ಬೆಂಗಳೂರು: ಉಡುಪಿ ಭಂಡಾರಕೇರಿ ಮಠ ಗಿರಿನಗರ 2ನೇ ಹಂತದ ಶಾಂತಿನಿಕೇತನ ಶಾಲೆ ಸಮೀಪ ನಿರ್ಮಿಸಿರುವ ನೂತನ ಕಟ್ಟಡ ‘ಭಾಗವತ ಕೀರ್ತಿಧಾಮ’ ದ ಉದ್ಘಾಟನೆ, ಸುಧಾಮಂಗಳ ಮತ್ತು ಶ್ರೀ ಮಾಧ್ವ ರಾದ್ಧಾಂತ ಸಂವರ್ಧಕ ಸಭಾ ನಿಮಿತ್ತ ಏ.6 ರಿಂದ 11ರ ವರೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಏ. 6ರಂದು ಬೆಳಗ್ಗೆ 8.30ಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ನೂತನ ಕಟ್ಟಡವನ್ನು ಸೇವೆಗೆ ಸಮರ್ಪಣೆ ಮಾಡಲಿದ್ದಾರೆ. ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಅಂದು ಸಂಜೆ 4ಕ್ಕೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ನೂತನ ಕಟ್ಟಡದ ಸಭಾ ಭವನ ಉದ್ಘಾಟಿಸಲಿದ್ದಾರೆ. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು ಉಪಸ್ಥಿತರಿರುವರು. ನಂತರ ಪಂಡಿತ ಮಾಹುಲಿ ವಿದ್ಯಾಸಿಂಹಾಚಾರ್ಯರಿ0ದ ವಾಕ್ಯಾರ್ಥಗೋಷ್ಠಿ ನಡೆಯಲಿದೆ.
7ರಂದು ಬೆಳಗ್ಗೆ 7ಕ್ಕೆ ಶ್ರೀ ವಿದ್ಯೇಶತೀರ್ಥರಿಂದ ಸಂಸ್ಥಾನ ಪೂಜೆ, 9.30ಕ್ಕೆ ಆಶ್ಲೇಷಾ ಬಲಿ ಪೂಜೆ ಸಂಪನ್ನಗೊಳ್ಳಲಿದೆ. ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳಿಂದ ಸುಧಾ ಅನುವಾದ ಆಯೋಜನೆಗೊಂಡಿದೆ.
ಅಂದು ಸಂಜೆ 4ಕ್ಕೆ ಸಭಾ ಕಾರ್ಯಕ್ರಮದಲ್ಲಿ ತಂಬಿಹಳ್ಳಿ ಮಾಧವತೀರ್ಥ ಸಂಸ್ಥಾನದ ಶ್ರೀ ವಿದ್ಯಾಸಾಗರ ಮಾಧವತೀರ್ಥರು, ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರ ತೀರ್ಥರು, ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು ಸಾನ್ನಿಧ್ಯ ವಹಿಸಲಿದ್ದು, ವಿದ್ವಾನ್ ರಾಜಾ ಎಸ್. ಗಿರಿ ಆಚಾರ್ಯರ ಅಧ್ಯಕ್ಷತೆಯಲ್ಲಿ ವಾಕ್ಯಾರ್ಥ ಗೋಷ್ಠಿ ನಡೆಯಲಿದೆ.
ಸುಧಾ ಮಂಗಳ:
ಏ. 8ರ ಬೆಳಗ್ಗೆ 10ಕ್ಕೆ ‘ಸುಧಾ ಮಂಗಳ ಮಹೋತ್ಸವ’ ಸಂಪನ್ನಗೊಳ್ಳಲಿದೆ. ವಿದ್ಯಾರ್ಥಿಗಳಾದ ಎಸ್. ವ್ಯಾಸರಾಜ, ಎಸ್.ವಿಜಯನಂದನ, ಶ್ರೀ ಕೇಶವದಾಸರು, ಕೆ. ಶ್ರೀನಿಧಿ, ಎನ್.ಕೆ. ಸುಧೀಂದ್ರ ಮೂರ್ತಿ, ವೇದಗರ್ಭ ಶೇಷಗಿರಿಯಾಚಾರ್ಯ, ಕಂಬಾಲೂರು ವಿಜಯ ವಿಠಲಾಚಾರ್ಯ ಮತ್ತು ರಘೂತ್ತಮ ಗುತ್ತಲಾಚಾರ್ಯ ಸುಧಾ ಅನುವಾದ ಮಾಡಲಿದ್ದಾರೆ. ಶ್ರೀ ವಿದ್ಯೇಶತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ನಂತರ ಪಂಡಿತರಿಗೆ ಸನ್ಮಾನ ಮತ್ತು ಶ್ರೀ ವಿದ್ಯೇಶತೀರ್ಥರಿಂದ ಅನುಗ್ರಹ ಸಂದೇಶವಿದೆ.
9 ರಂದು ಬೆಳಗ್ಗೆ7 ಕ್ಕೆ ಭಂಡಾರಕೇರಿ ಶ್ರೀ ವಿದ್ಯೇಶತೀರ್ಥರಿಂದ ಸಂಸ್ಥಾನ ಪೂಜೆ, 9.30 ಕ್ಕೆ ವಿದ್ಯಾರ್ಥಿಗಳಿಂದ ಸುಧಾ ಅನುವಾದ, ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅತಿಥಿಗಳಾಗಿ ಆಗಮಿಸಲಿದ್ದು. ಸುಧಾ ಅಧ್ಯಯನ ವಿದ್ಯಾರ್ಥಿಗಳಿಗೆ ವಿದ್ವತ್ ಸನ್ಮಾನ, ದಾನಿಗಳಿಗೆ ಗೌರವಾರ್ಪಣೆ ಮಾಡಲಾಗುವುದು.
ಶ್ರೀ ರಾಮನವಮಿ ಉತ್ಸವ:
ಏ. 10 ರ ಬೆಳಗ್ಗೆ 7.30ಕ್ಕೆ ಶ್ರೀ ರಾಮನವಮಿ ಉತ್ಸವ ಪ್ರಯುಕ್ತ ಶ್ರೀ ಕೋದಂಡರಾಮ ದೇವರಿಗೆ ಪಂಚಾಮೃತ ಅಭಿಷೇಕ, ವಿದುಷಿ ಶುಭಾ ಸಂತೋಷ್ ಅವರಿಂದ ವೀಣಾವಾದನ, ಶ್ರೀ ವಿದ್ಯೇಶತೀರ್ಥರಿಂದ ಸಂಸ್ಥಾನಪೂಜೆ ಆಯೋಜನೆಗೊಂಡಿದೆ.
ಸಂಜೆ ೪ಕ್ಕೆ ಸಭಾ ಕಾರ್ಯಕ್ರಮವಿದ್ದು, ಗಣ್ಯರಿಗೆ ಮತ್ತು ದಾನಿಗಳಿಗೆ ಸನ್ಮಾನಿಸಲಾಗುತ್ತದೆ. ನಂತರ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥರಿಂದ ಅನುಗ್ರಹ ಸಂದೇಶ, ಶ್ರೀ ಕೋದಂಡ ರಾಮದೇವರ ರಥೋತ್ಸವ, ದೀಪೋತ್ಸವ, ತೊಟ್ಟಿಲು ಪೂಜೆ ಮತ್ತು ರಂಗ ಪೂಜೆ ನಡೆಯಲಿದೆ.
ಸಮಾರೋಪದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ
ಏ. 11 ರಂದು 4ಕ್ಕೆ ಶ್ರೀ ವಿದ್ಯೇಶ ತೀರ್ಥ ಸಾನ್ನಿಧ್ಯದಲ್ಲಿ ಉತ್ಸವದ ಸಮಾರೋಪ ಸಮಾರಂಭ ಆಯೋಜನೆಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾರೋಪ ಭಾಷಣ ಮಾಡಲಿದ್ದಾರೆ. ಸಚಿವ ಸುನೀಲ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿಧ ರಂಗದ ಗಣ್ಯರಿಗೆ ಗೌರವಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಲಾಗಿದೆ. ವಿವರಗಳಿಗೆ ಗೋಪಾಲಕೃಷ್ಣ (೯೯೪೫೫ ೨೫೩೯೯) ಮತ್ತು ಜಯರಾಂ (೮೦೯೫೪ ೯೩೯೫೮) ಸಂಪರ್ಕಿಸಬಹುದು ಎಂದು ಶ್ರೀ ಭಂಡಾರಕೇರಿ ಮಠದ ಪ್ರಕಟಣೆ ತಿಳಿಸಿದೆ.
108 ವಿದ್ವಾಂಸರಿಗೆ ಗೌರವಾರ್ಪಣೆ:
ಸುಧಾಮಂಗಳ ಮತ್ತು ಶ್ರೀ ಮಾಧ್ವ ರಾದ್ಧಾಂತ ಸಂವರ್ಧಕ ಸಭಾ ನಿಮಿತ್ತ ವಿದ್ವಾಂಸರಿಗೆ, ಶಾಸ್ತç ಅಧ್ಯಯನ ಮಾಡಿ ಶ್ರೀ ಮಾಧ್ವ ಸಿದ್ಧಾಂತ ಪ್ರಚಾರ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವ ಪಂಡಿತರಿಗೆ ಮತ್ತು ಸುಧಾ ಗ್ರಂಥ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಸೇರಿ ಒಟ್ಟು 108 ಜನರಿಗೆ ಶ್ರೀ ಭಂಡಾರಕೇರಿ ಮಠದ ವತಿಯಿಂದ ಗೌರವಪೂರ್ವಕ ವಿದ್ವತ್ ಸನ್ಮಾನ ನಡೆಯುತ್ತಿರುವುದು ಬಹಳ ವಿಶೇಷ.
ಶ್ರೀಮನ್ ಮಧ್ವಾಚಾರ್ಯರ ಪ್ರಣೀತವಾದ ಮಧ್ವ ಮತದ ಅನುಸರಣೆ, ಗ್ರಂಥಗಳ ಅಧ್ಯಯನ, ಅಧ್ಯಾಪನ, ಪ್ರಸಾರ, ಪ್ರಚಾರ, ಟೀಕೆ, ಟಿಪ್ಪಣಿಗಣ ರಚನೆ, ಮಧ್ವಮತದ ಮಹತ್ವ ಕುರಿತು ಪ್ರವಚನ, ಜ್ಞಾನ ಪ್ರಸಾರ, ಯುವಕರಲ್ಲಿ ಧರ್ಮಪ್ರಜ್ಞೆ ಮೂಡಿಸುವ ಕೆಲಸಗಳು ಇಂದು ಹೆಚ್ಚಾಗಬೇಕು. ಮಧ್ವಶಾಸ್ತç ಕುರಿತ ಸಂಶೋಧನೆಗಳು ನಡೆಯಬೇಕು. ಅದಕ್ಕಾಗಿ ಒಂದು ವಾರಗಳ ಕಾಲ ಶ್ರೀ ಮಾಧ್ವ ರಾದ್ಧಾಂತ ಸಂವರ್ಧಕ ಸಭಾ’- ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ ಎನ್ನುತ್ತಾರೆ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥರು. ನಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರ ಅಪೇಕ್ಷೆಯಂತೆ ಸುಧಾಗ್ರಂಥ (ಶ್ರೀ ಜಯತೀರ್ಥರಿಂದ ರಚನೆ) ಓದುವ ವರ್ಗವನ್ನು ಬೆಳೆಸಬೇಕು. ನಂತರ ಅದನ್ನು ಸಮಗ್ರವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು ಪೋಷಿಸಬೇಕು. ಇವರು ನಮ್ಮ ಸಮುದಾಯದ ದೊಡ್ಡ ಆಸ್ತಿ. ಹಾಗಾಗಿ ಮಠದ ನೂತನ ಕಟ್ಟಡ ಭಾಗವತ ಕೀರ್ತಿ ಧಾಮ’ ದ ಲೋಕಾರ್ಪಣೆ ಸಂದರ್ಭ ವೈವಿಧ್ಯಮಯ ಕಾರ್ಯಕ್ರಮ ಸರಣಿ ಸಂಪನ್ನಗೊಳ್ಳುತ್ತಿದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಏನೇನಿದೆ ಭಾಗವತ ಕೀರ್ತಿ ಧಾಮದಲ್ಲಿ ?
