ಸಹಿಸುವ ಗುಣದಿಂದ ಕಷ್ಟವನ್ನುಎದುರಿಸುವ ಶಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಹರಪನಹಳ್ಳಿ: ಎಲ್ಲವನ್ನು ಸಹಿಸುವ ಗುಣ ಯಾರಲ್ಲಿರುವುದೋ ಅವರಲ್ಲಿ ಎಲ್ಲವನ್ನು ಎದುರಿಸುವ ಶಕ್ತಿ ಇರುತ್ತದೆ. ಸಂಸ್ಕಾರವ0ತ ಸದ್ಗುಣಿಯಾಗಿ ಬದುಕಿ ಬಾಳಲು ಗುರು ಮಾರ್ಗದರ್ಶನ ಅವಶ್ಯಕ. ಸೂರ್ಯನಿಂದ ಕತ್ತಲೆ ಗುರುವಿನಿಂದ ಅಜ್ಞಾನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶ್ರೀ ತೆಗ್ಗಿನಮಠ ಸಂಸ್ಥಾನದ ಆವರಣದಲ್ಲಿ ಡಿ.16 ರಂದು ಜರುಗಿದ ಲಿಂ.ಚ0ದ್ರಮೌಳೀಶ್ವರ ಶ್ರೀಗಳವರ 7ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ವರಸದ್ಯೋಜಾತ ಶ್ರೀಗಳವರ ಪಟ್ಟಾಧಿಕಾರದ 6ನೇ ವರ್ಷದ ವರ್ಧಂತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಶ್ರೇಷ್ಠ. ತುಳಿದು ಬದುಕಿದವರು ಸರ್ವ ನಾಶಗೊಳ್ಳುವರು. ತಿಳಿದು ಬದುಕಿದವರು ಮಹಾತ್ಮರಾಗಿ ಜಗವ ಬೆಳಗುವರು. ತಂದೆಯಿ0ದ ಪೆಟ್ಟು ತಿಂದ ಮಗ, ಗುರುವಿನಿಂದ ಶಿಕ್ಷೆಗೊಳಗಾದ ಶಿಷ್ಯ, ಸುತ್ತಿಗೆಯ ಏಟು ತಿಂದ ಚಿನ್ನ ಲೋಕದಲ್ಲಿ ಬೆಳಗುವುದು ನಿಶ್ಚಿತ. ವೀರಶೈವ ಧರ್ಮದಲ್ಲಿ ಅಷ್ಟೇ ಅಲ್ಲ ಎಲ್ಲ ಧರ್ಮಗಳಲ್ಲಿ ಸಹ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಲಿಂ.ಚ0ದ್ರಮೌಳೀಶ್ವರ ಶ್ರೀಗಳು ಧರ್ಮ ಮುಖಿ ಮತ್ತು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಿದ್ದನ್ನು ಮರೆಲಾಗದು. ಶೈಕ್ಷಣಿಕ ರಂಗದಲ್ಲಿ ಅದ್ಭುತ ಸತ್ಕ್ರಾಂತಿಗೈದ ಶಿವಾಚಾರ್ಯ ರತ್ನ ಅವರಾಗಿದ್ದರು. ಅವರ ಪುಣ್ಯ ಸ್ಮರಣೆ ಬದುಕಿ ಬಾಳುವ ಜನ ಸಮುದಾಯಕ್ಕೆ ದಾರಿದೀಪವಾಗಲಿ. ಇಂದಿನ ವರಸದ್ಯೋಜಾತ ಶ್ರೀಗಳವರು ಲಿಂ.ಶ್ರೀಗಳವರ ಆದರ್ಶ ದಾರಿಯಲ್ಲಿ ಮುನ್ನಡೆದು ಮಠದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶ್ರೀಗಳವರು ಆರು ವರುಷಗಳ ಅವಧಿಯಲ್ಲಿ ಮಾನವೀಯ ಮೌಲ್ಯ, ಧರ್ಮ ಪ್ರಸಾರ ಮತ್ತು ಭಕ್ತರಿಗೆ ಕೊಟ್ಟ ಮಾರ್ಗದರ್ಶನ ಅವರ ಕ್ರಿಯಾಶೀಲ ಬದುಕಿಗೆ ಸಾಕ್ಷಿಯಾಗಿದೆ. ಪಟ್ಟಾಧಿಕಾರದ ವರ್ಧಂತಿ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ರೇಶ್ಮೆ ಮಡಿ ಹೊದಿಸಿ ಫಲ ಪುಷ್ಪವಿತ್ತು ಶುಭ ಹಾರೈಸಿದರು.


ಬಲವಂತ ಮತಾಂತರ ಸಲ್ಲದು
ಇತ್ತೀಚಿನ ದಿನಗಳಲ್ಲಿ ಮತಾಂತರದ ಪಿಡುಗು ಹೆಚ್ಚುತ್ತಿದೆ. ಆರ್ಥಿಕವಾಗಿ ದುರ್ಬಲಗೊಂಡ ಜನತೆಗೆ ಆಮಿಷ ತೋರಿಸಿ ಬಲವಂತವಾಗಿ ಮತಾಂತರ ಮಾಡುತ್ತಿರುವುದು ಪತ್ರಿಕೆಗಳಿಂದ ಮತ್ತು ಮಾಧ್ಯಮಗಳಿಂದ ತಿಳಿದು ಬರುತ್ತದೆ. ಮಂಗಳೂರು ಮತ್ತು ಹೊಸದುರ್ಗದಲ್ಲಿ ನಡೆದ ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ಸಾಮಾಜಿಕ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿರುವವರಿಗೆ ತಕ್ಕ ಶಿಕ್ಷೆಯಾಗಬೇಕು. ಮತಾಂತರ ನಿಷೇಧ ಕಾನೂನು ಜಾರಿಗೊಳಿಸಿ ತಡೆಯಲು ಪಕ್ಷಭೇದ ಮರೆತು ಎಲ್ಲ ರಾಜಕಾರಣಿಗಳು ಪರಸ್ಪರ ಸಮಾಲೋಚಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು. ಸ್ವಧರ್ಮದಲ್ಲಿ ಬದುಕಿ ಬಾಳು. ಪರಧರ್ಮದ ಬಗೆಗೆ ಗೌರವ ಭಾವನೆ ಎಲ್ಲರಲ್ಲೂ ಬೆಳೆದು ಬರಲು ಶ್ರಮಿಸಬೇಕೆಂದರು.

ಪ್ರಶಸ್ತಿ ಪ್ರದಾನ


ಮರಿಯಮ್ಮನಹಳ್ಳಿ ಬಿ.ಮಂಜಮ್ಮ ಜೋಗತಿ ಅವರಿಗೆ “ಜಾನಪದ ಕಲಾಸಿರಿ”, ಹೊಸಪೇಟೆಯ ಹೆಚ್.ವಿ.ಶರಣಸ್ವಾಮಿ ಅವರಿಗೆ “ವೀರಶೈವ ಸೇವಾ ಸಿರಿ”, ಬೆಂಗಳೂರಿನ ಡಬ್ಲುö್ಯ.ಎಂ. ಶಿವಕುಮಾರ್ ಅವರಿಗೆ “ಶಕ್ತಿ ಸೇವಾ ಸಿರಿ”, ತಿರುಪತಿ ಡಾ. ಟಿ.ಎಂ.ನಾಗೇಶ್ ಅವರಿಗೆ “ಉದಯೋನ್ಮುಖ ವೈದ್ಯ ಸಿರಿ”, ಸಿಂಗಟಾಲೂರಿನ ಕೆ.ವಿ.ಹಂಚಿನಾಳ ಅವರಿಗೆ “ಸಮಾಜ ಸೇವಾ ಸಿರಿ” ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.


ಮಾನಿಹಳ್ಳಿ ಮಳೆಯೋಗೀಶ್ವರ ಶ್ರೀಗಳು, ನೆಗಳೂರು ಗುರುಶಾಂತೇಶ್ವರ ಶ್ರೀಗಳು, ಕೂಡ್ಲಿಗಿ ಪ್ರಶಾಂತ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಜೆ.ಡಿ.ಎಸ್.ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮಠದ ಆಡಳಿತಾಧಿಕಾರಿ ಟಿ.ಎಂ.ಚ0ದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಸಪೇಟೆಯ ಕೆ.ಶಿವಶಂಕರ್ ಮತ್ತು ಮಲೆಬೆನ್ನೂರು ವಾಗೀಶಸ್ವಾಮಿ ಬಿ.ಎಂ. ಅವರಿಗೆ ವಿಶೇಷ ಗುರು ರಕ್ಷೆಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ನೇತೃತ್ವ ವಹಿಸಿದ ಮಠಾಧ್ಯಕ್ಷ ವರಸದ್ಯೋಜಾತ ಶ್ರೀಗಳು ಮಾತನಾಡಿ ವೀರಶೈವ ಧರ್ಮ ಸಂಸ್ಕೃತಿ ಬೆಳೆಸುವ, ಭಕ್ತರಿಗೆ ಸಂಸ್ಕಾರ ಕೊಡುವ, ಸಾಮಾಜಿಕ ಕಾರ್ಯಗಳನ್ನು ಮಾಡುವುದೇ ನಮ್ಮ ಗುರಿಯಾಗಿದೆ ಎಂದರು.

ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರ, ಶಿವದೀಕ್ಷಾ ಸಂಸ್ಕಾರ, ತೆಗ್ಗಿನಮಠ ಪವಿತ್ರ ಬಂಧನ ವೆಬ್‌ಸೈಟ ಅನಾವರಣ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಗಳು ಜರುಗಿದ್ದೊಂದು ವಿಶೇಷ. ಹರಪನಹಳ್ಳಿ ಕುಮಾರಿ ಮೈತ್ರಿ ಮತ್ತು ಸಂಪ್ರೀತಿ ಇವರಿಂದ ವೇದಘೋಷ ಜರುಗಿತು. ಎಂ.ಪಿ.ಎಂ.ಶಾಂತವೀರಯ್ಯ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles