ಚಿತ್ರಗಳು: ಡಾ|| ಸಂಜೋತಾ, ದಂತ ವೈದ್ಯೆ , ಮಂಗಳೂರು
ಬಾಲ್ಕನಿ ಮನೆಯ ಪರಿಸರ ಮತ್ತು ಹೊರ ಜಗತ್ತಿನೊಂದಿಗೆ ಸಂಬ0ಧ ಕಲ್ಪಿಸುತ್ತದೆ. ಬಾಲ್ಕನಿಯಲ್ಲಿ ಹೂ ಕುಂಡಗಳನ್ನು ಕಲಾತ್ಮಕವಾಗಿ ಜೋಡಿಸಿಟ್ಟರೆ ಮುಸ್ಸಂಜೆಯ ಮಾತಿಗೆ ಅದೇ ಆಲಯ ಆಗಬಹುದು.
ಮನೆಯ ಮುಂದೆ ಒಂದು ಬಾಲ್ಕನಿಯಿದ್ದರೆ ನಿಮ್ಮ ಕನಸಿಗೆ ರೆಕ್ಕೆ ಕಟ್ಟಿಕೊಳ್ಳಬಹುದು. ಬೆಳಗ್ಗಿನಿಂದ ಸಂಜೆಯವರೆಗೂ ದುಡಿದು ದಣಿವಾಗಿ ಬಂದ ದೇಹಕ್ಕೆ ಬಾಲ್ಕನಿಯ ಸೌಂದರ್ಯ ಮುದ ನೀಡುತ್ತದೆ. ಅಲ್ಲಿ ಬೆಳೆದ ಹೂ ಗಿಡಗಳು ಸೂಸುವ ಪರಿಮಳ, ಪರಿಶುದ್ಧ ಗಾಳಿ ಮನಸ್ಸಿನಲ್ಲಿ ತಣ್ಣನೆಯ ಕಂಪು ಮೂಡಿಸುತ್ತದೆ.
ನಗರ ಪ್ರದೇಶಗಳಲ್ಲಂತೂ ಸುತ್ತಲೂ ಕಾಂಕ್ರೀಟ್ ಕಾಡು. ಎತ್ತ ನೋಡಿದರೂ ವಾಹನಗಳಿಂದ ಗಿಜಿಗುಡುವ ರಸ್ತೆಗಳು. ಮುಂಜಾವಿನಿ0ದ ಮುಸ್ಸಂಜೆಯವರೆಗೂ ವಾಹನಗಳದೇ ಸದ್ದು. ಶುದ್ಧ ಗಾಳಿ, ಹಕ್ಕಿಗಳ ಚಿಲಿಪಿಲಿ ನಿನಾದ, ತಂಪು ತಂಪು ವಾತಾವರಣ ಇಲ್ಲಿ ಸಿಗೋದಕ್ಕೆ ಸಾಧ್ಯಾನೇ ಇಲ್ಲ ಬಿಡಿ.
ಹಾಗಾಗಿ ಮನೆಯ ಮುಂದೆ ಎಲ್ಲೋ ಬೆಳೆದ ಗಿಡಗಳನ್ನು ಜೋಡಿಸಿ ಹಸಿರು ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕಾದ ಅನಿವಾರ್ಯತೆ. ಮನೆಯ ಮುಂದೆ ಸ್ವಲ್ಪವೇ ಜಾಗವಿದ್ದರೂ ಸರಿ ಅಲ್ಲಿ ವಿವಿಧ ನಮೂನೆಯ ಹೂ ಕುಂಡಗಳನ್ನು ಜೋಡಿಸಿಟ್ಟರೆ ಮುಸ್ಸಂಜೆಯ ಮಾತಿಗೆ ಅದೇ ಆಲಯ ಆಗಬಹುದು.
