ತಿರುಕೋಯಿಲೂರಿನ ಯತಿಸಾರ್ವಭೌಮ ಶ್ರೀ ರಘೋತ್ತಮ ತೀರ್ಥರು

ಜನವರಿ 11, 12 ಮತ್ತು 14 ರಂದು ತಿರುಕೋಯಿಲೂರಿನ ಯತಿ ಸಾರ್ವಭೌಮ ಶ್ರೀ ರಘೋತ್ತಮ ತೀರ್ಥರ ಆರಾಧನೆಯ ಪ್ರಯುಕ್ತ ಈ ಲೇಖನ.

ಲೇಖಕರು :ರೂಪಶ್ರೀ ಶಶಿಕಾಂತ್

ತಿರುಕೋಯಿಲೂರಿನ ಯತಿ ಸಾರ್ವಭೌಮ ಶ್ರೀ ರಘೋತ್ತಮ ತೀರ್ಥರು ಉತ್ತರಾದಿಮಠದ ಹದಿನಾಲ್ಕನೇ ಗುರುಗಳು. ಇವರು  39 ವರ್ಷಗಳ ಕಾಲ ಪೀಠದಲ್ಲಿ ಇದ್ದರು. ಇವರ ಕಾಲ 1557-1595. ಇವರು ದ್ವೈತಸಿದ್ಧಾಂತದ ಅತ್ಯಂತ ಮುಖ್ಯ ಯತಿಗಳು. ಇವರ ಬೃಂದಾವನವು ತಮಿಳುನಾಡಿನ ತಿರುಕೊಯಿಲೂರ್ ನಲ್ಲಿದೆ.


ಇವರ ಗುರುಗಳು ರಘುನಾಥ ತೀರ್ಥರು ಉತ್ತರಾದಿ ಮಠದ ಹದಿಮೂರನೆಯ ಗುರುಗಳು.
ರಘುನಾಥ ತೀರ್ಥರು ಒಮ್ಮೆ ಮಧ್ವಾಚಾರ್ಯರ ಬಳಿ ಮಠದ ಉದ್ಧಾರಕ್ಕಾಗಿ ಪ್ರಾರ್ಥಿಸಿದರು. ಅವರ ಕನಸಿನಲ್ಲಿ ಬಂದ ಗುರುಗಳು  ಮಣ್ಣೂರಿನಲ್ಲಿದ್ದ ರಘುನಾಥ ತೀರ್ಥರ ತಂಗಿ ಗಂಗಾಬಾಯಿ ಮತ್ತು ಭಾವ ಸುಬ್ಬಾಭಟ್ಟರ  ಮನೆಗೆ ಹೋಗಿ, ಆ ದಂಪತಿಗಳಿಗೆ  ಪುತ್ರನಾಗುವಂತೆ ಆಶೀರ್ವದಿಸಿ, ಆ ಮಗುವನ್ನೇ ಇವರ ಮುಂದಿನ  ಯತಿಗಳಾಗಿ ಮಾಡಬೇಕು ಎಂದು ಸೂಚನೆ ನೀಡಿದರು.
ಅದರಂತೆ ಮಣ್ಣೂರಿಗೆ ಬಂದ ರಘುನಾಥ ತೀರ್ಥರು ತಮ್ಮ ತಂಗಿಯ ಮನಗೆ ಭಿಕ್ಷೆಗೆ ಆಹ್ವಾನ ನೀಡಿದಾಗ ಅವರ ಮೊದಲ ಗಂಡುಮಗುವನ್ನು ಮಠಕ್ಕೆ ಕೊಡಬೇಕು ಎಂದು ಹೇಳಿದರು. ಅದರಂತೆ ಹುಟ್ಟಿದ ಮಗುವನ್ನು ಒಂದು ಬಂಗಾರದ ತಟ್ಟೆಯಲ್ಲಿ ಭೂಸ್ಪರ್ಶ ಮಾಡದ ಹಾಗೆ ತಂದು ಶ್ರೀಮಠಕ್ಕೆ  ನೀಡಲಾಯಿತು.ಅವರಿಗೆ ರಾಮಚಂದ್ರ ಭಟ್ಟ ಎಂದು ನಾಮಕರಣ ಮಾಡಿದರು. ನೈವೇದ್ಯದ ಹಾಲನ್ನೇ ಕುಡಿದುಕೊಂಡು ಬೆಳೆದ ಮಗುವಿಗೆ ಏಳು ವರ್ಷ ಆದಾಗ ಉಪನಯನ ಸಂಸ್ಕಾರವನ್ನು ಮಾಡಿ, ಅದರ ಮುಂದಿನ ವರ್ಷ ಸನ್ಯಾಸದೀಕ್ಷೆ ನೀಡಲಾಯಿತು ರಘೋತ್ತಮ ತೀರ್ಥರು ಎಂಬ ಹೆಸರನ್ನಿಟ್ಟರು.

