ಧರ್ಮಾಚರಣೆಯಿಂದ ಬದುಕು ಸಮೃದ್ಧ: ಶ್ರೀ ರಂಭಾಪುರಿ ಜಗದ್ಗುರುಗಳು


ಹರಪನಹಳ್ಳಿ: ಸುಖ ಶಾಂತಿ ಬದುಕಿಗೆ ಧರ್ಮವೇ ಮೂಲ. ಧರ್ಮ ಪರಿಪಾಲನೆಯಿಂದ ಬದುಕು ಸಮೃದ್ಧಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಕಣವಿಹಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಉದ್ಘಾಟನೆ-ಪ್ರತಿಷ್ಠಾಪನೆ-ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಮನುಷ್ಯನಲ್ಲಿ ಬುದ್ಧಿ ಶಕ್ತಿ ಬೆಳೆದಂತೆ ದೇವರು ಮತ್ತು ಧರ್ಮದಲ್ಲಿ ನಂಬಿಗೆ ಕಳೆದುಕೊಳ್ಳುತ್ತಿದ್ದಾನೆ. ಮನುಷ್ಯನಲ್ಲಿ ವೈಚಾರಿಕ ಭಾವನೆಗಳು ಬೆಳೆದರೂ ಸಹ ನಾಸ್ತಿಕ ಭಾವನೆ ಬೆಳೆಯಬಾರದು. ಅಧರ್ಮದ ವಿರುದ್ಧ ಹೋರಾಡಿದ ಮಹಾನ್ ಶಕ್ತಿ ವೀರಭದ್ರಸ್ವಾಮಿ. ಅವನ ಕ್ರಿಯಾ ಕರ್ತೃತ್ವ ಶಕ್ತಿ ಬಹಳ ದೊಡ್ಡದು. ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆಗಾಗಿ ವೀರಭದ್ರನ ಅವತಾರವಾಗಿದೆ. ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಪೂಜೆಗೊಳ್ಳುವ ವೀರಭದ್ರಸ್ವಾಮಿ ಕಣವಿಹಳ್ಳಿಯಲ್ಲಿ ನೆಲೆಗೊಂಡಿರುವುದು ಹೆಮ್ಮೆಯ ಸಂಗತಿ. ದೇವಸ್ಥಾನ ಟ್ರಸ್ಟಿನವರು ಸುಂದರ ದೇವಾಲಯ ನಿರ್ಮಿಸಿ ವೀರಭದ್ರಸ್ವಾಮಿ ಪ್ರತಿಷ್ಠಾಪಿಸಿರುವುದು ತಮಗೆ ಸಂತೋಷ ತಂದಿದೆ ಎಂದರು.


ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶ್ರೀಗಳು, ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶ್ರೀಗಳು, ಚಾನುಕೋಟಿ ಕೊಟ್ಟೂರು ಶ್ರೀಗಳು, ಬೆಣ್ಣೆಹಳ್ಳಿ ಶ್ರೀಗಳು ಪಾಲ್ಗೊಂಡು ನುಡಿ ಸೇವೆ ಸಲ್ಲಿಸಿದರು. ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.


ಹಲವಾರು ಗಣ್ಯರಿಗೆ-ರಾಜಕೀಯ ಧುರೀಣರಿಗೆ ಗುರುರಕ್ಷೆ ನೀಡಲಾಯಿತು. ಶಿಕ್ಷಕ ವೀರಣ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಬಸವರಾಜ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಮುಖ್ಯ ದ್ವಾರದಿಂದ ದೇವಸ್ಥಾನದವರೆಗೆ ವಾದ್ಯ ವೈಭವ ಕಳಸ ಕನ್ನಡಿಯೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಬರಮಾಡಿಕೊಂಡರು.

ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರ

Related Articles

ಪ್ರತಿಕ್ರಿಯೆ ನೀಡಿ

Latest Articles