ಮನೆಯಲ್ಲಿ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಹಸಿರು ಗಿಡಗಳನ್ನು ಜೋಡಿಸಿಡುವುದು ಒಂದು ಒಳ್ಳೆಯ ಐಡಿಯಾ. ಮನೆಯ ಮುಂದೆ ಅಥವಾ ಬಾಲ್ಕನಿಯಲ್ಲಿ ಹೂ ಕುಂಡಗಳನ್ನು ಜೋತು ಹಾಕಿಡಿ. ಸೀಸನಲ್ ಹೂ ಗಿಡಗಳನ್ನು ಕಾಲಕಾಲಕ್ಕೆ ತಂದು ಜೋಡಿಸಿಟ್ಟರೆ ಪ್ರತಿ ಸೀಸನ್‌ನಲ್ಲೂ ಬಾಲ್ಕನಿ ತುಂಬಾ ಬಣ್ಣ ಬಣ್ಣದ ರಂಗು ಇರುತ್ತದೆ. ಬಾಲ್ಕನಿ ಕೇವಲ ಸುಂದರವಾಗಿ ಕಾಣಿಸುವುದು ಮಾತ್ರವಲ್ಲ, ಸುವಾಸನೆ ತುಂಬಿರುತ್ತದೆ.
ಬಿದಿರಿನಿಂದ ಮಾಡಿದ ನ್ಯಾಚುರಲ್ ಲುಕ್ ಇರುವ ಕುರ್ಚಿ, ಟೇಬಲ್‌ನ್ನು ಬಳಸಬಹುದು. ಇದರಿಂದ ಇನ್ನಷ್ಟು ಸುಂದರವಾದ ವಾತಾವರಣ ಅಲ್ಲಿ ನಿರ್ಮಾಣವಾಗುತ್ತದೆ. ಅಲ್ಲಿಯೇ ಕುಳಿತು ಸಂಜೆಯ ಹೊತ್ತು ಹೋತೋಟದ ಸೌಂದರ್ಯ ಸವಿಯುವುದರೊಂದಿಗೆ ನಿರಾಳವಾಗಿ ಕುಳಿತು ಒಂದು ಕಪ್ ಕಾಫಿ ಹೀರಬಹುದು.
ಅಪಾರ್ಟ್ಮೆಂಟ್‌ಗಳಲ್ಲಿ ವಾಸಿಸುವವರಿಗೆ ಬಾಲ್ಕನಿಯೆಂಬ ಸ್ಪೇಸ್ ಇರುವುದಿಲ್ಲ. ಆದರೂ ಚಿಂತೆ ಬೇಡ. ನಿಮ್ಮ ಕ್ರಿಯಾಶೀಲತೆಯಿಂದ ಚಿಕ್ಕ ಬಾಲ್ಕನಿಯನ್ನು ಸುಂದರವಾಗಿ ಕಾಣುವಂತೆ ಮಾಡಬಹುದು.
ಮನೆಯ ಹೊರಗಿನ ಜಾಗದಲ್ಲಿ ಡೈನಿಂಗ್ ಹಾಲ್‌ನ ಕುರ್ಚಿಗಳನ್ನು ತಂದಿರಿಸಿ. ಅಥವಾ ಹೊರಾಂಗಣಕ್ಕೆ ಒಪ್ಪುವ, ಬಿಸಿಲು, ಮಳೆಗೆ ಬಣ್ಣ ಕಳೆಗುಂದದ ಕುರ್ಚಿಗಳನ್ನೇ ತಂದು ಜೋಡಿಸಿ. ಬಾಲ್ಕನಿಗೆ ಬಿಸಿಲು ಬೀಳದಂತೆ ದೊಡ್ಡ ಕೊಡೆಯನ್ನು ನೆಟ್ಟು ಬಿಡಿ.
ಹೂ, ಹಸಿರು ಗಿಡಗಳು ಬಾಲ್ಕನಿಗೆ ಮೆರುಗನ್ನು ತರುತ್ತದೆ. ಬಾಲ್ಕನಿಯ ಮೂಲೆಗಳಲ್ಲಿ ಔಷಧದ ಗಿಡಗಳಿರುವ ಕುಂಡಗಳನ್ನು ಇಟ್ಟುಬಿಡಿ. ಹೀಗೆ ಮಾಡುವುದರಿಂದ ಬಾಲ್ಕನಿಯನ್ನು ಪುಟ್ಟ ಕೈತೋಟವಾಗಿಯೂ ಮಾರ್ಪಡಿಸಬಹುದು.