ಲಕ್ಷ್ಮೇಶ್ವರ:
ಬದುಕಿನಲ್ಲಿ ನೊಂದು ಬೆಂದು ಬಂದವರಿಗೆ ನವ ಚೈತನ್ಯ ತುಂಬುವ ಮತ್ತು ಸಾಮರಸ್ಯದ ಬದುಕಿಗೆ ಜಾತ್ರೆಗಳು ಸ್ಫೂರ್ತಿಯಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಮಗಾಗಿ ಸುಖ ಸಂತೋಷ ಸೌಭಾಗ್ಯ ಹೇಗೆ ಬಯಸುತ್ತೇವೆಯೋ ಅದೇ ರೀತಿ ಇತರರಿಗಾಗಿ ಬಯಸುವುದು ನಿಜವಾದ ಧರ್ಮವಾಗಿದೆ. ಮಾನ ಸನ್ಮಾನಕ್ಕಿಂತ ಸಂಸ್ಕಾರ ಸಂಸ್ಕೃತಿ ಮುಖ್ಯ. ಭೌತಿಕ ಸಂಪತ್ತಿಗಿ0ತ ಮಾನಸಿಕ ಶಾಂತಿಯ ಸಂಪತ್ತು ದೊಡ್ಡದು. ಮನುಷ್ಯನ ಮನಸ್ಸು ಹಲವಾರು ವಿಷಯ ವಾಸನೆಗಳಿಂದ ಮಲಿನಗೊಂಡ ಬಟ್ಟೆಯಂತಾಗಿದೆ. ಬಾಳಿನ ಬನ ಚಿಗುರಲು ಗುರು ಕಾರುಣ್ಯ ಕಿರಣ ಅವಶ್ಯಕ. ಕಲ್ಲು ಮಣ್ಣು ಇಟ್ಟಿಗೆಗಳಿಂದ ಭವ್ಯ ಕಟ್ಟಡಗಳನ್ನು ಕಟ್ಟಬಹುದು. ಆದರೆ ಪ್ರೀತಿ ವಾತ್ಸಲ್ಯ ವಿಶ್ವಾಸಗಳಿಂದ ಬದುಕನ್ನು ಬೆಳೆಸುವ ಕಾರ್ಯವಾಗಬೇಕಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮಾನವೀಯ ಮೌಲ್ಯಗಳನ್ನು ಅರ್ಥೈಸಿಕೊಂಡು ಬಾಳಿದರೆ ಜೀವನ ಸಾರ್ಥಕಗೊಳ್ಳೂತ್ತದೆ. ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ತಮ್ಮ ಬದುಕಿನುದ್ದಕ್ಕೂ ಮಾನವ ಧರ್ಮದ ಹಿರಿಮೆಯನ್ನು ಸಾರಿ ಸಾಮರಸ್ಯ ಸದ್ಭಾವನೆ ಬೆಳೆಯಲು ಶ್ರಮಿಸಿದ್ದನ್ನು ಮರೆಯಲಾಗದು. ಅವರ ಕನಸುಗಳನ್ನು ನನಸಾಗಿ ಕಾಣುವ ಕಾರ್ಯದಲ್ಲಿ ಭಕ್ತರು ತೊಡಗಿಸಿಕೊಂಡು ಆರೋಗ್ಯ ಪೂರ್ಣ ಸಮಾಜ ಕಟ್ಟಲು ಶ್ರಮಿಸಬೇಕೆಂದರು.
ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ವಿಜಯ ಸಂಕೇಶ್ವರ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬಾಳಿನ ಭಾಗ್ಯೋದಯಕ್ಕೆ ಧರ್ಮದ ಪರಿಪಾಲನೆ ಮತ್ತು ಶ್ರೀ ಗುರುವಿನ ಮಾರ್ಗದರ್ಶನ ಅವಶ್ಯಕ. ಅರಿವು ಆದರ್ಶಗಳಿಂದ ಬದುಕು ಸಮೃದ್ಧಗೊಳ್ಳಬೇಕು. ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಭಕ್ತರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸಿದರೆಂದರು. ಎಮ್ಮಿಗನೂರು ವಾಮದೇವ ಮಹಂತ ಶ್ರೀ, ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀ, ಬಂಕಾಪುರದ ರೇವಣಸಿದ್ಧ ಶ್ರೀ, ಮಳಲಿಮಠದ ಡಾ. ನಾಗಭೂಷಣ ಶ್ರೀ, ಗಿರಿಸಾಗರದ ರುದ್ರಮುನಿ ಶ್ರೀ, ಬಿಲ್ವಕೆರೂರಿನ ಅಭಿನವ ಸಿದ್ಧಲಿಂಗ ಶ್ರೀ, ಕಲಾದಗಿಯ ಗಂಗಾಧರ ಶ್ರೀ, ಲಕ್ಷ್ಮೇಶ್ವರದ ಕರಿವಾಡ ಮಠದ ಮಲ್ಲಿಕಾರ್ಜುನ ಶ್ರೀ ಮೊದಲ್ಗೊಂಡು ಹಲವಾರು ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಖ್ಯಾತ ಗಾಯಕ ಪಂ.ರಾಜಗುರು ಗುರುಸ್ವಾಮಿ ಕಲಕೇರಿ ಸಂಗಡಿಗರಿ0ದ ಸಂಗೀತ ಕಾರ್ಯಕ್ರಮ ಜರುಗಿತು.
ಸಮಾರಂಭಕ್ಕೂ ಮುನ್ನ ಶಿವರಾತ್ರಿ ಅಮವಾಸ್ಯ ಪರ್ವಕಾಲದಂದು ರಥೋತ್ಸವ ಸಂಭ್ರಮದಿ0ದ ಜರುಗಿತು.
ವರದಿ:
ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು