ಶ್ರೀ ಮಧುಪಂಡಿತ ದಾಸ ಅವರಿಗೆ ಗೌರವ ಡಾಕ್ಟರೇಟ್

ಬೆಂಗಳೂರು:- ಬೆಂಗಳೂರು ವಿಶ್ವವಿದ್ಯಾಲಯವು ತನ್ನ 56ನೆಯ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ಶ್ರೀ ಮಧು ಪಂಡಿತ ದಾಸ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಅವರಿಗೆ ಟಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ಶ್ರೀ ಮಧು ಪಂಡಿತ ದಾಸ ಅವರು ಆಹಾರ ಭದ್ರತೆ ಮತ್ತು ಸಮುದಾಯ ಸೇವಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಕೊಡುಗೆಗಾಗಿ ಈ ಗೌರವ ಡಾಕ್ಟರೇಟ್ ಅನ್ನು ನೀಡಲಾಗಿದೆ. ಶ್ರೀ ಮಧು ಪಂಡಿತ ದಾಸ ಅವರು ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರು ಮತ್ತು ಅಕ್ಷಯ ಪಾತ್ರೆ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.

ಕರ್ನಾಟಕದ ರಾಜ್ಯಪಾಲ ಶ್ರೀ ತಾವರ್ ಚಂದ್ ಗೆಹ್ಲೋಟ್, NAAC ಬೆಂಗಳೂರಿನ ನಿರ್ದೇಶಕ ಡಾ. ಎಸ್. ಸಿ. ಶರ್ಮ, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವೇಣುಗೋಪಾಲ್ ಕೆ.ಆರ್. ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಧು ಪಂಡಿತ ದಾಸ ನುಡಿದರು, “ಈ ರೀತಿಯ ಮನ್ನಣೆ ಮೂಲಕ ನಮ್ಮ ಪ್ರಯತ್ನಗಳನ್ನು ಮೆಚ್ಚಿ ಗೌರವಿಸಿದುದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನಾನು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ. ಅತ್ಯಂತ ಧನ್ಯಭಾವದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲು ನನಗೆ ತುಂಬ ಸಂತೋಷವಾಗಿದೆ. ಮಾನವ ಸಮುದಾಯಕ್ಕೆ ಇನ್ನೂ ಹೆಚ್ಚಿನ ಉತ್ಸಾಹದಿಂದ ಸೇವೆ ಸಲ್ಲಿಸಲು ಇದರಿಂದ ನಮಗೆ ಸ್ಫೂರ್ತಿ ಉಂಟಾಗಿದೆ.”

ಶ್ರೀ ಮಧು ಪಂಡಿತ ದಾಸ ಅವರು ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮುಂಬಯಿ ಐಐಟಿಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು ಅನೇಕ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ಲಕ್ಷಾಂತರ ಜನರಿಗೆ ಉತ್ತಮ ಜೀವನ ಮಟ್ಟವನ್ನು ನೀಡಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಅತ್ಯಂತ ಅಗತ್ಯವಾದ ಕಾಲಘಟ್ಟದಲ್ಲಿ ಶಾಲಾ ಮಕ್ಕಳು ಮತ್ತು ಸವಲತ್ತು ಇಲ್ಲದ ಜನರಿಗೆ ಆಹಾರ ಭದ್ರತೆಯನ್ನು ಒದಗಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಅವರ ದೂರದರ್ಶಿತ್ವ ನಾಯಕತ್ವದ ಅಡಿಯಲ್ಲಿ ಅಕ್ಷಯ ಪಾತ್ರ ಆಂದೋಲನವು ಪ್ರತಿ ಶಾಲಾ ದಿನದಂದು 18 ಲಕ್ಷ ಮಕ್ಕಳಿಗೆ ಆಹಾರವನ್ನು ಪೂರೈಸುತ್ತ ಜಾಗತಿಕ ಮೆಚ್ಚುಗೆ ಪಡೆದ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ದುಃಖಿತ ಕುಟುಂಬಗಳಿಗೆ ನೆರವಾಗಲು 25 ಕೋಟಿಗೂ ಹೆಚ್ಚು ಊಟವನ್ನು ಹಂಚುವ ಪರಿಹಾರ ಪ್ರಯತ್ನಗಳನ್ನು ಅವರು ಸ್ವತಃ ನಿರ್ದೇಶಿಸಿದ್ದಾರೆ. ಪದ್ಮಶ್ರೀ, ಗಾಂಧೀ ಶಾಂತಿ ಬಹುಮಾನ, ರಾಷ್ಟ್ರೀಯ ಶಿಶು ಕಲ್ಯಾಣ ಪ್ರಶಸ್ತಿ, ನಿಕಾಯ್ ಏಷ್ಯಾ ಬಹುಮಾನ ಮತ್ತು ಮುಂಬಯಿ ಐಐಟಿಯಿಂದ ಪ್ರಮುಖ ಹಳೆಯ ವಿದ್ಯಾರ್ಥಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳ ಮೂಲಕ ಅವರ ಅನುಪಮ ಕೊಡುಗೆಯನ್ನು ಶ್ಲಾಘಿಸಲಾಗಿದೆ ಮತ್ತು ಗೌರವಿಸಲಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles