ದಾಸೋಹ ದಿನದ ಬ್ರಹ್ಮ ‘ಲಿಂಗೈಕ್ಯ ಡಾ. ಸಿದ್ಧಗಂಗಾ ಶ್ರೀಗಳು’

ಜನವರಿ 21 ಶಿವಕುಮಾರ ಸ್ವಾಮೀಜಿ ಅವರ 3ನೇ ವರ್ಷದ ಪುಣ್ಯಸ್ಮರಣೆ . ಈ ಹಿನ್ನೆಲೆಯಲ್ಲಿ ಶ್ರೀಗಳು ದಾಸೋಹಕ್ಕೆ ನೀಡಿದ ಮಹತ್ವವನ್ನು ಇಲ್ಲಿ ಸ್ಮರಿಸಿದ್ದಾರೆ ತುಮಕೂರು ಹಿರೇಮಠ, ತಪೋವನದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು.

ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿ

ಶಿವಪಥವನರಿವಡೆ ಗುರುಪಥವೆ ಮೊದಲುಇದು ಬಸವ ಉವಾಚ. “ಶಿವಪಥವನರಿವಡೆ ದಾಸೋಹಪಥವೆ ಮೊದಲು” ಇದು ಲಿಂಗೈಕ್ಯ ಸಿದ್ಧಗಂಗಾಶ್ರೀ ಉವಾಚ.

“ಶಿವಪಥವನರಿವಡೆ ಗುರುಪಥವೆ ಮೊದಲು” ಇದು ಹನ್ನೆರಡನೆಯ ಶತಮಾನದ ಮಾತು. “ಶಿವಪಥವನರಿವಡೆ ದಾಸೋಹಪಥವೆ ಮೊದಲು” ಇದು ಇಪ್ಪತ್ತೊಂದನೆಯ ಶತಮಾನದ ಮಂತ್ರ. ರಾಷ್ಟ್ರಕವಿ ಕುವೆಂಪುರವರು ಮನುಜಮತಕೆ ವಿಶ್ವಪಥದ ದೀಕ್ಷೆಯನ್ನು ಕೊಟ್ಟರೆ ಡಾ. ಶಿವಕುಮಾರ ಮಹಾಸ್ವಾಮಿಗಳು ಮನುಜಮತಿಗೆ ದಾಸೋಹಪಥದೀಕ್ಷೆಯನ್ನು ನೀಡಿದರು. ನಮ್ಮ ಋಷಿಮುನಿಗಳಿಗೆ ಜಗತ್ತೆಲ್ಲವೂ ಈಶಾವಾಸ್ಯವಾಗಿ ಕಂಡರೆ ಡಾ. ಶಿವಕುಮಾರ ಮಹಾಸ್ವಾಮಿಗಳಿಗೆ ಜಗವಿದೆಲ್ಲವೂ ದಾಸೋಹಾವಾಸ್ಯವಾಗಿ ಕಂಡಿತು.

ಋಷಿಮುನಿಗಳು, “ಈಶಾವಾಸ್ಯಮಿದಂ ಸರ್ವಮ್” ಎಂದು ಹೇಳಿದರೆ ಸಿದ್ಧಗಂಗಾಶ್ರೀಗಳು “ಇದಂ ಸರ್ವಂ ದಾಸೋಹಾವಾಸ್ಯ” ಎಂದು ಸಾಬೀತುಪಡಿಸಿದರು. “ದಾಸೋಹ ಏನು, ಎತ್ತ, ದಾಸೋಹದ ಹಿರಿಮೆ, ಗರಿಮೆಗಳೇನು? ದಾಸೋಹವಿದು, ಅದೇಕೆ ಸರ್ವೋಪರಿ ಮತ್ತು ಸರ್ವೋತ್ಕೃಷ್ಟ ಎಂದು ಪರಿಗಣಿಸಲ್ಪಡುತ್ತದೆ?” ಎಂಬುವುದಕ್ಕೆ ಕೆಳಗಿನ ಈ ಕೆಲವು ವಚನಗಳು ಸಾಕ್ಷಿಹೇಳುತ್ತಿವೆ.

1. ದಲಿತಮೂಲದಿಂದ ಬಂದು ಸಂಸ್ಕೃತ ಭಾಷೆಯನ್ನು ಕರತಲಾಮಲಕಗೊಳಿಸಿಕೊಂಡು ಉದ್ದಾಮ ವಿದ್ವಾಂಸನೆಂಬ ಗೌರವಕ್ಕೆ ಪಾತ್ರರಾದ ಶಿವಶರಣ ಉರಿಲಿಂಗಪೆದ್ದಿಗಳು ತಮ್ಮೊಂದು ವಚನದಲ್ಲಿ ಹೇಳುತ್ತಾರೆ, “ಕಾಮಧೇನು ಕಾಮಿಸಿದುದ ಕುಡದಿರ್ದಡೆ, ಆ ಕಾಮಧೇನು ಬಂಜೆ ಆಕಳಿಂದ ಕಷ್ಟ ನೋಡಾ. ಕಲ್ಪತರು ಕಾಮಿಸಿದುದ ಕುಡದಿರ್ದಡೆ, ಆ ಕಲ್ಪತರು ತರಿ ತಾರಿ ಬೊಬ್ಬುಲಿಯಿಂದವೂ ಕಷ್ಟ ನೋಡಾ. ಚಿಂತಾಮಣಿ ಚಿಂತಿಸಿದುದ ಕುಡದಿರ್ದಡೆ, ಆ ಚಿಂತಾಮಣಿ ಗಾಜುಮಣಿಯಿಂದವೂ ಕಷ್ಟ ನೋಡಾ. ಶ್ರೀಗುರು ಕಾರುಣ್ಯವನು ಪಡೆದು ಸದ್ಭಕ್ತನಾಗಿ ಶ್ರೀಗುರು ಲಿಂಗ ಜಂಗಮಕ್ಕೆ ಪ್ರೀತಿಯಿಂದ ದಾಸೋಹವ ಮಾಡದಿರ್ದಡೆ ಆ ಭಕ್ತನು ಲೋಕದ ಭವಿಗಳಿಂದವೂ ಕರಕಷ್ಟ ನೋಡಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ” ಎಂದು.

“ಇಷ್ಟದಾಯಿನಿ” ಎಂಬ ಖ್ಯಾತಿಗೆ ಪಾತ್ರವಾದ ಕಾಮಧೇನು ನಾವು, ನೀವುಗಳು ಬಯಸಿದ್ದನ್ನು ಕೊಡದೆ ಹೋದರೆ ಅದಕ್ಕೆ ಬಂಜೆಹಸುವಿಗೆ ಸಿಕ್ಕುವಷ್ಟು ಕನಿಷ್ಠ ಗೌರವ ಕೂಡ ಸಿಕ್ಕುವುದಿಲ್ಲ. ಹಾಗೆಯೇ ಕ್ಷಣಮಾತ್ರದಲ್ಲಿ ನಾವು ಇಷ್ಟಪಟ್ಟಿರೋದನ್ನು ನಮ್ಮಗಳ ಮುಂದೆ ತಂದು ನಿಲ್ಲಿಸದೆ ಹೋದರೆ ಕಲ್ಪತರುವಿಗೆ ಪರಚಿಕೊಂಡಿರುವ ಒಂದು ಮುಳ್ಳಿನಗಿಡಕ್ಕೆ (ಬೊಬ್ಬುಲಿ = ಮುಳ್ಳುಗಿಡ) ಸಿಕ್ಕುವಷ್ಟು ಗೌರವ ಕೂಡ ಸಿಕ್ಕುವುದಿಲ್ಲ. ಅಂತೆಯೇ ಚಿಂತಾಮಣಿಯು ಕೂಡ ನಮ್ಮಗಳ ಇಷ್ಟಾರ್ಥವನ್ನು ಈಡೇರಿಸಿದೆ ಹೋದರೆ ಅದಕ್ಕೆ ಗಾಜುಮಣಿಗೆ ಸಿಕ್ಕುವಷ್ಟು ಗೌರವ ಕೂಡ ಸಿಕ್ಕುವುದಿಲ್ಲ. ಹಾಗೆಯೇ ಶ್ರೀಗುರುವಿನ ಕಾರುಣ್ಯವನ್ನು ಪಡೆದು ಗುರು, ಲಿಂಗ, ಜಂಗಮಕ್ಕೆ ಪ್ರೀತಿಯಿಂದ ದಾಸೋಹವನ್ನು ಮಾಡದೆ ಹೋದರೆ, ಅಂಥ ಭಕ್ತನು ಬರೀ ಭವಿಯಲ್ಲ, ಆತ ಭವಸಾಗರ. ಅಂಥ ಭಕ್ತ “ಭವಿಯನ್ನು ಮೀರಿದ ಭವಿ” ಎನ್ನುತ್ತಾರೆ, ಉರಿಲಿಂಗಪೆದ್ದಿಗಳು. ಉರಿಲಿಂಗಪೆದ್ದಿಗಳು ತಮ್ಮ ಇನ್ನೊಂದು ವಚನದಲ್ಲಿ, “ದಾಸೋಹವನ್ನು ಮಾಡಲೇಬೇಕು” – “ದಾಸೋಹ ಈಜ್ ಮಸ್ಟ್ & ಶುಡ್” – ಎಂದು ಹೇಳುತ್ತಾರೆ.

ದಾಸೋಹ ಇಲ್ಲದೆ ಹೋದರೆ ಎಲ್ಲವೂ ವ್ಯರ್ಥ

“ವೇದವನೋದಿ ಕೇಳಿ ವೇದದ ವರ್ಮವನರಿದ ಫಲ ದಾಸೋಹವಯ್ಯ ಶಾಸ್ತ್ರವನೋದಿ ಕೇಳಿ ಶಾಸ್ತ್ರದ ವರ್ಮವನರಿದ ಫಲ ದಾಸೋಹವಯ್ಯ ಪುರಾಣವನೋದಿ ಕೇಳಿ ಪುರಾಣದ ವರ್ಮವನರಿದ ಫಲ ದಾಸೋಹವಯ್ಯ ಆಗಮವನೋದಿ ಕೇಳಿ ಆಗಮದ ವರ್ಮವನರಿದ ಫಲ ದಾಸೋಹವಯ್ಯ ಪುರಾತನರ ಗೀತ ವಚನ ಪ್ರಸಂಗಾನುಭಾವದಲ್ಲ ದೃಷ್ಟಫಲ ದಾಸೋಹವಯ್ಯ. ಪುರಾತನರ ಗೀತ ವಚನ ಪ್ರಸಂಗವನರಿದು ದಾಸೋಹವಿಲ್ಲದಿದ್ದಡೆ ಆ ಓದು ಗಿಳಿ ಓದಿನಂತೆ! ಆ ಕೇಳುವೆ ಮರುಳ ಕೇಳುವೆಯಂತೆ…!! ಅವನೇತಕೂ ಬಾರ್ತೆಯಲ್ಲಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ” (ವರ್ಮ = ಮರ್ಮ ; ವರ್ಮಸ್ಥಳ = ಮರ್ಮಸ್ಥಳ; ಬಾರ್ತೆಯಲ್ಲಯ್ಯ = ಉಪಯೋಗವಿಲ್ಲಯ್ಯ) “ವೇದವನ್ನೋದಿದ್ದೇನೆ, ವೇದಗಳನ್ನು ಕೇಳಿದ್ದೇನೆ, ಶಾಸ್ತ್ರವನ್ನೋದಿದ್ದೇನೆ, ಶಾಸ್ತ್ರಂಗಳನ್ನು ಕೇಳಿದ್ದೇನೆ, ಆಗಮವನ್ನು ಓದಿದ್ದೇನೆ, ಆಗಮಗಳನ್ನು ಕೇಳಿಸಿಕೊಂಡಿದ್ದೇನೆ, ಪುರಾಣವನ್ನು ಓದಿದ್ದೇನೆ, ಪುರಾಣಗಳ ಮರ್ಮ, ರಹಸ್ಯವನ್ನು ಅರಿತಿದ್ದೇನೆ, ಪುರಾತನರ ಗೀತ, ವಚನ, ಪ್ರವಚನಗಳನ್ನು ಆಲಿಸಿದ್ದೇನೆ……, ಎಂದು ನೀವು ಹೇಳಿಕೊಳ್ಳುವುದಕ್ಕೆ ನಮ್ಮ ಅಡ್ಡಿ ಏನಿಲ್ಲ. ಆದರೆ ನೀನು ದಾಸೋಹವನ್ನು ಮಾಡಿಕೊಂಡಿದ್ದರೆ ಮಾತ್ರ ಇವಕ್ಕೆಲ್ಲ ಅರ್ಥವಿದೆ. ಇಲ್ಲದೆ ಹೋದರೆ ಇವೆಲ್ಲ ವ್ಯರ್ಥ. ಇವೆಲ್ಲಕ್ಕೂ ದಾಸೋಹವನ್ನು ಮಾಡಿಕೊಂಡಿರುವುದೇ ಪ್ರಮಾಣ; ಇವೆಲ್ಲಕ್ಕೂ ದಾಸೋಹವನ್ನು ಮಾಡಿಕೊಂಡಿರುವುದೇ ಅಂತಸ್ಸಾಕ್ಷಿ ಮತ್ತು ಆತ್ಮಸಾಕ್ಷಿ.

ದಾಸೋಹವಿಲ್ಲದೆ ಹೋದರೆ, ದಾಸೋಹವನ್ನು ಮಾಡದೆ ಹೋದರೆ ಅವರುಗಳ ಎಲ್ಲ ಓದು, ಗಿಳಿಯ ಓದಿನಂತೆ ವ್ಯರ್ಥ ಮತ್ತು ನಿರರ್ಥಕ ಎನ್ನುತ್ತಾರೆ, ಉರಿಲಿಂಗಪೆದ್ದಿಗಳು. ಉರಿಲಿಂಗಪೆದ್ದಿಗಳು ತಮ್ಮ ಇನ್ನೊಂದು ವಚನದಲ್ಲಿ, “ಪರಲೋಕದಲ್ಲಿ ಲಾಭವನ್ನು ಬಯಸುವವರು ಇಹಲೋಕದಲ್ಲಿ ಜಿಪುಣತನವನ್ನು ಮಾಡದೆ ದಾಸೋಹವನ್ನು ಮಾಡಬೇಕು” ಎಂದು ಹೇಳುತ್ತಾರೆ.

“ಪರಲೋಕದಲ್ಲಿ ಲಾಭವನರಸುವರು ಇಹಲೋಕದಲ್ಲಿ ಲೋಭವ ಮಾಡದೆ, ಮಾಡಿರೆ ದಾಸೋಹವ!! ಹಲವು ಕಾಲದಿಂದ ನೇಯ್ದ ವಸ್ತ್ರವ ಲೋಭವ ಮಾಡದೆ ಇತ್ತಡೆ ಶಿವ ಮೆಚ್ಚಿ ತವನಿಧಿಯ ಕೊಡನೆ ದಾಸಿಮಯ್ಯಂಗೆ? ದೇವಾಂಗವಸ್ತ್ರವನು ಶಿವಗಣಂಗಳಿಗೆ ತೃಪ್ತಿಬಡಿಸಿದ ಅಮರನೀತಿ ಶಿವನ ಕೌಪೀನಕ್ಕೆ ತನ್ನ ಗುರಿಯ ಮಾಡಿದಡೆ ಕಾಯವೆರಸಿ ಕೈಲಾಸಕ್ಕೆ ಹೋಗನೆ? ಇದು ಕಾರಣ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಶರಣರಿಗೆ ಉಣಲಿಕ್ಕಿ ಉಡಕೊಟ್ಟು ಉಪಚರಿಸಿದಡೆ ಶಿವನೊಲಿದು ಇತ್ತ ಬಾ ಎಂದೆತ್ತಿಕೊಳ್ಳನೆ?” – ದಾಸೋಹದ ಲಾಭವನ್ನು ಉವಾಚಿಸುವ ಜೊತೆ ಜೊತೆಯಲ್ಲಿ ವಚನವಿದು, ಒಳ್ಳೆಯ ಕೆಲಸಕ್ಕೆ ಸಿಕ್ಕುವ ಸತ್ಫಲಗಳ ಮೇಲೆ ಬೆಳಕು ಚೆಲ್ಲುತ್ತದೆ.

ಉರಿಲಿಂಗಪೆದ್ದಿಗಳು ತಮ್ಮ ಇನ್ನೊಂದು ವಚನದಲ್ಲಿ, ದಾಸೋಹವನ್ನು ಮಾಡುವ ಭಕ್ತ ಮುಕ್ತಿಯ ಅಪೇಕ್ಷೆಯನ್ನು ಇಟ್ಟುಕೊಂಡು ದಾಸೋಹವನ್ನು ಮಾಡುವುದಿಲ್ಲ. ದಾಸೋಹ, ಆತನಿಗೆ ಒಂದು ತೃಪ್ತಿಸೋಪಾನವಷ್ಟೇ!! “ದಾಸೋಹವಿದು ಮುಕ್ತಿಗಿಂತಲೂ ದೊಡ್ಡದು, ಬಲು ದೊಡ್ಡದು” ಎಂಬ ಅರಿವು ಆತನಿಗಿದೆ ಎಂದು ಹೇಳುತ್ತಾರೆ, ಉರಿಲಿಂಗಪೆದ್ದಿಗಳು. “ಸ್ತನಾಮೃತವ ಸೇವಿಸುವ ಶಿಶು ಸಕ್ಕರೆಯನಿಚ್ಛಿಸುವುದೆ? ಪರುಷ ದೊರಕೊಂಡ ಪುರುಷನು ಜರಗ ತೊಳೆಯಲಿಚ್ಛೈಸುವನೆ? ದಾಸೋಹವ ಮಾಡುವ ಭಕ್ತನು ಮುಕ್ತಿಯನಿಚ್ಛೈಸುವನೆ? ಇವರು ಮೂವರಿಗೂ ಇನ್ನಾವುದೂ ಇಚ್ಛೆಯಿಲ್ಲ. ರುಚಿ ಪದಾರ್ಥವಿದ್ದಂತೆ, ಲಿಂಗಪದವು ಸಹಜಸುಖವಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ” ಎಂದೆನ್ನುವ ಉರಿಲಿಂಗಪೆದ್ದಿಗಳು ದಾಸೋಹಕ್ಕೆ ಸಹಜಸುಖದ ಪಟ್ಟ ಕಟ್ಟುತ್ತಾರೆ. ಅವರು ದಾಸೋಹವನ್ನು “ಲಿಂಗಪದ” ಮತ್ತು “ಸಹಜಸುಖ” ಎಂದು ಬಣ್ಣಿಸುತ್ತಾರೆ. ಉರಿಲಿಂಗಪೆದ್ದಿಗಳು ತಮ್ಮೊಂದು ವಚನದಲ್ಲಿ, ಸುಳ್ಳು, ಕಪಟ, ಮೋಸ, ವಂಚನೆ ಇಲ್ಲದ “ದಾಸೋಹವೇ ಮುಕ್ತಿ” ಎನ್ನುತ್ತಾರೆ, “ಲಿಂಗದಲ್ಲಿ ಮನ ಲೀಯವಾಗಿ ಜಂಗಮದಲ್ಲಿ ಧನ ಲೀಯವಾಗಿ ಸದ್ಗುರುಲಿಂಗದಲ್ಲಿ ತನು ಲೀಯವಾಗಿ ಹೋಗಲು ಭಕ್ತ ಲಿಂಗದೊಳಗೆ, ಲಿಂಗಭಕ್ತನೊಳಗೆ ವಂಚನೆಯಿಲ್ಲದ ದಾಸೋಹ ಕೇವಲ ಮುಕ್ತಿ. ಇದು ಸತ್ಯ, ಇದು ನಿತ್ಯ ಶಿವ ಬಲ್ಲನಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ” ಎಂದು. ಉರಿಲಿಂಗಪೆದ್ದಿಗಳ ಗುರುಗಳಾದ ಮತ್ತು “ಶರಣಸತಿ, ಲಿಂಗಪತಿ” ಭಾವದ ವಚನಕಾರರೆಂದೇ ಖ್ಯಾತರಾದ ಉರಿಲಿಂಗದೇವರು ತಮ್ಮ ಒಂದು ಸುಪ್ರಸಿದ್ಧ ವಚನದಲ್ಲಿ ಹೇಳುತ್ತಾರೆ, “ದಾಸೋಹವನ್ನು ಅರಿತವ ದೇಶಿಕ; ದಾಸೋಹವನ್ನು ಅರಿಯದವ ದೂಷಕ” ಎಂದು. “ಅರಿದೊಡೆ ಶರಣ, ಮರೆದೊಡೆ ಮಾನವ!! ಪಾತಕನು ಹೊಲೆಯನು ನಾನೇತಕ್ಕೆ ಬಾತೆ? ಹೊತ್ತಿಗೊಂದೊಂದು ಪರಿಯ ಗೋಸುಂಬೆಯಂತೆ ಈಶನ ಶರಣರ ಕಂಡುದಾಸೀನವ ಮಾಡುವ ದಾಸೋಹವರಿಯದ ದೂಷಕನು ನಾನಯ್ಯ ಏಸು ಬುದ್ಧಿಯ ಹೇಳಿ ಬೇಸತ್ತೆನೀ ಮನಕೆ ಈಶ ನೀ ಸಲಹಯ್ಯ, ಉರಿಲಿಂಗತಂದೆ. ಶರಣವಲಯದಲ್ಲಿ ಮತ್ತು ಶರಣಸಾರಸ್ವತವಲಯದಲ್ಲಿ, “ಬಹುಶ್ರುತ”, “ಬಹೂಕ್ತ” ಮತ್ತು “ಬಹುನಾ ಉಕ್ತ” ಗೌರವಕ್ಕೆ ಪಾತ್ರವಾದ “ಅರಿದೊಡೆ ಶರಣ, ಮರೆದೊಡೆ ಮಾನವ” ಎಂಬೀ ಮಾತಿನ ಜೊತೆಯಲ್ಲಿಯೇ ಶರಣ ಉರಿಲಿಂಗದೇವರು “ದಾಸೋಹವರಿಯದವ ದೂಷಕನಯ್ಯ” ಎಂದು ಹೇಳಿರುವುದು ಬರೀ ಉಲ್ಲೇಖನೀಯ ಮಾತ್ರವಲ್ಲ, ಅದು ಗಮನೀಯವೂ ಕೂಡ ಅಹುದು.

ಕೊನೆಯಲ್ಲೊಂದು ಮಾತು, ದಾಸೋಹದಿನದ ಕೇಂದ್ರಬಿಂದುವಾದ ಪರಮಪೂಜ್ಯ ಲಿಂಗ್ಯೆಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಕುರಿತು ಬಹುತೇಕ ಜನಗಳು ಹೇಳಿದ ವಚನವೊಂದು ಇಲ್ಲಿದೆ. ಈ ವಚನವನ್ನು ಆದ್ಯಂತವಾಗಿ ಗಮನಿಸೋಣವಾಗಲಿ; “ಲೋಕದಂತೆ ಬಾರರು ಲೋಕದಂತೆ ಇರರು ಲೋಕದಂತೆ ಹೋಗರು ನೋಡಯ್ಯ ಪುಣ್ಯದಂತೆ ಬಪ್ಪರು ಜ್ಞಾನದಂತೆ ಇಪ್ಪರು ಮುಕ್ತಿಯಂತೆ ಹೋಹರು, ನೋಡಯ್ಯ ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿ ಉಪಮಿಸಬಾರದು!!” ಅಂದು, ಉರಿಲಿಂಗದೇವರ ಕಾಲದಲ್ಲಿ

ಯಾರೋ ಏನೋ ಗೊತ್ತಿಲ್ಲ; ಆದರೆ ಈಗ, ಈ ಕಾಲದಲ್ಲಿ ಮಾತ್ರ ತುಂಬ ಜನಗಳು ಲಿಂಗ್ಯೆಕ್ಯ ಡಾ. ಶಿವಕುಮಾರ ಮಹಾಸ್ವಾಮಿಗಳವರನ್ನು ಮನಸ್ಸಿನಲ್ಲಿ ಇರಿಸಿಕೊಂಡು ಈ ವಚನವನ್ನು ಹೇಳುವುದನ್ನು ನಾವು ಕೇಳಿಸಿಕೊಂಡಿದ್ದೇವೆ. ಅಷ್ಟೊಂದು ಜನಗಳು ಡಾ. ಶಿವಕುಮಾರ ಮಹಾಸ್ವಾಮಿಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡು ಈ ವಚನವನ್ನು ಹೇಳುವುದಕ್ಕೆ ಖಂಡಿತವಾಗಿ ಕಾರಣವಿದೆ. ಅದೇನು ಕಾರಣವೆಂದರೆ, ’ ಪರಮಪೂಜ್ಯ ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮಿಗಳವರು ಈ ವಚನಕ್ಕೆ ಅರ್ಥವೂ ಅಹುದು; ಅವರು ಈ ವಚನಕ್ಕೆ ಅನ್ವರ್ಥಕವೂ ಅಹುದು!!

Related Articles

ಪ್ರತಿಕ್ರಿಯೆ ನೀಡಿ

Latest Articles