ಸನ್ಯಾಸಿಯಾದ ನಂತರ ಆದ್ಯ ವರದಾಚಾರ್ಯ ಎಂಬ ಆಚಾರ್ಯರ ಬಳಿ ರಘುವರ್ಯ ತೀರ್ಥರ ಅಣತಿಯಂತೆ ವಿದ್ಯಾಭ್ಯಾಸ ಮಾಡುತ್ತಿದ್ದರು. ರಘುವರ್ಯ ತೀರ್ಥರ ನಂತರ ರಘೋತ್ತಮ ತೀರ್ಥರು ಪೀಠಾಧಿಪತಿಗಳಾದರು.


ಆಗ ಅವರ ವಿದ್ಯಾಭ್ಯಾಸ ಮುಗಿದಿರಲಿಲ್ಲ. ಆದ್ಯರ ಬಳಿ ಪೀಠಾಧಿಪತಿ ಆದ ನಂತರವೂ ಶ್ರದ್ಧೆಯಿಂದ ಕೈಲಿಯುತ್ತಿದ್ದರು. ಆದರೆ ಒಮ್ಮೆ ಪೀಠಿಕ್ಕೆ ಗೌರವ ಕೊಡದೆ ಆದ್ಯರು ಒಂದು ದಿನ ಅವರಿಗಿಂತ ಮುಂಚೆ ಊಟ ಮಾಡಿ ಅವಮಾನ ಮಾಡಿದರು.


ಆಗ ತಮ್ಮ ಗುರುಗಳಾದ ರಘುನಾಥ ತೀರ್ಥರನ್ನು ಧ್ಯಾನ ಮಾಡಿದರು.ರಘುನಾಥ ತೀರ್ಥರು  ನಾಲಿಗೆ ಮೇಲೆ ಸ್ವರ್ಣಾಕ್ಷರ ಬರೆದು, ಸಕಲವಿದ್ಯಾ ಪಾರಂಗತರಾಗಿ ಮಾಡಿದರು. ಇನ್ನು ನೀವೇ ಪಾಠ ಮಾಡಿ ಎಂದು ಹೇಳಿದರು.ಅಂದಿನಿಂದ ಅವರೇ ನ್ಯಾಯಸುಧಾ ಪಾಠ ಮಾಡಿದರು‌.ಆದ್ಯರಿಗೆ ಸರಿಯಾಗಿ ಅರ್ಥವಾಗದಿದ್ದ ಭಾಗವನ್ನೂ ಅವರು ತುಂಬಾ ಚೆನ್ನಾಗಿ ವಿವರಿಸಿದಾಗ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದರು.ಗುರುಗಳು ಕ್ಷಮಿಸಿ ಅವರಿಗೇ ಮಠದ ಮೊದಲ ತೀರ್ಥ ಎಂದು ಆಶೀರ್ವಾದ ಮಾಡಿದರು.
ಬಹಳ ವಿಶೇಷವಾದ ರೀತಿಯಲ್ಲಿ 39 ವರ್ಷಗಳ ಕಾಲ ಪೀಠಾಧೀಶ ರಾಗಿದ್ದರು1596ರಲ್ಲಿ ಅವರ ಆಜ್ಞೆಯಂತೆ ಸಮಾಧಿ ಸ್ಥಿತಿಯಲ್ಲಿದ್ದಾಗ ಅವರ ಸುತ್ತ ಬೃಂದಾವನ ಕಟ್ಟಲಾಯಿತು.


ಇವರು ಮಧ್ವಾಚಾರ್ಯರ ಪದ್ಮನಾಭ ತೀರ್ಥರ ಮತ್ತು ಜಯತೀರ್ಥರ ಗ್ರಂಥಗಳ ಮೇಲೆ ಟೀಕೆಗಳನ್ನು ಬರೆದಿದ್ದಾರೆ.
 *ಗ್ರಂಥಗಳು
ಇವರು ಹತ್ತು ಗ್ರಂಥಗಳನ್ನು ರಚಿಸಿದ್ದಾರೆ ಅದರಲ್ಲಿ 9 ಟೀಕೆಗಳು.ಐದನ್ನು ಮುದ್ರಣ ಗೊಳಿಸಲಾಗಿದೆ. “ಭಾವಬೋಧ” ಎಂಬ ಹೆಸರಿನಿಂದ ಅವರ ಗ್ರಂಥಗಳನ್ನು ಕರೆಯಲಾಗುತ್ತದೆ. ಆದ್ದರಿಂದಲೇ ಅವರನ್ನು “ಭಾವ ಬೋಧಾಚಾರ್ಯ” ಅಥವಾ “ಭಾವ ಬೋಧಕರ” ಎಂದು ಕರೆಯುತ್ತಾರೆ.”ಬೃಹದಾರಣ್ಯಕ ಭಾವಬೋಧ” ಎಂಬುದು ಮಧ್ವಾಚಾರ್ಯರ ಬೃಹದಾರಣ್ಯಕೋಪನಿಷತ್ತಿನ ಟೀಕೆ. ತತ್ತ್ವಪ್ರಕಾಶಿಕಾ ಭಾವ ಬೋಧ ಎಂಬುದು ಜಯತೀರ್ಥರ ತತ್ವಪ್ರಕಾಶಿಕಾ ಗ್ರಂಥಕ್ಕೆ ಬರೆದಿರುವ ಟೀಕೆ. ಈ ಗ್ರಂಥಗಳನ್ನು   ಮುಂದೆ ಬಂದ ಯತಿಗಳಾದ ಜಗನ್ನಾಥ ತೀರ್ಥರು ಮತ್ತು ರಾಘವೇಂದ್ರತೀರ್ಥರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
ವಿಷ್ಣುತತ್ವ ನಿರ್ಣಯ ಭಾವಬೋಧ, ತತ್ತ್ವಪ್ರಕಾಶಿಕಾ ಭಾವ ಬೋಧ, ನ್ಯಾಯ ವಿವರಣ ಭಾವ ಬೋಧ, ನ್ಯಾಯ ರತ್ನ ಸಂಬಂಧ ದೀಪಿಕಾ, ಬೃಹದಾರಣ್ಯಕ ಭಾವ ಬೋಧ, ವಿವರಣೋದ್ಧಾರ, ಗೀತಾ ಭಾಷ್ಯ ಭಾವ ಬೋಧ, ಸನ್ಯಾಸ ವಿವೃತ್ತಿ, ತಾರತಮ್ಯ ಸ್ತೋತ್ರ, ತೈತ್ತರೀಯವಿ ನಿರ್ಣಯ. ಇವು ಅವರ ಗ್ರಂಥಗಳು.


 *ಬೃಂದಾವನ
ಅವರು ಪುಷ್ಯ ಶುದ್ಧ ಏಕಾದಶಿಯಂದು ಬೃಂದಾವನಸ್ಥರಾದರು.ಅವರ ಬೃಂದಾವನದ ಮೇಲೆ ಯಾವ ಛಾವಣಿ ಇಲ್ಲ.ಅದರಿಂದ ಬರುವ ತಾಪಕ್ಕೆ ಮೇಲೆ ಬೆಳೆಯುವ ಮರದ ಕೊಂಬೆಗಳೂ ಸುಡುತ್ತವೆ ಎಂಬ ನಂಬಿಕೆ ಇದೆ.


ಬಹಳ ಸತ್ಯವಾದ ಇವರ ಆಶೀರ್ವಾದ ಪಡೆಯಲು ಅನೇಕ ಭಕ್ತಾದಿಗಳು ಬರುತ್ತಾರೆ.
ಇಂತಹ‌ ಮಹಾತ್ಮರ ಪುಣ್ಯ ದಿನ ಬಂದಿದೆ.ಅವರನ್ನು ಭಕ್ತಿಯಿಂದ ಸ್ಮರಿಸಿ ಅವರ ಕೃಪೆಗೆ ಪಾತ್ರರಾಗೋಣ.
ಶ್ರೀ ಕೃಷ್ಣಾರ್ಪಣಮಸ್ತು


Related Articles

2 COMMENTS

  1. ಶ್ರೀ ರಘೋತ್ತಮತೀರ್ಥರ ಜೀವನ ಚರಿತ್ರೆ ಸಂಕಲನ ದಿವ್ಯವಾಗಿದೆ. ✨️👏👏🌞💐🙏

ಪ್ರತಿಕ್ರಿಯೆ ನೀಡಿ

Latest Articles