ಕಡೇನಂದಿಹಳ್ಳಿ (ಶಿಕಾರಿಪುರ ತಾಲೂಕು) : ಶ್ರೀ ಮಳೆ ಮಲ್ಲೇಶ್ವರ ಕ್ಷೇತ್ರದಿಂದ ಕೊಲನಪಾಕ ಶ್ರೀ ಸ್ವಯಂಭು ಸೋಮೇಶ್ವರ ಕ್ಷೇತ್ರದವರೆಗೆ ದುಗ್ಲಿ-ಕಡೆನಂದಿಹಳ್ಳಿ ಪಟ್ಟಾಧ್ಯಕ್ಷರಾದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಕೈಗೊಂಡ ಪಾದಯಾತ್ರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಡಿ. 25 ರಂದು ಚಾಲನೆ ನೀಡಿದರು.
ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಿದ ಪಾದಯಾತ್ರಾ ಪ್ರಾರಂಭೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆ ಕೊಲನಪಾಕ ಶ್ರೀ ಸ್ವಯಂಭು ಕ್ಷೇತ್ರದಲ್ಲಿ ಜನ್ಮದಿನ ನಿಮಿತ್ಯ ಜನವರಿ 3ರಿಂದ 7ರ ವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ತಪೋನುಷ್ಠಾನ ಕೈಗೊಂಡಿದ್ದು ಜನೆವರಿ 7 ರಂದು ನಡೆಯುವ ಜನ್ಮ ದಿನೋತ್ಸವದಲ್ಲಿ ಪಾಲ್ಗೊಳ್ಳಲು ತಮ್ಮ ಭಕ್ತ ಸಮೂಹದೊಂದಿಗೆ 617 ಕಿ.ಮೀ. 12 ದಿನಗಳ ಪಾದಯಾತ್ರೆ ಕೈಗೊಂಡಿದ್ದು ಹೊಸ ಇತಿಹಾಸವನ್ನು ಸೃಷ್ಟಿಸುತ್ತಿದೆ. ಶ್ರೀಗಳ ಅಚಲನಿಷ್ಠೆ-ಧರ್ಮನಿಷ್ಠೆ ಮೆಚ್ಚಿಕೊಂಡ ಜಗದ್ಗುರುಗಳು ಪಾದಯಾತ್ರೆ ನಿರ್ವಿಘ್ನವಾಗಿ ಜರುಗಿ ಭಕ್ತ ಸಮುದಾಯದಲ್ಲಿ ಸಂಸ್ಕಾರ ಬೆಳೆದುಕೊಂಡು ಬರಲೆಂದು ಬಯಸಿ ಶ್ರೀಗಳಿಗೆ ಶಾಲು ಹೊದಿಸಿ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರೇವಣಸಿದ್ಧ ಶ್ರೀಗಳು ಮಾನವ ಜೀವನ ಉನ್ನತಿಗೆ ಧರ್ಮ ದಿಕ್ಸೂಚಿಯಾಗಿದೆ. ಲೋಕಕಲ್ಯಾಣ ಮತ್ತು ಗುರು ಬಲ ಪ್ರಾಪ್ತಿಗಾಗಿ ಈ ಪಾದಯಾತ್ರೆ ಕೈಗೊಂಡಿದ್ದೇವೆ. ನಮ್ಮೊಂದಿಗೆ ಹಲವಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಳಲಿ ಸಂಸ್ಥಾನಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ವೈದಿಕ ಬಳಗ ಮತ್ತು ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು