ರಾಜ್ಯದ 75 ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳಲ್ಲಿ ಯೋಗ ಉತ್ಸವ: ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ

- ಅಂಜನಾದ್ರಿ ಬೆಟ್ಟದಿಂದ ಪ್ರಾರಂಭ
- ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕೌಂಟ್‌ಡೌನ್‌ ನ ಎರಡನೇ ಕಾರ್ಯಕ್ರಮ

ಚಿತ್ರದುರ್ಗ : ರಾಜ್ಯದ 75 ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳಲ್ಲಿ ಯೋಗ ಪ್ರದರ್ಶನ ಆಯೋಜಿಸುವ ಮೂಲಕ ಅಂತರಾಷ್ಟ್ರಿಯ ಯೋಗ ದಿನಾಚರಣೆಯ ಕೌಂಟ್‌ಡೌನ್‌ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಶ್ವಾಸಗುರು, ಪಂಚಮಸಾಲಿ ವೀರಶೈವ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮೀಜಿಗಳು ಹೇಳಿದರು. 

ಏಪ್ರಿಲ್‌ 18ರಂದು  ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಯೋಗ ಪ್ರದರ್ಶನ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದೇಶದ ಪ್ರಮುಖ 75 ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳಲ್ಲಿ ಯೋಗ ಪ್ರದರ್ಶನ ಆಯೋಜಿಸಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ನಾಲ್ಕು ಪಾರಂಪರಿಕ ಸ್ಥಳಗಳನ್ನು ಈಗಾಗಲೇ ಕೇಂದ್ರ ಸರಕಾರ ಗುರುತಿಸಿದೆ. ಆ ಸ್ಥಳಗಳನ್ನು ಹೊರತಪಡಿಸಿ ಇನ್ನುಳಿದ ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಯೋಗ ಪ್ರದರ್ಶನವನ್ನು ಆಯೋಜಿಸಲಾಗುವುದು ಎಂದರು. 

ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಯವರ ಕನಸಿನಂತೆ ನಮ್ಮ ದೇಶದಲ್ಲಿ ಇನ್ನಷ್ಟು ಯೋಗವನ್ನು ಪ್ರಚುರಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮುಂಬರುವ ಯೋಗ ದಿನಾಚರಣೆಯ ಒಳಗಾಗಿ, ರಾಜ್ಯದ 75 ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ಆಯೋಜಿಸುವುದರಿಂದ ಯೋಗದ ಬಗ್ಗೆ ಮತ್ತಷ್ಟು ಜನರಲ್ಲಿ ಆಸಕ್ತಿಯನ್ನು ಹೆಚ್ಚಿಸುವುದು ಮತ್ತು ಆ ಪ್ರದೇಶಗಳಿಗೆ ಪ್ರವಾಸಿಗರನ್ನು ಸೆಳೆಯುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು. 

ಯೋಗೋತ್ಸವದ  ಸಾನಿಧ್ಯವನ್ನು ಚಿತ್ರದುರ್ಗ ಶ್ರೀ ಕಬೀರಾನಂದ ಆಶ್ರಮದ ಸದ್ಗುರು ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳವರು ವಹಿಸಿದ್ದರು.ಯೋಗಗುರು ಶ್ರೀ ಚಿನ್ಮಯಾನಂದರು ಪ್ರಾಸ್ತಾವಿಕ ಯೋಗನ್ನುಡಿಗಳನ್ನಾಡಿದರು.ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಯೋಗಾಸಕ್ತರು ಪಾಲ್ಗೊಂಡಿದ್ದರು. ಸುಂದರ ಕಲ್ಲಿನ ಕೋಟೆಯ ಆವರಣದಲ್ಲಿ ನಡೆದಂತಹ ಕಾರ್ಯಕ್ರಮ ಬಹಳ ವಿಶೇಷವಾಗಿತ್ತು.

Related Articles

ಪ್ರತಿಕ್ರಿಯೆ ನೀಡಿ

Latest Articles