*ವೈ.ಬಿ.ಕಡಕೋಳ
ಜನವರಿ 12 ಸ್ವಾಮಿ ವಿವೇಕಾನಂದರ ಜಯಂತಿ. ಈ ದಿನ ವಿವೇಕಾನಂದರ ಬದುಕಿನ ಘಟ್ಟಗಳನ್ನು ಪರಿಚಯಿಸುವ ಅವರ ಆದರ್ಶಗಳ ಕುರಿತು ಅನೇಕ ಕಾರ್ಯಕ್ರಮಗಳು ಜರುಗುತ್ತವೆ. ವಿವೇಕಾನಂದರು ಕರ್ನಾಟಕದಲ್ಲಿಯೂ ಕೂಡ ಹಲವು ಸ್ಥಳಗಳಿಗೆ ಭೇಟಿ ನೀಡಿರುವರು. ಅವರ ಭೇಟಿಯ ಸ್ಥಳಗಳಲ್ಲಿ ಬೆಳಗಾವಿಯೂ ಒಂದು.
*ವೈ ಬಿ ಕಡಕೋಳ
ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಸ್ವಾಮಿ ವಿವೇಕಾನಂದರ ಪಾದಸ್ಪರ್ಶದಿಂದ ಪಾವನ ಭೂಮಿ. ಬೆಳಗಾವಿಯ ಬಸ್ ನಿಲ್ದಾಣದಿಂದ ಸಮೀಪದ ಸ್ಥಳ ಕೋಟೆ. ಈ ಕೋಟೆ ಆವರಣದಲ್ಲಿ ರಾಮಕೃಷ್ಣ ಆಶ್ರಮದ ಕಟ್ಟಡವಿದೆ. ಬೆಳಗಾವಿಗೆ ಬಂದರೆ ತಾವಿದನ್ನು ನೋಡಲೇಬೇಕು. ಅಂಥ ಪಾವನ ಸ್ಥಳದಲ್ಲಿ ಒಂದು ಕೊಠಡಿಯಿದೆ. ಇದುವೇ ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಬಂದಿದ್ದಾಗ ಇದ್ದ ಸ್ಥಳ.
ಸ್ವಾಮಿ ವಿವೇಕಾನಂದರು ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಪ್ರದೇಶಗಳ ಭೇಟಿಯ ನಂತರ 1892 ರ ಅಕ್ಟೋಬರ್ 15 ರಂದು ಕರ್ನಾಟಕದ ಬೆಳಗಾವಿಗೆ ಭೇಟಿ ನೀಡಿದ್ದರು ಎಂಬ ವಿವರಗಳನ್ನು ಸ್ವಾಮಿ ಪುರುಷೋತ್ತಮಾನಂದರು ತಮ್ಮ ಕೃತಿ “ಕನ್ನಡ ನೆಲದಲ್ಲಿ ಸ್ವಾಮಿ ವಿವೇಕಾನಂದರು” ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ವಿವೇಕ ಹಂಸ ಪತ್ರಿಕೆಯ ದಶಮಾನೋತ್ಸವ ವಿಶೇಷ ಸಂಚಿಕೆಯಲ್ಲಿ ಕೂಡ ವಿಶೇಷ ಬರಹಗಳು ಪ್ರಕಟಗೊಂಡಿದ್ದು ಬೆಳಗಾವಿಯಲ್ಲಿ ವಿವೇಕಾನಂದರು ತಂಗಿದ್ದ ದಿನಗಳ ಕುರಿತ ಸವಿವರ ಮಾಹಿತಿಯಿದೆ. ಅದರಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಿರುವೆ.
