ರಂಭಾಪುರಿ ಪೀಠ (ಬಾಳೆಹೊನ್ನೂರು) : ಮಾನವ ಜೀವನ ಅಮೂಲ್ಯವಾದುದು. ಅರಿತು ಬಾಳುವುದರಲ್ಲಿ ಸುಖ ಶಾಂತಿಯಿದೆ. ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸಿದೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ನಿಮಿತ್ಯ ಫೆಬ್ರುವರಿ 16 ರಂದು ಜರುಗಿದ ಸಾಮೂಹಿಕ ಶಿವದೀಕ್ಷಾ ಮತ್ತು ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನೆಮ್ಮದಿಯ ಜೀವನಕ್ಕೆ ಹಣವೊಂದೇ ಮುಖ್ಯವಲ್ಲ. ಅದರೊಂದಿಗೆ ಶಿವ ಜ್ಞಾನದ ಅರಿವು ಮತ್ತು ಗುರು ಕಾರುಣ್ಯ ಮುಖ್ಯ. ಜೀವನ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಬೇರೆಯವರಿಗೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ದೊಡ್ಡ ಮನಸ್ಸು ದೊಡ್ಡ ಗುಣದಿಂದ ದೊಡ್ಡಸ್ತಿಕೆ ಸಿಗುತ್ತದೆ ಎಂಬುದನ್ನು ನೆನಪಿಡಬೇಕು. ನೀರು ಎರೆದವನಿಗೂ ಕಡಿಯ ಬಂದವನಿಗೂ ಮರ ನೆರಳು ಹಣ್ಣು ಕೊಡುತ್ತದೆ. ಸುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯೊಳಗೆ ಪ್ರೀತಿ ವಾತ್ಸಲ್ಯದ ದೀಪ ಹಚ್ಚಬೇಕೆಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಗುರು ಮತ್ತು ಗುರಿ ಹಿಡಿದು ಮುನ್ನಡೆದು ಬಾಳಿದರೆ ಬದುಕಿಗೆ ಬೆಲೆ ಬಲ ಬರುವುದೆಂದರು.
ಹುಣ್ಣಿಮೆ ಶುಭ ಸಂದರ್ಭದಲ್ಲಿ ಸಾಮೂಹಿಕ ಶಿವದೀಕ್ಷಾ ಮತ್ತು ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿತು. ಈ ಪವಿತ್ರ ಸಮಾರಂಭದಲ್ಲಿ ನಿಡಗುಂದಿ ರುದ್ರಸ್ವಾಮಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿಗಳಾದ ವಿದ್ವಾನ್ ವಿರೂಪಾಕ್ಷ ದೇವರು ಗಂವ್ಹಾರ, ಶಿವಮೊಗ್ಗದ ಎಸ್.ಎಚ್. ಸಿದ್ದಣ್ಣ, ತರೀಕೆರೆಯ ಸದ್ಭಕ್ತರು, ಆಂಧ್ರ ಪ್ರದೇಶದ ನಂದ್ಯಾಲ ರೇವಣಸಿದ್ಧಯ್ಯ ಪರಿವಾರದವರು ಉಪಸ್ಥಿತರಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಅವರಿಂದ ಭಕ್ತಿಗೀತೆ ಹಾಗೂ ಶಿಕ್ಷಕ ವೀರೇಶ ಕುಲಕರ್ಣಿ ಅವರಿಂದ ನಿರೂಪಣೆ ಜರುಗಿತು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು