*ಶ್ರೀನಿವಾಸ ಮೂರ್ತಿ ಎನ್ ಎಸ್
ನಾಡಿನ ದೇವಾಲಯಗಳಲ್ಲಿ ಹಲವು ಅರಸರು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಹಲವು ದೇವಾಲಯಗಳು ಮೂಲ ಸ್ವರೂಪದಲ್ಲಿ ಉಳಿದುಕೊಂಡಿದ್ದರೆ, ಕೆಲವು ದೇವಾಲಯಗಳು ನಂತರ ಕಾಲದಲ್ಲಿ ನವೀಕರಣ ಅಥವಾ ವಿಸ್ತರಣೆಗೊಂಡಿದೆ. ಇನ್ನು ಕೆಲವು ದೇವಾಲಯಗಳು ಸಂಪೂರ್ಣ ಅಧುನಿಕ ಸ್ವರೂಪ ಪಡೆದಿವೆ. ಆದರೆ ಹೊಯ್ಸಳರ ಮೂರ್ತಿಗೆ ವಿಜಯ ನಗರ ಕಾಲದಲ್ಲಿ ದೇವಾಲಯ ನಿರ್ಮಾಣವಾದ ಸ್ಥಳವೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮುದುಗೆರೆಯಲ್ಲಿದೆ.
ಇತಿಹಾಸ ಪುಟದಲ್ಲಿ ಮುದುಗೆರೆ ಪ್ರಮುಖ ಪಟ್ಟಣವಾಗಿತ್ತು. ಹೊಯ್ಸಳರ ಕಾಲದಲ್ಲಿ ನಂತರ ವಿಜಯನಗರ ಹಾಗು ಅವತಿ ಪ್ರಭುಗಳ ಕಾಲದಲ್ಲಿ ಈ ಗ್ರಾಮ ಅವರ ಅಳ್ವಿಕೆಗೆ ಒಳಪಟ್ಟಿತ್ತು. ಇನ್ನು 16 ನೇ ಶತಮಾನದ ಶಾಸನದಲ್ಲಿ ಈ ದೇವಾಲಯಕ್ಕೆ ಸದಾಶಿವರಾಯನ ಕಾಲದಲ್ಲಿ ಅವತಿಯ ನಾಡಪ್ರಭು ಸೊಣ್ಣಪ್ಪಗೌಡರು ದತ್ತಿ ನೀಡಿದ ಉಲ್ಲೇಖ ನೋಡಬಹುದು. ಸ್ಥಳೀಯ ನಂಬಿಕೆಯಂತೆ ಇನ್ನು ಮಚಕುಂದ ಮುನಿಗಳು ಇಲ್ಲಿನ ದೇವರನ್ನು ಸ್ಥಾಪಿಸಿದರು ಎನ್ನಲಾಗಿದೆ.
ದೇವಾಲಯದ ನಿರ್ಮಾಣದ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ ಪ್ರಸ್ತುತ ಇರುವ ದೇವಾಲಯ ವಿಜಯನಗರ ಕಾಲದ್ದು. ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹಾಗು ಮುಖ ಮಂಟಪ, ವಿಶಾಲವಾದ ಮಂಟಪ ಹಾಗು ಪ್ರವೇಶ ಮಂಟಪವನ್ನು ಹೊಂದಿರುವ ಬೄಹತ್ ದೇವಾಲಯವಾಗಿದೆ. ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಶಂಖ, ಚಕ್ರ, ಗಧಾ ಪದ್ಮಧಾರಿಯಾದ ಸುಮಾರು ಆರು ಆಡಿ ಎತ್ತರದ ಕೇಶವನ ಮೂರ್ತಿ ಇದೆ. ಮೂರ್ತಿಗೆ ಸುಂದರವಾದ ಪ್ರಭಾವಳಿ ಇದೆ. ಮೂರ್ತಿಯ ಲಕ್ಷಣಗಳನ್ನು ಗಮನಿಸಿದಲ್ಲಿ ಹೊಯ್ಸಳರ ಕಾಲದ್ದು ಎನಿಸುತ್ತದೆ. ಮೂಲ ಮೂರ್ತಿಗೆ ಹಾಳಾಗುತ್ತಿರುವ ಪುರಾತನ ದೇವಾಲಯವನ್ನು ನಂತರ ಕಾಲದಲ್ಲಿ ಹೊಸದಾಗಿ ನಿರ್ಮಿಸಿರಬಹುದು.
ಮುಖಮಂಟಪ ಪಾಳೇಗಾರರ ಕಾಲದ ವಿಸ್ತರಣೆ, ಇಲ್ಲಿ ಸುಮಾರು 20 ಕಂಭಗಳಿದ್ದು ಈ ಕಂಭಗಳಲ್ಲಿನ ಬಾಲಕೃಷ್ಣ, ಗಣಪತಿ, ಯೋಗನರಸಿಂಹ, ಶಂಖ, ಚಕ್ರ ಮುಂತಾದ ಉಬ್ಬು ಶಿಲ್ಪದ ಕೆತ್ತೆನೆ ನೋಡಬಹುದು. ಆದರೆ ಬಹುತೇಕ ಇದಕ್ಕೆ ಬಣ್ಣ ಬಳಿದ ಕಾರಣ ಮೂಲ ಶಿಲ್ಪಗಳು ಸ್ವರೂಪಕ್ಕೆ ದಕ್ಕೆ ಎನಿಸುತ್ತದೆ. ಇನ್ನು ಪ್ರವೇಶದಲ್ಲಿ ಅನೆಯ ಶಿಲ್ಪಗಳಿದ್ದು ಹೊಸದಾಗಿ ನಿರ್ಮಾಣವಾದ ಶಿಖರವನ್ನು ನೋಡಬಹುದು. ಇಲ್ಲಿನ ಪಕ್ಕದ ಗುಡಿಯಲ್ಲಿ ಲಕ್ಷ್ಮೀಯ ಶಿಲ್ಪವಿದೆ. ದೇವಾಲಯದಲ್ಲಿನ ಆಳ್ವಾರ ಪ್ರತಿಮೆಗಳು, ಆಂಜನೇಯ, ಗಣಪತಿಯ ಶಿಲ್ಪಗಳು ಸುಂದರವಾಗಿದೆ.
ವಿನಾಶದತ್ತ ಸಾಗಿದ ಈ ದೇವಾಲಯವನ್ನು ಈಗ ಮೂಲ ಸ್ವರೂಪದಲ್ಲಿಯೇ ನವೀಕರಿಸಲಾಗಿದ್ದು ನಿತ್ಯ ಪೂಜೆ ನಡೆಯುತ್ತದೆ. ಇಲ್ಲಿ ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ಕಾಮನ ಹುಣ್ಣಿಮೆಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ.
ತಲುಪುವ ಬಗ್ಗೆ: ಮುದುಗೆರೆ ಗೌರಿಬಿದನೂರು – ಮಧುಗಿರಿ ರಸ್ತೆಯಲ್ಲಿ ಗೌರಿಬಿದನೂರಿನಿಂದ ಸುಮಾರು 7 ಕಿ.ಮೀ ದೂರದಲ್ಲಿದೆ.