*ಶ್ರೀನಿವಾಸ ಮೂರ್ತಿ ಎನ್ ಎಸ್
ವಿಜಯನಗರ ಅರಸರು ಹಲವು ದೇವಾಲಯಗಳನ್ನು ನವೀಕರಣ, ವಿಸ್ತರಣೆ ಮಾಡುವುದರ ಜತೆಗೆ ತಮ್ಮದೇ ಆದ ಹಲವು ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ನಮ್ಮ ನೆರೆಯ ರಾಜ್ಯಗಳಲ್ಲಿಯೂ ಹಲವು ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಅವುಗಳಲ್ಲಿ ರಾಜ್ಯದ ಗಡಿಯಂಚಿನಲ್ಲಿ ಸುಮಾರು ದೇವಾಲಯಗಳು ಇವೆ. ಅವುಗಳಲ್ಲಿ ಕರ್ನಾಟಕದ ಶಿರಾ ತಾಲ್ಲೂಕಿಗೆ ಹೊಂದಿಕೊಂಡಂತೆ ಇರುವ ಮುತುಕೂರಿನಲ್ಲಿ ಸುಂದರ ಶಿಲ್ಪ ಹೊಂದಿರುವ ದೇವಾಲಯವಿದ್ದು, ಶ್ರೀ ಲಕ್ಶ್ಮೀ ನಾರಾಯಣ ದೇವರಿಗೆ ಅರ್ಪಿಸಲಾಗಿದೆ
ಇತಿಹಾಸ ಪುಟದಲ್ಲಿ ಮುತುಕೂರು ಪ್ರಮುಖ ಪಟ್ಟಣವಾಗಿ ಗುರುತಿಸಿಕೊಂಡಿತ್ತು. ಸ್ಥಳ ಪುರಾಣದಂತೆ ಇಲ್ಲಿ ವಿಜಯನಗರ ಕಾಲದಲ್ಲಿ ಮುತ್ತುಗಳನ್ನ ಮಾರುತಿದ್ದರಿಂದ ಮುತುಕೂರು ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ. ಪೌರಾಣಿಕ ಕಥೆಯಂತೆ ದ್ವಾಪರ ಯುಗದಲ್ಲಿ ಸ್ಥಾಪಿತವಾದ ಕ್ಷೇತ್ರವಿದು ಎಂಬ ನಂಬಿಕೆ ಸ್ಥಳೀಯರದ್ದು.
ಶ್ರೀ ಲಕ್ಶ್ಮೀ ನಾರಾಯಣ (ಕೇಶವ) ದೇವಾಲಯ
ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಸುಮಾರು ಏಳು ಅಡಿ ಎತ್ತರದ ಮೂರ್ತಿ ಇದೆ. ಮೂರ್ತಿ ಶಂಖ, ಚಕ್ರ, ಗದೆ ಹಾಗು ಅಭಯ ಹಸ್ತ ಹೊಂದಿದ್ದು ಅದರಲ್ಲಿ ಪದ್ಮವಿದೆ. ಮೂಲತಹ ಕೇಶವ ಮೂರ್ತಿ ಸ್ವರೂಪ ಹೊಂದಿರುವ ಈ ಮೂರ್ತಿಯ ಪಕ್ಕದಲ್ಲಿ ಪ್ರತ್ಯೇಕವಾದ ಲಕ್ಷ್ಮೀ ಮೂರ್ತಿ ಇರುವ ಕಾರಣ ಶ್ರೀ ಲಕ್ಷ್ಮೀ ನಾರಾಯಣ ಎಂದೇ ಭಕ್ತರಲ್ಲಿ ಪ್ರಸಿದ್ದಿ ಪಡೆದಿದೆ. ಸುಂದರವಾದ ಕೊರಳಿನ ಆಭರಣ, ನಡುವಿನ ಪಟ್ಟಿ, ಕಾಲಿನ ಕಡಗದ ಕಲಾತ್ಮಕ ಕೆತ್ತನೆಗಳು ಮೂರ್ತಿಯನ್ನು ಸುಂದರವಾಗಿ ಕಾಣುವಂತೆ ಮಾಡಿದೆ. ಶಿಲ್ಪದಲ್ಲಿನ ಕೊಳಗ ಮಾದರಿಯ ಕಿರೀಟ ಗಮನ ಸೆಳೆಯುತ್ತದೆ. ಪಕ್ಕದಲ್ಲಿ ಶಂಖ, ಚಕ್ರಧಾರಿಯಾದ ಶ್ರೀ ಲಕ್ಷ್ಮೀದೇವಿಯ ಮೂರ್ತಿ ಇದೆ. ಇನ್ನು ಪಕ್ಕದಲ್ಲಿ ಸ್ಥಳೀಯರು ರಾಮ ದೇವರು ಎಂದು ಪೂಜಿಸುವ ಎರಡು ಕಲ್ಲಿನ ಶಿಲ್ಪಗಳಿವೆ
ದೇವಾಲಯವನ್ನು ಊರಿನವರು ನವೀಕರಿಸಿದ್ದು ವಿಶಾಲವಾದ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ. ಇಲ್ಲಿ ನೂತನ ಧ್ವಜ ಸ್ಥಂಭವನ್ನು ನಿರ್ಮಿಸಲಾಗಿದೆ. ವೈಶಾಖ ಮಾಸದಲ್ಲಿ ಇಲ್ಲಿ ಉತ್ಸವ ನಡೆಯಲಿದ್ದು ಕಲ್ಯಾಣೋತ್ಸವ, ವಿವಿಧ ಹೋಮಗಳನ್ನ ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ದೇವಾಲಯದ ಎದುರು ಭಾಗದಲ್ಲಿ ಹತ್ತು ಅಡಿ ಎತ್ತರದ ಉಬ್ಬು ಶಿಲ್ಪದ ವೀರಾಂಜನೇಯ ಮೂರ್ತಿಯನ್ನು ಬಂಡೆಯ ಮೇಲೆ ಕೆತ್ತಲಾಗಿದೆ.
ಈಶ್ವರ ದೇವಾಲಯ
ಈ ದೇವಾಲಯವನ್ನು ಸಾಲಂಕಿ ವಂಶಸ್ಥರಾದ ಶ್ರೀಮತಿ ನೀಲಮ್ಮ ಮತ್ತು ಸಾಲಂಕಿ ಪ್ರಭಯ್ಯನವರು ಮಾಡಿದ್ದಾರೆ. ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ದೇವಾಲಯದಲ್ಲಿನ ದೇವ ಕೋಷ್ಟಗಳಲ್ಲಿ ವೀರಭದ್ರ ಹಾಗು ಗಣಪತಿ ಶಿಲ್ಪಗಳಿದ್ದು ಶಿವನಿಗೆ ಎದುರಾಗಿ ನಂದಿ ಇದೆ. ದೇವಾಲಯದಲ್ಲಿ ಗಮನ ಸೆಳೆಯುವುದು ದೇವಾಲಯದ ಪ್ರಾಕಾರದ ಗೋಡೆಯ ಮೇಲಿನ ದೇವ ಕೋಷ್ಟಕಗಳಲ್ಲಿನ ಗಾರೆ ಶಿಲ್ಪಗಳು. ಇಲ್ಲಿ ಸುಂದರ 36 ಶಿವಲೀಲಾ ಮೂರ್ತಿಗಳ ಕೆತ್ತನೆ ನೋಡಬಹುದು. ಸಾಕಷ್ಟು ಗಾರೆ ಶಿಲ್ಪಗಳು ಹಾಳಾಗಿದ್ದರೂ ಉಳಿದಿರುವ ಮೂರ್ತಿಗಳ ನಂಜನಗೂಡನಿ ಶಿಲ್ಪಗಳನ್ನು ನೆನಪಿಸುತ್ತದೆ. ಅಲ್ಲಿನ ಮೂರ್ತಿಗಳಷ್ಟು ಸುಂದರವಾಗಿರದಿದ್ದರೂ ತನ್ನದೇ ಆದ ಮಿತಿಯಲ್ಲಿ ಉತ್ತಮವಾಗಿದೆ.
ತಲುಪುವ ಬಗ್ಗೆ: ಬೆಂಗಳೂರು – ಶಿರಾ – ಬರಗೂರು – ಹಾರೊಗೆರೆ ಮಾರ್ಗವಾಗಿ ತಲುಪಬಹುದು. ಶಿರಾದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ.