* ರಾಧಿಕಾ ಜೋಶಿ
ಕೃತಯುಗದಲ್ಲಿ ಪ್ರಹ್ಲಾದರಾಜರ ಮಾತೃಮೂರ್ತಿ ಕಯಾದುವಿನ (ಲೀಲಾವತಿ) ತವರೂರು, ತ್ರೇತಾಯುಗದಲ್ಲಿ ದಂಡಕಾರಣ್ಯಪ್ರಾಂತ ಮತ್ತು ಶ್ರೀರಾಮ ಬಾಣೋದ್ಭವ ರಾಮಜಲಯುಕ್ತ, ದ್ವಾಪರದಿ ವೃಷ್ಣಿಕುಲ ಯುಯುಧಾನ (ಸಾತ್ಯಕಿ) ಮತ್ತು ಅನಿರುದ್ದನಿಂದ ಪರಿಪಾಲಿತ ಯಾದವ ಅವನಿಯೇ ವಾಯುಕ್ಷೇತ್ರವೆಂದು ಖ್ಯಾತಿಗೊಂಡ ಮುಕ್ತಿಕ್ಷೇತ್ರ ಆದವಾನಿ.
ವಶಿಷ್ಠ, ಕೌಶಿಕ, ಅಗಸ್ತ್ಯಾದಿ ಮುನಿಗಳ ಸಂಚಾರದಿಂದ, ಶ್ರೀವ್ಯಾಸರಾಯರಿಂದ ಮತ್ತು ಅವರ ಪುನರಾವತಾರವಾದ ಶ್ರೀ ರಾಯರೇ ಮೊದಲಾದ ಯತಿವರೇಣ್ಯರ, ಶ್ರೀವಿಜಯದಾಸಾರ್ಯರ, ಶ್ರೀಗೋಪಾಲದಾಸರ, ಶ್ರೀಪಂಗನಾಮ ತಿಮ್ಮಣ್ಣದಾಸಾರ್ಯರೇ ಮೊದಲಾದ ಅಪರೋಕ್ಷಕೃತೇಶರ ಪಾದಧೂಳಿದೂಸರಿತ ಪಾವನ ಭೂಮಿ.
ಆದವಾನಿಯಲ್ಲಿ ಶ್ರೀ ವ್ಯಾಸರಾಜಗುರು ವರೇಣ್ಯರಿಂದ ಪ್ರತಿಷ್ಟಿತ ನೂರಾರು ಮಾರುತಿ ಮೂರುತಿಗಳ ಪೈಕಿ ಉತ್ತರಾಭಿಮುಖ ಶ್ರೀ ಮಂಗರಾಯನ ಸನ್ನಿಧಾನ ಬಹುಜಾಗೃತಿ ಸ್ಥಳ, ಸೇವಿಸುವ ಭಕ್ತಜನರಿಗೆ ಇಷ್ಟಾರ್ಥ ಪ್ರದಾಯಕವಾಗಿದೆ. ಶ್ರೀ ರಾಯರು ಸಂದರ್ಶಿಸಿದ ಮತ್ತು ಎರಡು ತಿಂಗಳು ವಾಸಮಾಡಿದ ಸ್ಥಳ. ಇದು ಶ್ರೀ ವಿಜಯದಾಸಾರ್ಯರು ಶ್ರೀ ಗೋಪಾಲದಾಸವರ್ಯರಿಗೆ ಅಂಕಿತಾನುಗ್ರಹ ಮಾಡಿದ ಸ್ಥಳ. ಶ್ರೀ ಪಂಗನಾಮ ತಿಮ್ಮಣ್ಣದಾಸರ ಮತ್ತು ಶ್ರೀಗೋಪಾಲದಾಸರ ಸಮಾಗಮ ಪ್ರದೇಶವಾಗಿದೆ. ಶ್ರೀ ವ್ಯಾಸ ತತ್ವಜ್ಞ ತೀರ್ಥರಿಂದ ಪ್ರತಿಷ್ಠಿತ ಸೀತಾರಾಮಲಕ್ಷ್ಮಣ ವಿಗ್ರಹಗಳು ಶ್ರೀ ಮಂಗರಾಯನ ಮೇಲ್ಬಾಗದ ವೇದಿಕೆಯಲ್ಲಿ ವಿರಾಜಮಾನವಾಗಿವೆ. ಶ್ರೀ ಪರಮಾತ್ಮನ ಅತ್ಯರ್ಥ ಪ್ರಸಾದವೇ ಗುರಿಯಾಗಿ ಮುಖ್ಯಪ್ರಾಣನ ಹಾಗು ಶ್ರೀ ರಾಯರ ಅನುಗ್ರಹಪಾತ್ರರಾಗಿ ಮೂರು ಬಾರಿ ಸರ್ವಸ್ವ ದಾನಮಾಡಿ ವಿಶೇಷ ಸಾಧನಗೈದ ಶ್ರೀಮುತ್ತಿಗೀ ಶ್ರೀನಿವಾಸಾಚಾರ್ಯರ (ಶ್ರೀಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠಾಧೀಶರಾಗಿ ಶ್ರೀ ರಘುಪ್ರೇಮ ತೀರ್ಥರೆಂದು ಖ್ಯಾತಿಗೊಂಡವರು), ಶ್ರೀಲಕ್ಷ್ಮಿ ವಾಯು ಸಮೇತ ಪರಮಾತ್ಮನ ಸಾಕ್ಷಾತ್ಕಾರ ಪಡೆದ ಸ್ಥಳವಾಗಿದೆ