*ಯೋಗೀಂದ್ರ ಭಟ್ ಉಳಿ, ಅಮೆರಿಕ
ನಾಳೆ ಹೀಗೆಯೇ ಆಗುತ್ತದೆ ಎಂದು ಅಧಿಕೃತವಾಗಿ ಹೇಳುವ ಧೈರ್ಯ ನಮ್ಮಲ್ಲಿ ಯಾರಿಗಿದೆ? ಇಲ್ಲಿ ಎಲ್ಲರೂ ಕುರುಡರೇ. ಗಾಳಿಯಲ್ಲಿ ಗೋಪುರ ಕಟ್ಟುವವರೇ. ಒಳ್ಳೆಯದಾಗುತ್ತದೆ, ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಷ್ಟೇ ನಮ್ಮ ಬದುಕಿನ ಬಂಡವಾಳ. ಹೊಸ ಹೊಸ ವಿನ್ಯಾಸದ ಕಾರುಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಪ್ರತಿವರ್ಷವೂ ನೂರಾರು ನೂತನ ಚಲನ ಚಿತ್ರಗಳು ತೆರೆಕಾಣುತ್ತವೆ. ಅದರ ಹಿನ್ನೆಲೆಯಲ್ಲಿ ಅದೆಷ್ಟೋ ಮಂದಿ ಹೂಡಿಕೆದಾರರು ಕನಸು ಕಟ್ಟಿಕೊಂಡಿರುತ್ತಾರೆ. ಎಲ್ಲ ನಿರ್ಮಾಪಕರೂ ವಿಜಯದ ನಿರೀಕ್ಷೆಯಲ್ಲಿರುತ್ತಾರೆ. ಕಷ್ಟ ಪಟ್ಟು ದುಡಿಯುತ್ತಾರೆ. ಎಲ್ಲರೂ ಗೆಲುವನ್ನು ಬಯಸುವವರೇ. ಸೋಲು ಯಾರಿಗೆ ಬೇಕು? ಆದರೂ, ಅವುಗಳಲ್ಲಿ ಕೆಲವೊಂದು ಮಾತ್ರ ಸೂಪರ್ ಹಿಟ್ ಆಗಿ ಬಿಟ್ಟರೆ ಮತ್ತೆ ಹೆಚ್ಚಿನವು ಅರಳುತ್ತಲೇ ಮುದುಡಿಬಿಡುತ್ತವೆ!
ಅವನಂತೆಯೇ ನಡೆವುದು
ಯಾರಿಗೆ ಸೋಲು ಯಾರಿಗೆ ಗೆಲುವು ಎಂಬುದನ್ನು ಆರಂಭದಲ್ಲೇ ತಿಳಿಯಲು ಬರುವುದಿಲ್ಲ. ಪಂದ್ಯ ಮುಗಿದ ಬಳಿಕವಷ್ಟೇ ಫಲಿತಾಂಶ ಪ್ರಕಟವಾಗುವುದು. ತನ್ನ ಪ್ರಯತ್ನಕ್ಕೆ ಯಶಸ್ಸು ಸಿಗಬೇಕೆಂಬ ಆಸೆ, ಅಪೇಕ್ಷೆಯಂತೂ ಪ್ರತಿಯೊಬ್ಬನಿಗೂ ಇದ್ದೇ ಇರುತ್ತದೆ. ಆದರೆ ಗೆಲುವಿನ ಗುಟ್ಟನ್ನು ಸ್ವಷ್ಟವಾಗಿ ಬಲ್ಲವನು ಈ ಜಗತ್ತಿನಲ್ಲಿ ಭಗವಂತನೊಬ್ಬನೇ! ಮಾಡುವ ಪ್ರಯತ್ನದಲ್ಲಿ ಮಾತ್ರ ನಮಗೆ ಅಧಿಕಾರ. ಫಲ ಅವನು ಕೊಟ್ಟರೆ ಉಂಟು! ಇಲ್ಲವಾದರೆ ಇಲ್ಲ.
’ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಪ್ರಯತ್ನ ನಮ್ಮ ಕೈಯಲ್ಲಿರುತ್ತದೆ. ಫಲ ಅವನ ಇಚ್ಛೆ. ಜನ್ಮಾಷ್ಟಮಿಯ ಮೊಸರು ಕುಡಿಕೆಯಂತೆ. ಕಣ್ಜಿಗೆ ಬಟ್ಟೆಕಟ್ಟಿಕೊಂಡು ಎಲ್ಲ ಕಡೆ ಸುಮ್ಮನೆ ಕೋಲನ್ನು ಬೀಸುತ್ತಿರಬೇಕು. ಅವನು ಇಚ್ಛಿಸಿದರೆ, ನಮಗೆ ಪಡೆಯುವ ಯೋಗವಿದ್ದರೆ ಯಾವುದೋ ಒಂದು ಹೊಡೆತ ಮೊಸರಿನ ಮಡಕೆಯನ್ನು ಒಡೆಯಬಹುದು. ಇಲ್ಲವಾದರೆ ಬೀಸಿ ಬೀಸಿ ಕೈಸೋತು ನಾವು ಕುಸಿಯುತ್ತೇವೆಯೇ ಹೊರತು ಮಡಕೆ ಹಾಗೆಯೇ ಉಳಿದುಬಿಡುತ್ತದೆ! ನಮ್ಮ ಪ್ರಯತ್ನಗಳ ಪರಂಪರೆಯಲ್ಲಿ ಯಾವುದಾದರೊಂದು ಫಲಕೊಟ್ಟೇ ಕೊಡುತ್ತದೆ ಎಂಬ ನಂಬಿಕೆಯಂತೂ ನಮ್ಮೊಳಗೆ ಜೀವಂತ ಇರಬೇಕು. ಎಸೆವ ನೂರು ಕಲ್ಲುಗಳಲ್ಲಿ ಒಂದಾದರೂ ಮಾವಿನಕಾಯಿಯನ್ನು ಉದುರಿಸಬಹುದು ಎಂಬ ಭರವಸೆ ಬೇಕು ಅಷ್ಟೇ.
ಕಣ್ಣೆದುರೇ ಹಾದು ಹೋಗುವ ಅಸಂಖ್ಯ ಸೂರ್ಯನ ಕಿರಣಗಳನ್ನು ನಾವು ಗಮನಿಸದೆ ಹೋಗಬಹುದು. ಆದರೆ ಅದೆಲ್ಲಿಂದಲೋ ಮೋಡದ ಮರೆಯಲ್ಲಿ ನುಸುಳಿ ಬರುವ ಕೆಲವು ಕಿರಣಗಳು ಕಾಮನಬಿಲ್ಲಿನ ಚಿತ್ತಾರವಾಗಿ ನಮ್ಮನ್ನು ಸೆಳೆಯುತ್ತವೆ. ಒಂದು ಜೋಳದ ತೆನೆಯಲ್ಲಿ ನೂರಾರು ಬೀಜಗಳಿರಬಹುದು. ಮುಂದೆ ಬದುಕಿ ಬೆಳೆದು ಅಂಥದ್ದೇ ತೆನೆಯನ್ನು ಕೊಡುವ ಯೋಗ ಯಾವ ಬೀಜಕ್ಕಿದೆ ಎಂದು ಬಲ್ಲವರಾರು?
ಭಗವದರ್ಪಣೆ
ಏನಾದರೊಂದು ವಿಶೇಷ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದಾಗ, ಸಾಧನೆಯ ಹಾದಿಯಲ್ಲಿ ಒಂದು ಹಂತದ ಮೈಲಿಗಲ್ಲನ್ನು ದಾಟಿದಾಗ ನಮಗೆ ಅತೀವ ಆನಂದವಾಗುವುದೇನೋ ಸಹಜ. ಆದರೆ ನಾವು ಯಾರೂ ಸಾಧಿಸದ್ದನ್ನು ಸಾಧಿಸಿಬಿಟ್ಟೆವು ಎಂದು ಸಂಭ್ರಮಿಸುವುದಕ್ಕಿಂತ ಮುಂಚೆ ಸ್ವಲ್ಪ ಯೋಚಿಸಬೇಕು. ಅಲ್ಲಿ ನಿಜವಾಗಿಯೂ ನಮ್ಮದೆನ್ನುವುದು ಏನಿದೆ? ಕಣ್ಣು ಮುಚ್ಚಿ ಹೊಡೆದ ಕಲ್ಲು ಗುರಿತಲುಪಿದ್ದು