ರೀ ಮಠದ ಮೂಲಕ ಕೈಗೊಂಡು ಮಾದರಿ ಎನಿಸಿದ್ದಾರೆ ಶ್ರೀ ಮುರುಘೇಂದ್ರ ಸ್ವಾಮೀಜಿಯವರು.
ವರದಿ : ವೈ.ಬಿ.ಕಡಕೋಳ(ಶಿಕ್ಷಕರು)