ಸ್ವಾಮಿ ವಿವೇಕಾನಂದರು ಶ್ರೀಯುತ ಭಾಟೆ ಮತ್ತು ಶ್ರೀಯುತ ಹರಿಪದಮಿತ್ರರ ಮನೆಯಲ್ಲಿ ತಂಗುವ ಜೊತೆಗೆ ಅನೇಕ ಭಕ್ತರು ಅವರನ್ನು ಕಂಡು ಅವರ ವಿಚಾರಧಾರೆಗಳ ಸವಿಯನ್ನು ಪಡೆಯುವ ಮೂಲಕ ಬೆಳಗಾವಿಯ ನೆಲ ಕೂಡ ಅವರ ಪಾದ ಸ್ಪರ್ಶದಿಂದ ಪಾವನವಾಯಿತು. ಅದರಲ್ಲೂ ಹರಿಪದಮಿತ್ರರು ಸ್ವಾಮೀಜಿಯವರ ಜೊತೆಗೆ ನಡೆಸಿದ ಸಂವಾದ ನಿಜಕ್ಕೂ ಅದ್ಬುತ. ಅವರೊಬ್ಬ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿ. ಸ್ವಾಮೀಜಿಯವರ ಪ್ರಭಾವದಿಂದ ತಮ್ಮ ಪತ್ನಿ ಹಾಗೂ ತಾವು ಮಂತ್ರದೀಕ್ಷೆ ಪಡೆದುಕೊಂಡಿದ್ದು ಶ್ಲಾಘನೀಯ. ಹರಿಪದಬಾಬುವಿನ ಮನೆಯಲ್ಲಿ ದಿನವೂ ನಿರಂತರ ಚರ್ಚೆ, ಸಂಭಾಷಣೆ ಜರುಗುತ್ತಿದ್ದವು. ಒಂದು ದಿನ ಅವರು ಸ್ವಾಮೀಜಿಯವರನ್ನು “ನನ್ನ ನಂಬಿಕೆಯೇನೆಂದರೆ ಸತ್ಯವು(ದೇವರು)ಒಂದೇ, ಅದು ನಿರಪೇಕ್ಷವಾದದ್ದು ಎಂದು. ಆದರೆ ಆ ಸತ್ಯಕ್ಕೆ ದಾರಿಯೆಂದು ಹೇಳಲಾಗುವ ಹಲವಾರು ಧರ್ಮಗಳೆಲ್ಲವೂ ಏಕಕಾಲಕ್ಕೆ ನಿಜವಾಗಿರಲು ಹೇಗೆ ಸಾಧ್ಯ?” ಎಂದು ಕೇಳಿದಾಗ, ಆಗ ಸ್ವಾಮೀಜಿಯವರು “ನೋಡು, ಯಾವುದೇ ವಿಷಯದ ಬಗ್ಗೆ ನಮಗೆ ಈಗಿರುವ ಜ್ಞಾನವಾಗಲಿ, ಮುಂದೆ ನಾವು ತಿಳಿಯಬಹುದಾದದ್ದೇ ಆಗಲಿ- ಇವೆಲ್ಲ ಸಾಪೇಕ್ಷ ಸತ್ಯಗಳು. ನಮ್ಮ ಈ ಶಾಂತ ಬುದ್ದಿಶಕ್ತಿಗೆ ಅನಂತ ಸತ್ಯವನ್ನು ಗ್ರಹಿಸಲು ಸಾದ್ಯವಿಲ್ಲ. ಆದ್ದರಿಂದ ಸತ್ಯವು ನಿರಪೇಕ್ಷವಾದದ್ದೇ ಆದರೂ ಬೇರೆಬೇರೆ ಮನಸ್ಸುಗಳಿಗೆ ಹಾಗೂ ಬುದ್ದಿಶಕ್ತಿಗಳಿಗೆ ಅದು ವಿಭಿನ್ನವಾಗಿ ತೋರುತ್ತದೆ. ಸತ್ಯದ ಈ ಎಲ್ಲ ಮುಖಗಳೂ ನಿರಪೇಕ್ಷ ಸತ್ಯದ ಪರಮಸತ್ಯದ ವರ್ಗಕ್ಕೇ ಸೇರಿದವುಗಳು. ಅದು ಹೇಗೆಂದರೆ ಒಬ್ಬನೇ ಸೂರ್ಯನ ಛಾಯಾಚಿತ್ರಗಳನ್ನು ಬೇರೆ ಬೇರೆ ಸಮಯಗಳಲ್ಲಿ, ಬೇರೆ ಬೇರೆ ದಿಕ್ಕುಗಳಲ್ಲಿ ತೆಗೆದರೆ, ಪ್ರತಿಯೊಂದು ಚಿತ್ರದಲ್ಲೂ ಆತ ವಿಭಿನ್ನವಾಗಿ ಕಾಣುವುದಿಲ್ಲವೇ? ಹೀಗೆ, ಈ ಬೇರೆ ಬೇರೆ ತುಲನಾತ್ಮಕ ಸತ್ಯಗಳ ಆ ಪರಮಸತ್ಯದೊಂದಿಗೆ ಏಕ ರೀತಿಯ ಸಂಬಂಧವುಳ್ಳವುಗಳಾಗಿವೆ. ಆದ್ದರಿಂದ ಪ್ರತಿಯೊಂದು ಧರ್ಮವೂ ಸತ್ಯ. ಏಕೆಂದರೆ ಅದು ಒಂದೇ ಪರಮಧರ್ಮದ ಒಂದೊಂದು ರೂಪ” ಎಂದು ವಿವರಿಸಿದ್ದರು.
ಇಂಥಹ ಅನೇಕ ಚರ್ಚೆಗಳಲ್ಲಿ ತೊಡಗಿದ ಹರಿಪದಬಾಬು ವಿವೇಕಾನಂದರು ಅವರ ಮನೆಯಲ್ಲಿ ಇದ್ದ ಎರಡು ದಿನಗಳಲ್ಲಿ ಅವರಿಂದ ಮಂತ್ರದೀಕ್ಷೆ ಪಡೆಯುವ ಮೂಲಕ ತನ್ನಲ್ಲಿದ್ದ ಮೌಢ್ಯಗಳನ್ನು ಪರಿಹರಿಸಿಕೊಂಡಿದ್ದ. ಈ ಕಟ್ಟಡ ಹಾಗೂ ಭಾಟೆಯವರ ನಿವಾಸವನ್ನು ರಾಮಕೃಷ್ಣ ಆಶ್ರಮ ಇಂದಿಗೂ ಉಳಿಸಿದ್ದು ಬೆಳಗಾವಿಗೆ ಬರುವವರು ಈ ಸ್ಥಳಗಳನ್ನು ವೀಕ್ಷಿಸಬಹುದು. ಬೆಳಗಾವಿಯಲ್ಲಿ ವಿವೇಕಾನಂದರು ತಂಗಿದ್ದ ಆ ಕಟ್ಟಡ ಇಂದು ಪೂರ್ಣ ದುರಸ್ತಿಗೊಂಡು ಪವಿತ್ರ ಸ್ಮಾರಕವಾಗಿ ಕಂಗೊಳಿಸುತ್ತಿದೆ.
ರಾಮಕೃಷ್ಣ ಆಶ್ರಮ ಸಾಧುಗಳ ನಿವಾಸ, ಗ್ರಂಥಾಲಯ, ಪುಸ್ತಕಮಳಿಗೆ, ಪ್ರಾರ್ಥನಾಮಂದಿರ, ಪೂಜಾಗೃಹಗಳಿಂದ ಹಾಗೂ ಸಭಾಮಂಟಪಗಳಿಂದ ಕಂಗೊಳಿಸುತ್ತಿದ್ದು. ರಾಮಕೃಷ್ಣ ಮಹಾಸಂಘದ ಹಿರಿಯ ಸಂನ್ಯಾಸಿಗಳಾದ ಸ್ವಾಮಿ ಪುರುಷೋತ್ತಮಾನಂದಜಿ ಅವರ ಅಧ್ಯಕ್ಷತೆಯಲ್ಲಿ ರಾಮಕೃಷ್ಣ ಆಶ್ರಮ ಅನೇಕ ಉತ್ತಮ ಯೋಜನೆಗಳನ್ನು ನಡೆಸುತ್ತಿದೆ.