ನಮ್ಮ ಭಾಗ್ಯ! ಅಷ್ಟೇ ತಾನೇ? ಕಲ್ಲೂ ನಮ್ಮದಲ್ಲ, ಗುರಿಮುಟ್ಟಿಸಿದ್ದೂ ನಾವಲ್ಲ! ಯಾರದ್ದೋ ಲ್ಯಾಂಬೊರ್ಗಿನಿ ಕಾರು. ಡ್ರೈವ್ ಮಾಡಿ ಆನಂದಿಸಿದ್ದು ನಾವು. ಆ ಸಂತೋಷವನ್ನು ಅನುಭವಿಸಲು ಅನುವು ಮಾಡಿಕೊಟ್ಟವನಿಗೆ ನಮ್ಮ ಧನ್ಯತೆಯನ್ನು ಸಮರ್ಪಿಸಬೇಕು ತಾನೇ ? ಯಾವುದೇ ಗೆಲುವಿನ ಸಂಭ್ರಮಾಚರಣೆಯ ಸರಿಯಾದ ಸ್ವರೂಪವೆಂದರೆ ಅದು ಭಗವದರ್ಪಣೆ ! ನಾನಲ್ಲ, ನನ್ನದಲ್ಲ ಅದು ನಿನ್ನ ಕರುಣೆ ಎಂಬ ಧನ್ಯತೆಯ ಭಾವನೆ ! ಅದನ್ನು ಮರೆತು ಸುಮ್ಮನೆ ಸಂಭ್ರಮಾಚರಣೆಯಲ್ಲಿ ತೊಡಗಿದರೆ ನಾವು ಅಲ್ಲಿಯೇ ಕಳೆದುಹೋಗುವ ಅಪಾಯವಿದೆ. ನಾನೇ ಎಲ್ಲ, ನನ್ನಿಂದಲೇ ಎಲ್ಲ ಎನ್ನುವ ಅಹಂಕಾರ ಮುಂದಿನ ಅವಕಾಶಗಳಿಂದ ನಮ್ಮನ್ನು ವಂಚಿತರನ್ನಾಗಿಸಬಹುದು. ಬದುಕಿನಲ್ಲಿ ಬರುವ ಪ್ರತಿಯೊಂದು ಅವಕಾಶವೂ ಅಪೂರ್ವ.
ಕ್ರಿಕೆಟ್ ಆಟದಲ್ಲಿ ಮತ್ತೆ ಮತ್ತೆ ಬಂದೆರಗುವ ಚೆಂಡಿನಂತೆ. ಒಂದು ಎಸೆತವನ್ನು ಚೆನ್ನಾಗಿ ಎದುರಿಸಿದೆವೆಂದು ಸಂಭ್ರಮಿಸುತ್ತಾ ಮೈಮರೆತರೆ ಮುಂದಿನ ಎಸೆತಕ್ಕೇ ಔಟ್ ಆಗಿಬಿಡುವ ಅಪಾಯವಿದೆ! ಏನಾದರೊಂದು ಒಳ್ಳೆಯದನ್ನು ಸಾಧಿಸಿದ ತತ್ಕ್ಷಣ ಅದನ್ನು ’ಕೃಷ್ಣಾರ್ಪಣ’ ಮಾಡಿ ಮರೆತು ಬಿಡುವ ಅಭ್ಯಾಸ ಮಾಡಿಕೊಳ್ಳಬೇಕು. ಮುಂದಿನ ಸತ್ಕರ್ಮದ ಸಾಧನೆಗೆ ’ಸಂಕಲ್ಪ’ ಮಾಡಿ ಸನ್ನದ್ಧರಾಗಿರಬೇಕು. ನಮ್ಮ ಮಕ್ಕಳಿಗೂ ಇದನ್ನು ಚೆನ್ನಾಗಿ ಬೋಧಿಸಬೇಕು. ಮಾಡಿದ ಒಂದು ಸಾಧನೆಯನ್ನು ಎಲ್ಲರ ಮುಂದೆ ಮತ್ತೆ ಮತ್ತೆ ಹೇಳುತ್ತಾ, ಹೊಗಳುತ್ತಾ ಬಂದರೆ ಮಕ್ಕಳ ತಲೆಯಲ್ಲಿ ಅಹಂಭಾವದ ಕೋಡು ಬಂದು ಬಿಡುತ್ತದೆ! ಮತ್ತೆ ಸಾಧನೆ ಮುಂದುವರಿಯುವುದಿಲ್ಲ. ಕಬ್ಬಿನ ಗಿಡದಲ್ಲಿ ಹೂವು ಅರಳಿದರೆ ಮುಂದೆ ಅದು ಬೆಳೆಯುವುದಿಲ್ಲ. ಬಾಳೆಯ ಗಿಡ ಗೊನೆ ಮೂಡಿದ ಮೇಲೆ ಕೆಳಕ್ಕೆ ಬಾಗುವುದೇ ಹೊರತು ಮತ್ತೆ ಎತ್ತರಕ್ಕೇರುವುದಿಲ್ಲ.