ಶ್ರೇಯಸ್ಸಿಗೆ ಗುರು – ಗುರಿ ಮುಖ್ಯ : ಶ್ರೀ ರಂಭಾಪುರಿ ಜಗದ್ಗುರುಗಳು

ಕಲಬುರ್ಗಿ : ಮಾನವ ಜೀವನ ಶ್ರೇಷ್ಠವಾದುದು. ಬಹು ಜನ್ಮದ ಪುಣ್ಯದ ಫಲದಿಂದ ಅಮೂಲ್ಯ ಜೀವನ ಪ್ರಾಪ್ತವಾಗಿದೆ. ಮಾನವ ಜೀವನದ ಶ್ರೇಯಸ್ಸಿಗೆ ಗುರು ಮತ್ತು ಗುರಿ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತೆಲಂಗಾಣ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಛೇಗುಂಟ ಶಿವ ಪಾರ್ವತಿ ಕ್ಷೇತ್ರದಲ್ಲಿ ಡಿ.26 ರಂದು ವೀರಶೈವ ಧರ್ಮ ಸಂಸ್ಥಾಪನಾಚಾರ್ಯ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ತನಗಾಗಿ ತಾನು ಬಾಳುವುದು ಮುಖ್ಯವಲ್ಲ. ಇನ್ನೊಬ್ಬರ ಉನ್ನತಿಗಾಗಿ ಬದುಕಿ ಬಾಳುವುದು ಶ್ರೇಷ್ಠ. ನೊಂದವರ ಬೆಂದವರ ಬಾಳಿಗೆ ಧ್ವನಿಯಾಗಿ ಬೆಳಕು ತೋರಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಕರ್ಮ ಕಳೆದು ಧರ್ಮ ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳನ್ನು ಬೋಧಿಸಿದ ರೇಣುಕಾಚಾರ್ಯರ ಚಿಂತನಗಳು ಬಾಳಿನ ಉನ್ನತಿಗೆ ಪ್ರೇರಕ ಶಕ್ತಿಯಾಗಿವೆ. ಅಂಥ ಆಚಾರ್ಯ ಶ್ರೇಷ್ಠರಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂದಿರ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿರುವುದು ಸಂತೋಷ ತಂದಿದೆ ಎಂದರು.

ರಾಯಚೂರು ಕಿಲ್ಲಾ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧರ್ಮಾಚರಣೆಯಿಂದಲೇ ಮನುಷ್ಯನ ಬಾಳು ವಿಕಾಸಗೊಳ್ಳಲು ಸಾಧ್ಯ. ಧರ್ಮದ ಅರಿವು ಆಚರಣೆ ಇಲ್ಲದಿದ್ದರೆ ಬದುಕಿನಲ್ಲಿ ಶಾಂತಿ ನೆಮ್ಮದಿ ಪ್ರಾಪ್ತವಾಗದೆಂದರು. ಶಿವ ಪಾರ್ವತಿ ಕ್ಷೇತ್ರದ ಧರ್ಮಾಧಿಕಾರಿ ಡಾ|| ಕ್ಷೀರಲಿಂಗಯ್ಯ ಸ್ವಾಮಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದಿಕ ವೃಂದದವರು ಪ್ರತಿಷ್ಠಾಪನೆ ಕಾರ್ಯಗಳನ್ನು ನೆರವೇರಿಸಿದರು. ಬಂದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಸಹಸ್ರಾರು ಜನರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು.

ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.

Related Articles

ಪ್ರತಿಕ್ರಿಯೆ ನೀಡಿ

Latest Articles