2004 ರ ಜನವರಿ 21ರಿಂದ 25 ರವರೆಗೆ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಶ್ರೀ ರಾಮಕೃಷ್ಣ ದೇವಸ್ಥಾನ ಉದ್ಘಾಟನಾ ಸಮಾರಂಭ ಜರುಗಿದ್ದು ಅಂದಿನಿಂದ ಇಂದಿನವರೆಗೂ ವೀಕ್ಷಕರಿಗೂ ಲಭ್ಯ. ಸದಾ ಒಂದಿಲ್ಲೊಂದು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಈ ಆಶ್ರಮ ಉತ್ತಮ ಕಾರ‍್ಯಗಳನ್ನು ಜರುಗಿಸುತ್ತಿರುವುದು ಶ್ಲಾಘನೀಯ.
ವಿವೇಕಾನಂದರ ಆಶಯದಂತೆ ರಾಮಕೃಷ್ಣ ಮಠಗಳು ಇಂದು ವಿವೇಕರ ಸಂದೇಶ, ಧರ್ಮ ಪ್ರಚಾರ ಮಾಡುವುದಲ್ಲದೇ ವಿವೇಕಾನಂದರ ಆಶಯದಂತೆ ಮಠವು ಸಮಾಜದಲ್ಲಿನ ಬಡವರಿಗೆ ಅನ್ನದಾನ, ಬಟ್ಟೆ ಕಂಬಳಿ ವಿತರಿಸುತ್ತ ನೆರವಾಗುವ ಜೊತೆಗೆ ಉಚಿತ ಆರೋಗ್ಯ, ಕಣ್ಣು ತಪಾಸಣೆ ಮತ್ತು ಚಿಕಿತ್ಸೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಶಿಷ್ಯವೇತನ, ಪುಸ್ತಕ ವಿತರಿಸಲಾಗುತ್ತಿದ್ದು, ಕಂಪ್ಯೂಟರ್ ತರಬೇತಿ ಕೇಂದ್ರ, ಗ್ರಂಥಾಲಯವನ್ನು ಒಳಗೊಂಡಿದೆ.
ವಿವೇಕಾನಂದರ ಸಂದೇಶದ ಬಗ್ಗೆ ಜಾಗೃತಿಯನ್ನುಂಟು ಮಾಡಲು ಶಾಲೆ-ಕಾಲೇಜುಗಳಲ್ಲಿ ಉಪನ್ಯಾಸವನ್ನು ಈ ಸಂಸ್ಥೆಯವರು ಏರ್ಪಡಿಸುತ್ತಿದ್ದು ವ್ಯಕ್ತಿತ್ವ ವಿಕಸನ ಶಿಬಿರ. ಯೋಗಾಸನ, ಯುವಕ ಸಂಘ, ಬಾಲಕ ಸಂಘಗಳನ್ನು ರಚಿಸುವ ಮೂಲಕ ಸ್ವಾಮಿ ವಿವೇಕಾನಂದರ ಪುಸ್ತಕ ಪ್ರದರ್ಶನ, ಕಡಿಮೆ ದರದಲ್ಲಿ ಪುಸ್ತಕಗಳನ್ನು ನೀಡುವ ಮೂಲಕ ವಿವೇಕವಾಣಿಯ ಸಂದೇಶದ ಸವಿಯನ್ನು ಉಣಬಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.
ಶ್ರೀ ರಾಮಕೃಷ್ಣದೇವಸ್ಥಾನ ಅಭೂತಪೂರ್ವವಾಗಿದೆ. 1897 ರಲ್ಲಿ ಸ್ವಾಮಿ ವಿವೇಕಾನಂದರು ಕೊಲ್ಕತ್ತಾದಲ್ಲಿ ತಮ್ಮ ಗುರುವಿನ ಹೆಸರಿನಲ್ಲಿ “ರಾಮಕೃಷ್ಣ ಮಿಷನ್”ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಇಂದು ದೇಶದೆಲ್ಲೆಡೆ ಇಂಥಹ ಸಂಸ್ಥೆಗಳು ಇದ್ದು ಬೆಳಗಾವಿಯ ಮಂದಿರದಲ್ಲಿ ಸ್ವಾಮಿ ವಿವೇಕಾನಂದರು, ಶ್ರೀ ರಾಮಕೃಷ್ಣ ಪರಮಹಂಸರು, ಶ್ರೀ ಮಾತೆ ಶಾರದಾದೇವಿಯವರ ಭಾವಚಿತ್ರಗಳು ಕಂಗೊಳಿಸುತ್ತಿವೆ.
