ಮೈಸೂರು: ಜ್ಯೋತಿಷ್ಯ ಅಧ್ಯಯನ ಶಾಸ್ತ್ರವನ್ನು ಉದ್ಯಮವನ್ನಾಗಿ ಬಳಸಿಕೊಳ್ಳುವ ಬದಲು ಸಮಾಜದ ಅಭಿವೃದ್ಧಿಗೆ ಬಳಸಿ ಎಂದು ಕರ್ನಾಟಕ ಸಂಸ್ಕೃತ ವಿವಿ ಕುಲಸಚಿವ ಪ್ರೊ.ವಿ.ಗಿರೀಶ್ ಚಂದ್ರ ಹೇಳಿದರು.
ಶ್ರೀರಂಗಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯೋಗ ಅಧ್ಯಯನ ಕೇಂದ್ರದ ಪ್ರಥಮ ಮತ್ತು ಸಂಸ್ಕೃತ, ಜ್ಯೋತಿಷ್ಯ, ವೇದ, ಆಗಮ ಗುರುಕುಲದ 4 ನೇ ಘಟಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
19 ವಿದ್ಯಾರ್ಥಿಗಳು ಯೋಗದಲ್ಲಿ, 28 ಜನರು ಜ್ಯೋತಿಷ್ಯದಲ್ಲಿ, ಒಬ್ಬರು ವಾಸ್ತು ವಿಷಯದಲ್ಲಿ ಘಟಿಕೋತ್ಸವ ಪ್ರಮಾಣ ಪತ್ರ ಪಡೆಯುತ್ತಿರುವುದು ಶ್ಲಾಘನೀಯ ಎಂದ ಅವರು, ಭಾರತೀಯ ಉಡುಗೆಯಲ್ಲಿ, ಗುರುಕುಲ ಪದ್ಧತಿಯಲ್ಲಿ ಪ್ರಮಾಣಪತ್ರ ಸ್ವೀಕಾರ ಮಾಡಿರುವುದು ಸಂಸ್ಕೃತಿ ಪ್ರತೀಕವಾಗಿದೆ ಎಂದರು.
ಕೇವಲ ಪ್ರಮಾಣ ಪತ್ರ ಪಡೆದ ಮಾತ್ರಕ್ಕೆ ಯಾವುದೇ ವಿದ್ಯೆಗಳು ಸಿದ್ಧಿಸಲಾರವು. ವಿಷಯದ ಒಳಹೊಕ್ಕು
ಆತ್ಮವಿಶ್ವಾಸದಿಂದ ಅಧ್ಯಯನ ಮಾಡಬೇಕು. ಯಾವ ಕಾರಣಕ್ಕೂ ಸಾಧಕನಿಗೆ ಕೀಳರಿಮೆ ಹಾಗೂ ಜಿಗುಪ್ಸೆ ಅಂಟಬಾರದು. ಉತ್ಸುಕತೆ ಇದ್ದವರಿಗೆ ಮಾತ್ರ ವಿದ್ಯೆ ಒಲಿಯುತ್ತದೆ ಎಂದರು.
ಪ್ರಾಚೀನ ವಿದ್ಯೆಗಳಿಗೆ ಗೌರವಿಸಿ
ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ ಮಾತನಾಡಿ, ನಮ್ಮ ದೇಶದ ಪ್ರಾಚೀನ ವಿದ್ಯೆಗಳಿಗೆ ಗೌರವಿಸುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದರು.
ಪ್ರಪಂಚದಲ್ಲಿಯೇ ಶ್ರೇಷ್ಠ ವಿದ್ಯೆಗಳಾದ ಆಗಮ, ವೇದ, ಜ್ಯೋತಿಷ್ಯ ಮತ್ತು ಯೋಗವನ್ನು ಕಲಿಯಲು ಉತ್ತಮವಾದ ಮನೋಸ್ಥಿತಿ ಬೇಕು. ಇವೆಲ್ಲವೂ ವೈಜ್ಞಾನಿಕ ನೆಲೆಗಟ್ಟಯ ಹೊಂದಿರುವ ಶಾಸ್ತçಗಳು. ಚಂದ್ರವನ ಆಶ್ರಮ ಇವೆಲ್ಲವಕ್ಕೂ ವೇದಿಕೆ ಕಲ್ಪಿಸಿರುವುದು ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿಗಳ ದೂರಗಾಮಿ ಚಿಂತನೆಯ ಪ್ರತಿಫಲ ಎಂದರು.
ಅಧ್ಯಕ್ಷತೆ ವಹಿಸಿದ್ದ ತ್ರಿನೇತ್ರ ಯೋಗ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ನಾಗೇಶ್ ಮಾತನಾಡಿ, ಭಾರತದ ಅತ್ಯಮೂಲ್ಯ ವಿದ್ಯೆಗಳನ್ನು ಅಧಿಕೃತ ಮಾನ್ಯತಾ ಪತ್ರದೊಂದಿಗೆ ಪಡೆಯುವುದು ಒಂದು ಸುಯೋಗ ಎಂದರು.
ಸಾನ್ನಿಧ್ಯ ವಹಿಸಿದ್ದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿ,
ಜ್ಯೋತಿಷ್ಯ ಎಂಬುದು ಸತ್ಯಕ್ಕೆ ಸಮೀಪವಾದ ಶಾಸ್ತ್ರ. ಇದನ್ನು ಪರಿಶುದ್ದ ಭಾವನೆಯಿಂದ ಕಲಿತು, ಗ್ರಹಗಳ ಚಲನೆಯನ್ನು ಅಂತರ0ಗ ಮತ್ತು ಬಹಿರಂಗ ಶುದ್ಧಿಯೊಂದಿಗೆ ದೈವ ಮತ್ತು ಗುರುಗಳ ಪ್ರೇರಣೆಯಿಂದ ಹೇಳಿದಾಗ ಸಿದ್ಧಿಸುತ್ತದೆ. ಆರೋಗ್ಯವಂತ ಸಮಾಜ ನಿರ್ಮಿಸಲು ಇದನ್ನು ಸಾಧನವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಕರ್ನಾಟಕ ಸಂಸ್ಕೃತ ವಿವಿ ಉಪ ನಿರ್ದೇಶಕ ಡಾ.ಎನ್.ಋಷಿದೇವ ಭಾರ್ಗವ, ಸಹಾಯಕ ಪ್ರಾಧ್ಯಾಪಕ ಡಾ. ಜಯರೇವಣ್ಣ, ಮಾಯಕಾರ ಗುರುಕುಲದ ಡಾ.ಮೂಗೂರು ಮಧು ದೀಕ್ಷಿತ್, ವಿದ್ಯಾವರ್ಧಕ ಸಂಸ್ಥೆಯ ಶ್ರೀಶೈಲ ರಾಮಣ್ಣ, ಕೆಎಂಎಫ್ ಸಹಾಯಕ ನಿರ್ದೆಶಕ ನವೀನ್ ಇತರರು ಹಾಜರಿದ್ದರು.