ಗಿರಿನಗರ ೨ನೇ ಹಂತದ ಶಾಂತಿನಿಕೇತನ ಶಾಲೆ ಸಮೀಪ ಭಂಡಾರಕೇರಿ ಮಠ ನಿರ್ಮಿಸಿರುವ ನೂತನ ಕಟ್ಟಡ `ಭಾಗವತ ಕೀರ್ತಿಧಾಮ’ ಯೋಜನಾ ಬದ್ಧವಾಗಿ ನಿರ್ಮಿತಿಗೊಂಡಿದೆ. ನೆಲ ಮಾಳಿಗೆಯಲ್ಲಿ ಹೋಮ, ಹವನ ವೇದಿಕೆ, ಪಾಕಲಶಾಲೆ, ಭೋಜನಶಾಲೆ ಇದೆ. ಮೊದಲ ಹಂತದಲ್ಲಿ ಪೂಜಾ ಮಂದಿರ, ಗರ್ಭಗುಡಿ, ಸಂಕೀರ್ತನೆ ಮತ್ತು ಪ್ರಾರ್ಥನಾ ಸಭಾಂಗಣ, ಧ್ಯಾನ ಮಂದಿರವಿದೆ. ನೂರಾರು ಮಂದಿ ಭಕ್ತರು ಕುಳಿತು ಸಂಸ್ಥಾನ ಪೂಜೆ ನೋಡಲು ಇಲ್ಲಿ ಅವಕಾಶವಿದೆ. ಎರಡನೇ ಮಹಡಿಯಲ್ಲಿ ಶ್ರೀ ಸತ್ಯತೀರ್ಥ ಸಭಾ ಭವನ’ (ಸಂಪೂರ್ಣ ಹವಾ ನಿಯಂತ್ರಿತ, ಸೌಂಡ್ ಪ್ರೂಫ್) ನಿರ್ಮಾಣಗೊಂಡಿದೆ. ಹೊರಗಿನ ಯಾವುದೇ ಗದ್ದಲ, ಗಲಾಟೆಗಳ ತೊಂದರೆ ಇಲ್ಲದೆ ಇಲ್ಲಿ ಪ್ರವಚನ, ವಾಕ್ಯಾರ್ಥ ಮತ್ತು ಪ್ರಬಂಧ ಮಂಡನೆಗೆ ಅವಕಾಶವಿದೆ. ೪೦೦ ಜನ ಕುಳಿತು ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರನೇ ಮಹಡಿಯಲ್ಲಿ ಸಂಶೋಧನಾ ಮಂದಿರ, ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಜ್ಞಾನಾಲಯ ನಿರ್ಮಿತಿಗೊಂಡಿದೆ. ಮಧ್ವಶಾಸ್ತç ಆಸಕ್ತರು ಇಲ್ಲಿ ಬಂದು ಉನ್ನತಾಧ್ಯಯನ ನಡೆಸಬಹುದು. ಒಟ್ಟಾರೆ ಭಾಗವತ ಕೀರ್ತಿ ಧಾಮ’ ಬೆಂಗಳೂರಿನ ಧಾರ್ಮಿಕ ಚಟುವಟಿಕೆ ಮತ್ತು ಅಧ್ಯಾತ್ಮದ ಕೇಂದ್ರ ಸ್ಥಾನವಾಗಲಿರುವುದು ಬಹಳ ವಿಶೇಷ.