ಪುಷ್ಯ ಬಹುಳ ಪಂಚಮೀ ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ದಕ್ಷಿಣಾಧಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಮಹಾತಪಸ್ವಿಗಳಾದ ಶ್ರೀ ಸುಜ್ಞಾನೇಂದ್ರ ತೀರ್ಥರ ವರಕುಮಾರರಾದ ಶ್ರೀಸುಧರ್ಮೇಂದ್ರತೀರ್ಥರ ಆರಾಧನೆ. ಹೆಸರು : ವಿದ್ವಾನ್ ಶ್ರೀ ಗಣೇಶಾಚಾರ್ಯರು ಆಶ್ರಮ ಗುರುಗಳು : ಶ್ರೀ ಸುಜ್ಞಾನೇಂದ್ರತೀರ್ಥರು ಆಶ್ರಮ ನಾಮ : ಶ್ರೀ ಸುಧರ್ಮೇಂದ್ರತೀರ್ಥರು ಆಶ್ರಮ ಶಿಷ್ಯರು : ಶ್ರೀ ಸುಗುಣೇಂದ್ರತೀರ್ಥರು ಕಾಲ : ಕ್ರಿ ಶ 1861 - 1872 ಸಮಕಾಲೀನ ಹರಿದಾಸರು ಮತ್ತು ಅಪರೋಕ್ಷ ಜ್ಞಾನಿಗಳು : ಇಭರಾಮಪುರ ಅಪ್ಪಾವರು, ಯೋಗಿ ನಾರಾಯಣಾಚಾರ್ಯ,ಯಲಮೇಲಿ ಹಯಗ್ರೀವಾಚಾರ್ಯ, ಶ್ರೀ ಶೇಷದಾಸರು ,ಶ್ರೀ ಸುರಪುರದ ಆನಂದದಾಸರು - ಶ್ರೀ ಕೃಷ್ಣಾವಧೂತರು - ಶ್ರೀ ಗುರು ಜಗನ್ನಾಥದಾಸರು, ಶ್ರೀ ವಿಜಯರಾಮಚಂದ್ರದಾಸರು, ಶ್ರೀ ಜಯೇಶವಿಠ್ಠಲರು. ಶ್ರೀ ಅಪ್ಪಾವರ ಭವಿಷ್ಯವಾಣಿ : ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ಪಂಚಮುಖಿ ಶ್ರೀ ಮುಖ್ಯಪ್ರಾಣದೇವರ ಆರಾಧಕರು , ನಿರಂತರ ಶ್ರೀಮನ್ ನ್ಯಾಯಸುಧಾ, ಪರಿಮಳ ಗ್ರಂಥದ ಪಾರಾಯಣದಿಂದ ಅವರು ನುಡಿದ ಪ್ರತಿಯೊಂದು ಮಾತು ಸತ್ಯವಾಗುತ್ತಿತು. ಶ್ರೀ ಗಣೇಶಾಚಾರ್ಯರು ಮಂತ್ರಾಲಯ ಅಪ್ಪಾವರ ಕಾಲದಲ್ಲಿ ಇದ್ದ ಮಹಾ ಪಂಡಿತರು. ಅಪ್ಪಾವರು ಶ್ರೀ ರಾಯರ ದರ್ಶನಕೆಂದು ಬಂದಿರುತ್ತಾರೆ. ಅಪ್ಪಾವರನ್ನು ಕಂಡು ದೀರ್ಘ ದಂಡ ನಮಸ್ಕಾರ ಮಾಡಿದ ಗಣೇಶಾಚಾರ್ಯರು, ನಮಸ್ಕಾರ ಮಾಡಿದಮೇಲೆ ಅಪ್ಪಾವರು ಅವರಿಗೆ ಇದು ನೀನು ನನಗೆ ಮಾಡುವ ಕೊನೆಯ ನಮಸ್ಕಾರ ನಾಳೆಯಿಂದ ನಾನು ನಿನಗೆ ನಮಸ್ಕಾರ ಮಾಡುತ್ತೇನೆ ಅಂತ ಮಾರ್ಮಿಕವಾಗಿ ಆಚಾರ್ಯರಿಗೆ ಹೇಳುತ್ತಾರೆ. ಮರುದಿನದ ಸಾಯಂಕಾಲ ಸಮಯಕ್ಕೆ ಶ್ರೀಮಠದಿಂದ ಗಣೇಶಾಚಾರ್ಯರಿಗೆ ಈಗಲೇ ನಂಜನಗೂಡುಗೆ ಹೊರಡಬೇಕು ಶ್ರೀ ಸುಜ್ಞಾನೇಂದ್ರ ತೀರ್ಥರಿಗೆ ದೇಹ ಅಲಸ್ಯವಾಗುತ್ತಿದೆ. ಅವರು ಮುಂದಿನ ಜವಾಬ್ದಾರಿ ನಿಮಗೆ ವಹಿಸುವರೆಂದು ಹೇಳಿದ ತಕ್ಷಣ ನಂಜನಗೂಡುಗೆ ಪ್ರಯಾಣ ಬೆಳಸಿ ಮುಂದೆ ಅವರೇ ಪರಮಹಂಸ ಪೀಠದಲ್ಲಿ ವಿರಾಜಾಮಾನರಾಗಿ ಸುಧರ್ಮೇಂದ್ರತೀರ್ಥರೆಂದು ಜಗನ್ಮಾನ್ಯರಾಗಿದ್ದಾರೆ. ಸುಧರ್ಮೇಂದ್ರತೀರ್ಥರು ರಾಯರ ಮೃತ್ತಿಕೆಯಿಂದ ಭಕ್ತರೊಬ್ಬರ ಕುಷ್ಠರೋಗ ಪರಿಹರಮಾಡಿ ಅನುಗ್ರಹಿಸಿದು ಇತಿಹಾಸ. ಶ್ರೀಗಳು ಬಹುಕಾಲ ಮಂತ್ರಾಲಯವೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಬಂದ ಭಕುತರ ದುರಿತಗಳ ಪರಿಹಾರ ಮಾಡಿ ವಿಶೇಷವಾಗಿ ರಾಯರ ಕರುಣೆಗೆ ಪಾತ್ರರಾಗಿದ್ದಾರೆ. ಶ್ರೀಗಳು ಮುಂದೆ ಶ್ರೀ ಸುಗುಣೇಂದ್ರತೀರ್ಥರಿಗೆ ಸಂಸ್ಥಾನದ ಜವಾಬ್ದಾರಿ ವಹಿಸಿ ಪುಷ್ಯ ಬಹುಳ ಪಂಚಮೀಯಂದು ಮಂತ್ರಾಲಯದಲ್ಲಿ ಬೃಂದಾವನ ಪ್ರವೇಶ ಮಾಡಿದ್ದಾರೆ. ನೋಡಿರೈ ಸುಧರ್ಮೇಂದ್ರ - ಗುರುಗಳ ನೋಡಿರೈ । ಈಡು ಯಿಲ್ಲದವರಾನಾಡೊಳಗೆ । ಬೇಡಿದಾಭೀಷ್ಟ ನೀಡುತಲಿ - ನಲಿದಾಡುತಲಿ ಬರುವರಾ ।। ಸಪ್ತ ಪಂಚರುಣೋದಯ ಕಾಲದಿ । ನಿತ್ಯ ಸ್ನಾನವ ಮಾಡಿ । ಎಪ್ಪತ್ತೆರಡು ಮಹಾ - ಮಂತ್ರಗಳನು । ನಿತ್ಯ ಬಿಡದೆ ಮಾಡಿ - ಭೃತ್ಯ ಜನರಿಗೆ ।। ಚಿತ್ತ ಪೂರ್ಣರ ಚಿತ್ತ - ಶಾಸ್ತ್ರವ ನೀಡಿ । ಕ್ಷೇತ್ರ ಮೂರ್ತಿಯಾ - ಮೂರ್ತಿ ಮೂರ್ತಿಯಾ । ತೀರ್ಥ ಮೂರ್ತಿಯಾ - ಸ್ಫೂರ್ತಿಯಲಿಡುತಿಹರು ।। ಮೂರು ನಾಲ್ಕು ಚಾರು ಅನ್ನವ । ಮೂರು ಈರರಿ ಗುಣಿಸಿ । ಮೂರು ಅನ್ನವಾ ಮೂಲರಾಮಗೆ । ಪಾರ ಸುರರಿಗೊಂದು ।। ಚಿರ ಪಿತೃಗಳಿಗೊಂದು - ಪಶುವಿಗೆ ಭೂಸುರರಿಗೆ ವೊಂದು । ಚಾರು ಚತುರಾನ್ನವ ಷಡ್ರಸಗಳ । ಆರು ನಾಲ್ಕು ಸಾರರುಣಿಸುವರಾ ।। ಆರು ಆರು ಎರಡು - ಸಾವಿರ ನಾಡಿಗಳಲಿ । ಹರಿಯಾ ಆರು - ನಾಲ್ಕು ನೂರರಿಂರೆನ । ಸಾರದಿಂದಲಿ ತುತಿಯಾ । ಬ್ಯಾರೆ ಬ್ಯಾರೆ ಸ್ವರ ವ್ಯಂಜನದಲಿ ।। ಸಾರಭೋಕ್ತ್ರನ ಮತಿಯಾ । ಸಾರ ಗುರು ತಂದೆ ಗೋಪಾಲವಿಠ್ಠಲನ್ನ । ಚಾರು ಚರಣವ ಸೇರಿ ಭಜಿಪರಾ ।। ಸುಧಾಂಶುಮಿವ ಸಂಭೂತಂ ಸುಜ್ಞಾನೇಂದ್ರ ಸುಧಾಂಬುಧೌ | ಸುಧೀ ಸಂದೋಹ ಸಂಸೇವ್ಯಂ ಸುಧರ್ಮೇಂದ್ರ ಗುರುಂಭಜೇ ||
ಲೇಖಕರು : ಶ್ರೀ ಇಭರಾಮಪುರಾಧೀಶ,
ವಿಷ್ಣುತೀರ್ಥಾಚಾರ್ಯ ಇಭರಾಮಪುರ