ಬೆಳಗಾವಿ
ಬೆಳಗಾವಿಗೆ ಬರುವವರು ಕೋಟೆಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ವಿವೇಕಾನಂದರನ್ನು ನೆನಪಿಸುವ ಈ ತಾಣವನ್ನೊಮ್ಮೆ ವೀಕ್ಷಿಸಿ ಪುನೀತರಾಗಬಹುದು.
ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 “ರಾಷ್ಟ್ರೀಯ ಯುವ ದಿನ” ವೆಂದು 1984ರಿಂದ ಕೇಂದ್ರ ಸರಕಾರ ಸೂಚಿಸಿದ್ದು ಅಂದಿನಿಂದ ಇದನ್ನು ಆಚರಿಸಲಾಗುತ್ತಿದೆ.
ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ತಂದೆ ವಿಶ್ವನಾಥ ದತ್ತ ತಾಯಿ ಭುವನೇಶ್ವರಿ ದೇವಿ. 1863 ಜನವರಿ 12 ರಂದು ಕಲಕತ್ತೆಯಲ್ಲಿ ಜನನ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಹೆಸರು ಪಡೆದರು. ಇವರು ಕಲಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ವಶಾಸ್ತ್ರ ಅದ್ಯಯನ ಮಾಡಿದರು. ವಿವೇಕಾನಂದರು ಪ್ರಪಂಚದಾದ್ಯಂತ ಪರ್ಯಟನೆ ಮಾಡಿ ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳು ನಾಲ್ಕು ಪುಸ್ತಕಗಳಲ್ಲಿ ಪ್ರಕಟಗೊಂಡಿದ್ದು, ಅವುಗಳಲ್ಲಿ ಅವರು ಯುವಜನತೆಗೆ ನೀಡಿದ ಆದರ್ಶಗಳನ್ನು ನಾವಿಂದು ನೆನೆಯುವ ಜೊತೆಗೆ ಪ್ರತಿದಿನ ಅವುಗಳನ್ನು ಅಳವಡಿಸಿಕೊಂಡಿದ್ದಾದರೆ ಬದುಕು ಸಾರ್ಥಕ.
ಯೌವನವು ಒಂದು ಪರಮಾದ್ಬುತ ಸ್ಥಿತಿ. ಈ ಯೌವನ ಎಂಬ ಪದದಲ್ಲಿ ಏನಿದೆ, ಏನಿಲ್ಲ.? ಶಕ್ತಿ, ಬಲ, ತೇಜಸ್ಸು, ಹುಮ್ಮಸ್ಸು, ಸಾಹಸ, ರಭಸ, ಭರವಸೆ ಎಲ್ಲವೂ ಇದೆ. ಆದರೆ ಒಂದನ್ನು ಬಿಟ್ಟು, ಅದು ತಾಳ್ಮೆ, ವಿವೇಕ, ಅಂತಹ ಎಲ್ಲ ಯುವಶಕ್ತಿಯ ಎಲ್ಲ ಗುಣಗಳ ಜೊತೆಗೆ ವಿವೇಕ ಹೊಂದಿ ಆನಂದಭರಿತರಾಗಿ ಯೋಗಿಯಾಗಿ ಬಾಳಿದವರು ವಿವೇಕಾನಂದರು. ಅಂದು ಅವರು ನುಡಿದ ಮಾತುಗಳು ಇಂದಿಗೂ ಪ್ರಸ್ತುತ.