* ಪ್ರಜ್ವಲ್ ಸಿ
ಬದುಕೆಂದರೆ ಬರೀ ಜೀವಿಸುವುದು ಮಾತ್ರವಲ್ಲ, ಪ್ರೀತಿಸುವುದು. ಈ ಭೂಮಿಯಲ್ಲಿ ಪ್ರತಿ ಜೀವಿಗೂ ಸಾವು ಖಚಿತವಾಗಿರುತ್ತದೆ. ಈ ಹುಟ್ಟು ಹಾಗೂ ಸಾವಿನ ನಡುವೆ ಇರುವ ಸಮಯದಲ್ಲಿ ಹೇಗೆ ಬದುಕುತ್ತೇವೆ ಎಂಬುದಷ್ಟೇ ಮುಖ್ಯವಾಗಿರುತ್ತದೆ.
ಸ್ವಾಮಿ ವಿವೇಕಾನಂದರು ಹೇಳಿದ್ದಾರೆ, “ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ”. ಇಲ್ಲಿ ಯಾರಿಗೆ ಯಾರೂ ಇಲ್ಲ ನಮಗೆ ನಾವೇ. ಎಲ್ಲರೂ ಅವರ ಲಾಭಕ್ಕಾಗಿ ನಮ್ಮೊಂದಿಗಿರುತ್ತಾರೆ ಹೊರತು ನಮ್ಮ ಒಳ್ಳೆಯದಕ್ಕಾಗಿ ನಮ್ಮೊಂದಿಗೆ ಇರುವವರು ತೀರಾ ಕಡಿಮೆ. ಈ ಸಾವು ಯಾರಿಗೆ ಯಾವಾಗ ಹೇಗೆ ಬರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದ್ದರಿಂದ ಬದುಕಿರುವಷ್ಟು ದಿನ ನಮಗೆ ಯಾರು ಏನೇ ಬಯಸಿದರು ನಾವು ಅವರಿಗೆ ಒಳ್ಳೆಯದಾಗಲಿ ಎಂದು ಬಯಸೋಣ. ಸಾವಿನ ನಂತರ ಶತ್ರುಗಳೇ ನಮ್ಮನ್ನು ಹೊಗಳುವಂತಾದರೆ ಅದುವೇ ಜೀವನ.
ಸಾವು ಬರಲಿ, ಆದರೆ ಆ ಸಾವು ಇಡೀ ಜಗತ್ತು ನೋಡುವಂತಿರಬೇಕು. ಅದು ಬಿಟ್ಟು ಯಕಶ್ಚಿತ್ ಪ್ರಾಣಿಗಳ ಹಾಗೆ ಸಾಯಬಾರದು. ಸಾವಿನ ಮೊದಲು ಆಸ್ತಿ ಮಾಡುವ ಬದಲು ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸಂಪಾದಿಸಬೇಕು. ಸಾಧ್ಯವಾದಷ್ಟು ಜನರಿಗೆ ಒಳ್ಳೆಯದು ಮಾಡೋಣ, ನಮ್ಮೊಂದಿಗೆ ಒಳ್ಳೆಯವರ ಹಾಗೆ ಬೆನ್ನ ಹಿಂದೆ ಚೂರಿ ಹಾಕುವ ಜನರ ಕಾಲ ಇದು. ಆದ್ದರಿಂದ ನಮ್ಮನ್ನು ಪ್ರೀತಿಸುವವರಿಗೆ ನಾವು ಎಂದಿಗೂ ಚಿರಋಣಿ ಆಗಿರೋಣ. ನಮ್ಮನ್ನು ದ್ವೇಷಿಸುವವರಿಗೆ ದೂಷಿಸುವ ಬದಲು ಅವರ ಮುಂದೆ ಬೆಳೆದು ತೋರಿಸಬೇಕಾಗಿದೆ.
ಶತ್ರುಗಳಿಲ್ಲದ ಜನರಿಲ್ಲ. ಯಾರು ಎಷ್ಟೇ ಒಳ್ಳೆಯದನ್ನು ಮಾಡಲಿ, ಕೆಟ್ಟದ್ದೇ ಮಾಡಲಿ ಶತ್ರುಗಳು ಇರುತ್ತಾರೆ. ನಮ್ಮನ್ನು ಪ್ರೋತ್ಸಾಹಿಸುವವರಿಗೆ ಚಿರಋಣಿಯಾಗಿರೋಣ. ಯಾರು ಏನೇ ಹೇಳಲಿ ನಾವು ಅವರೊಂದಿಗೆ ಕಿತ್ತಾಡಿ ತಲೆಕೆಡಿಸಿಕೊಳ್ಳುವುದಕ್ಕಿಂತ ಸಾಧಿಸಬೇಕು. ಆ ಸಮಯ ಬಂದೇ ಬರುತ್ತದೆ. ಹಿಂದೆ ಮುಂದೆ ಗೊತ್ತಿಲ್ಲದ ಈ ಜೀವನದಲ್ಲಿ ಯಾರು ಯಾರಿಗೂ ತಲೆಕೆಡಿಸಿಕೊಳ್ಳದೆ, ನಮ್ಮ ಜೀವನ ನಮ್ಮ ಕೈಯಲ್ಲಿ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ಬೇರೆಯವರಿಗೆ ಮಾದರಿ ಆಗುವ ಹಾಗೆ ಬದುಕೋಣ. ಶತ್ರುಗಳನ್ನು ನಿರ್ಲಕ್ಷಿಸಿ, ಒಳ್ಳೆಯತನವನ್ನು ಪ್ರೀತಿಸೋಣ. ಬದುಕು ಇರುವುದು ಕೆಲವೇ ದಿನ. ಎಲ್ಲರೊಂದಿಗೆ ಅರಿತು ಬೆರೆತು ನಡೆಯುವುದರ ಮೂಲಕ ಅಷ್ಟೂ ದಿನ ಬದುಕನ್ನು ಬಾಳೋಣ.
*ಪ್ರಜ್ವಲ್ ಸಿ, ದ್ವಿತೀಯ ಬಿಎ, ಪತ್ರಿಕೋದ್ಯಮ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು.